ಈ ಹಿಂದೆ ಎರಡು ನೊಟೀಸ್ ನೀಡಿದರೂ ಕ್ಯಾರೇ ಎನ್ನದ ಬೆಂಗಳೂರು ವಿಶ್ವವಿದ್ಯಾಲಯ
ಅಪರ್ಣಾ.ಎ.ಎಸ್ ಬೆಂಗಳೂರು
ಸದಾ ಒಂದಿಲ್ಲೊಂದು ವಿವಾದದಿಂದಲೇ ಸದ್ದು ಮಾಡುವ ಜ್ಞಾನಭಾರತಿ ಕ್ಯಾಂಪಸ್ಗೆ ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ. ಕಸ ವಿಗಂಡನೆಯನ್ನು ಸರಿಯಾಗಿ ಮಾಡು ತ್ತಿಲ್ಲ ಎನ್ನುವ ಕಾರಣಕ್ಕೆ ‘ಜನವರಿ’ಯಿಂದ ಕಸ ತೆರವು ಮಾಡಲ್ಲ ಎನ್ನುವ ಖಡಕ್ ಎಚ್ಚರಿಕೆಯನ್ನು ಬಿಬಿಎಂಪಿ ನೀಡಿದೆ.
೮೦೦ಕ್ಕೂ ಹೆಚ್ಚು ಎಕರೆ ವ್ಯಾಪ್ತಿಯಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಿತ್ಯ ಉತ್ಪತ್ತಿಯಾಗುವ ಕಸವನ್ನು ಸರಿಯಾದ ರೀತಿಯಲ್ಲಿ ಬೇರ್ಪಡಿಸಿ, ತ್ಯಾಜ್ಯ ಸಂಸ್ಕರಣೆ ಮಾಡಬೇಕು. ಇತರ ಸಮುಚ್ಛಯಗಳಿಗೆ ಇರುವಂತೆ ಬೆಂಗಳೂರು ವಿವಿಗೂ ಈ ನಿಯಮವನ್ನು ಬಿಬಿಎಂಪಿ ಹಾಕಿದೆ. ಆದರೆ ಬೆಂಗಳೂರು ವಿಶ್ವವಿದ್ಯಾಲಯ ಇದನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ದೂರಿರುವ ಬಿಬಿಎಂಪಿ, ಈ ಸಂಬಂಧ ನೊಟೀಸ್ ನೀಡಿದ್ದು, ಜನವರಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಕಸ ಎತ್ತುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳು ಸೇರಿದಂತೆ ವಿದ್ಯಾರ್ಥಿನಿಲಯ ಗಳಿಂದ ಪ್ರತಿನಿತ್ಯ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯವನ್ನು ಪ್ರತ್ಯೇಕಿಸುತ್ತಿಲ್ಲ. ಉತ್ಪತ್ತಿಯಾಗಿರುವ ಕಸವನ್ನು ಹಸಿ,ಒಣ, ಜೈವಿಕ ಎಂದು ಪ್ರತ್ಯೇಕಿಸುವಂತೆ ಹೇಳಿದ್ದರೂ ಕೂಡಾ ವಿಶ್ವವಿದ್ಯಾಲಯ ತ್ಯಾಜ್ಯ ನಿರ್ವಹಣೆಯಲ್ಲಿ ಯಾವುದೇ ರೀತಿಯ ಕ್ರಮ ಕೈಗೊಳ್ಳು ತ್ತಿಲ್ಲ. ಬದಲಾಗಿ ತ್ಯಾಜ್ಯ ಸಂಸ್ಕರಿಸದೇ ಹಾಗೇಯೇ ಬಿಡುತ್ತಿದೆ. ಹೀಗಾಗಿ ಘನತ್ಯಾಜ್ಯ ಸಂಗ್ರಹ ಸೇವೆಯನ್ನು ಜನವರಿಯಿಂದ ನಿಲ್ಲಿಸಲಿದೆ ಎಂದು ಪಾಲಿಕೆಯ ರಾಜ ರಾಜೇಶ್ವರಿನಗರ ವಲಯದ ಜಂಟಿ ಆಯುಕ್ತರು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಯವರಿಗೆ ಪತ್ರ ಬರೆದಿದ್ದಾರೆ.
ಈ ಹಿಂದೆಯೂ ಅನೇಕ ಬಾರಿ ನೆನಪಿನೋಲೆಯನ್ನು ನೀಡಿದರೂ ಬೆಂಗಳೂರು ವಿಶ್ವವಿದ್ಯಾಲಯ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಬದಲಾಗಿ ತ್ಯಾಜ್ಯ ನಿರ್ವಹಣೆಯನ್ನು ಮಾಡದೇ ಹಾಗೇ ಬಿಟ್ಟಿತ್ತು, ಈ ತ್ಯಾಜ್ಯದ ರಾಶಿಗೆ ಬೆಂಕಿ ಹಚ್ಚಲಾಗಿದ್ದು, ಈ ಕುರಿತಂತೆ ವರದಿಯೂ ಆಗಿತ್ತು. ಆದರೂ ಯೂ ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಘನತ್ಯಾಜ್ಯ ನಿರ್ವಹಣೆ
ಮಾಡದೇ ನಿರ್ಲಕ್ಷ್ಯ ವಹಿಸಿದೆ.
