ಬದಲಾಗುತ್ತಿದೆ ಬಿಡಿಎ, ಆಯುಕ್ತರ ಹೊಸ ಪ್ರಯೋಗ, ಮಧ್ಯವರ್ತಿಗಳಿಗೆ ಮೂಗುದಾರ
ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು: ಬೆಂಗಳೂರು ಮಹಾನಗರದ ಜನತೆಗೆ ಸೂರು ನೀಡುವ ಸಂಸ್ಥೆಯಾದ ಬಿಡಿಎದಲ್ಲಿ ಇನ್ನುಮುಂದೆ ಕಟ್ಟಡ ನಕ್ಷೆ, ಖಾತ ವರ್ಗಾವಣೆ ಯಂಥ ಸೇವೆಗಳು ಕೆಲವೇ ಗಂಟೆಗಳಲ್ಲಿ ದೊರೆಯಲಿವೆ !
ಇದನ್ನು ಅಷ್ಟು ಸುಲಭವಾಗಿ ನಂಬಲಾಗುವುದಿಲ್ಲ. ಆದರೂ ನಂಬಲೇಬೇಕು. ಏಕೆಂದರೆ, ಇದು ಬಿಡಿಎ ನೂತನ ಆಯುಕ್ತರ ಹೊಸ ಪ್ರಯೋಗ. ಒಂದೊಮ್ಮೆ ಇದು ಯಶಸ್ವಿಯಾದರೆ ಬಿಡಿಎದ ಇನ್ನೂ ಹತ್ತುಹಲವು ಸೇವಾ, ಸೌಲಭ್ಯಗಳು ಕೇವಲ ಗಂಟೆ ಲೆಕ್ಕದಲ್ಲಿ ಒದಗಿಸಲಾಗುತ್ತದೆ. ಅಂದ ಹಾಗೆ ನೂತನ ಆಯುಕ್ತರಾದ ಎನ್. ಜಯರಾಮ್ ಅವರು ಬಿಡಿಎ ಚುಕ್ಕಾಣಿ ಹಿಡಿಯುತ್ತಿದ್ದಂತೆ ಅಮೆ ವೇಗದ ಕಡತ ವಿಲೇವಾರಿ ಮತ್ತು ಸಿಬ್ಬಂದಿಯ ನಿಧಾನ ದ್ರೋಹ ಹಾಗೂ ಸೇವೆ ಬಯಸಿ ಬರುವ ಸಾರ್ವಜನಿಕರ ಗೋಳು ನೋಡಿ ಬೇಸತ್ತು ಈ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ.
ಈ ಬಗ್ಗೆ ಅಧಿಕೃತ ಸುತ್ತೋಲೆಯನ್ನೇ ಹೊರಡಿಸಿರುವ ಆಯುಕ್ತರು, ಖಾತಾ ನೀಡುವುದು, ಖಾತಾ ವರ್ಗಾವಣೆ, ಕಟ್ಟಡ ನಕ್ಷೆ ಮಂಜೂರು ಹಾಗೂ ಲೀಸ್ ಮತ್ತು ಸೇಲ್ ಡೀಡ್ ಹಾಗೂ ಸೇಲ್ ಡೀಡ್ ಸೇವೆಗಳನ್ನು ಕೇಲವ 24ರಿಂದ 48 ಗಂಟೆಗಳ ಒಳಗಾಗಿ ಒದಗಿಸಬೇಕು. ಇದನ್ನು ಪಾಲಿಸದಿದ್ದರೆ, ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆ ಮಾಡಿ ಕೇಲವೇ ಗಂಟೆಗಳಲ್ಲಿ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮಕೈಗೊಳ್ಳಲಿದ್ದಾರೆ. ಈ ಮೂಲಕ ಜನರು ಸಣ್ಣ ಕೆಲಸಗಳಿಗೆ ಅಲೆಯುವುದು, ಮಧ್ಯವರ್ತಿಗಳನ್ನು ಅಲಂಬಿಸುವುದನ್ನು ತಪ್ಪಿಸಲು ಆಯುಕ್ತರು ಈ ಕ್ರಮಕೈಗೊಂಡಿದ್ದಾರೆ.
