ಅತಿ ಉದ್ದದ ದಂತ ಹೊಂದಿರುವ ಭೋಗೇಶ್ವರ ಇನ್ನಿಲ್ಲ
೬೦ ವಯಸ್ಸಿನ ಆನೆ ವಯೋಸಹಜ ಕಾರಣದಿಂದ ಸಾವು
ನಂಜನಗೂಡು ಪ್ರದ್ಯುಮ್ನ ಬೆಂಗಳೂರು
ಬಂಡೀಪುರ ರಾಷ್ಟ್ರೀಯ ಉದ್ಯಾನವನವ್ಯಾಪ್ತಿಯ ಗುಂಡ್ರೆ ವಲಯದಲ್ಲಿ ಕಬಿನಿ ಹಿನ್ನೀರಿನ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದ ಪ್ರವಾಸಿಗರಿಗೆ ಮತ್ತು ವನ್ಯಜೀವಿ ಪ್ರಿಯರ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದ್ದ ಭೋಗೇಶ್ವರ ಎಂಬ ಹೆಸರಿನ ಆನೆ ಮೃತ ಪಟ್ಟಿದ್ದು, ರಾಜ್ಯದ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿ ಮಿಡಿದಿ ದ್ದಾರೆ.
ಕಬಿನಿಯ ಶಕ್ತಿಮಾನ್, ಮಿಸ್ಟರ್ ಕಬಿನಿ ಹಾಗೂ ಸಾಮಾನ್ಯವಾಗಿ ‘ಭೋಗೇಶ್ವರ’ ಎಂಬ ಹೆಸರಿನಿಂದ ಖ್ಯಾತಿಗಳಿಸಿದ್ದ ಆನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಏಷ್ಯಾದ ಅತಿ ಉದ್ದನೆಯ ದಂತ ಹೊಂದಿದ್ದ ಆನೆ ಎಂಬ ಖ್ಯಾತಿಯನ್ನು ಪಡೆದಿತ್ತು. ಕಬಿನಿ ಹಿನ್ನೀರಿನ ವ್ಯಾಪ್ತಿಗೆ ಬರುವ ಬಂಡೀಪುರ ಮತ್ತು ನಾಗರ ಹೊಳೆ ಎರಡೂ ರಾಷ್ಟ್ರೀಯ ಉದ್ಯಾನವನದಲ್ಲಿ ರಾಜನಂತೆ ಅಡ್ಡಾಡು ತ್ತಿದ್ದ ಭೋಗೇಶ್ವರ ಎರಡೂ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರ ಕಣ್ಮನಗಳನ್ನು ಆಕರ್ಷಿಸಿದ್ದ. ತನ್ನ ಉದ್ದವಾದ ದಂತ ಮತ್ತು ತನ್ನ ವಿಭಿನ್ನ ನಡಿಗೆಯ ಮೂಲಕ ಆನೆ ಹಿಂಡಿನ ಮಧ್ಯೆ ಈತ ವಿಭಿನ್ನ ಹಾಗೂ ವಿಶಿಷ್ಟವಾಗಿ ಕಾಣುತ್ತಿದ್ದ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ಗುಂಡ್ರೆ ವಲಯದ ಹೊಸಹಳ್ಳಿ ಶಾಖೆಯ ನಾಯಿಹಳ್ಳ ಗಸ್ತಿನ ಸುತ್ತನಹಳ್ಳ ಎಂಬ ಕಬಿನಿ ಹಿನ್ನೀರಿನ ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿ ಗಸ್ತು ಮಾಡುತ್ತಿದ್ದ ಸಂದರ್ಭದಲ್ಲಿ ಗಂಡಾನೆ ಯೊಂದು ಮೃತ ಪಟ್ಟಿರುವುದು ಕಂಡುಬಂದಿದೆ. ಅಂದಾಜು ೬೦ ವರ್ಷ ವಯಸ್ಸಾಗಿದ್ದ ಆನೆ ವಯೋ ಸಹಜ ಕಾರಣದಿಂದ ಮೃತಪಟ್ಟಿರುವುದಾಗಿ ಅರಣ್ಯ ಇಲಾಖೆ ತಿಳಿಸಿದೆ. ಆದರೆ ಈ ಆನೆಯನ್ನು ಭೋಗೇಶ್ವರ ಎಂದು ಅರಣ್ಯ ಇಲಾಖೆ ದೃಢಪಡಿಸಿಲ್ಲ. ಯಾವುದೇ ವನ್ಯ ಜೀವಿಗಳಿಗೆ ಅರಣ್ಯ ಇಲಾಖೆ ನಾಮಕರಣ ಮಾಡುವುದಿಲ್ಲ.