ವಿಶ್ವವಿದ್ಯಾಲಯ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳು, ಎಂಜಿನಿಯರಿಂಗ್, ಸ್ನಾತಕೋತ್ತರ ವಿಭಾಗ ಹಾಗೂ ಆಡಳಿತ ವಿಭಾಗ ದಿಂದ ದಿನನಿತ್ಯ ಹೆಚ್ಚಿನ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದು ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದಕ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ವಿಶ್ವವಿದ್ಯಾಲಯ ಆವರಣದ ತ್ಯಾಜ್ಯ ಪ್ರತ್ಯೇಕಿಸಲು, ಸಮರ್ಪಕವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕಳೆದ ಮಾರ್ಚ್ನಲ್ಲಿ ಆರ್ಆರ್ ನಗರದ ಜಂಟಿ ಆಯುಕ್ತರು ಸೂಚಿಸಿದ್ದರು. ಆದರೆ ಕಸ ಪ್ರತ್ಯೇಕಿಸದ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಪಾಲಿಕೆಯು ಜನವರಿಯಿಂದ ಕಸ ಸಂಗ್ರಹಿಸದೇ ಇರಲು
ತೀರ್ಮಾನಿಸಿದ್ದು, ಈ ಸಂಬಂಧ ವಿಶ್ವವಿದ್ಯಾಲಯಕ್ಕೆ ನೋಟಿಸ್ ನೀಡಿದೆ.
ಪಾಲಿಕೆ ಪತ್ರಗಳಿಗೆ ಸ್ಪಂದನೆ ಇಲ್ಲ
ಜತೆಗೆ ವಿದ್ಯಾರ್ಥಿ ನಿಲಯಗಳಲ್ಲಿ ತ್ಯಾಜ್ಯವನ್ನು ವಿಶ್ವವಿದ್ಯಾಲಯದ ಆವರಣದ ಸಂಸ್ಕರಿಸಲು ಸರಕಾರದ ಆದೇಶವಿದ್ದರೂ ಅದನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ೨೦೨೧ರ ಏಪ್ರಿಲ್ ನಿಂದಲೂ ಪಾಲಿಕೆ ಅನೇಕ ಪತ್ರಗಳನ್ನು
ವಿಶ್ವವಿದ್ಯಾಲಯಕ್ಕೆ ಕಳುಹಿಸಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಬದಲಾಗಿ ನಮಗೆ ಅನುದಾನವಿಲ್ಲ. ಮುಂದಿನ ವರ್ಷ
ಕ್ರಮಕೈಗೊಳ್ಳುತ್ತೇವೆ ಎಂದು ಹಾರಿಕೆಯ ಉತ್ತರಕೊಟ್ಟು ಸುಮ್ಮನಾಗುತ್ತಿದೆ. ಇನ್ನು ವಿಶ್ವವಿದ್ಯಾಲಯದಲ್ಲಿ ಒಂಬತ್ತು ವಿದ್ಯಾರ್ಥಿನಿಲಯಗಳಿದ್ದು, ಹೆಚ್ಚಿನ ಗಾಡಿಯನ್ನು ಒದಗಿಸಬೇಕು ಎಂದು ಕುಲಸಚಿವರು ಪತ್ರ ಬರೆದಿದ್ದಾರೆ. ಆದರೆ, ಸರಕಾರ ಹಾಗೂ ಪಾಲಿಕೆ ಸೂಚಿಸಿದಂತೆ ತ್ಯಾಜ್ಯ ಸಂಸ್ಕರಿಸುವ ಘಟಕ ಸ್ಥಾಪನೆ ಬಗ್ಗೆ ಯಾವುದೇ ಮಾಹಿತಿಯನ್ನು ವಿಶ್ವವಿದ್ಯಾಲಯ
ಈವರೆಗೂ ನೀಡಿಲ್ಲ.
*
ಜ್ಞಾನಭಾರತಿ ಕ್ಯಾಂಪಸ್ ಒಂದು ರೀತಿ ವಸತಿ ಸಮುಚ್ಛಯವಿದ್ದಂತೆ. ಆದ್ದರಿಂದ ತ್ಯಾಜ್ಯ ಸಂಸ್ಕರಣೆಯ ಜವಾಬ್ದಾರಿ ವಿವಿ ಆಡಳಿತ ಮಂಡಳಿಯ ಮೇಲಿರುತ್ತದೆ. ಆದರೆ ಅದನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಸ್ಪಷ್ಟನೆ ಕೇಳಿದಾಗ, ಅನುದಾನ ಕೊರತೆ ಎನ್ನುವ ಮಾತನ್ನು ಹೇಳುತ್ತಾರೆ. ಬಿಬಿಎಂಪಿಯಿಂದ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹಲವು ಬಾರಿ ನೊಟೀಸ್
ಜಾರಿಗೊಳಿಸಿದರೂ ಸರಿಯಾದ ಕ್ರಮವಹಿಸಿಲ್ಲ. ಆದ್ದರಿಂದ ಈ ಬಾರಿ ಮತ್ತೊಮ್ಮೆ ನೊಟೀಸ್ ಜಾರಿ ಮಾಡಿ, ಕಸ ಸಂಗ್ರಹವನ್ನು ಸ್ಥಗಿತಗೊಳಿಸುವ ಮಾಹಿತಿ ನೀಡಿದ್ದೇನೆ.
– ನಾಗರಾಜು
ಜಂಟಿ ಆಯುಕ್ತ, ಆರ್.ಆರ್ ನಗರ ವಲಯ