ಪಕ್ಷದ ವರಿಷ್ಠ ಸಂತೋಷ್ ಸಭೆ ರದ್ದು, ಕಾರ್ಯತಂತ್ರಕ್ಕಾಗಿ ನ.೨೫ಕ್ಕೆ ಅಮಿತ್ ಶಾ ಸಭೆ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಈಗಾಗಲೇ ಒಂದು ವರ್ಷ ಮುಂದೂಡಿರುವ ಬಿಬಿಎಂಪಿ ಚುನಾವಣೆಯನ್ನು ಇನ್ನಷ್ಟು ಕಾಲ ಮುಂದೆ ಹಾಕಿದರೆ ಬಿಜೆಪಿಗೆ ಕಾದಿಗೆ ಆಪತ್ತು. ಇದು ರಾಜ್ಯ ಬಿಜೆಪಿಗೆ ಪಕ್ಷದ ರಾಷ್ಟ್ರೀಯ ನಾಯಕರು ಕಳುಹಿಸಿರುವ ಸ್ಪಷ್ಟ ಸಂದೇಶ. ಕಟ್ಟುನಿಟ್ಟಿನ ಸೂಚನೆಯೂ ಹೌದು.
ಬಿಬಿಎಂಪಿ ಚುನಾವಣೆಯನ್ನು ಈತನಕ ಮುಂದೂಡಿದ್ದು ಆಯ್ತು. ಆದರೆ ಇನ್ನು ಮತ್ತೆ ಮುಂದೂಡಬಾರದು. ಹೊಸ ಮುಖ್ಯ ಮಂತ್ರಿಯಿಂದಾಗಿ ಬಿಜೆಪಿಗೆ ಕೊಂಚ ವರ್ಚಸ್ಸು ವೃದ್ಧಿಸಿದೆ. ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಇದು ಸಕಾಲ ಎನ್ನುವ ಮಾಹಿತಿ ಸಮೀಕ್ಷೆಯಿಂದ ಲಭ್ಯವಾಗಿದೆ. ಈ ಮಾಹಿತಿ ಬಿಜೆಪಿ ರಾಷ್ಚ್ರೀಯ ನಾಯಕರ ಕಿವಿಗೂ ಬಿದ್ದಿದೆ. ಇದನ್ನು ಗಂಭೀರವಾಗಿ ಪರಿಗಣಿ ಸಿರುವ ವರಿಷ್ಠ ಅಮಿತ್ ಶಾ ಅವರು ನ.೨೫ ರಂದು ಬೆಂಗಳೂರಿಗೆ ಆಗಮಿಸಿ ಚುನಾವಣೆ ಪೂರ್ವ ಸಭೆ ನಡೆಸಲಿದ್ದಾರೆ ಎಂದು ದೆಹಲಿ ಬಿಜೆಪಿ ಕಚೇರಿ ಮೂಲಗಳು ತಿಳಿಸಿವೆ.
ಅಮಿತ್ ಶಾ ಅವರು ಈಗಾಗಲೇ ದೆಹಲಿ ಮತ್ತು ಚಂಢೀಗಡ ಪಾಲಿಕೆಗಳ ಚುನಾವಣೆಗಾಗಿ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದು, ಆನಂತರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್
ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿ ಕೆಲವರನ್ನು ಭೇಟಿಯಾಗಿದ್ದಾರೆ. ಇದಕ್ಕಾಗಿ ಭಾನು ವಾರ ಅವರು ಶಾಸಕರು, ಪಕ್ಷದ ಪದಾಧಿಕಾರಿಗಳ ಸಭೆಯನ್ನೂ ನಿಗದಿ ಮಾಡಿದ್ದರು. ಆದರೆ ಪುನೀತ್ ರಾಜ್ ಕುಮಾರ್ ಅವರು ನಿಧನರಾಗಿದ್ದರಿಂದ ಭಾನುವಾರ ನಡೆಯ ಬೇಕಿದ್ದ ಸಭೆಯನ್ನು ನ.9ಕ್ಕೆ ಮುಂದೂಡುವಂತೆ ಮಾಡಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಬಿಬಿಎಂಪಿ ಚುನಾವಣೆ ವಿಚಾರ ದಲ್ಲಿ ಶಾಸಕರು ಮತ್ತು ಪಕ್ಷದ ನಡುವೆ ನಡೆಯುತ್ತಿದ್ದ ಆಂತರಿಕ ಜಟಾಪಟಿ ಬಹಿರಂಗವಾಗದಂತಾಗಿದೆ.
***
ಸರಕಾರದ ಲೆಕ್ಕಾಚಾರವೇನು?
