ಕಾಂಗ್ರೆಸ್, ಜೆಡಿಎಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ತಂತ್ರ
ಒಬಿಸಿ ಮೀಸಲಲ್ಲೇ ಹೊಂದಾಣಿಕೆಗೆ ರಾಜ್ಯ ಸರಕಾರದ ನಿರ್ಧಾರ
ರಂಜಿತ್ ಎಚ್. ಅಶ್ವತ್ಥ ಬೆಳಗಾವಿ
ಪಂಚಮಸಾಲಿ ಸಮುದಾಯಕ್ಕೆ ಮೀಸಲು ಕಲ್ಪಿಸುವ ಸಂಬಂಧ ಸರ್ವಪಕ್ಷ ಸಭೆ ಕರೆದು ನಿರ್ಧಾರ ಕೈಗೊಳ್ಳುವ ಸಲುವಾಗಿ ಕಾಂಗ್ರೆಸ್, ಜೆಡಿಎಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸರಕಾರ ಮುಂದಾಗಿದೆ. ಆ ಮೂಲಕ ಆಡಳಿತಾರೂಢ ಬಿಜೆಪಿ, ಆ ಪಕ್ಷಗಳನ್ನು ಕಟ್ಟಿ ಹಾಕುವ ತಂತ್ರಕ್ಕೆ ಕೈ ಹಾಕಿದೆ.
ಪಂಚಮಸಾಲಿ ಸಮುದಾ ಯವನ್ನು ೨ಎ ಪ್ರವರ್ಗಕ್ಕೆ ಸೇರಿಸಲು ಸಾಧ್ಯವಿಲ್ಲ. ಹೀಗಾಗಿ ಅದಕ್ಕೆಂದೇ ಪ್ರತ್ಯೇಕ ಪ್ರವರ್ಗ ಸೃಷ್ಟಿಸ ಬೇಕಾಗುತ್ತದೆ ಎಂಬ ಹಿಂದುಳಿದ ವರ್ಗಗಳ ಆಯೋಗದ ವರದಿ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮಂಗಳವಾರ, ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿದ ಬಳಿಕ ಸರ್ವಪಕ್ಷಗಳ ಸಭೆ ಕರೆದು ಕುರಿತು ಅಂತಿಮ ನಿಲುವು ತೆಗೆದುಕೊಳ್ಳುವ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಚುನಾವಣಾ ಸಮಯದಲ್ಲಿ ಮೀಸಲು ಹೆಚ್ಚಿಸುವುದರಿಂದ ಪಕ್ಷಕ್ಕಾಗುವ ಲಾಭದ ಬಗ್ಗೆ ಚರ್ಚೆ ನಡೆಸಿದ ಸಿಎಂ, ವರಿಷ್ಠರನ್ನು ಒಪ್ಪಿಸಿಕೊಂಡು ಬಂದಿದ್ದಾರೆ. ಇದೇ ವೇಳೆ ಈಗಾಗಲೇ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗ ಗಳಿಗೆ (ಒಬಿಸಿ) ಶೇ. ೫೦ರಷ್ಟು ಮೀಸಲು ನಿಗದಿಯಾಗಿದೆ. ಪ್ರಸ್ತುತ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲು ಹೆಚ್ಚಿಸಿರುವುದರಿಂದ ಅದು ಶೇ.೫೬ಕ್ಕೇರಿದೆ. ಇದರ ಒಳಗೆಯೇ ಪಂಚಮಸಾಲಿ ಸಮುದಾಯಕ್ಕೂ ಮೀಸಲು ನಿಗದಿಪಡಿಸಲು ನಿರ್ಧರಿಸಲಾ ಗಿದೆ. ಅದನ್ನು ಹೇಗೆ ನಿರ್ಧರಿಸ ಬೇಕು ಎನ್ನುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯದ ಮಾಹಿತಿ ಪ್ರಕಾರ, ಒಬಿಸಿಯಲ್ಲಿದ್ದ ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿರುವುದರಿಂದ ಅದರಿಂದ ಸಿಗುವ ಮೀಸಲು ಮತ್ತು ಮುಸ್ಲಿಂ ಸಮುದಾಯಕ್ಕೆ ಅಲ್ಪಸಂಖ್ಯಾತ ಮತ್ತು 2ಎ ಪ್ರವರ್ಗದಲ್ಲಿರುವ ಮೀಸಲು ಪೈಕಿ ೨ಎ ಪ್ರವರ್ಗ ದಲ್ಲಿರುವ ಮೀಸಲನ್ನು ಹಿಂಪಡೆದು ಅವೆರಡನ್ನೂ ಸೇರಿಸಿ ಹೊಸ ಪ್ರವರ್ಗ ಸೃಷ್ಟಿಸಿ,ಅದನ್ನು ಪಂಚಮಸಾಲಿ ಸಮು ದಾಯಕ್ಕೆ ನೀಡುವುದು ಸರಕಾರದ ಉದ್ದೇಶವಾಗಿದೆ.
