ವಿಶೇಷ ವರದಿ: ನರಸಮ್ಮ ಮುದಬಾಳ ಮಸ್ಕಿ
ಅಮ್ಮ ಎಂದರೆ ದೇವರು ಅಮ್ಮನನ್ನು ವರ್ಣಿಸಲು ಎರಡು ಪದಗಳು ಸಾಲದು ಆಕೆಯ ಬರೆಯುವುದಕ್ಕೆ ಹೋದರೆ ಭಾಷೆ ಬಡವಿ ಅನ್ನಿಸುತ್ತೆ. ಯಾವುದೋ ಪದದಲ್ಲಿ ಅವಳನ್ನು ವರ್ಣಿಸವುದಕ್ಕೆ ಹೋದರೂ, ಆಕೆಯ ಪಾತ್ರದೆದುರು ಆ ಪದವೇ ಸೋತು ಬಿಡುತ್ತದೆ. ಒಂದು ಪದದಲ್ಲಿ, ಒಂದು ವಾಕ್ಯದಲ್ಲಿ, ಒಂದು ಕತೆಯಲ್ಲಿ, ಒಂದು ಹೊತ್ತಿಗೆಯಲ್ಲಿ ಹಿಡಿದಿಡಲು ಸಾದ್ಯವಾಗದ ಮಹೋನ್ನತ ವ್ಯಕ್ತಿತ್ವ ಅಮ್ಮನದು. ಆದರೆ ಅಮ್ಮನನ್ನು ನಾನು ದೇವರಿಗೆ ಹೋಲಿಸುವುದಿಲ್ಲ.
ಏಕೆಂದರೆ, ಬೇಕೆಂದಾಗ ದೇವರು ನಮ್ಮ ಕೈಗೆ ಸಿಗುವುದಿಲ್ಲ. ಅಮ್ಮ ಹಾಗಲ್ಲ ನನ್ನ ಕಷ್ಟ ಸುಖಗಳಿಗೆ ಜೊತೆಯಾಗಿ ಸದಾ ನಮ್ಮೊಂದಿಗೆ ಇರುತ್ತಾಳೆ ಆದ್ದರಿಂದ ಅಮ್ಮ’ ನನ್ನ ಆಪ್ತಗೆಳತಿ’ ಎಂದು ಹೇಳಿಕೊಳ್ಳು ತ್ತೇನೆ. ನನ್ನ ಅಮ್ಮ ತಾನು ಕಳೆದು ಕೊಂಡಂತಹ ತಾನು ಅನುಭವಿಸಲಾರದಂತಹ ಸುಖ ಸಂತೋಷಗಳನ್ನು ತನ್ನ ಮಕ್ಕಳಿಗಾದರೂ ನೀಡಬೇಕು ಎಂದು ತನ್ನ ಜೀವನದ ಸುಖ ಸಂತೋಷಗಳನ್ನೆಲ್ಲ ಮುಡುಪಾಗಿಟ್ಟು ಎಂತಹ ಕಷ್ಟವೇ ಬರಲಿ ಸುಖವೇ ಬರಲಿ, ಯಾವುದೇ ಸಂದರ್ಭದಲ್ಲೂ ತನ್ನ ಐದು ಮಕ್ಕಳ ಎಳ್ಳೆಗಾಗಿ, ಅವರ ಉನ್ನತಿಗಾಗಿ, ಅವರ ಸುಖ ಸಂತೋಷಕ್ಕಾಗಿ ತನ್ನ ನೋವ ನ್ನೆಲ್ಲ ತಾನೇ ನುಂಗಿ ನಮಗೆಲ್ಲ ಅಂದರೆ ನಾನು, ನನ್ನ ತಂಗಿಯರಿಗೆ, ಅಕ್ಕಂದಿರಿಗೆ ಇಂದು ಒಂದು ಸುಂದರವಾದ, ಸುಖಕರವಾದ, ಕುಟುಂಬ ಕಟ್ಟಿಕೊಟ್ಟ ಹೆಮ್ಮೆ ನನ್ನ ಅಮ್ಮನದು, ನನ್ನ ಅಮ್ಮನಿಗೊಂದು ಪ್ರೀತಿ ಪೂರ್ವಕ ನಮನ. ಅವರು ತುಂಬಾ ಗಟ್ಟಿ ಹೆಣ್ಣು.
