ವಿಶ್ವವಾಣಿ ಸಂದರ್ಶನ: ರಂಜಿತ್ ಎಚ್. ಅಶ್ವತ್ಥ
ರಾಜಕೀಯ ಕಾರಣಕ್ಕೆ ಸಿದ್ದರಾಮಯ್ಯ ವಿರುದ್ಧ ಆರೋಪ
ಕುಮಾರಸ್ವಾಮಿ ಅವರದ್ದು ಮೊದಲಿನಿಂದಲೂ ಹಿಟ್ ಆಂಡ್ ರನ್ ಸ್ವಭಾವ
ವಿಶ್ವವಾಣಿ ಸಂದರ್ಶನದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಆರೋ
ಬೆಂಗಳೂರು: ಕರ್ನಾಟಕದಲ್ಲಿ ಕೆಟ್ಟ ಸಂಸ್ಕೃತಿಗೆ ನಾಂದಿ ಹಾಡಲು ಬಿಜೆಪಿ, ಜೆಡಿಎಸ್ನವರು ಮುಂದಾಗಿದ್ದಾರೆ. ರಾಜ್ಯದ ಜನರ ಆದೇಶಕ್ಕೆ ವಿರುದ್ಧವಾಗಿ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಮಾಡು ತ್ತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಇದನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಟೀಕಿಸಿ ದರು.
‘ವಿಶ್ವವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಸ್ಥಿರಗೊಳಿಸುವ ಮೂಲಕ
ಸರಕಾರವನ್ನು ಅಸ್ಥಿರಗೊಳಿಸುವ ಕೆಟ್ಟ ಸಂಸ್ಕೃತಿಗೆ ಪ್ರತಿಪಕ್ಷಗಳು ಮುಂದಾಗಿದ್ದಾರೆ. ಆದರೆ ೧೩೬ ಶಾಸಕರನ್ನು ಖರೀದಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ರಾಜಕೀಯ ಕಾರಣಕ್ಕಾಗಿ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಹೆಸರನ್ನು ತಂದಿರುವ ಬಿಜೆಪಿ-ಜೆಡಿಎಸ್ ನಾಯಕರಿಗೆ ಕಾಲವೇ ಉತ್ತರಿಸಲಿದೆ ಎಂದು ಸವಾಲು ಹಾಕಿದರು.
೧೩೬ ಶಾಸಕರ ಬಲವಿದ್ದರೂ ಅಸ್ಥಿರತೆಯ ಆತಂಕವೇಕೆ?: ನಮಗೆ ನಮ್ಮ ಶಾಸಕರು ಹೋಗುತ್ತಾರೆ ಎನ್ನುವ ಆತಂಕವಿಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಅಸ್ಥಿರಗೊಳಿಸಲು ಪ್ರಯತ್ನಿಸುವುದೇ ಅಪರಾಧ. ಏನಾದರೂ ಲೋಪವಾಗಿದ್ದರೆ, ತಪ್ಪಾಗಿದ್ದರೆ ಅದರ ವಿರುದ್ಧ ಹೋರಾಡುವು ದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಯಾರೋ ಒಬ್ಬ ಸಚಿವ, ಶಾಸಕ ಮಾಡಿದ ತಪ್ಪಿಗೆ ಮುಖ್ಯಮಂತ್ರಿ ರಾಜೀನಾಮೆ ಕೇಳುವುದು ಎಷ್ಟು ಸರಿ? ಒಬ್ಬರು ಮಾಡಿರುವ ತಪ್ಪಿಗೆ ಇಡೀ ಸರಕಾರವನ್ನೇ ಉರುಳಿಸುತ್ತೇವೆ ಎನ್ನುವುದು ಎಷ್ಟು ಸರಿ? ಇದು ಪೂರ್ವಾಗ್ರಹ ಪೀಡಿತ ಎನಿಸುವುದಿಲ್ಲವೇ? ಕೇಂದ್ರ ಸರಕಾರ ವನ್ನು ಬಳಸಿಕೊಂಡು ಸರಕಾರವನ್ನು ತೆಗೆಯಬೇಕು ಎಂದು ಯೋಚಿಸಿದರೂ ಅದು ಜನ ಹಾಗೂ ಜನತಂತ್ರಕ್ಕೆ ವಿರುದ್ಧದ ನಿಲುವು ಎಂದು ಹೇಳಿದರು.
