ಅಪರ್ಣಾ ಎ.ಎಸ್. ಬೆಂಗಳೂರು
೬ ವರ್ಷಗಳಿಂದ ವೇತನ ಪರಿಷ್ಕರಣೆ ಆಗಿಲ್ಲ, ಭರವಸೆ ಈಡೇರಿಲ್ಲ
ಅಮಾನತಾದವರ ಪೈಕಿ ಬಹುತೇಕರನ್ನು ಸೇವೆಗೆ ಸೇರಿಸಿಕೊಂಡಿಲ್ಲ
ಸಾರಿಗೆ ನಿಗಮ ಹಾಗೂ ಸಿಬ್ಬಂದಿ ನಡುವಿನ ಗುದ್ದಾಟಕ್ಕೆ ಕೊನೆಯಿಲ್ಲವಾಗಿದೆ. ಕಳೆದ ವರ್ಷ ಸಾರಿಗೆ ಸಿಬ್ಬಂದಿ ಮುಷ್ಕರ ನಡೆಸಿ ದಾಗ ಮುಂದಿಟ್ಟಿದ್ದ ಹತ್ತು ಬೇಡಿಕೆಗಳ ಪೈಕಿ ಎಂಟು ಬೇಡಿಕೆಗಳನ್ನು ಈಡೇರಿಸಿದ್ದೇವೆ ಎನ್ನುವ ಸರಕಾರ, ಪ್ರಮುಖ ಎರಡು ಬೇಡಿಕೆಗಳನ್ನು ಇನ್ನೂ ಈಡೇರಿಸಿಯೇ ಇಲ್ಲ.
ಹೌದು, ಸಾರಿಗೆ ನಿಗಮಗಳ ಸಿಬ್ಬಂದಿ ಇಟ್ಟಿದ್ದ ೧೦ ಬೇಡಿಕೆಗಳ ಪೈಕಿ ಪ್ರಮುಖವಾಗಿದ್ದುದು ಎರಡು ಬೇಡಿಕೆಗಳು. ಅದನ್ನು ಈಡೇರಿಸಲು ಸರಕಾರ ಸ್ವಲ್ಪ ಕಾಲಾವಕಾಶ ಕೇಳಿತ್ತು. ಆದರೆ, ಭರವಸೆ ನೀಡಿ ಒಂದೂವರೆ ವರ್ಷವಾಗುತ್ತಿದ್ದರೂ ಆ ಎರಡು ಬೇಡಿಕೆಗಳು ಮಾತ್ರ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಇದೀಗ ಸರಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿರುವ ನಿಗಮಗಳ ಸಿಬ್ಬಂದಿ, ನೌಕರರ ವೇತನ ಪರಿಷ್ಕರಣೆ ಮತ್ತು ಮುಷ್ಕರದಲ್ಲಿ ಭಾಗವಹಿಸಿ ಅಮಾನತು ಅಥವಾ ವಜಾ ಗೊಂಡಿರುವ ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವ ಬೇಡಿಕೆ ಇದುವರೆಗೂ ಈಡೇರಿಸಿಲ್ಲ.
ಅದರಲ್ಲೂ ವೇತನ ಪರಿಷ್ಕರಣೆ ವಿಚಾರದಲ್ಲಿ ಸರಕಾರದಿಂದ ಯಾವುದೇ ಸೂಚನೆ ಕೂಡ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನಿಯಮಗಳ ಪ್ರಕಾರ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಬೇಕು. ಆದರೆ, ೨೦೧೬ರ ಬಳಿಕ ಇದುವರೆಗೆ ವೇತಮ ಪರಿಷ್ಕರಣೆ ಆಗಿಲ್ಲ. ಸರಕಾರ ವೇತನ ಪರಿಷ್ಕರಣೆಗೆ ಬದ್ಧ ಎಂದು ಹೇಳುತ್ತದೆಯಾದರೂ ಕಾರ್ಯ ರೂಪಕ್ಕೆ ತರುವ ವಿಚಾರ ಬಂದಾಗ ಸಾರಿಗೆ ನಿಗಮ ನಷ್ಟದಲ್ಲಿದೆ.