ಹಾಗೆ ನೋಡಿದರೆ, ನೂತನ ಆಯುಕ್ತರು ಬಂದ ಮೇಲೆ ಬಿಡಿಎ ಅನುಮೋದಿನ ಖಾಸಗಿ ನಿವೇಶಗಳ ಖಾತಾಗಳನ್ನು ಮೂರೇ ದಿನಗಳಲ್ಲಿ ನೀಡಲಾಗುತ್ತಿದೆ. ಹಾಗಿದ್ದ ಮೇಲೆ ಬಿಡಿಎದಿಂದಲೇ ನಿರ್ಮಾಣವಾದ ಬಡಾವಣೆ ನಿವೇಶನಗಳ ಖಾತಾಗಳನ್ನು ಕೇಲವೇ ಗಂಟೆಗಳಲ್ಲಿ ಖಾತಾ ನೀಡಬಹುದಲ್ಲವೇ ಎಂದು ಈ ಪ್ರಯೋಗ ಮಾಡಲಾಗಿದೆ.
ಹಾಗೆ ನೋಡಿದರೆ ಈ ಸೇವೆಗಳನ್ನು ಸಕಾಲ ಯೋಜನೆಯಡಿ ಒದಗಿಸಲು 15ರಿಂದ 30 ದಿನಗಳ ವರೆಗೂ ಅವಕಾಶವಿರುತ್ತದೆ. ಆದರೆ ಬಿಡಿಎ ಆಡಳಿತ ಈಗ ಸಕಾಲವನ್ನೂ ಮೀರಿ ಅತ್ಯಂತ ವೇಗವಾಗಿ ಸೇವೆ ನೀಡುವ ಸಿದ್ಧತೆ ನಡೆಸಿದೆ. ಇಷ್ಟೇ ಅಲ್ಲದೆ, ಖಾತಾ, ನಕ್ಷೆ, ಹಂಚಿಕೆ ಪತ್ರ, ಡೀಡ್ ಗಳು ಹಾಗೂ ನೋಂದಣಿ ಪತ್ರ ಮತ್ತು ಸ್ವಾಧೀನ ಪತ್ರಗಳಂಥ ಅನೇಕ ದಾಖಲೆಗಳ ಸುಲಭ ಲಭ್ಯತೆಗೆ ಅವಕಾಶ ನೀಡುತ್ತಿದೆ. ಹಾಗೆಯೇ ಅರ್ಜಿದಾರರು ದಾಖಲೆಗಳನ್ನು ಪಡೆಯುವ ಮಾರ್ಗ ಮತ್ತು ವಿಧಾನಗಳನ್ನು ಸರಳಗೊಳಿಸುವ ತಯಾರಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವ ಸೇವೆಗೆ ಎಷ್ಟು ಸಮಯ ?
ಇನ್ನುಮುಂದೆ ಬಿಡಿಎ ಆಸ್ತಿಗಳ ಲೀಸ್ ಕಮ್ ಸೇಲ್ ಹಾಗೂ ಸೇಲ್ ಡೀಡ್ , ನೋಂದಣಿ ದಾಖಲೆಗಳು ಹಾಗೂ ಸ್ವಾಧೀನ ಪತ್ರಗಳು ಅರ್ಜಿದಾರರಿಗೆ ಕೇಲವ 12 ಗಂಟೆಗಳಲ್ಲಿ ಲಭ್ಯವಾಗಲಿವೆ. ಬಿಬಿಎಂಪಿಗೆ ವರ್ಗಾಯಿಸಲಾಗಿರುವ ಬಿಡಿಎ ಬಡಾವಣೆಗಳು ಮತ್ತು ಬಿಡಿಎ ಅನುಮೋದಿತ ಖಾಸಗಿ ಬಡಾವಣೆ ಗಳಲ್ಲಿರುವ ಆಸ್ತಿಗಳ ಖಾತಾ ಪತ್ರಗಳು ಇನ್ನುಮಂದೆ 48 ಗಂಟೆಗಳಲ್ಲಿ ಸಿಗಲಿವೆ.