ಅಪ್ಪ ದುಡಿದಿಲ್ಲ ಎನ್ನುವ ಸಂದರ್ಭದಲ್ಲಿ ಮಕ್ಕಳಿಗಾಗಿ ಗಟ್ಟಿಯಾಗಿ ನಿಂತರು. ನಾನು ಮತ್ತು ನನ್ನ ಸಹೋದರಿಯರನ್ನು ಧ್ಯರ್ಯದಿಂದ ಬೆಳೆಸಿದರು. ಅಪ್ಪ ಹಾಗೂ ಅಮ್ಮ ಎರಡೂ ಪತ್ರಗಳನ್ನು ಅವರೊಬ್ಬರೇ ನಿಭಾಯಿಸಿದರು. ಹಣಕಾಸಿನ ವಿಚಾರ ವಾಗಲಿ ಮನೆ ನಿಭಾಯಿಸುವುದರಲ್ಲಾಗಲಿ, ನಮ್ಮನ್ನು ಬೆಳೆಸುವುದರಲ್ಲಾಗಲೀ ಎಲ್ಲಿಯೂ ರಾಜಿ ಮಾಡಿಕೊಳ್ಳದೆ, ಎಲ್ಲದರ ಜವಾಬ್ದಾರಿಯನ್ನು ಸಂಪೂರ್ಣ ನಿಭಾಯಿಸಿ, ನಮ್ಮನ್ನು ಬೆಳೆಸಿದ್ದು ಸಾಮಾನ್ಯವಲ್ಲದಿದ್ದರೂ ಅವರು ಎಷ್ಟೇ ಕಷ್ಟ ಬಂದರು ಗಟ್ಟಿ ಇರುತ್ತಾರೆ. ಅಮ್ಮ ಎಲ್ಲಾವನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ.
ಬೇಸರ ಅನ್ನಿಸಿದಾಗಲೆಲ್ಲ, ಮನೆಯಲ್ಲಿ ಆರಾಮಾಗಿ ಅಮ್ಮನನ್ನು ನೆನೆಯುತ್ತಾ. ಹಾಡು ಗುನುಗುತ್ತಾ ಅಡುಗೆಗೆ ಒಗ್ಗರಣೆ ಹಾಕುವ ಅಮ್ಮನನ್ನು ನೆನಪಿಸಿಕೊಳ್ಳುತೇನೆ. ಮನಸ್ಸು ಹಗುರ ಅನ್ನಿಸುತ್ತದೆ. ಇವತ್ತಿಗೂ ಇಡೀ ಜೀವನದಲ್ಲಿ ನನ್ನನ್ನು ಊಟ ಮಾಡಿದ್ಯಾ, ತಿಂಡಿ ತಿಂದ್ಯಾ ಎಂದು ವಿಚಾರಿಸುವ ಏಕೈಕ ವ್ಯಕ್ತಿ ಎಂದರೆ ಅಮ್ಮ ನಾನು ಸುಳ್ಳು ಹೇಳಿದರೂ ಅವರಿಗೆ ಗೊತ್ತಾಗಿಬಿಡುತ್ತದೆ. ಅದಲ್ಲವೇ ಅಮ್ಮನ ಪ್ರೀತಿ. ಅಮ್ಮ ಎಂಬ ಎರಡ ಅಕ್ಷರದಲ್ಲಿ ಅಡಗಿದೆ ಒಂದು ವಿಶೇಷ ಶಕ್ತಿ, ಮಮತೆ, ಪ್ರೀತಿ, ಕರುಣೆ, ವಾತ್ಸಲ್ಯ ಇವೆಲ್ಲವುಗಳ ಒಗ್ಗೂಡಿಕೆಯೇ ನನ್ನಮ್ಮ ಅಪ್ಪ ಗದರಿದಾಗ ಅಥವಾ ಹೊಡೆಯುವಾಗ ಒಂದು ಮಗು ಅಮ್ಮನ ಮಡಿಲಲ್ಲಿ ತನ್ನ ರಕ್ಷಣೆ ಮಾಡಿಕೊಳ್ಳುತ್ತದೆ. ಅಮ್ಮನ ಮಡಿಲೇ ಸ್ವರ್ಗ ಎಂದು ಹೇಳುತ್ತಾರೆ.