ದೇವೇಗೌಡರ ಕುಟುಂಬ ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷ ದೊಂದಿಗೆ ವರ್ಷಕ್ಕಿಂತ ಹೆಚ್ಚು ದಿನ ವಿಶ್ವಾಸ ಉಳಿಸಿಕೊಂಡಿಲ್ಲ. ಕುಮಾರಸ್ವಾಮಿ ಅವರು ಜೆಡಿಎಸ್ ನಾಯಕತ್ವದ ಪಡೆದ ಬಳಿಕ ಜೆಡಿಎಸ್ ಬಲ ಕುಸಿದಿರುವುದನ್ನು ನೋಡಿದರೆ, ಯಾರ ತಪ್ಪು ಎನ್ನುವುದು ಸ್ಪಷ್ಟವಾಗುತ್ತದೆ. ಹಳೇ ಮೈಸೂರು ಭಾಗದಲ್ಲಿಯೂ ಕುಸಿಯುತ್ತಿರುವ ಹಿಡಿತವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಜೆಡಿಎಸ್ ಇದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
‘ವಿಶ್ವವಾಣಿ’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಬಿಜೆಪಿ- ಜೆಡಿಎಸ್ನಿಂದ ಸರಕಾರ ಅಸ್ಥಿರಗೊಳಿಸುವ ಪ್ರಯತ್ನ, ಮುಡಾ
ಪ್ರಕರಣದಲ್ಲಿ ಅನವಶ್ಯ ಆರೋಪ, ಕುಮಾರಸ್ವಾಮಿ ಅವರ ಕುಟುಂಬ ಹಾಗೂ ಹಿಟ್ ಆಂಡ್ ರಾಜಕೀಯ ಸೇರಿದಂತೆ ಹಲವು ವಿಷಯದ ಬಗ್ಗೆ ಮಾತ ನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.
? ಸದ್ಯ ರಾಜಕೀಯ ಪರಿಸ್ಥಿತಿ ಹೇಗಿದೆ?
ಕರ್ನಾಟಕದಲ್ಲಿ ಸದ್ಯದ ರಾಜಕೀಯ ಪರಿಸ್ಥಿತಿ ಈ ಹಿಂದೆ ಎಂದಿಗೂ ನಾವು ನೋಡಿರಲಿಲ್ಲ. ಪ್ರತಿಪಕ್ಷ ಸ್ಥಾನದಲ್ಲಿರುವ ಪಕ್ಷಗಳು ಸಾಮಾನ್ಯವಾಗಿ, ಸರಕಾರದ ತಪ್ಪು ನಡೆಯನ್ನು ಎತ್ತಿಹಿಡಿಯುವುದು, ತಿದ್ದುಕೊಳ್ಳುವುದಕ್ಕೆ ಮಾರ್ಗದರ್ಶನ ಮಾಡುವುದನ್ನು ನೋಡಿಕೊಂಡು ಬಂದಿದ್ದೇವೆ. ಆದರೆ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ, ಅಮಿತ್ ಶಾ ಬಿಜೆಪಿಯ ಚುಕ್ಕಾಣಿ ಹಿಡಿದ ಬಳಿಕ, ಪ್ರತಿಪಕ್ಷಗಳನ್ನು ‘ಅಸ್ಥಿರ’ಗೊಳಿಸುವುದೇ ಬಿಜೆಪಿಯ ಮೂಲ ಉದ್ದೇಶವಾಗಿದೆ ಎನಿಸುತ್ತಿದೆ. ಈ ಗುರಿ ಸಾಧಿಸುವುದಕ್ಕೆ, ಸಿಬಿಐ, ಐಟಿ, ಇಡಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷ ಹಾಗೂ ನಾಯಕ ರನ್ನು ಅಸ್ಥಿರಗೊಳಿಸುತ್ತಿದ್ದಾರೆ. ಇದರ ಮುಂದುವರಿದ ಭಾಗವೇ ಕರ್ನಾಟಕದಲ್ಲಿಯೂ ನಡೆಯುತ್ತಿದೆ.
? ಅಂದರೆ ಈವರೆಗೆ ದೇಶದಲ್ಲಿ ಸರಕಾರಗಳು ಅಸ್ಥಿರಗೊಂಡ ಇತಿಹಾಸವಿಲ್ಲವೇ?
ಸ್ವಾತಂತ್ರ್ಯ ಭಾರತದಲ್ಲಿ ಆಡಳಿತ ಪಕ್ಷಗಳು ಅಸ್ಥಿರಗೊಂಡೇ ಇಲ್ಲ ಎನ್ನಲು ಬರುವುದಿಲ್ಲ. ಈ ಹಿಂದೆಯೂ ಹಲವು ಭಾರಿ ಸರಕಾರಗಳು ಬಿದ್ದು ಹೋಗಿರುವ ಉದಾಹರಣೆಯಿದೆ. ಆದರೆ ಆ ಎಲ್ಲ ಸಮಯದಲ್ಲಿ ಒಂದು ಸ್ಥಾನದ ಸರಳ ಬಹುಮತವಿದ್ದಾಗ, ಪಕ್ಷೇತರರೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಾಗ ಸಮಸ್ಯೆ ಗಳಾಗಿವೆ. ಆದರೆ ಇದೇ ಮೊದಲ ಬಾರಿಗೆ ೧೩೬ ಶಾಸಕರ ಬೃಹತ ಸಂಖ್ಯಾಬಲದೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿರುವ ಪಕ್ಷದ ಸರಕಾರವನ್ನು ಅಸ್ಥಿರ ಗೊಳಿಸುವ ನೀಚ ಕೆಲಸವನ್ನು ಪ್ರತಿಪಕ್ಷಗಳು ಮುಂದಾಗಿದೆ. ಈ ರೀತಿಯ ಕೆಟ್ಟ ರಾಜಕೀಯ ಕರ್ನಾಟಕದಲ್ಲಿ ಎಂದೆಂದೂ ನೋಡಿರಲಿಲ್ಲ.
? ಸಿದ್ದರಾಮಯ್ಯ ಅವರನ್ನು ಅಸ್ಥಿರಗೊಳಿಸುವ ನಡೆದಿದೆಯೇ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ೧೩೬ ಶಾಸಕರ ಬಲವಿದೆ. ಆದರೂ ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿಗರು ಮಾಡುತ್ತಿದ್ದಾರೆ. ಇಂದಿನ
ರಾಜಕೀಯದಲ್ಲಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರಂತಹ ಉತ್ತಮ ಆಡಳಿತ ಹಾಗೂ ಬದ್ಧತೆಯಿರುವ ಮತ್ತೊಬ್ಬ ನಾಯಕರಲಿಲ್ಲ. ಈ ಹಿಂದೆ ರಾಮಕೃಷ್ಣ ಹೆಗಡೆ, ದೇವರಾಜ ಅರಸು, ವೀರೇಂದ್ರ ಪಾಟೀಲ್, ದೇವೇಗೌಡ ಅವರನ್ನುನೋಡಿದ್ದೇವೆ. ಆದರೆ ಇಂದಿನ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರೇ ಉತ್ತಮ ನಾಯಕ ಎನ್ನುವುದರಲ್ಲಿ ಅನುಮಾನ ಬೇಡ. ಸಿದ್ದರಾಮಯ್ಯ ಅವರ ವಿಷಯದಲ್ಲಿ ಬಹಿರಂಗವಾಗಿ ಏನೇ ಹೇಳಬಹುದು. ಆದರೆ ಪ್ರತಿಪಕ್ಷದಲ್ಲಿರುವ ಶಾಸಕರು, ನಾಯಕರೂ ಸಹ ‘ಆಫ್ ದಿ ರೆಕಾರ್ಡ್’ ಮಾತನಾಡುವಾಗ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಇಂತಹ ನಾಯಕರನ್ನು ಯಾವುದೇ ಇಲ್ಲಸಲ್ಲದ ಪ್ರಕರಣದಲ್ಲಿ ಸಿಲುಕಿಸುವುದು ಸರಿಯಲ್ಲ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಪಾತ್ರವೇ ಇಲ್ಲದಿದ್ದರೂ, ಅವರ ಹೆಸರನ್ನು ಮುಂದಿಟ್ಟು ಕೊಂಡು ಆರೋಪಿಸುವುದು ಎಷ್ಟು ಸರಿ..? ಆಧಾರರಹಿತ ಆರೋಪವನ್ನು ಮುಂದಿಟ್ಟುಕೊಂಡು ಅಸ್ಥಿರಗೊಳಿಸಲು ಹೊರಟಿರುವವರು ಪ್ರಜಾಪ್ರಭುತ್ವ ವನ್ನು ಗೌರವಿಸುತ್ತಾರೆಯೇ..? ಸಂವಿಧಾನವನ್ನು ಒಪ್ಪುತ್ತಾರೆಯೇ..?
? ೧೩೬ ಶಾಸಕರಿದ್ದರೂ ಆತಂಕವೇಕೆ..?
ನಮಗೆ ನಮ್ಮ ಶಾಸಕರು ಹೋಗುತ್ತಾರೆ ಎನ್ನುವ ಆತಂಕವಿಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಅಸ್ಥಿರಗೊಳಿಸಲು ಪ್ರಯತ್ನಿಸುವುದೇ ಅಪರಾಧ. ಏನಾದರೂ ಲೋಪವಾಗಿದ್ದರೆ, ತಪ್ಪಾಗಿದ್ದರೆ ಅದರ ವಿರುದ್ಧ ಹೋರಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಯಾರೋ ಒಬ್ಬ ಸಚಿವ, ಶಾಸಕ ಮಾಡಿದ ತಪ್ಪಿಗೆ ಮುಖ್ಯಮಂತ್ರಿ ರಾಜೀನಾಮೆ ಕೇಳುವುದು ಎಷ್ಟು ಸರಿ..? ಒಬ್ಬರು ಮಾಡಿರುವ ತಪ್ಪಿಗೆ ಇಡೀ ಸರಕಾರವನ್ನೇ ಉರುಳಿಸುತ್ತೇವೆ ಎನ್ನುವುದು ಎಷ್ಟು ಸರಿ? ಇದು ಪೂರ್ವಾಗ್ರಹ ಪೀಡಿತ ಎನಿಸುವುದಿಲ್ಲವೇ..? ಕೇಂದ್ರ ಸರಕಾರವನ್ನು ಬಳಸಿಕೊಂಡು ಸರಕಾರವನ್ನು ತೆಗೆಯಬೇಕು ಎಂದು ಯೋಚಿಸಿದರೂ ಅದು ಜನ ಹಾಗೂ ಜನತಂತ್ರಕ್ಕೆ ವಿರುದ್ಧದ ನಿಲುವು.
? ಮುಡಾ ಪ್ರಕರಣದಲ್ಲಿ ಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹಿಸುತ್ತಿದೆಯಲ್ಲ?
ರಾಜೀನಾಮೆ ಬಗ್ಗೆ ಮಾತನಾಡುವ ಮೊದಲು ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇನು ಎನ್ನುವುದನ್ನು ಯಾರೂ ಹೇಳುತ್ತಿಲ್ಲ. ಹಾಗೇ ನೋಡಿದರೆ, ಸಿದ್ದರಾಮಯ್ಯ ಪತ್ನಿಗೆ ನಿವೇಶನ ಹಂಚಿಕೆ ಯಾಗಿರುವುದು ಬಿಜೆಪಿಯ ಅವಧಿಯಲ್ಲಿ. ಸಿದ್ದರಾಮಯ್ಯ ಅವರು ನಿವೇಶನವನ್ನು ಕೋರಿ ಅರ್ಜಿ ಸಲ್ಲಿಸಿಲ್ಲ. ಆದರೂ ರಾಜೀನಾಮೆ ಕೇಳುತ್ತಿರುವುದು ಯಾವ ರೀತಿಯಲ್ಲಿ ಸರಿ? ಒಂದು ವೇಳೆ ನಿವೇಶನ ಹಂಚಿಕೆ ವಿಷಯದಲ್ಲಿ ತಪ್ಪಾಗಿದ್ದರೆ, ಅದು ಸಿದ್ದರಾಮಯ್ಯ ತಪ್ಪು ಹೇಗೆ ಆಗುತ್ತದೆ..? ತಪ್ಪಾಗುತ್ತಿದ್ದರೂ, ಅಧಿಕಾರಿಗಳು ಏಕೆ ಪರಿಶೀಲನೆ ನಡೆಸಿಲ್ಲ..? ಅರ್ಜಿ ಕೊಟ್ಟಿರುವುದು ತಪ್ಪಾಗಿದ್ದರೆ ಆಗಲೇ ತಿರಸ್ಕರಿಸಬೇಕಿತ್ತು. ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರವೇ ಇತ್ತು. ಬಿಜೆಪಿಯವರೇ ಮುಡಾ ಅಧ್ಯಕ್ಷರಾಗಿದ್ದರು. ಆಗ ಕ್ರಮವಹಿಸದೇ ಈ ಸಿದ್ದರಾಮ ಯ್ಯ ತಪ್ಪು ಎಂದರೆ ಒಪ್ಪಲು ಹೇಗೆ ಸಾಧ್ಯ? ಆದ್ದರಿಂದ ಈ ಎಲ್ಲವನ್ನು ಗಮನಿಸದರೆ, ಬಿಜೆಪಿ ಮತ್ತು ಜೆಡಿಎಸ್ನವರು ಮಾಡುತ್ತಿರುವ ಈ ಆರೋಪ ರಾಜಕೀಯ ಪ್ರೇರಿತ. ಸಿದ್ದರಾಮಯ್ಯ ಅವರನ್ನು ಅಸ್ಥಿರಗೊಳಿಸುವ ಮೂಲಕ ಸರಕಾರವನ್ನು ಅಸ್ಥಿರಗೊಳಿಸುವುದು ಅವರ ಲೆಕ್ಕಾಚಾರ ವಾಗಿದೆ.
? ನಿಜವಾಗಿಯೂ ಅಸ್ಥಿರಗೊಳಿಸಲು ಸಾಧ್ಯವೇ
ಸಿದ್ದರಾಮಯ್ಯ ಅವರನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಹೀಗಿರುವಾಗ ಸರಕಾರವನ್ನು ಅಸ್ಥಿರಗೊಳಿಸಲು ಹೇಗೆ ಸಾಧ್ಯ? ಬಿಜೆಪಿ, ಜೆಡಿಎಸ್ನವರು ಕಾನೂನಾತ್ಮಕವಾಗಿ ಮಾತನಾಡುವುದಿಲ್ಲ. ಮುಡಾಕ್ಕೂ ಮೊದಲು ವಾಲ್ಮೀಕಿ ಹಗರಣದ ಬಗ್ಗೆ ಮಾತನಾಡುತ್ತಾರೆ. ಪ್ರಕರಣದಲ್ಲಿ ಬ್ಯಾಂಕ್ ಸಿಬ್ಬಂದಿಯಿದ್ದಾರೆ. ಪ್ರಕರಣವನ್ನು ಎಸ್ಐಟಿ, ಇಡಿ ತನಿಖೆ ನಡೆಸುತ್ತಿದೆ. ಆದರೂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎನ್ನುತ್ತಿದ್ದಾರೆ. ಹಾಗಾದರೆ
ಬಿಜೆಪಿ ಸರಕಾರದ ಅವಧಿಯಲ್ಲಿ ಯಾವುದೇ ತಪ್ಪಾಗಿಲ್ಲವೇ? ದೇವರಾಜ ಅರಸು ಟರ್ಮಿನಲ್ ಪ್ರಕರಣದಲ್ಲಿ ಬೊಮ್ಮಾಯಿ, ವಾಲ್ಮೀಕಿ ನಿಗಮದಲ್ಲಿ
ಕೋಟಾ ಜೈಲಿಗೆ ಹೋಗಬೇಕಲ್ಲವೇ? ಎಲ್ಲದಕ್ಕೂ ಸಿಎಂ ಹೊಣೆ ಮಾಡಲು ಸಾಧ್ಯವಿಲ್ಲ. ರಾಜಕೀಯ ಪ್ರೇರಿತವಾಗಿ ಮಾಡುತ್ತಿರುವ ಈ ನಡೆ ದೇಶದ
ದೃಷ್ಟಿಯಿಂದ ಒಳ್ಳೆಯದಲ್ಲ.
? ಹಾಗಾದರೆ ಮುಂದಿನ ನಿಮ್ಮ ಹೋರಾಟ ಹೇಗಿರಲಿದೆ..?
ಬಿಜೆಪಿ-ಜೆಡಿಎಸ್ನವರು ಮಾಡುತ್ತಿರುವ ಪ್ರಯತ್ನಗಳೆಲ್ಲ ಉಪಯೋಗಕ್ಕೆ ಬರುವುದಿಲ್ಲ. ಅಶೋಕ್, ವಿಜಯೇಂದ್ರ, ಯತ್ನಾಳ್ ರೀತಿಯಲ್ಲಿ ನಾಲ್ಕು ಬಣಗಳಿವೆ. ಅವರ ತಟ್ಟೆಯಲ್ಲಿರುವ ಹೆಗ್ಗಣ ತೆಗೆಯುವುದು ಬಿಟ್ಟು, ಪಕ್ಕದ ತಟ್ಟೆಯಲ್ಲಿರುವ ಇಲಿಯ ಬಗ್ಗೆ ಚಿಂತಿಸುತ್ತಿದ್ದಾರೆ. ಜೆಡಿಎಸ್ಗೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಆದರೆ ನಮ್ಮಲ್ಲಿ ಆ ಪರಿಸ್ಥಿತಿಯಿಲ್ಲ. ದಲಿತರಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್, ಎಸ್.ಸಿ. ಮಹ
ದೇವಪ್ಪ, ಒಬಿಸಿಯಲ್ಲಿ ಸಿದ್ದರಾಮಯ್ಯ, ಒಕ್ಕಲಿಗರಲ್ಲಿ ಡಿ.ಕೆ.ಶಿವಕುಮಾರ್, ನಾನು ಸೇರಿದಂತೆ ಅನೇಕರಿದ್ದಾರೆ. ಲಿಂಗಾಯತರಲ್ಲಿ ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ ಸೇರಿದಂತೆ ಅನೇಕರಿದ್ದಾರೆ. ಆದ್ದರಿಂದ ಬಿಜೆಪಿ- ಜೆಡಿಎಸ್ ಹೋರಾಟಕ್ಕೆ ಹೆದರುವ ಅಗತ್ಯವಿಲ್ಲ.
? ಜೆಡಿಎಸ್ನೊಂದಿಗೆ ಕಾಂಗ್ರೆಸ್ ವಿಶ್ವಾಸ ಉಳಿಸಿಕೊಳ್ಳಲಿಲ್ಲವೇಕೆ..?
ಅದಕ್ಕೂ ಮೊದಲು ಜೆಡಿಎಸ್ನವರು ಯಾರೊಂದಿಗೂ ವಿಶ್ವಾಸ ಉಳಿಸಿಕೊಂಡಿದ್ದಾರೆ ಎನ್ನುವುದು ಹೇಳಿ. ಜನತಾದಳ ಇಬ್ಭಾಗವಾದ ಬಳಿಕ ದೇವೇ
ಗೌಡರ ಕುಟುಂಬ ನಡೆಸುತ್ತಿರುವ ಜೆಡಿಎಸ್ ಯಾರೊಂದಿಗೆ ವಿಶ್ವಾಸದಲ್ಲಿದೆ? ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ಅವರಿಂದ ಹಿಡಿದು ಇತ್ತೀಚಿನ ವರ್ಷದವರೆಗೆ ಯಾರೊಂದಿಗೂ ವರ್ಷಕ್ಕಿಂತ ಹೆಚ್ಚು ಕಾಲ ವಿಶ್ವಾಸವನ್ನು ಉಳಿಸಿಕೊಂಡಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ೧೮ ಪಕ್ಷಗಳ ಮೈತ್ರಿ ಸರಕಾರವನ್ನು ಐದು ವರ್ಷ ಪೂರೈಸಿದರು. ಆದರೆ ದೇವೇಗೌಡರು ಏಕೆ ೧೧ ತಿಂಗಳಿಗೆ ಪ್ರಧಾನ ಹುದ್ದೆ ಬಿಟ್ಟು ಬಂದರು. ವಿಶ್ವಾಸವನ್ನು ಉಳಿಸಿಕೊಳ್ಳುವುದೂ ಅವರ ಧರ್ಮವಲ್ಲವೇ? ದೇವೇಗೌಡರ ಕುಟುಂಬ ಆ ವಿಶ್ವಾಸಕ್ಕೆ ಪಡೆಯುವ ಕೆಲಸವನ್ನೇ ಮಾಡುವುದಿಲ್ಲ. ಕೇವಲ ಕಾಂಗ್ರೆಸ್ ನೊಂದಿಗೆ ಕಿತ್ತಾಡಿ ಕೊಂಡು ಬಂದಿದ್ದರೆ, ಅದನ್ನು ಒಪ್ಪಬಹುದಾಗಿತ್ತು. ಆದರೆ ಅವರು ಯಾರೊಂದಿಗೆ ಹೋದರೂ ವರ್ಷದಲ್ಲಿ ಈ ರೀತಿ ಹೊರಬರುತ್ತಾ ರಲ್ಲವೇ?
? ನೀವು ಗೌಡರ ಕುಟುಂಬದಿಂದ ದೂರಾಗಲು ಇದೇ ಕಾರಣವೇ?
ನನಗೆ ಈಗಲೂ ವೈಯಕ್ತಿಕವಾಗಿ ದೇವೇಗೌಡರ ಬಗ್ಗೆ ಈಗಲೂ ಪೂಜ್ಯಭಾವವಿದೆ. ಆದರೆ ಕುಮಾರಸ್ವಾಮಿ ಅವರೊಂದಿಗಿನ ಸ್ನೇಹ ಹೊಂದಾಣಿಕೆ ಯಾಗಲಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರದ ಸಮಯದಲ್ಲಿ ದೇವೇಗೌಡರು, ನನ್ನ ಮುಂದೆಯೇ ಕುಮಾರಸ್ವಾಮಿ ಅವರಿಗೆ ‘ಮುಖ್ಯಮಂತ್ರಿ ಯಾಗುವುದು ಬೇಡ’ ಎಂದರೂ ಅದನ್ನು ಕೇಳದೇ ಎಚ್ಡಿಕೆಗೆ ಬೆಂಬಲ ನೀಡಿದೆ. ಆದರೆ ೨೦ ತಿಂಗಳ ಬಳಿಕ ಅಽಕಾರವನ್ನು ಏಕೆ ಬಿಟ್ಟುಕೊಡಲಿಲ್ಲ? ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದಿದ್ದಾಗಲೇ ನಾನು ಹೊರಬೇಕು ಎಂದುಕೊಂಡಿದ್ದೆ. ಆದರೆ ಆಗಿರಲಿಲ್ಲ. ವಿಶ್ವಾಸ
ದ್ರೋಹ ಪದೇಪದೇ ನಡೆದಿದ್ದರಿಂದ ಹೊರಬರುವುದು ಅನಿವಾರ್ಯವಾಗಿತ್ತು.
