ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವ ಸರಕಾರ
ಅರುಣ್ ಸಿಂಗ್ ಮುಂದೆ ಕಾಯಿದೆ ತಿದ್ದುಪಡಿಗೆ ಪಟ್ಟು
ವಿಶೇಷ ವರದಿ: ವೆಂಕಟೇಶ ಆರ್. ದಾಸ್ ಬೆಂಗಳೂರು
ಬಿಬಿಎಂಪಿ ಚುನಾವಣೆ ಸಂಬಂಧ ಸುಪ್ರಿಂ ಕೋರ್ಟ್ ತೀರ್ಪು ಬಾಕಿಯಿದ್ದು, ಈ ನಡುವೆಯೇ ನಡೆಯುತ್ತಿರುವ ಅನೇಕ
ಬೆಳವಣಿಗೆಗಳು ಬಿಬಿಎಂಪಿ ಚುನಾವಣೆಯನ್ನು ಶೀಘ್ರವೇ ನಡೆಸಲು ಸರಕಾರ ತಯಾರಿ ನಡೆಸುತ್ತಿದೆ ಎಂಬ ಸುಳಿವು ಸಿಕ್ಕಿದೆ.
ಸುಪ್ರೀಂ ಕೋರ್ಟ್ ಬಿಬಿಎಂಪಿ ಚುನಾವಣೆ ಸಂಬಂಧದ ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸುತ್ತಿಲ್ಲ ಎಂದು ಆರೋಪಿಸಿ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಪ್ರಕರಣವನ್ನು ನಾಲ್ಕು ವಾರಗಳ ಗಡುವು ನೀಡಿ ವಿಚಾರಣೆ ಪೂರ್ಣಗೊಳಿಸುವಂತೆ ಸೂಚನೆ ನೀಡಿತ್ತು. ಇದೀಗ ನ.8 ಕ್ಕೆ ಆ ಗಡುವು ಮೀರಿದ್ದು, ಈ ವಾರದಲ್ಲಿ ಪ್ರಕರಣದ ವಿಚಾರಣೆ ನಡೆಯ ಲಿದೆ. ಅಷ್ಟೇ ವೇಗವಾಗಿ ತೀರ್ಪು ಕೂಡ ಪ್ರಕಟವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸರಕಾರ ಚುನಾವಣೆ ನಡೆಸಲು ಅಗತ್ಯ ವಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಹೇಳಬಹುದು.
ಬಿಬಿಎಂಪಿ ಈಗಾಗಲೇ, ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಿ ಬಿಡುಗಡೆ ಮಾಡಿದೆ. ಮತದಾರರ ಪಟ್ಟಿ ಬಿಡುಗಡೆ ಮಾಡಿರು ವುದು ಚುನಾವಣೆಗೆ ನಾವು ಸಿದ್ಧವಾಗಿದ್ದೇವೆ ಎಂಬ ಸಂದೇಶವನ್ನು ನೀಡಿದಂತಾಗಿದೆ. ಆದರೆ, ವಾರ್ಡ್ ವಿಂಗಡಣೆ ಪ್ರಕ್ರಿಯೆ ಬಾಕಿಯಿದ್ದು, 198 ವಾರ್ಡ್ಗೆ ಸಂಬಂಧಿಸಿದಂತೆ ಪಟ್ಟಿ ಬಿಡುಗಡೆಯಾಗಿದೆಯೋ, 243 ವಾರ್ಡ್ಗಳಿಗೆ ಅನುಗುಣವಾಗಿ ಪಟ್ಟಿ ಬಿಡುಗಡೆಯಾಗಿದೆಯೋ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಆದರೆ, ಪಟ್ಟಿಯಂತೂ ಬಿಡುಗಡೆಯಾಗಿದ್ದು, ಚುನಾವಣೆಗೆ
ಸಿದ್ಧವಿರುವ ಸುಳಿವು ಸಿಕ್ಕಿದೆ.
ಬಿಜೆಪಿ ಕೂಡ ರೆಡಿ: ಆಡಳಿತಾರೂಢ ಬಿಜೆಪಿ ಕೂಡ ಬಿಬಿಎಂಪಿ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಆರಂಭಿಸಿದೆ. ಸರಕಾರ
ಈಗಾಗಲೇ ಕೆಲವು ಯೋಜನೆಗಳನ್ನು ಘೋಷಣೆ ಮಾಡಿದ್ದು, ಮಿಷನ್-2022 ಕುರಿತು ಸಿಎಂ ಅಧಿಕಾರಿಗಳ ಸಭೆ ನಡೆಸಿ,
ಯೋಜನೆಯನ್ನು ಶೀಘ್ರವಾಗಿ ಜಾರಿಗೆ ತರುವ ಮೂಲಕ ಬೆಂಗಳೂರಿನ ಅಭಿವೃದ್ಧಿಗೆ ನಾವು ಬದ್ಧ ಎಂಬ ಭರವಸೆಯನ್ನು
ಮೂಡಿಸುವುದು ಉದ್ದೇಶವಾಗಿದೆ. ಹೀಗಾಗಿಯೇ, ಸಭೆಯಲ್ಲಿ ಮೆಟ್ರೋ, ಸಬ್ ಅರ್ಬನ್ ರೈಲ್ವೆ ಯೋಜನೆ, ರಸ್ತೆಗಳ ಅಭಿವೃದ್ಧಿ,
ರಾಜಕಾಲುವೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಯೋಜನೆಗಳಿಗೆ ವೇಗ ನೀಡುವ ಕುರಿತು ಸೂಚನೆ ನೀಡಲಾಗಿದೆ. ಆ ಮೂಲಕ ಅಭಿವೃದ್ಧಿಯನ್ನು ಜನರಿಗೆ ಮನವರಿಕೆ ಮಾಡಿ ಕೊಡುವ ಪ್ರಯತ್ನವನ್ನು ಸರಕಾರ ಈ ಮೂಲಕ ಮಾಡುತ್ತಿದೆ ಎಂದು
ಹೇಳಲಾಗು ತ್ತಿದೆ.
