ಅಭಿಷೇಕ ಪಾಟೀಲ ಬಾಗಲಕೋಟೆ
ಕಾನೂನಿಗೂ ಬಗ್ಗದೆ ಮುಂದುವರಿದ ದಂಧೆ
ಸ್ಕ್ಯಾನಿಂಗ್ ಕೇಂದ್ರಕ್ಕೆ ಬೀಗಮುದ್ರೆ
ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರದಲ್ಲಿ ಮಹಾರಾಷ್ಟ್ರದ ಸೋನಾಲಿ ಭ್ರೂಣ ಹತ್ಯೆಗೆ ಬಲಿಯಾದ ಪ್ರಕರಣ ಮಾಸುವ ಮುನ್ನವೇ ಅದೇ ಪಟ್ಟಣದಲ್ಲಿ ಭ್ರೂಣ ಹತ್ಯೆಯ ಪ್ರಕರಣಗಳು ಬೆಳಕಿಗೆ ಬಂದಿರುವುದು ಆತಂಕಕಾರಿ ವಿಷಯವಾಗಿದ್ದು, ಇದಕ್ಕೆ ಕಡಿವಾಣವೇ ಇಲ್ಲವಾ ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡುತ್ತಿದೆ.
ಕಳೆದ ಎರಡು ತಿಂಗಳ ಹಿಂದೆ ಇದೇ ಮಹಾಲಿಂಗಪುರದಲ್ಲಿ ಮಾಜಿ ಆಯಾ ಒಬ್ಬಳು ಭ್ರೂಣಹತ್ಯೆ ಪ್ರಕರಣದಲ್ಲಿ ತೊಡಗಿರುವುದು ಬೆಳಕಿಗೆ ಬಂದಿತ್ತು. ಈ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅನೇಕ ಕ್ರಮ ಕೈಗೊಂಡಿದ್ದರು ಅದು ಉಪಯೋಗವಾಗಿಲ್ಲ ಎನ್ನುವುದಕ್ಕೆ ಈಚೆಗೆ ಡಿಎಚ್ಒ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಎರಡು ಆಸ್ಪತ್ರೆ ಸೀಜ್ ಆಗಿರುವುದೇ ಸಾಕ್ಷಿ.
ಮಹಾಲಿಂಗಪುರಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಇಲಾಖೆ ತಂಡ ಜಿಲ್ಲೆಯ ವಿವಿಧ
ಕಡೆಗಳಲ್ಲಿ ದಾಳಿ ನಡೆಸಿ, ಅನೇಕ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಿದಾಗ ಭ್ರೂಣಹತ್ಯೆ ತೊಡಗಿದವ ರಲ್ಲಿ ಭಯ ಹುಟ್ಟಿದೆ ಎಂದು ಭಾವಿಸಲಾಗಿತ್ತು. ಆದರೆ, ಮತ್ತೆ ಇಂತಹ ಪ್ರಕರಣಗಳು ಕೇಳಿ ಬಂದಿರುವುದಕ್ಕೆ ಜಿಲ್ಲೆಯಲ್ಲಿ ಭ್ರೂಣಹತ್ಯೆ ಅವ್ಯಾಹಿತವಾಗಿ ನಡೆಯುತ್ತಿದೆ ಎಂಬುವುದನ್ನು ಮತ್ತೆ ಮತ್ತೆ ಸಾರುತ್ತಿದೆ.
ಮತ್ತೆರಡು ಸ್ಕ್ಯಾನ್ ಸೆಂಟರ್ಸೀಜ್: ಕಳೆದ ವಾರ ಮಹಾಲಿಂಗಪುರ ಪಟ್ಟಣದ ಡಾ.ರಾಜೇಂದ್ರ ಪಾಟೀಲ ಅವರು ಭ್ರೂಣಪತ್ತೆ ಹಾಗೂ ಗರ್ಭಪಾತ ಮಾಡುತ್ತಿದ್ದಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುವರ್ಣ ಕುಲಕರ್ಣಿ ನೇತೃತ್ವದಲ್ಲಿ ಆಸ್ಪತ್ರೆ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ. ಜತೆಗೆ ಸೆ.೪ ರಂದು ಇದೇ ಪಟ್ಟಣದ ಪಾಟೀಲ ಆಸ್ಪತ್ರೆಯಲ್ಲಿ ಭ್ರೂಣಹತ್ಯೆ ಖಚಿತ ಮಾಹಿತಿ ಮೇರೆಗೆ
ದಾಳಿ ನಡೆಸಿ ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಿದ್ದಾರೆ.
ಜಿಲ್ಲೆಯ ಮಹಾಲಿಂಗಪುರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭ್ರೂಣಹತ್ಯೆ ಪ್ರಕರಣ ಕೇಳಿ ಬರುತ್ತಿದೆ. ಇದಕ್ಕೆ ಗಡಿ ಭಾಗವು ಒಂದು ಕಾರಣವಾಗಿರಬಹುದು. ದಾಳಿ ನಡೆಸಿದಾಗ ಸ್ಕ್ಯಾನ್ ಸೆಂಟರ್ ಸೀಜ್ ಮಾಡಲಾಗಿದ್ದು, ಅವರ ವಿರುದ್ಧ
ಕಾನೂನು ಹೋರಾಟ ಮುಂದುವರೆಯುತ್ತದೆ ಎಂದು ಡಿಎಚ್ಒ ಡಾ. ಸುವರ್ಣ ಕುಲಕರ್ಣಿ ತಿಳಿಸಿದರು.
