ಮೂರು ಮಹಾನಗರ ಪಾಲಿಕೆಗಳ ಚುನಾವಣೆಗೆ ರಂಗಸಜ್ಜು
ಹೆಚ್ಚಿದ ಸ್ವಪಕ್ಷೀಯರ ಅತೃಪ್ತಿ, ಆತಂಕದಲ್ಲಿ ಬಿಜೆಪಿ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಮಂತ್ರಿಗಿರಿ ಆಕಾಂಕ್ಷಿಗಳ ಕಾಟ ಹಾಗೂ ಉಸ್ತುವಾರಿಗಳ ನಿರಂತರ ಗೋಳು ನಿವಾರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಥಮ ಅಗ್ನಿ ಪರೀಕ್ಷೆ ಶುರುವಾಗಿದೆ. ಅದೇ ರಾಜ್ಯದ ಮೂರು ಮಹಾನಗರ ಪಾಲಿಕೆಗಳ ಸಾಮಾನ್ಯ ಚುನಾವಣೆ.
ರಾಜ್ಯದ ೮ ಮಹಾನಗರ ಪಾಲಿಕೆಗಳಲ್ಲಿ ಅತ್ಯಂತ ಹಣಾಹಣಿಯ ಚುನಾವಣೆಗಳು ನಡೆಯುವ ನಗರಗಳೆಂದರೆ ಉತ್ತರ ಕರ್ನಾಟಕದಲ್ಲಿ ಬೆಳಗಾವಿ, ಹುಬ್ಬಳ್ಳಿ, ಕಲಬುರ್ಗಿ. ಹಾಗೆಯೇ ದಕ್ಷಿಣದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು. ಇವುಗಳ ಪೈಕಿ ಬೆಂಗಳೂರು ಬಿಟ್ಟರೆ ಅನೇಕ ಸಚಿವರು, ಶಾಸಕರ ಹಣೆಬರಹವನ್ನೇ ನಿರ್ಧರಿ ಸುವ ಪಾಲಿಕೆಗಳು ಎಂದರೆ, ಬೆಳಗಾವಿ, ಕುಲಬುರ್ಗಿ ಹಾಗೂ ಹುಬ್ಬಳ್ಳಿ-ಧಾರವಾಡ ಮಾತ್ರ.
ಇಂಥ ನಿರ್ಣಾಯಕ ಪಾಲಿಕೆಗಳ ಚುನಾವಣೆ ಸೆ.೩ರಂದು ನಡೆಯಲಿದ್ದು, ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭವಾಗಿದೆ. ಅಂದಹಾಗೆ ಯಡಿಯೂರಪ್ಪ ಅವರ ನೇತೃತ್ವದ ಸರಕಾರವೇ ಈಗಲೂ ಇದ್ದರೆ ಈ ಚುನಾವಣೆಗಳನ್ನು ಸರಕಾರಕ್ಕೆ ಸವಾಲು ಅಥವಾ ಪ್ರತಿಷ್ಠೆ ಎಂದು ಕರೆಯಬಹುದಿತ್ತು. ಆದರೆ ಈಗಿರುವುದು ಬಸವರಾಜ ಬೊಮ್ಮಾಯಿ ನೇತೃತ್ವದ ನೂತನ ನಾಯಕತ್ವದ ಸರಕಾರ. ಹೀಗಾಗಿ ಈ ಚುನಾವಣೆಯನ್ನು ಸವಾಲು ಎನ್ನುವುದಕ್ಕಿಂತ ಬೊಮ್ಮಾಯಿ ಅವರ ಅಗ್ನಿ ಪರೀಕ್ಷೆ ಎಂದೇ ಕರೆಯಬೇಕಾಗುತ್ತದೆ. ಈ ಪಾಲಿಕೆಗಳಲ್ಲಿ ಬಿಜೆಪಿ ಇರುವ ಸ್ಥಿತಿಯನ್ನು ಗಮನಿಸಿದರೆ, ಈ ಚುನಾವಣೆ ಬೊಮ್ಮಾಯಿ ಹಾಗೂ ಅನೇಕ ಸಚಿವರ ಪಾಲಿಗೆ ಇದು ಅಳಿವು, ಉಳಿವಿನ ಪ್ರಶ್ನೆಯನ್ನೇ ಹುಟ್ಟಿ ಹಾಕಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಬಿಜೆಪಿಯ ಹಿರಿಯ ನಾಯಕರೊಬ್ಬರು.
ಮುಖ್ಯಮಂತ್ರಿಗೆ ಏಕೆ ಅಗ್ನಿ ಪರೀಕ್ಷೆ?
ಅಧಿಕಾರ ಸ್ವೀಕರಿಸಿದ ದಿನದಿಂದಲೇ ಬೊಮ್ಮಾಯಿ ಅವರಿಗೆ ಅನೇಕ ಸವಾಲುಗಳು ಎದುರಾಗಿವೆ. ಇದರ ಮಧ್ಯೆ, ಯೋಗೀಶ್ವರ್ ಸೇರಿದಂತೆ ಮಂತ್ರಿಗಿರಿಯ ಅನೇಕ ಆಕಾಂಕ್ಷಿಗಳ ಕಾಟ, ಆನಂದ್ ಸಿಂಗ್, ಎಂಟಿಬಿ ಅವರಂಥ ಖಾತೆ ಕ್ಯಾತೆ ಹಾಗೂ ಉಸ್ತುವಾರಿಗಳ ಗೋಳು ಸರಿಪಡಿಸಬೇಕೆನ್ನುವಷ್ಟರಲ್ಲಿ ಹುಬ್ಬಳ್ಳಿ-
ಧಾರವಾಡ, ಬೆಳಗಾವಿ ಹಾಗೂ ಕಲಬುರ್ಗಿ ಮಹಾನಗರ ಪಾಲಿಕೆಗಳ ಚುನಾವಣೆಗಳು ಬಂದು ನಿಂತಿದೆ. ಅಂದಹಾಗೆ ಬೊಮ್ಮಾಯಿ ಅವರು ಇದನ್ನು ಲಘುವಾಗಿ ತೆಗೆದುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ.
ಇದು ಯಡಿಯೂರಪ್ಪ ನೇತೃತ್ವ ಇಲ್ಲದೆ ನಡೆಯುತ್ತಿರುವ ಪ್ರಥಮ ಚುನಾವಣೆ. ಇಲ್ಲಿ ಗೆಲ್ಲುವ ಮೂಲಕ ಬೊಮ್ಮಾಯಿ ತಮ್ಮ ಸಾಮರ್ಥ್ಯವನ್ನು ಹೈಕಮಾಂಡ್ಗೆ
ತೋರಿಸಬೇಕಿದೆ. ಇದು ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಗಳ ದಿಕ್ಸೂಚಿಯೂ ಹೌದು. ಅಂದರೆ ಮುಂಬರುವ ಪಂಚಾಯಿತಿಗಳ ಚುನಾವಣೆಗಳ ಮತದಾರರು ಈ ಫಲಿತಾಂಶ ಮನಸ್ಸಿನಲ್ಲಿಟ್ಟು ಮತ ಚಲಾಯಿಸಿದರೂ ಅಚ್ಚರಿ ಇಲ್ಲ ಎನ್ನುವ ವಾದಗಳಿವೆ.
ಯಾವ ಪಾಲಿಕೆ, ಯಾರಿಗೆ ಕಷ್ಟ?
ಬೆಳಗಾವಿಯಲ್ಲಿ ಬಿಜೆಪಿ ಸ್ಥಿತಿ ಹೇಗಿದೆ ಎನ್ನುವುದನ್ನು ಇತ್ತೀಚೆಗೆ ನಡೆದ ಲೋಕಸಭಾ ಉಪ ಚುನಾವಣೆ ಫಲಿತಾಂಶವೇ ಹೇಳಿದೆ. ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರು ಅತ್ಯಂತ ಕಡಿಮೆ ಅಂತರದಲ್ಲಿ ಪ್ರಯಾಸದ ಗೆಲುವು ಸಾಧಿಸಿ ಜಿಯಲ್ಲಿ ಬಿಜೆಪಿ ಸ್ಥಿತಿಯನ್ನು ಗೊತ್ತು ಮಾಡಿದ್ದಾರೆ. ಇಂಥ ಸಂದರ್ಭದಲ್ಲಿ
ಸಿ.ಡಿ ಪ್ರಕರಣದಿಂದ ಹೊರಬರುವ ವಿಶ್ವಾಸದಲ್ಲಿದ್ದ ರಮೇಶ್ ಜಾರಕಿಹೊಳಿ ರಾಜಕೀಯದಿಂದ ಹಿಂದೆ ಸರಿದಿದ್ದಾರೆ.
ಚುನಾವಣೆಯನ್ನೇ ನಿರ್ಧರಿಸುವ ಇಡೀ ಜಾರಕಿಹೊಳಿ ಕುಟುಂಬದ ಯಾವೊಬ್ಬರೂ ಮಂತ್ರಿಯಾಗಿಲ್ಲ. ಕಾಂಗ್ರೆಸ್ನಲ್ಲಿ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮಾಜಿ ಶಾಸಕ ಫಿರೋಜ್ ಸೇಠ್ ಈಗ ಬಲವಾಗಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಉಪ ಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ ಹಾಗೂ
ಸಚಿವರಾಗಿದ್ದ ಶ್ರೀಮಂತ್ ಪಾಟೀಲ ಈಗ ಮಾಜಿ ಆಗಿದ್ದಾರೆ. ಹೀಗಾಗಿ ಚುನಾವಣೆಯನ್ನು ಗೆಲ್ಲಿಸುವ ಹೊಣೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹಾಗೂ ಉಮೇಶ್ ಕತ್ತಿ ಅವರ ಮೇಲಿದ್ದು, ಇವರು ಹೇಗೆ ನಿಭಾಯಿಸುತ್ತಾರೋ ಹೇಳಲಾಗದು.
ಹುಬ್ಬಳ್ಳಿ-ಧಾರವಾಡದಲ್ಲಿ ಉಸ್ತುವಾರಿಯಾಗಿ ಸಚಿವ ಶಂಕರ ಮುನೇನಕೊಪ್ಪ ಇದ್ದಾರೆ. ಇವರಿಗೆ ಈ ಚುನಾವಣೆ ಹೊಸ ಹೊಣೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಈಗ ಶಾಸಕರು ಮಾತ್ರ. ಮುಖ್ಯಮಂತ್ರಿಯಾಗುತ್ತಾರೆ ಎಂದು ಬಿಂಬಿತರಾಗಿದ್ದ ಧಾರವಾಡದ ಅರವಿಂದ ಬೆಲ್ಲದ ಮಂತ್ರಿ ಸ್ಥಾನವೂ ಇಲ್ಲದೇ ಮೌನ ವಾಗಿದ್ದಾರೆ. ಹೀಗಾಗಿ ಇಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಪ್ರಭಾವ ಮಾತ್ರ ಪಕ್ಷವನ್ನು ಗೆಲ್ಲಿಸಬೇಕಾಗಿದೆ.
ಉಳಿದಂತೆ ಕಲಬುರ್ಗಿ ಪಾಲಿಕೆಯಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಆಡಳಿತವಿದೆ. ಈಗ ಬಿಜೆಪಿ ಪ್ರಥಮ ಬಾರಿಗೆ ಪ್ರವೇಶ ಮಾಡಬೇಕಿದ್ದು, ಇದರ ಹೊಣೆಯನ್ನು ಸಚಿವ ಮುರುಗೇಶ್ ನಿರಾಣಿಗೆ ವಹಿಸಲಾಗಿದೆ. ಈ ಜಿಯಲ್ಲಿ ಯಾರಿಗೂ ಮಂತ್ರಿ ಸ್ಥಾನ ಲಭಿಸಿಲ್ಲ. ಹೀಗಾಗಿ ಬಾಗಲಕೋಟೆ ರಾಜಕಾರಣದ ನಿರಾಣಿ
ಕಲಬುರ್ಗಿಯಲ್ಲಿ ಹೇಗೆ ಯಶಸ್ವಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಸಿಎಂ ಮುಂದಿರುವ ಸವಾಲುಗಳೇನು?
ಈ ಚುನಾವಣೆಗೆ ಯಡಿಯೂರಪ್ಪ ನೇತೃತ್ವ ಇಲ್ಲ
ಅಸಮಾಧಾನದ ನಡುವೆ ಎದುರಿಸುವ ಪ್ರಥಮ ಚುನಾವಣೆ
ಹೈಕಮಾಂಡ್ಗೆ ಸಾಮರ್ಥ್ಯ ತೋರಿಸುವ ಅನಿವಾರ್ಯ
ಮೂರು ಪಾಲಿಕೆಗಳಲ್ಲೂ ಕಾಂಗ್ರೆಸ್ ಪ್ರಬಲ
ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ ಸಿಗದಿರುವುದು
ಹುಬ್ಬಳ್ಳಿಯಲ್ಲಿ ಶೆಟ್ಟರ್, ಬೆಲ್ಲದಗೆ ಮಂತ್ರಿ ಸಿಗದಿರುವುದು
ಕಲಬುರ್ಗಿಯಲ್ಲಿ ಯಾರಿಗೂ ಮಂತ್ರಿ ಸ್ಥಾನ ನೀಡದಿರುವುದು