ಕರೋನಾ ಕಾರಣದಿಂದ ಇನ್ನೂ ಚೇತರಿಸಿಕೊಂಡಿಲ್ಲ ಎಂಬ ಪ್ರತಿಕ್ರಿಯೆ ಬರುತ್ತದೆ. ಆರು ವರ್ಷ ಅವಧಿಯಲ್ಲಿ ಅತ್ಯಾವಶ್ಯಕ ವಸ್ತುಗಳ ಬೆಲೆಗಳಲ್ಲಿ ಭಾರೀ ಹೆಚ್ಚಳವಾಗಿದೆ. ಶಾಲಾ ಮಕ್ಕಳ ಶುಲ್ಕ ಸೇರಿದಂತೆ ಎಲ್ಲವೂ ತುಟ್ಟಿಯಾಗಿದೆ. ಹೀಗಿದ್ದರೂ ವೇತನ
ಪರಿಷ್ಕರಣೆಯಾಗದಿದ್ದರೆ ಸೌರಿಗೆ ನಿಗಮದ ನೌಕರರ ಕುಟುಂಬಗಳು ಜೀವನ ನಿರ್ವಹಣೆ ಮಾಡುವುದಾದರೂ ಹೇಗೆ ಎಂಬ
ಪ್ರಶ್ನೆಯನ್ನು ನೌಕರರು ಮುಂದಿಡುತ್ತಿದ್ದಾರೆ.
ಕಳೆದ ವರ್ಷ ಮುಷ್ಕರದ ಸಮಯದಲ್ಲಿ ವೈದ್ಯಕೀಯ ಸೌಲಭ್ಯ ಸೇರಿದಂತೆ ೧೦ ಬೇಡಿಕೆಗಳನ್ನು ಈಡೇರಿಸುವುದಾಗಿ ಸರಕಾರ ಹೇಳಿತ್ತು. ಆ ಪೈಕಿ ಎಂಟು ಬೇಡಿಕೆಗಳನ್ನು ಈಡೇರಿಸಿದೆಯಾದರೂ ಬಾಕಿಯಿರುವ ಎರಡು ಪ್ರಮುಖ ಬೇಡಿಕೆಗಳನ್ನು ಈಡೇರಿ ಸುವುದಕ್ಕೆ ಮೀನಾಮೇಷ ಎಣಿಸುತ್ತಿರುವುದು ಸಿಬ್ಬಂದಿಯ ಬೇಸರಕ್ಕೆ ಕಾರಣವಾಗಿದೆ.
ಇದರ ಜತೆಗೆ ಸಾರಿಗೆ ನೌಕರರಿಗೂ ಏಳನೇ ವೇತನ ಜಾರಿ ಮಾಡುವುದು, ಸರಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆಗಳ
ಬಗ್ಗೆಯೂ ಸರಕಾರ ಸೊಲ್ಲೆತ್ತುತ್ತಿಲ್ಲ ಎಂದು ಸಿಬ್ಬಂದಿ ಆರೋಪಿಸುತ್ತಿದ್ದಾರೆ.