ಭ್ರೂಣ ಹತ್ಯೆ ಸಂಬಂಧ ಆರೋಗ್ಯ ಇಲಾಖೆಯಿಂದ ಮೇಲಿಂದ ಮೇಲೆ ದಾಳಿ ನಡೆಸಲಾಗುತ್ತದೆ. ಇದನ್ನು ತಡೆಗಟ್ಟಲು ಇಲಾಖೆ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಸಾರ್ವಜನಿಕರು ಈ ಬಗ್ಗೆ ತಿಳಿಯುವ ಅವಶ್ಯಕತೆ
ಇದೆ. ಸಾರ್ವಜನಿಕರೇ ಇಂತಹ ಭ್ರೂಣಪತ್ತೆ ಮಾಡುವುದನ್ನು ಬಿಟ್ಟಾಗ ಇಂತಹ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎನ್ನುತ್ತಾರೆ. ಭ್ರೂಣಹತ್ಯೆ ತಡೆಗಟ್ಟಲು ಇಷ್ಟೆಲ್ಲ ಹರಸಾಹಸ ಪಟ್ಟರು ಇಂತಹ ದಂಧೆಯಲ್ಲಿ ತೊಡಗಿರುವವರಿಗೆ ಕಾನೂನಿನ ಭಯ ಇಲ್ಲದಿರುವುದು ಸಾಬೀತಾಗುತ್ತಿದೆ. ಅಧಿಕಾರಿಗಳು ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ಆಸಕ್ತಿ ತೋರಿದರೂ ಕೆಳಹಂತದಲ್ಲೂ ಅದು ಸಾಧ್ಯವಾಗಬೇಕಿದೆ.
ಮುಧೋಳ ಟಿಎಚ್ಒ ವರ್ಗಾವಣೆ
ಮಹಾಲಿಂಗಪುರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಮುಧೋಳ ಟಿಎಚ್ಒ ಡಾ. ವೆಂಕಟೇಶ
ಮಲಘಾಣ ಅವರನ್ನು ವರ್ಗಾವಣೆ ಮಾಡಿದೆ. ಮಹಾಲಿಂಗಪುರ ಕಂದಾಯ ಇಲಾಖೆಯಲ್ಲಿ ರಬಕವಿ-ಬನಹಟ್ಟಿ
ತಾಲೂಕಿಗೆ ಬರುತ್ತದೆ ಎಂಬ ಕಾರಣ ಅಧಿಕಾರಿಗಳು ರಬಕವಿ-ಬನಹಟ್ಟಿ ಟಿಎಚ್ಒ ಅವರನ್ನು ವರ್ಗಾವಣೆ
ಮಾಡಿದ್ದರು. ನಂತರ ಮಹಾಲಿಂಗಪುರ ಆಡಳಿತಾತ್ಮಾಕವಾಗಿ ಮುಧೋಳಕ್ಕೆ ಬರುತ್ತದೆ ಎಂದು ಗೊತ್ತಾದ ಮೇಲೆ
ಮುಧೋಳ ಟಿಎಚ್ಒ ಅವರನ್ನು ವರ್ಗಾವಣೆ ಮಾಡಲಾಗಿದೆ.
ಚರಂಡಿಯಲ್ಲಿ ನವಜಾತ ಶಿಶುವಿನ ಶವಪತ್ತೆ
ನಗರದ ಶಿರೂರು ಅಗಸಿ ಬಳಿಯ ದೊಡ್ಡ ಸಾಬಣ್ಣನ ಓಣಿಯ ಮಹಿಳಾ ಶೌಚಗೃಹದ ಬಳಿ ಹಾದುಹೋಗಿರುವ
ಬೃಹತ್ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಗಂಡು ಮಗುವಿನ ಶವ ಇದಾಗಿದ್ದು, ಚರಂಡಿ ಯಲ್ಲಿರುವುದನ್ನು ಗಮನಿಸಿದ ಸ್ಥಳೀಯರು ದೇಹವನ್ನು ರಕ್ಷಿಸಿ ಮೇಲಕ್ಕೆ ಎತ್ತಿದ್ದಾರೆ. ಮೃತದೇಹ ಇರುವುದು ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ. ಶಹರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಸಿಪಿಐ ಗುರುನಾಥ ಚವಾಣ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗುತ್ತಿದೆ. ಹೆರಿಗೆ ಸಂದರ್ಭದಲ್ಲಿ ಮಗು ಮೃತಪಟ್ಟರೆ ಅದನ್ನು ಸರಿಯಾಗಿ ಅಂತ್ಯಸಂಸ್ಕಾರ ಮಾಡುವ ಇಲ್ಲವೇ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ. ಆದರೆ, ಅದನ್ನು ನಿರ್ಲಕ್ಷಿಸಿ ಶವವನ್ನು ಬಿಸಾಕಿ ಹೋಗಲಾಗಿದೆ ಎಂದು ಹೇಳಲಾಗಿದೆ.