ಬಿಬಿಎಂಪಿಯಲ್ಲಿ ಚುನಾಯಿತ ಪ್ರತಿನಿಽಗಳ ಆಡಳಿತ ಇಲ್ಲದೆ ಒಂದೂವರೆ ವರ್ಷ ಸಮೀಪಿಸುತ್ತಿದ್ದು, ಈಗಲೂ ಚುನಾವಣೆ ನಡೆಸದಿದ್ದರೆ ರಾಜ್ಯ ಸರಕಾರ ಸುಪ್ರೀಂಕೋರ್ಟ್ನಿಂದ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಕಾನೂನು ತಜ್ಞರು. ಏಕೆಂದರೆ, ಬಿಬಿಎಂಪಿ ಆಡಳಿತಾವಧಿ ಮುಗಿಯುತ್ತಿದ್ದಂತೆ ಸರಕಾರ ಚುನಾವಣೆ ನಡೆಸಲು ಸಿದ್ಧವಾಗಬೇಕಿತ್ತು. ಆದರೆ ೨೦೨೦ರ ಬಿಬಿಎಂಪಿ ಹೊಸ ಕಾಯಿದ ರಚಿಸಬೇಕೆನ್ನುವ ನೆಪದಲ್ಲಿ ಮುದೂಡಲಾಗಿತ್ತು. ಆನಂತರವಾರದೂ ಚುನಾವಣೆ ನಡೆಸುವಂತೆ ಹೈಕೋರ್ಟ್ ಸೂಚಿಸಿದಾಗ ಇದೇ ಸರಕಾರ ಸದ್ಯ ಇರುವ ೧೯೮ ವಾರ್ಡ್ಗಳ ಬದಲು ೨೪೩ ವಾರ್ಡ್ಗಳನ್ನು ಪುನರ್ ವಿಂಗಡಿಸ ಬೇಕೆಂದು ಸಬೂಬು ಹೇಳಿತ್ತು.
ಅಷ್ಟೊತ್ತಿಗೆ ಈ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ನಂತರ ವಾರ್ಡ್ ವಿಂಗಡಿಸುವ ಕೆಲಸಕ್ಕಾಗಿ ಸರಕಾರ ಬಿಬಿಎಂಪಿ
ಆಯುಕ್ತರು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ೬ ತಿಂಗಳ ಅವಽಗೆ ಸಮಿತಿ ರಚಿಸಿತ್ತು. ಈ ಸಮಿತಿ 6 ತಿಂಗಳಲ್ಲಿ ಕೇವಲ ಒಂದೇ ಒಂದು ಸಭೆ ನಡೆಸಿದೆ. ಇತ್ತೀಚಗೆ ಈ ವಿಚಾರ ಸುಪ್ರೀಂಕೋರ್ಟ್ನಲ್ಲಿ ಸದ್ದು ಮಾಡಿದ್ದು, ನವೆಂಬರ್ 6ರ ನಂತರ ಚುನಾವಣಾ ವಿಚಾರ ಅಂತಿಮಗೊಳಿಸುವಂತೆ ಸೂಚಿಸಿದೆ.
ಇದರಿಂದ ಎಚ್ಚೆತ್ತಿರುವ ಸರಕಾರ ಈಗ ಅವಧಿ ಮುಗಿದಿರುವ ವಾರ್ಡ್ ರಚನಾ ಸಮಿತಿಯನ್ನು 6 ತಿಂಗಳ ಕಾಲ ವಿಸ್ತರಿಸಿದೆ. ಇದನ್ನೇ ಕೋರ್ಟ್ ಮುಂದೆ ನೆಪ ಮಾಡಿಕೊಂಡು ಮತ್ತೆ ಚುನಾವಣೆ ಮುಂದೂಡಲು ಸರಕಾರ ಲೆಕ್ಕಾಚಾರ ಹಾಕಿದೆ.
ಮುಕುಲ್ ರಹಟಗಿಗ ಭಾರಿ ಶುಲ್ಕ ಪಾವತಿ ಹೇಗೆ?
ಇಲ್ಲಿ ಪಕ್ಷದ ಕಾರ್ಯಕರ್ತರು, ಟಿಕೆಟ್ ಆಕಾಂಕ್ಷಿ ಮುಖಂಡರು ಚುನಾವಣೆ ನಡೆಸಬೇಕೆನ್ನುವ ಹೋರಾಟ ನಡೆಸುತ್ತಿದ್ದರೆ, ನಗರದ ಶಾಸಕರು ಮಾತ್ರ ಇನ್ನಷ್ಟು ಕಾಲ ಚುನಾವಣೆ ಮುಂದೂಡುವ ಪ್ರಯತ್ನ ದಲ್ಲಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಶಾಸಕರು ಕೂಡ ಸಾಥ್ ನೀಡುತ್ತಿದ್ದು, ಬಹುತೇಕ ಶಾಸಕರು ಚುನಾವಣೆ ಮುಂದೂಡಿಸಲು ಹಣವನ್ನೂ ವೆಚ್ಚ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ನ್ಯಾಯವಾದಿ ಮುಕುಲ್ ರೋಹಟಗಿ ಅವರಿಗ ಚುನಾವಣೆ ಮುಂದೂಡುವ ಪರ ವಾದಿ ಸಲು ಒಂದು ಬಾರಿಗೆ ಲಕ್ಷಾಂತರ ರು. ಶುಲ್ಕ ಪಾವತಿಸಬೇಕಾಗುತ್ತದೆ. ಇದಕ್ಕೆ ನಗರದ ಅನೇಕ ಶಾಸಕರು ಪಕ್ಷಾತೀತವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಸರಕಾರ ಮಾಡಿದ ತಪ್ಪೇನು?
ವಾಸ್ತವದಲ್ಲಿ ಸರಕಾರ ಚುನಾವಣೆ ಮುಂದೂಡುವ ನೆಪದಲ್ಲಿ 198 ವಾರ್ಡ್ಗಳನ್ನು 243ಕ್ಕೆ ಹೆಚ್ಚಿಸುವ ಪ್ರಯತ್ನಕ್ಕೆ ಕೈ ಹಾಕಿದ್ದೇ ತಪ್ಪು. ಏಕೆಂದರೆ, ಒಂದೊಮ್ಮೆ ಸರಕಾರ 243 ವಾರ್ಡ್ಗಳಿಗೆ ಚುನಾವಣೆ ನಡೆಸುವುದಾದರೆ ಹೊಸದಾಗಿ ಬಿಬಿಎಂಪಿಗೆ 10 ಗ್ರಾಮ ಗಳನ್ನು ಸೇರಿಸಬೇಕಾಗುತ್ತದೆ.
ಅನೇಕ ಗ್ರಾಮ ಪಂಚಾಯಿತಿಗಳು ಪಾಲಿಕೆಯಲ್ಲಿ ವಿಲೀನವಾದರೆ ಅವುಗಳ ಆಡಳಿತ ಮಂಡಳಿ ವಿಸರ್ಜನೆಯಾಗುತ್ತವೆ. ಇದನ್ನು
ಪಂಚಾಯಿತಿಗಳು ಒಪ್ಪದೆ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಹಾಗೆಯೇ ಸರಕಾರ ತಕ್ಷಣಕ್ಕೆ 243 ವಾರ್ಡ್ಗಳನ್ನು ವಿಂಗಡಿಸಿ, ಗಡಿ ಗುರುತಿಸಿ, ಅಂತಿಮಗೊಳಿಸುವುದು ಮತ್ತು ಮೀಸಲು ಪಟ್ಟಿ ಪ್ರಕಟಿಸುವುದು ಅಷ್ಟು ಸುಲಭವಲ್ಲ. ಒಂದೊಮ್ಮೆ 243 ವಾರ್ಡ್ ವಿಂಗಡಿಸಿ ಚುನಾವಣೆ ನಡೆಸಿದರೂ ಪಾಲಿಕೆ ಸಭೆಗಳನ್ನು ನಡೆಸುವುದು, ಅದಕ್ಕೆ ಅನುದಾನ ಹೊಂದಿಸುವುದು ದೊಡ್ಡ ಸಾಹಸವಾಗಲಿದೆ. ಅಂದರೆ ಸದ್ಯ ಸಂಗ್ರಹವಾಗುತ್ತಿರುವ ಸುಮಾರು 3000 ಕೋಟಿ ರು. ಆಸ್ತಿ ತೆರಿಗೆ ನೆಚ್ಚಿಕೊಂಡೇ ಬಿಬಿಎಂಪಿ 10 ಸಾವಿರ ಕೋಟಿ ರು. ಬಜೆಟ್ ಮಂಡಿಸುತ್ತಿದೆ. ಇನ್ನು 243 ವಾರ್ಡ್ಗೆ ಚುನಾವಣೆ ನಡೆಸಿದರೆ 20 ಸಾವಿರ ಕೋಟಿ ರು. ಮೊತ್ತದ ಬಜೆಟ್ ಮಾಡಬೇಕಾಗುತ್ತದೆ. ಇದಕ್ಕೆ ಅನುದಾನ ಎಲ್ಲಿಂತ ತರುವುದು ಎನ್ನುವುದು ಅಧಿಕಾರಿಗಳ ಅಳಲು.