ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು
ಶಾಸಕರ ಹಸ್ತಕ್ಷೇಪಕ್ಕೆ ಕಡಿವಾಣ ಹಾಕುವಂತೆ ಆಕ್ರೋಶ
ತಿದ್ದುಪಡಿ ನಂತರವಷ್ಟೇ ಅನುಷ್ಠಾನಕ್ಕೆ ತರಲು ಒತ್ತಾಯ
ಬೆಂಗಳೂರು ನಗರಕ್ಕೆ ಪ್ರತ್ಯೇಕ ಕಾಯಿದೆ ರೂಪಿಸುವ ಹುಮ್ಮಸ್ಸಿನಲ್ಲಿ ಸರಕಾರ ರೂಪಿಸಿದ್ದ ಪ್ರತ್ಯೇಕ ಬಿಬಿಎಂಪಿ ಕಾಯಿದೆಗೆ ಬಿಜೆಪಿಯಲ್ಲಿಯೇ ವಿರೋಧ ವ್ಯಕ್ತವಾಗಿದ್ದು, ಸೂಕ್ತ ತಿದ್ದುಪಡಿ ನಂತರವೇ ಕಾಯಿದೆ ಜಾರಿಗೊಳಿಸಲು ಒತ್ತಡ ಹೆಚ್ಚಾಗಿದೆ.
ಬಿಬಿಎಂಪಿಗೆ ಪ್ರತ್ಯೇಕ ಕಾಯಿದೆ ಜಾರಿಗೊಳಿಸಿ, ಅದರ ಅನುಷ್ಠಾನಕ್ಕೆ ಸಂಬಂಧ ಸಿ.ವಿ.ರಾಮನ್ ನಗರ ಶಾಸಕ ಎಸ್.ರಘು ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಹೈಕೋರ್ಟ್ ನಲ್ಲಿ ಬಿಬಿಎಂಪಿ ಚುನಾವಣೆ ಸಂಬಂಧ ಪ್ರಕರಣ ಚರ್ಚೆಗೆ ಬರುವ ಸಂಬಂಧ ತರಾತುರಿಯಲ್ಲಿ ವರದಿ ನೀಡಿದ್ದು, ಇದರಲ್ಲಿ ಕೆಲವು ಕೆಎಂಸಿ ಆಕ್ಟ್ನ ಅಂಶಗಳನ್ನೇ ಕಟ್ ಅಂಡ್ ಪೇಸ್ಟ್ ಮಾಡಿದೆ. ಜತೆಗೆ, ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳ ಅಧಿಕಾರವನ್ನು ಮೊಟು ಕುಗೊಳಿಸುವ ಕ್ರಮಗಳನ್ನು ಸೇರಿಸ ಲಾಗಿದೆ. ಈ ಸಂಬಂಧ ಬಿಜೆಪಿ ಹೈಕ ಮಾಂಡ್ ಹಸ್ತಕ್ಷೇಪಕ್ಕೆ ಅನೇಕ ಬಿಬಿಎಂಪಿ ಸದಸ್ಯರು ಮತ್ತು ಬೆಂಗಳೂರು ಭಾಗದ ಕೆಲವು ಜನಪ್ರತಿನಿಧಿಗಳು ಒತ್ತಾಯಿಸಿದ್ದರು.
ಕಾಯಿದೆಯನ್ನು ತಮ್ಮದೇ ಪಕ್ಷದ ಕೆಲವರು ವಿರೋಧಿಸಿರುವ ಕಾರಣದಿಂದ ತಿದ್ದುಪಡಿ ತಂದು, ನಂತರ ಜಾರಿಗೆ ತರುವಂತೆ ಹೈಕಮಾಂಡ್ ಸರಕಾರಕ್ಕೆ ಸೂಚನೆ ನೀಡಿದೆ. ಜತೆಗೆ, ಆದಷ್ಟು ಬೇಗನೆ ಬಿಬಿಎಂಪಿ ಚುನಾವಣೆ ನಡೆಸ ಬೇಕು. ಕಾರ್ಯಕರ್ತರಿಗೆ ತಳಮಟ್ಟದಲ್ಲಿ ಅಧಿಕಾರ ನೀಡುವ ಸ್ಥಳೀಯ ಸಂಸ್ಥೆಗಳ ಅಧಿಕಾರದಲ್ಲಿ ಶಾಸಕರು ಮತ್ತು ಉಳಿದ ಜನಪ್ರತಿನಿಧಿಗಳ ಹಸ್ತಕ್ಷೇಪ ಮಾಡಬಾರದು. ಇದರಿಂದ ತಳಮಟ್ಟದ ಕಾರ್ಯಕರ್ತರ ಹುಮ್ಮಸ್ಸನ್ನು ಕಸಿದಂತಾಗುತ್ತದೆ ಎಂದು ಸರಕಾರಕ್ಕೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾಯಿದೆಗೆ 14 ಬದಲಾವಣೆಯನ್ನು ತರಲು ಸರಕಾರ ತೀರ್ಮಾನಿಸಿದೆ.
16 ಅನಪೇಕ್ಷಿತ ಅಂಶಗಳು: ಬಿಬಿಎಂಪಿ ನೂತನ ಕಾಯಿದೆ ಕೆಎಂಪಿ ಕಾಯಿದೆಯ ಕಲಂ 74ಕ್ಕೆ ವಿರುದ್ಧವಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳ ಅಧಿಕಾರಕ್ಕೆ ಶಾಸಕರು ಹಸ್ತಕ್ಷೇಪ ಮಾಡುವುದು ಸರಿಯಾದ ಕ್ರಮವಲ್ಲ ಎಂಬುದನ್ನು ಸಂವಿಧಾನ ಹಿಂದಿ ನಿಂದಲೂ ಸ್ಪಷ್ಟಪಡಿಸಿದೆ. ಈ ಸಂಬಂಧ ಬಲವಂತರಾಯ್ ಸಮಿತಿ ಶಿಫಾರಸು, 1978ರಲ್ಲಿ ಅಶೋಕ್ ಮೆಹ್ತಾ ಅವರ ಸಮಿತಿ ಶಿಫಾರಸು ಮಾಡಿದೆ. 2015ರಲ್ಲಿ ಎನ್.ಆರ್. ರಮೇಶ್ ಅವರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸಹ ಇದೇ ಅಂಶವನ್ನು ಎತ್ತಿಹಿಡಿದಿದೆ.
ಆದರೂ, ಕಾಯಿದೆಯಲ್ಲಿ ಬಿಬಿಎಂಪಿ ಸದಸ್ಯರ ಅಧಿಕಾರ ಮೊಟುಕುಗೊಳಿಸುವ 16 ಅಂಶಗಳ ಸೇರ್ಪಡೆಯಾಗಿದೆ. ಯಾವುದೇ ಕಾಮಗಾರಿಗೆ ವಾರ್ಡ್ ಸಮಿತಿ ಅನುಮತಿ ಬೇಕು. ನಂತರ ಪ್ರಾದೇಶಿಕ ಸಮಿತಿಯಲ್ಲಿ ತೀರ್ಮಾನವಾಗಬೇಕು. ಇದರ ಅಧ್ಯಕ್ಷರಾಗಿ ಶಾಸಕರು ಇರುತ್ತಾರೆ. ನಂತರ ಈ ವಿಷಯ ವಲಯ ಸಮಿತಿಯಲ್ಲಿ ತೀರ್ಮಾನವಾಗಬೇಕು. ಈ ಕ್ರಮಗಳು ಬಿಬಿಎಂಪಿ ಸದಸ್ಯರ ಅಧಿಕಾರ ಮೊಟುಕುಗೊಳಿಸುವ ಅಂಶಗಳಾಗಿವೆ.
ಮೂರು ಆಂತರಿಕ ಸಭೆ: ಕಾಯಿದೆ ಜಾರಿ ಸಂಬಂಧ ಮೂರು ಆಂತರಿಕ ಸಭೆಗಳನ್ನು ನಡೆಸಲಾಗಿದೆ. ಈ ಸಭೆಯಲ್ಲಿ ಬಿಬಿಎಂಪಿಯ ಮಾಜಿ ವಿರೋಧ ಪಕ್ಷದ ನಾಯಕ ಹಾಗೂ ಬೆಂಗಳೂರು ದಕ್ಷಿಣ ಬಿಜೆಪಿ ಜಿಲ್ಲಾಧ್ಯಕ್ಷ ಎನ್. ಆರ್. ರಮೇಶ್ ಅವರು ಭಾಗವಹಿಸಿ, ಕಾಯಿದೆಯ ಲೋಪದೋಷಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಸಂಬಂಧ ತಿದ್ದುಪಡಿ ತಂದು ಮುಂದಿನ ಅಧಿವೇಶನದಲ್ಲಿ ಅನುಮೋದನೆ ಪಡೆಯಬೇಕು. ನಂತರವೇ ಬಿಬಿಎಂಪಿ ಚುನಾವಣೆ ನಡೆಸಬೇಕು. ಇಷ್ಟೆಲ್ಲ ಪ್ರಕ್ರಿಯೆ ಮುಂದಿನ ಮಾರ್ಚ್ನೊಳಗೆ ಮುಗಿಯಬೇಕು ಎಂದು ಸೂಚನೆ ನೀಡಲಾಗಿದೆ.
ಸರಕಾರಕ್ಕೆ ಬಿಜೆಪಿ ಹೈಕಮಾಂಡ್ ಕೂಡ ಬೇಗನೆ ಚುನಾವಣೆ ನಡೆಸುವಂತೆ ಸೂಚಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಕಾಯಿದೆ ಅನುಷ್ಠಾನದ ನಂತರ ಚುನಾವಣೆ ನಡೆಸಬೇಕು ಎಂದುಕೊಂಡಿದ್ದ ಸರಕಾರಕ್ಕೆ ಇದರಿಂದ ಹಿನ್ನಡೆಯಾದಂತಾಗಿದೆ.