ಪಂಚಮಸಾಲಿ ಮೀಸಲು ಹೋರಾಟಗಾರರು ಶೇ. ೨ರಿಂದ ೪ರಷ್ಟು ಮೀಸಲು ನೀಡುವಂತೆ ಸರಕಾರದ ಮುಂದೆ ಮನವಿ ಮಾಡಿದ್ದು, ಅಷ್ಟು ಪ್ರಮಾಣದಲ್ಲಿ ಮೀಸಲು ಸೌಲಭ್ಯ ಕಲ್ಪಿಸಲು ಇದರಿಂದ ಸಾಧ್ಯವಾಗಲಿದೆ ಎಂದು ತಿಳಿದುಬಂದಿದೆ.
ರಾಜಕೀಯ ಕಾರ್ಯತಂತ್ರ: ಡಿ. ೨೯ರೊಳಗೆ ಮೀಸಲು ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ
ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಎಂಬ ಕಾರಣಕ್ಕೆ ಪಂಚಮಸಾಲಿ ಸಮುದಾಯದವರು ಹೋರಾಟ ಕೈಬಿಟ್ಟಿದ್ದರು. ಹೀಗಾಗಿ ಅಷ್ಟರೊಳಗೆ ತೀರ್ಮಾನ ಕೈಗೊಳ್ಳುವ ಅನಿವಾರ್ಯ ಇದೆ. ಈ ಹಿನ್ನಲೆಯಲ್ಲಿ ಮುಸ್ಲಿಮರಿಗೆ ನೀಡಿರುವ ೨ಎ ಮೀಸಲು ಹಿಂಪಡೆ ಯುವ ಬಗ್ಗೆ ಸರಕಾರ ತಾನೇ ನಿರ್ಧಾರ ಕೈಗೊಳ್ಳಬಹುದಾದರೂ ಮುಂದೆ ಸಮಸ್ಯೆಯಾಗದಂತೆ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನೆಪದಲ್ಲಿ ಅವುಗಳನ್ನು ಇಕ್ಕಟ್ಟಿಗೆ ಸಿಲುಕಿಸುವುದು ಕೂಡ ಸರ್ವಪಕ್ಷ ಸಭೆಯ ಉದ್ದೇಶ ಎಂದು ಹೇಳಲಾಗಿದೆ.
ಒಮ್ಮೆ ಪ್ರತಿಪಕ್ಷಗಳು ಒಪ್ಪದೇ ಇದ್ದರೆ ಲಿಂಗಾಯತ ವಿರಶೈವರಲ್ಲಿ ಬಹುಸಂಖ್ಯಾತರಾಗಿರುವ ಈ ಸಮುದಾಯ ಪ್ರತಿಪಕ್ಷಗಳ ವಿರುದ್ಧ ತಿರುಗಿ ಬಿದ್ದು ಅದರಿಂದ ಬಿಜೆಪಿಗೆ ಲಾಭವಾಗುತ್ತದೆ. ಒಂದೊಮ್ಮೆ ಪ್ರತಿಪಕ್ಷಗಳು ಒಪ್ಪಿದರೆ ಮುಸ್ಲಿಮರು ಅವರ ವಿರುದ್ಧ ತಿರುಗಿ ಬೀಳುತ್ತಾರೆ. ಹೇಗೂ ಬಿಜೆಪಿಗೆ ಹೆಚ್ಚು ಪ್ರಮಾಣದಲ್ಲಿ ಮುಸ್ಲಿಮರ ಮತಗಳು ಬರುವುದಿಲ್ಲ. ಮೀಸಲು ಸಿಕ್ಕರೆ ಪಂಚಮ ಸಾಲಿಗಳು ಪಕ್ಷವನ್ನು ಬೆಂಬಲಿಸುತ್ತಾರೆ. ಹೀಗಾಗಿ ಪ್ರತಿಪಕ್ಷಗಳು ಯಾವುದೇ ನಿರ್ಧಾರ ಕೈಗೊಂಡರೂ ಅದರಿಂದ ಆಡಳಿತ ಪಕ್ಷಕ್ಕೇ ಲಾಭವಾಗುತ್ತದೆ ಎಂಬುದು ಸರಕಾರದ ಯೋಚನೆ ಎಂದು ಹೇಳಲಾಗುತ್ತಿದೆ.
ಮೀಸಲು ಜಾರಿ ಕಷ್ಟವಲ್ಲ: ಪಂಚಮಸಾಲಿ ಸಮುದಾಯಕ್ಕೆ ಮೀಸಲನ್ನು ಎಲ್ಲಿಂದ ಪಡೆಯಬಹುದು? ಅವಕಾಶವೆಲ್ಲಿದೆ
ಎನ್ನುವ ಸಂಬಂಧ ಸಿದ್ಧತೆ ನಡೆಸಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಂವಿಧಾನ ನಿಗದಿಪಡಿಸಿರುವ ಮೀಸಲಿನೊಳಗೆ ಹಿಂದುಳಿದ ವರ್ಗಗಳ ಮೀಸಲನ್ನು ರಾಜ್ಯ ಸರಕಾರಗಳ ವಿವೇಚನೆ ನೀಡಿರುವುದರಿಂದ ಈ ಕುರಿತ ವಿಧೇಯಕ ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಕಳುಹಿಸುವ ಅಗತ್ಯವಿಲ್ಲ. ಆದ್ದರಿಂದ ಸಾಂವಿಧಾನಿಕ ತಿದ್ದುಪಡಿ ತರಬೇಕಾದ ಅಗತ್ಯವಿಲ್ಲ. ಆದ್ದರಿಂದ ಈ ಮೀಸಲನ್ನು ಪಾಸ್ ಮಾಡಿಕೊಂಡು ಜಾರಿಗೊಳಿಸುವುದು ಕಷ್ಟದ ವಿಷಯ ವಲ್ಲ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ನಾಯಕರಿಗೆ ಜವಾಬ್ದಾರಿ: ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರನ್ನು ಒಪ್ಪಿಸುವ ಜವಾಬ್ದಾರಿ ಯನ್ನು ಆಯಾ ಪಕ್ಷದ ಲಿಂಗಾಯತ ನಾಯಕರಿಗೆ ಒಪ್ಪಿಸಲಾಗಿದೆ. ಮೀಸಲು ಹೋರಾಟದಲ್ಲಿ ಮೂರು ಪಕ್ಷದ ನಾಯಕರೂ ಭಾಗವಹಿಸಿರುವುದರಿಂದ, ಆಯಾ ಪಕ್ಷದವರನ್ನು ಒಪ್ಪಿಸಿಕೊಂಡು ಸಭೆಗೆ ಕರೆದುಕೊಂಡು ಬರಬೇಕು ಎಂದು ಸೂಚನೆ ನೀಡಿದ್ದು, ಒಂದು ವೇಳೆ ಯಾವುದಾದರೂ ನಾಯಕರು ವಿರೋಧಿಸಿದರೆ, ಅದರ ನೇರ ಹೊಡೆತ ಆ ಪಕ್ಷದ ಅಭ್ಯರ್ಥಿಗಳಿಗೆ ಮುಂದಿನ ಚುನಾವಣೆಯಲ್ಲಿ ಎದುರಾಗಲಿದೆ ಎನ್ನುವುದು ಬಿಜೆಪಿ ಲೆಕ್ಕಾಚಾರ.
Read E-Paper click here