ಆಸ್ತಿ ಮಾಲೀಕರ ಮರಣ ನಂತರ ಮತ್ತು ಮರಣ ಶಾಸನ (ವಿಲ್ ) ಪ್ರಕರಣಗಳಲ್ಲಿ ಖಾತಾ ವರ್ಗಾವಣೆ ನೀಡಲು 72 ಗಂಟೆಗಳಲ್ಲಿ ದೊರೆಯುತ್ತವೆ.
ಬಿಡಿಎ ಬಡಾವಣೆಗಳಲ್ಲಿ ಅಥವಾ ಬಿಡಿಎ ಅನುಮೋದಿತ ಖಾಸಗಿ ಬಡಾವಣೆಗಳಲ್ಲಿನ ಆಸ್ತಿಗಳ ಮಾರಾಟ ಮತ್ತು ದಾನದ ಪ್ರಕರಣಗಳ ಖಾತಾ ವರ್ಗಾ ವಣೆಗೆ 48 ಗಂಟೆಗಳಲ್ಲಿ ಸಿಗುತ್ತವೆ.
ಇಷ್ಟೆ ಅಲ್ಲದೆ, ಉಪಕಾರ್ಯದರ್ಶಿ ಅವರು ಆಸ್ತಿಯ ಗುತ್ತಿಗೆ ಹಾಗೂ ಮಾರಾಟ ಒಪ್ಪಂದ ಪತ್ರ, ಶುದ್ಧ ಕ್ರಯ ಪತ್ರ, ನೋಂದಾಯಿಸಿದ ದಿನವೇ ಅರ್ಜಿ ದಾರರಿಗೆ ಸ್ವಾಧೀನ ಪತ್ರ ನೀಡಬೇಕು. ನಂತರ ಸಂಬಂಧಿಸಿದ ಅಧಿಕಾರಿಗಳು ಸ್ವಾಧೀನ ಪತ್ರ ನೀಡಿದ ದಿನಾಂಕದಿಂದ ಅರ್ಜಿದಾರರಿಂದ ಕಂದಾಯ ಪಾವತಿಸಿಕೊಂಡು ಕೇವಲ 48 ಗಂಟಗಳಲ್ಲಿ ಖಾತಾ ನೀಡಬೇಕು. ಒಂದುವೇಳೆ ಅರ್ಜಿಗಳನ್ನು ತಿರಸ್ಕರಿಸುವುದಾದರೆ, ಅದಕ್ಕೆ ಸೂಕ್ತ ಕಾನೂನಾತ್ಮಕ ಕಾರಣಗಳನ್ನು ನೀಡಬೇಕು. ಈ ಕೆಲಸಗಳಿಗಾಗಿ ಅರ್ಜಿದಾರರು ಇನ್ನು ಬಿಡಿಎ ಕೇಂದ್ರ ಕಚೇರಿಗೆ ಅಲೆಯಬೇಕಿಲ್ಲ.
ಬದಲಾಗಿ ಸ್ಥಳೀಯ ಬಿಡಿಎ ಕಚೇರಿಗಳಲ್ಲೇ ಅರ್ಜಿ ಸಲ್ಲಿಸ ದಾಖಲೆ ಪಡೆಯಬೇಕು. ಹಾಗೆಯೇ ಪ್ರತಿ ಶುಕ್ರವಾರ ಉಪ ಕಾರ್ಯದರ್ಶಿ ಅವರು ಎಲ್ಲಾ ಅರ್ಜಿಗಳ ಪ್ರಗತಿ ಪರಿಶೀಲನೆ ಮಾಡಿ, ವಿಲೇವಾರಿಯಾಗದೆ ಉಳಿದ ಬಾಕಿ ಅರ್ಜಿಗಳ ವಿವರ ಪಡೆದು ಆಯುಕ್ತರ ಕಚೇರಿಗೆ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಬದಲಾಗುತ್ತಿದೆ ಬಿಡಿಎ