ಅಲ್ಲಿಯ ಸ್ಥಳೀಯರು ತಮ್ಮಿಷ್ಟದ ಹೆಸರಿನಿಂದ ಆ ಪ್ರಾಣಿಗಳನ್ನು ಗುರುತಿಸುವುದು ಸರ್ವೇಸಾಮಾನ್ಯ. ‘ಭೋಗೇಶ್ವರ’ ಎಂಬ ಹೆಸರು, ಎಚ್ಡಿ ಕೋಟೆಯ ಗುಂಡ್ರೆ ವ್ಯಾಪ್ತಿಯ ಜನರು ಆರಾಧಿಸುವ ದೇವರ ನಾಮವಾಗಿದ್ದು, ಅಲ್ಲಿಯ ಸ್ಥಳೀಯರು ಈ ಹೆಸರಿನಿಂದ, ಉದ್ದನೆಯ ದಂತ ಹೊಂದಿದ್ದ ಅಜಾನುಭಾಹು ಆನೆಯನ್ನು ಗುರುತಿಸುತ್ತಿದ್ದರು ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ. ಇದಲ್ಲದೇ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಇದೇ ರೀತಿಯ ವಯಸ್ಸಾದ ಇನ್ನೂ ಮೂರು ಆನೆಗಳಿದ್ದು, ಅರಣ್ಯಾಧಿಕಾರಿಗಳು ಮೃತಪಟ್ಟಿರುವ ಆನೆಯನ್ನು ಭೋಗೇಶ್ವರ ಎಂದು ಅಧಿಕೃತವಾಗಿ ಖಚಿತಪಡಿಸಲು ಸಾಧ್ಯವಾಗಿಲ್ಲ.
***
? ನಡೆದರೇ ನೆಲಕ್ಕೆ ತಾಗುವಷ್ಟು ೭-೮ ಅಡಿ ಉದ್ದದ ಬೃಹತ್ ಗಾತ್ರದ ದಂತ ಹೊಂದಿದ್ದ ಭೋಗೇಶ್ವರ.
? ಬಂಡೀಪುರದ ಗುಂಡ್ರೆ ಮತ್ತು ನಾಗರಹೊಳೆಯ ಅಂತರಸಂತೆ ಮತ್ತು ಡಿ.ಬಿ.ಕುಪ್ಪೆ ಸಂಚರಿಸುತ್ತಿದ್ದ ಭೋಗೇಶ್ವರ.
? ಸಾಕಾನೆಗಳು ಸುಮಾರು ೬೦-೭೦ವರ್ಷ ಬದುಕುವ ಸಾಧ್ಯತೆ ಇದೆ. ಕಾಡಾನೆಗಳು ೫೦ ವರ್ಷ ಬದುಕುತ್ತವೆ ಎಂದು
ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ? ಇತ್ತೀಚಿನ ಆದೇಶದ ಅನ್ವಯ ಆನೆಯ ಕಳೇಬರವನ್ನು ಸಂಸ್ಕಾರ ಮಾಡದೇ ಹಾಗೇ ಬಿಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿ
ರಾಜ್ಯದ ಮೂಲೆ ಮೂಲೆಯಿಂದ ಪ್ರವಾಸಿಗರು ಮತ್ತು ವನ್ಯಜೀವಿ ಪ್ರಿಯರು ಮಿಸ್ಟರ್ ಕಬಿನಿಯನ್ನು ನೋಡಲು ಹೆಚ್ಚಿನ
ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಈ ಆನೆಯ ಅನೇಕ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಒಂಟಿ ಸಲಗದ ಸಾವಿಗೆ ಪ್ರಾಣಿಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿ ಮಿಡಿದಿದ್ದಾರೆ.