? ಜೆಡಿಎಸ್ ನಾಯಕತ್ವ ಕುಸಿಯುತ್ತಿದೆಯೇ?
ಹೌದು, ದೇವೇಗೌಡರು, ಸಿದ್ದರಾಮಯ್ಯ ಅವರಿದ್ದಾಗ ಜೆಡಿಎಸ್ಗೆ ೫೮ ಸೀಟುಗಳು ಬಂದಿದ್ದವು. ಅದಾದ ಬಳಿಕ ಕಳೆದ ೨೦ ವರ್ಷದ ಅವಽಯಲ್ಲಿ ಒಮ್ಮೆಯೂ ೪೦ ಸೀಟುಗಳನ್ನು ಜೆಡಿಎಸ್ ದಾಟಿಲ್ಲ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ೨೦೧೮ರಲ್ಲಿ ೩೮ ಸೀಟು ಬಂದಿರುವುದು ಬಿಟ್ಟರೆ, ಇನ್ನುಳಿದ ಎಲ್ಲ ಚುನಾವಣೆ ಯಲ್ಲಿಯೂ ೨೦, ೩೦ ಸೀಟಿನ ಆಸುಪಾಸಿನಲ್ಲಿದೆ. ಆಂಧ್ರ ಪ್ರದೇಶದಲ್ಲಿ ರಾಜಶೇಖರ್ ರೆಡ್ಡಿ ಬಳಿಕ ಪುತ್ರ ಜಗನ್ ಸ್ವಂತಬಲದ ಮೇಲೆ ಅಧಿಕಾರವನ್ನು ರಚಿಸಿ ದರು. ತಮಿಳುನಾಡಿನಲ್ಲಿ ಕರುಣಾನಿಽ ಪುತ್ರ ಸ್ಟಾಲಿನ್ ಅಧಿಕಾರಕ್ಕೆ ಬಂದಿರುವ ಉದಾಹರಣೆಯಿದೆ. ಆದರೆ ದೇಶವನ್ನು ಆಳಿದ ದೇವೇಗೌಡರ ಪುತ್ರ ಕುಮಾರಸ್ವಾಮಿ ಮಾತ್ರ, ಸ್ವಂತಬಲದಲ್ಲಿ ಅಽಕಾರಕ್ಕೆ ಏಕೆ ಬಂದಿಲ್ಲ..? ಬರೀ ಚಲುವರಾಯಸ್ವಾಮಿ, ಸಿದ್ದರಾಮಯ್ಯ, ಡಿಕೆಶಿ
ಮೇಲೆ ಆರೋಪಿಸುವ ಬದಲು ತಾವು ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳಲಿ.
? ಎಚ್ಡಿಕೆಗೆ ಒಕ್ಕಲಿಗ ನಾಯಕತ್ವದ್ದೇ ಆತಂಕವೇ?
ಸದ್ಯ ಕುಮಾರಸ್ವಾಮಿಗೆ ಉಳಿದಿರುವುದೇ ಹಳೇ ಮೈಸೂರು ಭಾಗ. ಮಂಗಳೂರು, ಬೆಳಗಾವಿ, ಮಧ್ಯ ಕರ್ನಾಟಕ ಎಲ್ಲಿಯೇ ಹೋದರು ಸ್ಥಾನ ಗೆಲ್ಲಲು ಸಾಧ್ಯವಿಲ್ಲ. ಅದಕ್ಕೆ ಏನಾದರೂ ಮಾಡಿ ಒಕ್ಕಲಿಗರನ್ನು ಒಟ್ಟಿಗೆ ಇಟ್ಟುಕೊಳ್ಳಬೇಕು ಎಂದು ಹೋರಾಡುತ್ತಿದ್ದಾರೆ. ಆದರೆ ಒಕ್ಕಲಿಗ ಸಮುದಾಯಕ್ಕೆ ಕೇವಲ ದೇವೇಗೌಡರ ಕುಟುಂಬ ಮಾತ್ರ ಕೆಲಸ ಮಾಡುತ್ತಿಲ್ಲ. ಡಿ.ಕೆ.ಶಿವ ಕುಮಾರ್ ನೇತೃತ್ವದಲ್ಲಿ ನಾವೆಲ್ಲರೂ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಆದರೂ ಏಕೆ ಸಮು ದಾಯದ ಜನ ಈ ಮನಸ್ಥಿತಿಯಿಂದ ಹೊರ ಬಂದಿಲ್ಲ ಎನ್ನುವುದು ತಿಳಿಯುತ್ತಿಲ್ಲ.
