ಏಪ್ರಿಲ್ ಮೊದಲ ವಾರ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಬೆಂಗಳೂರು ಭೇಟಿ
ಮುಂಬರುವ ವಿಧಾನಸಭೆ ಚುನಾವಣೆಗೆ ತಯಾರಿಗೆ ಭರ್ಜರಿ ಆರಂಭ ನೀಡಲು ಪ್ರಯತ್ನ
ಪ್ರದೀಪ್ ಕುಮಾರ್ ಎಂ. ಬೆಂಗಳೂರು
ಪಂಚರಾಜ್ಯ ಸಾಧನೆ ಬೆನ್ನಲ್ಲೇ ರಾಜ್ಯದಲ್ಲೂ ಮತ್ತೊಮ್ಮೆ ಕಮಲ ಅರಳಿಸಲು ಬಿಜೆಪಿ ಹೈಕಮಾಂಡ್ ಸಜ್ಜಾಗಿದ್ದು, ಅಶ್ವಮೇಧ ಯಾಗವನ್ನು ಆರಂಭಿಸಿದೆ. ಏಪ್ರೀಲ್ ತಿಂಗಳ ಆರಂಭದಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ
ಬೆಂಗಳೂರಿಗೆ ಆಗಮಿಸುತ್ತಿದ್ದು, ರಾಜ್ಯದಲ್ಲಿ ಸಾಲು ಸಾಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಏ.೧ರಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಬೆಂಗಳೂರಿಗೆ ಬರುತ್ತಿದ್ದು, ಏ.೫ರಂದು ಪ್ರಧಾನಿ ನರೇಂದ್ರ ಮೋದಿ ಅವರೂ ಬರುವುದು ಬಹುತೇಕ ಖಚಿತವಾಗಿದೆ. ಆ ಮೂಲಕ ಈಗಿನಿಂದಲೇ ಮುಂದಿನ ವರ್ಷ ನಡೆಯಲಿರುವ ವಿಧಾನ ಸಭೆ ಚುನಾವಣೆಗೆ ತಯಾರಿಯನ್ನು ಭರ್ಜರಿಯಾಗಿಯೇ ಆರಂಭಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ.
ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಬೆಂಗಳೂರಿಗೆ ಬರುತ್ತಿರುವುದು ಸರಕಾರಿ ಕಾರ್ಯಕ್ರಮಗಳು ಉದ್ಘಾಟನೆಗೆ. ಅದರಲ್ಲೂ ಸರಕಾರ 2022-23ನೇ ಸಾಲಿನ ಬಜೆಟ್ನಲ್ಲಿ ಘೋಷಿಸಿದ ಯೋಜನೆಗಳಿಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಆ ಮೂಲಕ ಬಿಜೆಪಿ ಸರಕಾರದ ಯೋಜನೆಗಳನ್ನು ಅದ್ದೂರಿಯಾಗಿ ಜನರ ಮುಂದಿಟ್ಟು, ಮುಂದಿನ ಚುನಾವಣೆಗೆ ಸಜ್ಜಾಗಲು ಪಕ್ಷ ನಿರ್ಧರಿಸಿದೆ.
ಅಮಿತ್ ಶಾ ಅವರ ಕಾರ್ಯಕ್ರಮದ ರೂಪುರೇಷೆಗಳು ಈಗಾಗಲೇ ನಿರ್ಧಾರವಾಗಿದೆ ಯಾದರೂ, ಪ್ರಧಾನಿ ಕಾರ್ಯಕ್ರಮದ ಬಗ್ಗೆ ಘೋಷಣೆಯಾಗಿಲ್ಲ. ಪ್ರಧಾನಿ ಕಚೇರಿಯಿಂದ ಅಧಿಕೃತ ಸೂಚನೆ ಬಂದ ಬಳಿಕ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಹಿಜಾಬ್ ವಿವಾದ, ದೇವಸ್ಥಾನಗಳ ಜಾತ್ರೆ ವೇಳೆ ಮುಸ್ಲಿಂ ವ್ಯಾಪಾರಿ ಗಳಿಗೆ ನಿರ್ಬಂಧ, ಹರ್ಷ ಕೊಲೆ ಪ್ರಕರಣ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಹಿದುತ್ವದ ಆಧಾರದ ಮೇಲೆ ಚುನಾ ವಣೆಗೆ ಸಿದ್ಧವಾಗುತ್ತಿರುವ ಬಿಜೆಪಿಗೆ, ಕಾಂಗ್ರೆಸ್ ಕೂಡ ಒಂದೊಂದೇ ವಿಚಾರಗಳನ್ನು ಕೆದಕಿ ತನ್ನ ವಿರುದ್ಧವೇ ಬಿಜೆಪಿಗೆ ಅಸ್ತ್ರ ಗಳನ್ನು ಒದಗಿಸುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜತೆ ಚರ್ಚಿಸುವ ಸಾಧ್ಯತೆಗಳಿವೆ.