ಹಾಗೆ ನೋಡಿದರೆ ಬಿಡಿಎದಲ್ಲಿ ಇನ್ನೂ ಅನೇಕ ಸೇವೆಗಳನ್ನು ತ್ವರಿತ ಹಾಗೂ ಸರಳಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಆದರೆ ಸದ್ಯ ಹೆಚ್ಚಿನ ಜನರು, ಅರ್ಕಾವತಿ, ಕೆಂಪೇಗೌಡ, ಶಿವರಾಮಕಾರಂತ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಹಣ ಪಾವತಿಸಿದ್ದೇನೆ ನಿವೇಶನ ಸಿಕ್ಕಿಲ್ಲ. ಕೆಲವರು ಬಡಾವಣೆಗೆ ಜಮೀನು ನೀಡಿದ್ದಕ್ಕೆ ಪರಿಹಾರ ಕೇಳಿ ಬರುತ್ತಿದ್ದಾರೆ. ಅನೇಕರು ಅಧಿಸೂಚನೆಯಿಂದ ಜಮೀನು ಕೈ ಬಿಡಲಾಗಿದೆ. ಎನ್ ಒ ಸಿ ಕೊಡಿಸಿ ಎನ್ನುವ ಸಮಸ್ಯೆಗಳನ್ನು ಹೊತ್ತು ಬರುತ್ತಾರೆ. ಇವುಗಳು ಕೋರ್ಟ್ ಮೆಟ್ಟಿಲೇರಿವೆ, ಕೆಲವು ವಿಚಾರಣಾ ಸಮಿತಿ ವ್ಯಾಪ್ತಿಗೆ ಒಳಪಟ್ಟಿವೆ. ಹೀಗಾಗಿ ನಿವೇಶನ ಮತ್ತು ಪರಿಹಾರ ಬಯಸಿ ಬರುವ ಅರ್ಜಿದಾರರಿಗೆ ತಕ್ಷಣದ ಪರಿಹಾರ ಕಷ್ಟ. ಆದ್ದರಿಂದ ಕೋರ್ಟ್ ಮತ್ತು ಇತರ ಸಮಿತಿಗಳ ಕೇಸುಗಳನ್ನಾಧರಿಸಿ ಪರಿಶೀಲಿಸಿ ಪರಿಹಾರ ಕಲ್ಪಿಸಲಾಗುತ್ತದೆ.
ಅಷ್ಟೇ ಅಲ್ಲದೆ, ಇನ್ನುಮುಂದೆ ನಿವೇಶನ ಹಂಚಿಕೆಯಾದ ನಂತ ಫಲಾನುಭವಿಗೆ ನಿವೇಶನದ ಸಂಪೂರ್ಣ ದಾಖಲೆ ಹಾಗೂ ಸೀಡಿಯನ್ನು ನೀಡಲಾಗು ತ್ತದೆ. ಅಷ್ಟೇ ಅಲ್ಲದೆ, ಅದೆಲ್ಲವನ್ನು ಜಿಪಿಎಸ್ ಮಾಡಿಸಿ ಡಿಜಿಟಲ್ ಮಾಡಲಾಗುತ್ತದೆ. ಇದರಿಂದ ಕಡತಗಳು ಮತ್ತು ದಾಖಲೆಗಳ ವಿವರಗಳನ್ನು ಕ್ಷಣಮಾತ್ರದಲ್ಲಿ ಪಡೆಯಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
*
ಜನರು ಸಣ್ಣಪುಟ್ಟ ಕೆಲಸಗಳಿಗಾಗಿ ಜನರು ಕಚೇರಿಗೆ ಅಲೆಯುವುದು, ಅರ್ಜಿದಾರರ ಅಸಹಾಯಕತೆಯನ್ನು ಮಧ್ಯವರ್ತಿಗಳು ದುರ್ಬಳಕೆ ಮಾಡಿಕೊಂಡು ಸುಲಿಗೆ ಮಾಡುವುದನ್ನು ತಪ್ಪಿಸಲು ಬಿಡಿಎ ಸೌಲಭ್ಯಗಳು ಕೇಲವೇ ಗಂಟೆಗಳಲ್ಲಿ ಸಿಗವಂತೆ ಮಾಡಲಾಗುತ್ತಿದೆ. ಇದೇರೀತಿ ಇನ್ನೂ ಅನೇಕ ಸುಧಾರಣೆಗಳನ್ನು ಮಾಡಲಾಗುತ್ತಿದೆ.
-ಎನ್. ಜಯರಾಮ್, ಬಿಡಿಎ ಆಯುಕ್ತರು