೧೩ ವರ್ಷದಿಂದ ವೇತನ ಬದಲಿಲ್ಲ: ಕೆಲಸಕ್ಕೆ ಸೇರಿ ೧೩ ವರ್ಷವಾಗಿದೆ. ಮೂಲ ವೇತನ ೧೨,೫೫೦ ರು. ಆದರೆ, ಇದುವರೆಗೂ ವೇತನ ಬಡ್ತಿ ಸಿಕ್ಕಿಲ್ಲ. ಆರೋಗ್ಯ ಕಾರ್ಡ್ ಕೂಡ ಕೊಟ್ಟಿಲ್ಲ. ಅನಾರೋಗ್ಯ ಕಾಡಿದರೂ ಬಿಲ್ಗೆ ನಾವೇ ಹಣ ಪಾವತಿಸಿ ಚಿಕಿತ್ಸೆ ಪಡೆಯಬೇಕು. ವೇತನದಲ್ಲಿ ಇಎಸ್ಐ ಎಂದು ಕಡಿತ ಮಾಡಲಾಗುತ್ತಿದೆ. ಆದರೆ ಯಾವ ಆಸ್ಪತ್ರೆಯಲ್ಲಿಯೂ ಈ ಸೌಲಭ್ಯ
ದೊರಕಿಲ್ಲ. ಚಿಕಿತ್ಸೆ ಪಡೆದು ಬಿಲ್ ಸಂಸ್ಥೆಗೆ ನೀಡಿದರೆ, ೭೫ ಸಾವಿರ ರು. ಬಿಲ್ಗೆ ೧೩ರಿಂದ ೧೮ ಸಾವಿರ ರು. ಮಾತ್ರ ಪಾವತಿಸು ತ್ತಾರೆ ಎಂದು ಹೇಳುತ್ತಾರೆ ಬಿಎಂಟಿಸಿ ಸಿಬ್ಬಂದಿ ಸುಂದರೇಶ್ ಗೌಡ. ಅಮಾನತು ಆದೇಶ ಹಿಂಪಡೆದಿಲ್ಲ ಮುಷ್ಕರದ ಸಮಯದಲ್ಲಿ ಸಾವಿರಾರು ನೌಕರರನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ.
ಸಿಬ್ಬಂದಿ ಒತ್ತಡಕ್ಕೆ ಮಣಿದು, ಹಿಂಪಡೆಯುವುದಾಗಿ ಹೇಳಿದ್ದರೂ, ಎಲ್ಲರ ಅಮಾನತು ಆದೇಶ ಹಿಂಪಡೆದಿಲ್ಲ. ಬಿಎಂಟಿಸಿಯಲ್ಲಿ ಒಬ್ಬರನ್ನೂ ಮತ್ತೆ ಕರ್ತವ್ಯಕ್ಕೆ ತೆಗೆದುಕೊಂಡಿಲ್ಲ. ಆದರೆ ಎಲ್ಲರನ್ನೂ ಕರೆಸಿಕೊಂಡಿದ್ದೇವೆ ಎಂದು ಹೇಳಿಕೆ ನೀಡುತ್ತಾರೆ.
ಮೇಲಾಧಿಕಾರಿಗಳಿಗೆ ಮನವಿ ಮಾಡಿದರೆ ಚಾಲ್ತಿಯಲ್ಲಿದೆ ಎಂಬ ಉತ್ತರ ಬರುತ್ತದೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಲ ಸೌಕರ್ಯವಿಲ್ಲ
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಶೌಚಾಲಯದ ವ್ಯವಸ್ಥೆ ಸರಿಯಾಗಿಲ್ಲ. ಕುಡಿಯಲು ಶುದ್ಧ ನೀರಿನ ವ್ಯವಸ್ಥೆಯೂ ಇಲ್ಲ. ಇಷ್ಟೆಲ್ಲಾ ಕಷ್ಟಪಟ್ಟರೂ ಸಮರ್ಪಕ ವೇತನ ದೊರಕುತ್ತಿಲ್ಲ. ವೇತನ ಪರಿಷ್ಕರಣೆ ಆಗಬೇಕು. ಆರೋಗ್ಯ ಕಾರ್ಡ್ ಬೇಕು. ಡಿಪೋದಲ್ಲಿ ನಡೆಯುವ ಕಿರುಕುಳ ತಪ್ಪಿಸಿದ್ದಾರೆ. ಆದರೆ, ಮೂಲ ಸೌಕರ್ಯದ ಬಗ್ಗೆ ಎಷ್ಟೇ ಕೇಳಿಕೊಂಡರೂ ಪರಿಣಾಮ ಮಾತ್ರ ಶೂನ್ಯ ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಾರೆ.