ಡಿ.ಟಿ.ತಿಲಕ್ರಾಜ್, ರಾಮನಗರ
ಹೈವೋಲ್ಟೇಜ್ ಕ್ಷೇತ್ರದಲ್ಲಿ ಹೆಚ್ಚಿದ ಪ್ರಚಾರದ ಭರಾಟೆ
ಯೋಗೇಶ್ವರ್-ನಿಖಿಲ್ ತೀವ್ರ ಹಣಾಹಣಿ ಭದ್ರಕೋಟೆ ಉಳಿಸಿಕೊಳ್ಳಲು ಜೆಡಿಎಸ್-ಬಿಜೆಪಿ ಹರಸಾಹಸ ಬೊಂಬೆನಾಡಿನ ವಶಕ್ಕೆ ಕಾಂಗ್ರೆಸ್ ತಂತ್ರ
ಉಪಚುನಾವಣೆ ನಡೆಯುತ್ತಿರುವ ವಿಧಾನಸಭಾ ಕ್ಷೇತ್ರಗಳ ಪೈಕಿ ಹೈವೋಲ್ಟೇಜ್ ಕ್ಷೇತ್ರ ಎನಿಸಿಕೊಂಡಿರುವ ಬೊಂಬೆನಾಡು ಚನ್ನಪಟ್ಟಣದಲ್ಲಿ ಚುನಾವಣಾ ಕಣ ರಂಗೇರಿದೆ. ಇಬ್ಬರು ಪ್ರಬಲ ನಾಯಕರ ನಡುವೆ ನಡೆಯು ತ್ತಿರುವ ಹಣಾಹಣಿ, ಹೊಸ ಇತಿಹಾಸ ಸೃಷ್ಟಿಸುವತ್ತ ದಾಪುಗಾಲು ಹಾಕುತ್ತಿದೆ.
ಆಡಳಿತ ಪಕ್ಷ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ, ಕ್ಷೇತ್ರ ಉಳಿಸಿಕೊಳ್ಳಲು ಜೆಡಿಎಸ್ ಪ್ರಬಲ ಪೈಪೋಟಿ ನೀಡುತ್ತಿದೆ. ಚುನಾವಣೆಗೆ ಮೊದಲು ಬಿಜೆಪಿಯಿಂದ ಜಿಗಿದು ಕಾಂಗ್ರೆಸ್ ಅಭ್ಯರ್ಥಿ ಯಾಗಿರುವ ಸಿ.ಪಿ.ಯೋಗೇಶ್ವರ್ಗೆಸಿಎಂ, ಡಿಸಿಎಂ, ಪಕ್ಷದ ಶಾಸಕರು, ಸಚಿವರು ಸಾಥ್ ನೀಡುತ್ತಿದ್ದರೆ, ಇತ್ತ
ಕ್ಷೇತ್ರಾಂತರಿ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಜೆಡಿಎಸ್ ಸಹ ತನ್ನೆಲ್ಲ ಶಾಸಕರ ಜೊತೆಗೆ
ಮೈತ್ರಿ ಪಕ್ಷ ಬಿಜೆಪಿಯ ಘಟಾನುಘಟಿ ನಾಯಕರನ್ನು ಹಳ್ಳಿಗಳಿಗೆ ರವಾನಿಸಿದೆ.
ಕಾಂಗ್ರೆಸ್ನಿಂದ ವ್ಯಾಪಕ ಪ್ರಚಾರ: ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯ ಮೂಲಕ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ಆರಂಭ ಮಾಡಿದೆ, ಮಾಜಿ ಸಂಸದ ಡಿ.ಕೆ.ಸುರೇಶ್, ಪರಿಷತ್ ಸದಸ್ಯರಾದ ಪುಟ್ಟಣ್ಣ, ಎಸ್.ರವಿ, ಶಾಸಕರಾದ ಬಾಲಕೃಷ್ಣ, ಕೆ.ಎಂ.ಉದಯ್ ಯೋಗೇಶ್ವರ್ ಬೆನ್ನಿಗೆ ನಿಂತು ಪಕ್ಷದ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಆದರೆ, ಪ್ರಚಾರ ವಿಚಾರದಲ್ಲಿ ಜೆಡಿಎಸ್ ಸಹ ಹಿಂದೆ ಉಳಿದಿಲ್ಲ, ತಾಲೂಕಿನ ಮಾಕಳಿ ಗ್ರಾಮದಿಂದ ನಿಖಿಲ್ ಕುಮಾರಸ್ವಾಮಿ ಮತದಾರರ ಮನಗೆಲ್ಲಲು ಮುಂದಾಗಿದ್ದಾರೆ. ಅವರಿಗೆ ಸ್ಥಳೀಯ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಸಾಥ್ ನೀಡುತ್ತಿದ್ದಾರೆ.
ನಿಖಿಲ್ಗೆ ಅನುಕಂಪದ ಅಲೆ ವಿಶ್ವಾಸ: ಜೆಡಿಎಸ್ ಅಭ್ಯರ್ಥಿ ನಿಖಿಲ್ಕುಮಾರಸ್ವಾಮಿ ಎರಡು ಬಾರಿ ಈಗಾಗಲೇ ಸೋಲನುಭವಿಸಿದ್ದಾರೆ, ಇದು ಅವರಿಗೆ ಮೂರನೇ ಅದೃಷ್ಟ ಪರೀಕ್ಷೆ. ಮಂಡ್ಯ ಲೋಕಸಭಾ ಕ್ಷೇತ್ರ, ರಾಮನಗರ ವಿಧಾನಸಭಾ ಕ್ಷೇತ್ರದಿಂದ ಪರಾಭವಗೊಂಡಿದ್ದ ನಿಖಿಲ್ ನಂತರ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು, ಇದೀಗ ಚನ್ನಪಟ್ಟಣದಿಂದ ಸ್ಪರ್ಧಿಸಿದ್ದಾರೆ. ಜೊತೆಗೆ ಅವರ ತಂದೆ ಎಚ್.ಡಿ. ಕುಮಾರಸ್ವಾಮಿ ಅವರು ಪ್ರತಿನಿಧಿಸು ತ್ತಿದ್ದ ಕ್ಷೇತ್ರವಾಗಿದ್ದರಿಂದ ಸಹಜವಾಗಿ ಅನುಕಂಪ ಜನರಲ್ಲಿದೆ.
ಕಾಂಗ್ರೆಸ್ ಸಾಧನೆ ನೆಚ್ಚಿಕೊಂಡ ಸೈನಿಕ: ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಸಹ ಎರಡು ಬಾರಿ ಸೋಲನು ಭವಿಸಿದವರು. ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರಕ್ಕೆ ಬರುವವರೆಗೂ ಅವರದ್ದೇ ಪಾರುಪತ್ಯ ಆಗಿತ್ತು, ಬದಲಾದ ಸನ್ನಿವೇಶದಲ್ಲಿ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದರಿಂದ ಸತತವಾಗಿ ಎರಡು ಬಾರಿ ಯೋಗೇಶ್ವರ ಸೋಲು ಅನುಭವಿಸಿದ್ದಾರೆ, ಇದು ಅವರಿಗೆ ಮೂರನೇ ಸ್ಪರ್ಧೆ, ಅನುಕಂಪದ ಜೊತೆಗೆ ನೀರಾವರಿ, ಸರ್ಕಾರದ ಗ್ಯಾರಂಟಿ ನೆಚ್ಚಿಕೊಂಡಿರುವ ಅವರು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಯೋಗೇಶ್ವರ್ ೧೯೯೯ರಲ್ಲಿ ಪಕ್ಷೇತರರಾಗಿ, ೨೦೦೪, ೨೦೦೮ರಲ್ಲಿ ಕಾಂಗ್ರೆಸ್ ನಿಂದ, ೨೦೧೧ರಲ್ಲಿ ಬಿಜೆಪಿಯಿಂದ, ೨೦೧೩ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಜೆಡಿಎಸ್ ಪ್ರತಿತಂತ್ರ
ಆದರೆ, ಕ್ಷೇತ್ರ ಉಳಿಸಿಕೊಳ್ಳಲು ಜೆಡಿಎಸ್ ಸಹ ಪ್ರತಿತಂತ್ರ ಹೆಣೆಯುತ್ತಿದೆ. ಜೆಡಿಎಸ್ ಮುಳುಗಿ ಹೋಗುತ್ತಿದೆ ಎನ್ನುವ ಪರಿಸ್ಥಿತಿ ಬಂದ ಸಂದರ್ಭದಲ್ಲಿ ಫೀನಿಕ್ಸ್ನಂತೆ ಮೇಲೆದ್ದು , ಕೇಂದ್ರ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿ ಯಾಗಿರುವ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡಲು ಸುಲಭವಾಗಿ ಬಿಟ್ಟುಕೊಡಲು ಸಿದ್ಧರಿಲ್ಲ. ಅವಶ್ಯವಿರುವ ಎಲ್ಲ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಜೆಡಿಎಸ್ಗೆ ತನ್ನ ಶಾಸಕರು, ಮುಖಂಡರ ಜೊತೆಗೆ