ಅಮ್ಮನ ಮಡಿಲಿಗೆ ಇಷ್ಟು ಶಕ್ತಿ, ಧ್ಯರ್ಯ ಇರಬೇಕಾದರೆ ಇನ್ನೂ ನನ್ನ ಅಮ್ಮನಿಗೆ ಶಕ್ತಿ ಎಷ್ಟಿರಬೇಕು ನೀವೆ ಹೇಳಿ? ಅಮ್ಮನ ಆಶಿರ್ವಾದವೇ ನಮಗೆ ಶ್ರೀ ರಕ್ಷೆ. ನನ್ನ ಜೀವನದಲ್ಲಿ ನನ್ನ ತಾಯಿಯ ಪಾತ್ರ ಬಹಳ ಪ್ರಮುಖವಾದದ್ದು. ಅಮ್ಮ ಯಾವತ್ತೂ ಹೇಳುತ್ತಿದ್ದಳು. ಮನುಷ್ಯ ಕನಸು ಕಾಣಬೇಕು. ಯಾವತ್ತಿಗೂ ಕನಸು ಕಾಣುವುದನ್ನು ನಿಲ್ಲಿಸಬೇಡ ಎಂದು ಹೇಳುತ್ತಿದ್ದರು.
ಆ ಮಾತು ಶಾಲೆಗೆ ಹೋಗುವ ದಿನಗಳಲ್ಲಿ ಎಷ್ಟು ಅರ್ಥವಾಗಿತ್ತೋ ಗೊತ್ತಿಲ್ಲ. ಆದರೆ ಕನಸು ಕಾಣುವುದನ್ನು ಕಲಿಸಿಕೊಟ್ಟಿದ್ದೆ ಅಮ್ಮ. ಅವರು ಯಾವಾಗಲೂ ಹೇಳುತ್ತಿದ್ದ ಇನ್ನೊಂದು ಮಾತು ನೀನು ಪ್ರಾಮಾಣಿಕವಾಗಿದ್ದರೆ, ಸತ್ಯದಿಂದ ಇದ್ದರೆ, ಏನೇ ಮಾಡಿದರೂ ಯಾವತ್ತೂ ದಾರಿ ತಪ್ಪುವುದಿಲ್ಲ, ಇಂಥ ಚಿಕ್ಕ ಪುಟ್ಟ ವಿಷಯಗಳನ್ನು ಹೇಳುತ್ತಲೇ ಅಮ್ಮ ನನ್ನನ್ನು ಬೆಳೆಸಿದರು. ಇಂಥ ಮೌಲ್ಯಗಳನ್ನು ವಯಸ್ಸಿನೊಂದಿಗೆ ನಮ್ಮ ಜೀವನದಲ್ಲಿ ತುಂಬಿದರು. ಈ ಸಣ್ಣ ಪುಟ್ಟ ವಿಷಯಗಳು ಎಷ್ಟೊಂದು ಬದಲಾವಣೆ ತರುವಂಥದ್ದು ಎಂಬುದು ಈಗ ಅರ್ಥವಾಗುತ್ತದೆ.