ವರಿಷ್ಠರ ಭೇಟಿಗೆ ಸಮಯ ಸಿಗದಿದ್ದರೂ ದೆಹಲಿಗೆ
ಎದುರಾಳಿಗಳ ಬಾಯಿ ಮುಚ್ಚಿಸುವ ತಂತ್ರವೇ?
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಹಿನ್ನೆಲೆಯ ಸಹಜ ಸಂಪ್ರದಾಯ ಹೆಸರಿನಲ್ಲಿ ಫೆ.೭ರಂದು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಆದರೆ ಬಿಜೆಪಿಯ ಯಾವುದೇ ರಾಷ್ಟ್ರೀಯ ನಾಯಕರ ಭೇಟಿಗೆ ಸಮಯ ನಿಗದಿಯಾಗದೆ ಎರಡು ದಿನಗಳ ಪ್ರವಾಸ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ಶಂಕೆ ಮೂಡಿಸಿದ್ದು, ಇದು ಹೋದ ಪುಟ್ಟ ಬಂದ ಪುಟ್ಟಾ ಎಂಬಂತಾಗುವುದೇ ಎನ್ನುವ ಗುಮಾನಿ ಆರಂಭವಾಗಿದೆ.
ಏಕೆಂದರೆ, ಮುಖ್ಯಮಂತ್ರಿ ಅಧಿಕೃತ ಮಾಹಿತಿ ಪ್ರಕಾರ ಕೆಲವು ಕೇಂದ್ರ ಸಚಿವರ ಭೇಟಿಯ ನಿರೀಕ್ಷೆ ಹಾಗೂ ರಾಜ್ಯದ ಸಂಸದರೊಂದಿಗೆ ಸಭೆ ನಿಗದಿ ಯಾಗಿರುವುದನ್ನು ಬಿಟ್ಟರೆ ಪ್ರವಾಸ ಪಟ್ಟಿಯಲ್ಲಿ ಪಕ್ಷದ ಯಾವುದೇ ರಾಷ್ಟ್ರೀಯ ನಾಯಕರ ಭೇಟಿ ನಿಗದಿಯಾಗಿಲ್ಲ. ಅಷ್ಟೇ ಏಕೆ ? ಕೇಂದ್ರ ಸಚಿವ ರೊಂದಿಗೆ ಯಾವುದೇ ಮಹತ್ವದ ಸಭೆಗಳೂ ಕೂಡ ನಿಗದಿಯಾಗಿಲ್ಲ. ಇಂಥ ಸ್ಥಿತಿಯಲ್ಲಿ ಅವರು ಎರಡು ದಿನಗಳ ಕಾಲ ದಿಲ್ಲಿಯಲ್ಲೇ ಉಳಿದು
ಮಾಡುವುದಾದರೂ ಏನು ಎನ್ನುವ ಚರ್ಚೆ ಬಿಜೆಪಿ ವಲಯದಲ್ಲೇ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ಘಟಾನುಘಟಿಗಳಾದ ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಹಾಗೂ ಅನೇಕ ಹಿರಿಯ ಸಚಿವರೂ ಸೇರಿದಂತೆ ಪ್ರಮುಖರೆಲ್ಲ ಉತ್ತರ ಪ್ರದೇಶ ಚುನಾವಣೆ ರಣರಂಗದಲ್ಲಿ ಕತ್ತಿ ಜಳಪಿಸುತ್ತಿರುವಾಗ ಮುಖ್ಯಮಂತ್ರಿ ಗಳು ಕರ್ನಾಟಕದ ರಾಜಕೀಯ ಕಥೆಗಳನ್ನು ಹೇಳಿಕೊಳ್ಳುವುದಕ್ಕೆ ಸಾಧ್ಯವೇ? ಅದಕ್ಕೆ ಹಿರಿಯ ನಾಯಕರು ಪುರುಸೊತ್ತಾದರೂ ಮಾಡಿಕೊಳ್ಳುವುದುಂಟಾ? ಹಾಗಿದ್ದ ಮೇಲೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ದೆಹಲಿ ಪ್ರವಾಸದ ಹಿಂದಿನ ರಾಜಕೀಯ ಉದ್ದೇಶವಾದರೂ ಏನಿರಬಹುದು. ಬೊಮ್ಮಾಯಿ ಅವರು ಯಾರಿಗೆ, ಯಾವ ರೀತಿ ಸಂದೇಶ ರವಾನಿಸಲು ಪ್ರವಾಸ ಕೈಗೊಂಡಿದ್ದಾರೆ ಎನ್ನುವ ಪ್ರಶ್ನೆಯೂ ಬಿಜೆಪಿ ಜಗುಲಿಯಲ್ಲಿದೆ.
ಏನಾಗಬಹುದು?
ಸದ್ಯದ ಸ್ಥಿತಿಯಲ್ಲಿ ಸಿಎಂ ಬೊಮ್ಮಾಯಿ ಅವರಿಗೆ ಪಕ್ಷದ ವರಿಷ್ಠರ ಭೇಟಿ ಅವಕಾಶ ದೂರದ ಮಾತು. ರಾಷ್ಟ್ರಪತಿ ಭಾಷಣದ ಮೇಲೆ ಪ್ರಧಾನಿ ಮೋದಿ
ಅವರ ಉತ್ತರವಿದ್ದು, ಅನಂತರದಲ್ಲಿ ಮೋದಿ ಅವರು ಒಂದೊಮ್ಮೆ ಸಿಕ್ಕಿಬಿಟ್ಟರೆ ಪುನಾರಚನೆ ವಿಚಾರ ಪ್ರಸ್ತಾಪಿಸೋಣ ಎನ್ನುವುದು, ಅಥವಾ
ನಾಯಕರಾದ ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಅವರ ಭೇಟಿಗಾದರೂ ಪ್ರಯತ್ನಿಸೋಣ ಎನ್ನುವು ಚಿಂತನೆಯೂ ಇದೆ. ಆದರೆ ಇದು ಸದ್ಯದಲ್ಲಿ ಸುಲಭ
ಸಾಧ್ಯವಲ್ಲ ಎನ್ನುವುದು ಸಿಎಂಗೂ ಗೊತ್ತಿದೆ. ಇದ್ಯಾವುದೂ ಆಗದಿದ್ದರೆ ಸುಲಭವಾಗಿ ಸಿಗುವ ಕೇಂದ್ರ ಸಚಿವರ ಭೇಟಿ ಮಾಡಿ ರಾಜ್ಯದ ವಿಚಾರ
ಗಳನ್ನು ಪ್ರಸ್ತಾಪಿಸುವುದು, ರಾಜ್ಯದ ಸಂಸದರ ಜತೆ ಸಭೆ ನಡೆಸಿ ವಾಪಸ್ಸಾಗುವ ಲೆಕ್ಕಾಚಾರ ಬೊಮ್ಮಾಯಿ ಅವರದು ಎಂದು ಆಪ್ತ ಮೂಲಗಳು ಹೇಳಿವೆ.