ಮಿತ್ರ ಪಕ್ಷ ಬಿಜೆಪಿಯ ಘಟಾನುಘಟಿ ನಾಯಕರು ಸಾಥ್ ನೀಡುತ್ತಿದ್ದಾರೆ. ಮಾಜಿ ಸಿಎಂಗಳಾದ ಬಿ. ಎಸ್.ಯಡಿಯೂರಪ್ಪ, ಸದಾನಂದಗೌಡ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಅಶ್ವತ್ಥ್ನಾರಾಯಣ, ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಸಧ್ಯದ ಪಾಲಿಗೆ ಜೆಡಿಎಸ್ ಬೆನ್ನಿಗಿದ್ದಾರೆ. ಎರಡೂ ಪಕ್ಷಗಳ ನಾಯಕರು ನಿಖಿಲ್ ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಒಟ್ಟಾರೆ, ಕ್ಷೇತ್ರದಲ್ಲಿ ಗೆಲುವಿಗಾಗಿ ಎರಡೂ ಪಕ್ಷಗಳು ಜಿದ್ದಾಜಿದ್ದಿ ನಡೆಸುತ್ತಿವೆ, ಪ್ರಚಾರ ಆರಂಭದಲ್ಲೇ ಭರ್ಜರಿ ಎನಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಸರಕಾರ V/s ಕುಮಾರಸ್ವಾಮಿ
ಚನ್ನಪಟ್ಟಣ ಉಪಚುನಾವಣಾ ಕಣ ಸಧ್ಯ ಸರ್ಕಾರ ವರ್ಸಸ್ ಎಚ್.ಡಿ.ಕುಮಾರಸ್ವಾಮಿ ಎನ್ನುವಂತಾಗಿದೆ. ರಾಮನಗರ ಜಿಲ್ಲೆಯಿಂದ ಜೆಡಿಎಸ್ಗೆ ಗೇಟ್ಪಾಸ್ ಕೊಡಬೇಕೆಂದು ಸಿಎಂ, ಡಿಸಿಎಂ ಜಿದ್ದಿಗೆ ಬಿದ್ದಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಯೋಗೇಶ್ವರ್ ಬೆನ್ನಿಗೆ ನಿಂತಿದ್ದು, ಇವರ ಜೊತೆಗೆ ಕುಮಾರಸ್ವಾಮಿ ಅವರ ಹಳೆಯ ಮಿತ್ರರು, ಸಚಿವರಾದ ಜಮೀರ್ ಅಹಮ್ಮದ್, ಚಲುವರಾಯಸ್ವಾಮಿ, ಶಾಸಕ ಬಾಲಕೃಷ್ಣ ಸಹಕಾರ ನೀಡುತ್ತಿದ್ದಾರೆ. ಶತಾಯಗತಾಯ ಕ್ಷೇತ್ರವನ್ನು ಪಡೇ ತೀರಲು ಕಾಂಗ್ರೆಸ್ ತನ್ನ ಇಡೀ ತಂತ್ರಗಳನ್ನು ಈ ಚುನಾವಣೆ ಯಲ್ಲಿ ಬಳಕೆ ಮಾಡುತ್ತಿದ್ದು, ಅನ್ಯಪಕ್ಷದ ಮುಖಂಡರು, ಕಾರ್ಯಕರ್ತರನ್ನು ಸೆಳೆಯಲು ರಾತ್ರಿ ಕಾರ್ಯಾ ಚರಣೆಯೂ ನಿರಾತಂಕವಾಗಿ ಸಾಗಿದೆ.
ಎನ್ಡಿಎ ನಿಂದ ತಮ್ಮ ಮಗನನ್ನು ಚುನಾವಣೆಯಲ್ಲಿ ನಿಲ್ಲಿಸಲು ಎಚ್.ಡಿ.ಕುಮಾರಸ್ವಾಮಿ ಅವರು ನನಗೆ ಟಿಕೆಟ್ ತಪ್ಪಿಸಿದರು, ನಾನು ಮರಳಿ ಮಾತೃಪಕ್ಷಕ್ಕೆ ಬಂದಿದ್ದೇನೆ, ಕ್ಷೇತ್ರದ ಸಮಗ್ರ ಅಭಿವೃದ್ದಿ ಮಾಡುವ ಇರಾದೆ ನನ್ನದು,
ಈಗಾಗಲೇ ನೀರಾವರಿಯಲ್ಲಿ ಯಶಸ್ಸು ಕಂಡಿದ್ದೇನೆ, ಚನ್ನಪಟ್ಟಣ ತಾಲೂಕಿನ ಜನತೆ ನನ್ನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡುತ್ತಾರೆ ಎಂಬ ವಿಶ್ವಾಸವಿದೆ.
-ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್ ಅಭ್ಯರ್ಥಿ.
ಈ ಚುನಾವಣೆ ಎಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ಅಗ್ನಿಪರೀಕ್ಷೆ, ನಾವು ಕುತಂತ್ರ ಮಾಡಿ ರಾಜಕಾರಣ
ಮಾಡಿದವರಲ್ಲ, ಇಲ್ಲಿ ನಿಖಿಲ್ ಅಭ್ಯರ್ಥಿಯಲ್ಲ, ಕಾರ್ಯಕರ್ತರೇ ಅಭ್ಯರ್ಥಿಗಳು, ಈ ಕ್ಷೇತ್ರಕ್ಕೆ ಎಚ್.ಡಿ.ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಅವರ ಕೊಡುಗೆ ಅಪಾರವಾಗಿದೆ, ನನ್ನ ಕೊನೆಯ ಉಸಿರು
ಇರುವವರೆಗೂ ನಿಮ್ಮ ಜೊತೆ ಇರುತ್ತೇನೆ, ನನಗೆ ಒಂದು ಅವಕಾಶ ಕೊಡಿ.
-ನಿಖಿಲ್ ಕುಮಾರಸ್ವಾಮಿ, ಎನ್ಡಿಎ ಅಭ್ಯರ್ಥಿ