ಪಕ್ಷದ ಆಂತರಿಕ ವಲಯದಲ್ಲಿಯೂ ಕೂಡ ಬಿಬಿಎಂಪಿ ಚುನಾವಣೆ ನಡೆಸುವ ಸಂಬಂಧ ಚರ್ಚೆಗಳು ಆರಂಭವಾಗಿವೆ. ಸೋಮ ವಾರ ಬೆಂಗಳೂರು ನಗರಕ್ಕೆ ಆಗಮಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು, ಮಂಗಳವಾರ ಬಿಬಿಎಂಪಿ ಚುನಾವಣೆ ಸಂಬಂಧ ನಗರದ ಸಚಿವರು, ಶಾಸಕರು ಮತ್ತು ಇನ್ನಿತರ ಪ್ರಮುಖ ನಾಯಕರ ಜತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಚುನಾವಣೆ ನಡೆಸುವ ಸಂಬಂಧ ಸರಕಾರಕ್ಕೆ ಸೂಚನೆ ನೀಡುವ ಸಾಧ್ಯತೆಯಿದ್ದು, ಸಾಧಕಭಾದಕಗಳ ಚರ್ಚೆ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಸುಪ್ರೀಂ ನೀಡಿದ್ದ ಗಡುವು ಪೂರ್ಣ: ನವೆಂಬರ್ 8ಕ್ಕೆ ಸುಪ್ರಿಂ ಕೋರ್ಟ್ ನೀಡಿದ್ದ ಗಡುವು ಪೂರ್ಣವಾಗಿದೆ. ಸುಪ್ರೀಂ ಕೋಟ್’ ನಲ್ಲಿ ದಾಖಲಾಗಿರುವ ಬಿಬಿಎಂಪಿ ಚುನಾವಣೆ ಸಂಬಂಧದ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ನ ನಾಯಕರು ವಿಭಾಗೀಯ ಪೀಠಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿದ ವಿಭಾಗೀಯ ಪೀಠ, ನಾಲ್ಕು ವಾರದ ಗಡುವಿನಲ್ಲಿ ಪ್ರಕರಣವನ್ನು ಇತ್ಯರ್ಥ ಮಾಡುವಂತೆ ಸೂಚಿಸಿದೆ. ಈ ಆದೇಶ ನೀಡಿ ನ.8ಕ್ಕೆ ನಾಲ್ಕು ವಾರ ಪೂರ್ಣ ಗೊಂಡಿದ್ದು, ಈ ವಾರದಲ್ಲಿಯೇ ಪ್ರಕರಣದ ವಿಚಾರಣೆ ಕೈಗೆತ್ತಿ ಕೊಳ್ಳಲಾಗುತ್ತದೆ. ಈ ಅವಧಿ ಯಲ್ಲಿಯೇ ಪ್ರಕರಣದ ಇತ್ಯರ್ಥ ವಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ತಿದ್ದುಪಡಿಗೆ ಒತ್ತಾಯ: ಬಿಜೆಪಿಯಲ್ಲಿಯೇ ಸರಕಾರ ಜಾರಿಗೆ ತರಲು ಉದ್ದೇಶಿಸಿದ್ದ ಬಿಬಿಎಂಪಿ ಕಾಯಿದೆ ವಿರುದ್ಧ ಆಕ್ರೋಶ
ಕೇಳಿಬಂದಿದೆ. ಸರಕಾರ 243 ವಾರ್ಡ್ಗಳಿಗೆ ಚುನಾವಣೆ ನಡೆಸಲು ಕಾಯಿದೆ ಜಾರಿಗೆ ತಂದಿದ್ದು, ಅದರಲ್ಲಿ 14 ಆಕ್ಷೇಪಣಾರ್ಹ
ಅಂಶಗಳಿವೆ ಎಂಬುದು ಬಿಜೆಪಿಯವರೇ ಆದ ಹಿರಿಯ ಪಾಲಿಕೆ ಸದಸ್ಯರ ಆರೋಪ. ಈ ಅಂಶಗಳನ್ನು ಕೈಬಿಟ್ಟು ಕಾಯಿದೆಗೆ
ತಿದ್ದುಪಡಿ ತರಬೇಕು ಎಂಬ ಒತ್ತಡವನ್ನು ಹೈಕಮಾಂಡ್ ಮೇಲೆ ಆರ್ಎಸ್ಎಸ್ ಮೂಲಕ ಈ ಸದಸ್ಯರು ತರುತ್ತಿದ್ದಾರೆ.
ಮಂಗಳವಾರದ ಸಭೆಯಲ್ಲಿ ಅರುಣ್ ಸಿಂಗ್ ಸಮ್ಮುಖದಲ್ಲಿ ಈ ಸಂಬಂಧ ಚರ್ಚೆ ನಡೆಯಲಿದ್ದು, ತಿದ್ದುಪಡಿಗೆ ಸೂಚನೆ
ನೀಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ತಿದ್ದುಪಡಿಗೆ ಸೂಚನೆ ನೀಡಿದರೆ, ಚುನಾವಣೆಗೆ ವಿಳಂಬವಾಗಬಹುದು ಅಥವಾ ಇರುವ ೧೯೮ ವಾರ್ಡ್ಗಳಿಗೆ ಚುನಾವಣೆ ನಡೆಯಬಹುದು.
ಮತದಾರರ ಕರಡು ಪಟ್ಟಿ ಬಿಡುಗಡೆ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2022ರ ಕಾರ್ಯಚಟುವಟಿಕೆಗಳ ಭಾಗವಾಗಿ
ಪರಿಷ್ಕೃತ ಮತದಾರರ ಕರಡು ಪ್ರತಿಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಡುಗಡೆ ಮಾಡಲಾಗಿದೆ. 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೊಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಚೇರಿ ಹಾಗೂ ವಾರ್ಡ್
ಕಚೇರಿಗಳಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಗೆ ಮತದಾರರ ಪಟ್ಟಿ ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ಪಕ್ಷದ ಪ್ರತನಿಧಿಗಳು, ನಾಗರಿಕರು ಪರಿಷ್ಕೃತ ಮತದಾರರ ಕರಡು ಪ್ರತಿ ಪರಿಶೀಲಿಸಿ, ತಿದ್ದುಪಡಿ ಅಥವಾ ಬದಲಾವಣೆ ಇದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸೇರ್ಪಡೆಗೆ ಅವಕಾಶ
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದಲ್ಲಿ, ತಪ್ಪಾಗಿದ್ದಲ್ಲಿ, ತಪ್ಪಾಗಿ ಸೇರ್ಪಡೆಗೊಂಡಿದ್ದಲ್ಲಿ ಹಾಗೂ ಒಂದು
ಭಾಗ ಸಂಖ್ಯೆಯಿಂದ ಮತ್ತೊಂದು ಭಾಗದ ಸಂಖ್ಯೆಗೆ ವರ್ಗಾವಣೆಯಾಗಬೇಕಿದ್ದಲ್ಲಿ ಮತ್ತು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಮತದಾರರ ನೊಂದಣಾಧಿಕಾರಿಗಳ ಕಚೇರಿ, ಸಹಾಯಕ ನೊಂದಣಾಧಿಕಾರಿಗಳ ಕಚೇರಿ, ವಾರ್ಡ್ ಕಚೇರಿ ಹಾಗೂ ಬಿಎಲಓ ಅವರುಗಳಿಗೆ ನಮೂನೆ-6, 7, 8 ಮತ್ತು 8ಎ ರಲ್ಲಿ ತಮ್ಮ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 8 ರವರಗೆ ಅವಕಾಶ ಕಲ್ಪಿಸಲಾಗಿದೆ.
ವಿಶೇಷ ನೊಂದಣಿ ಅಭಿಯಾನ
ವಿಶೇಷ ನೊಂದಣಿ ಅಭಿಯಾನವನ್ನು ನವೆಂಬರ್ನ 4 ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ
ಮತದಾರರ ನೊಂದಣಾಧಿಕಾರಿಗಳ ಕಚೇರಿ ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಚೇರಿ/ವಾರ್ಡ್
ಸಹಾಯಕ ಕೇಂದ್ರ ಮತ್ತು ಮತಗಟ್ಟೆಗಳಲ್ಲಿ ಅರ್ಜಿ ನಮೂನೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ರಾಜಕೀಯ ಪಕ್ಷದ
ಬೂತ್ ಲೆವಲ್ ಏಜೆಂಟ ಅವರನ್ನು ಇದಕ್ಕಾಗಿ ನೇಮಿಸಲಾಗಿದೆ.
ಮತದಾರರ ವಿವರ
ಪುರುಷ ಮತದಾರರು: 49,09,042
ಮಹಿಳಾ ಮತದಾರರು: 45, 28, 728
ಇತರ ಮತದಾರರು: 1646
ಒಟ್ಟು: 94,39,416