ಅಮಿತ್ ಶಾ ಭೇಟಿಗೆ ಶಾಸಕರ ಪ್ರಯತ್ನ: ತಮಗೆ ಸಹಕಾರ ಸಚಿವಾಲಯದ ಜವಾಬ್ದಾರಿ ಸಿಕ್ಕಿದ ಬಳಿಕ ಸಹಕಾರ ಕ್ಷೇತ್ರಕ್ಕೆ ಕಾಯಕಲ್ಪ ನೀಡಲು ಕಾಯಿದೆಗೆ ತಿದ್ದುಪಡಿ ತರಲು ಮುಂದಾಗಿರುವ ಅಮಿತ್ ಶಾ, ಅದಕ್ಕಾಗಿ ಎಲ್ಲಾ ರಾಜ್ಯಗಳಲ್ಲಿ ಅಭಿಪ್ರಾಯ ಸಂಗ್ರಹಿಸಲು ನಿರ್ಧರಿಸಿದ್ದಾರೆ. ಈ ಉದ್ದೇಶದಿಂದ ಏ.1ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಅವರ ಕೈಯ್ಯಲ್ಲೇ ಸರಕಾರ ಹೊಸ ದಾಗಿ ಆರಂಭಿಸುತ್ತಿರುವ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಮತ್ತು ಪುನರಾರಂಭಿಸುತ್ತಿರುವ ಯಶಸ್ವಿನಿ ಯೋಜನೆಗೆ ಚಾಲನೆ ಕೊಡಿಸಲು ಸರಕಾರ ನಿರ್ಧರಿಸಿದೆ. ಅದಕ್ಕಾಗಿ ಅರಮನೆ ಮೈದಾನದಲ್ಲಿ ಕಾರ್ಯಕ್ರಮಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ವೇಳೆ ಶಾ ಅವರ ಭೇಟಿಗೆ ಸಚಿವಾಕಾಂಕ್ಷಿ ಶಾಸಕರು ಮುಂದಾಗಿದ್ದಾರೆ.
ಏ.8ರ ಬಳಿಕ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆಯಿದ್ದು, ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಸಚಿವಾಕಾಂಕ್ಷಿ ಗಳು, ಶಾ ಅವರನ್ನು ಭೇಟಿ ಯಾಗಿ ಅಹವಾಲು ಮಂಡಿಸಲು ಮುಂದಾಗಿದ್ದಾರೆ. ಆದರೆ, ಶಾಸಕರ ಭೇಟಿಗೆ ಇನ್ನೂ ಅಮಿತ್ ಶಾ
ಕಡೆಯಿಂದ ಹಸಿರು ನಿಶಾನೆ ಸಿಕ್ಕಿಲ್ಲ. ಹೀಗಾಗಿ ಶಾ ಅವರಿಗೆ ಆಪ್ತರಾಗಿರುವ ರಾಜ್ಯದ ಬಿಜೆಪಿ ನಾಯಕರ ಮೂಲಕ ಹೇಗಾದರೂ ಮಾಡಿ ಅಮಿತ್ ಶಾ ಭೇಟಿಗೆ ಅವಕಾಶ ಕಲ್ಪಿಸಿ ಎಂದು ಒತ್ತಡ ಹೇರುತ್ತಿದ್ದಾರೆ.
ಸಂಪುಟ ವಿಸ್ತರಣೆ?: ಏ.16, 17ರಂದು ವಿಜಯ ನಗರ ಜಿಲ್ಲೆಯ ಹೊಸಪೇಟೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ನಡೆಯ ಲಿದ್ದು, ಅದಕ್ಕೆ ಮುನ್ನ ಸಂಪುಟ ವಿಸ್ತರಣೆಯಾಗಬೇಕು ಎಂದು ಆಕಾಂಕ್ಷಿಗಳು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಅಮಿತ್ ಶಾ ಮತ್ತು ಪ್ರಧಾನಿ ಬೆಂಗಳೂರು ಭೇಟಿ ಬಳಿಕ ಬಿಜೆಪಿ ವರಿಷ್ಠರು ಸಿಎಂ ಬೊಮ್ಮಯಿ ಅವರನ್ನು ದೆಹಲಿಗೆ ಕರೆಸಿಕೊಂಡು ಸಂಪುಟ ಪುನಾರಚನೆ ಪ್ರಕ್ರಿಯೆ ಅಂತಿಮಗೊಳಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
ಏ.5ರಂದು ಪ್ರಧಾನಿ ಮೋದಿ ಬೆಂಗಳೂರಿಗೆ
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಏ. ೫ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸರ್ಕಾರಿ ವಿಶೇಷ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಕಾರ್ಯಕ್ರಮ ಮತ್ತು ಪ್ರವಾಸದ ವಿವರ ಇನ್ನೂ ಪೂರ್ಣ ಪ್ರಮಾಣದಲ್ಲಿ ನಿರ್ಧಾರವಾಗಿಲ್ಲ ಎಂದು ತಿಳಿಸಿದರು.
***
ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಬಂದಾಗ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸುವುದಿಲ್ಲ. ಈ ಬಗ್ಗೆ ದೆಹಲಿಯಲ್ಲಿ
ವರಿಷ್ಠರೊಂದಿಗೆ ಚರ್ಚೆಯಾಗಬೇಕು. ವರಿಷ್ಠರು ಕರೆದಾಗ ದೆಹಲಿಗೆ ಹೋಗುತ್ತೇನೆ.
– ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