? ಮುಡಾ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದಿದ್ದಾರಲ್ಲ..?
ಕುಮಾರಸ್ವಾಮಿ ಅವರು ಕಳೆದ ಎರಡು ದಶಕದ ಸಕ್ರಿಯ ರಾಜಕಾರಣದಲ್ಲಿ ಎಂದಾದರೂ ದಾಖಲೆ ಗಳನ್ನು ಬಿಡುಗಡೆ ಮಾಡಿದ್ದಾರೆಯೇ..? ಹಿಟ್
ಆಂಡ್ ರನ್ ಮಾಡಿಕೊಂಡೇ ಅವರು ಈವರೆಗೆ ರಾಜಕೀಯ ಮಾಡಿದ್ದಾರೆ. ಮುಡಾ ಹಗರಣದಲ್ಲಿ ಏನಿದೆ ಎಂದು ಹೇಳಲಿ ಅವರ ಬಳಿ ದಾಖಲೆಗಳಿದ್ದರೆ ಬಹಿರಂಗ ಪಡಿಸಬೇಡಿ ಎಂದರೆ ಅವರು ಸುಮ್ಮನೆ ಇರುವರೇ?
? ಕುಮಾರಸ್ವಾಮಿ ಕೇಸ್ ರಾಜಕೀಯ ಪ್ರೇರಿತ ಎನ್ನುತ್ತಿದ್ದಾರಲ್ಲ?
ಕುಮಾರಸ್ವಾಮಿ ಅವರ ಗಣಿ ಪ್ರಕರಣವನ್ನು ಲೋಕಾಯುಕ್ತ ತನಿಖೆ ನಡೆಸಿ ನೀಡಿರುವ ಪ್ರಕರಣವನಲ್ಲವೇ..? ಸಿದ್ದರಾಮಯ್ಯ ಅವರ ಪ್ರಕರಣದಲ್ಲಿ ಯಾರೋ ಖಾಸಗಿ ವ್ಯಕ್ತಿಗಳ ದೂರಿನ ಮೇರೆಗೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಾಗಿದೆ. ಆದರೆ ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ತನಿಖಾ ಸಂಸ್ಥೆಯೇ ತನಿಖೆ ನಡೆಸಿ, ಅಭಿಯೋಜನೆಗೆ ಅನುಮತಿ ಕೇಳಿದ್ದಾರೆ. ಅದನ್ನು ರಾಜಕೀಯ ಪ್ರೇರಿತ ಎನ್ನಲು ಹೇಗೆ ಸಾಧ್ಯ..? ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಕುಮಾರಸ್ವಾಮಿ ವಿರುದ್ಧ ವರ್ಷದಿಂದ ಪ್ರಾಸಿಕ್ಯೂಷನ್ಗೆ ಕೇಳಿದ್ದರೂ ಅನುಮತಿ ನೀಡಿಲ್ಲ. ಆದರೆ
ಸಿದ್ದರಾಮಯ್ಯ ಅವರ ಪ್ರಕರಣದಲ್ಲಿ ವಾರದಲ್ಲಿ ಅವಸರಕ್ಕೆ ಬಿದ್ದು ಅವಕಾಶ ನೀಡಿದ್ದು ಏಕೆ..? ಕಾನೂನು ಎಲ್ಲರಿಗೂ ಒಂದೇ ಅಲ್ಲವೇ?
*
ದೇವೇಗೌಡರ ಬಗ್ಗೆ ಸಮುದಾಯಕ್ಕೆ ಅಭಿಮಾನವಿದೆ. ಮುತ್ಸದ್ದಿ, ಮಾಜಿ ಪ್ರಧಾನಿ ದೇವೇಗೌಡರ ಬಲವಿದೆ. ಕುಮಾರಸ್ವಾಮಿ ಅವರ ಬಲ ಏನು ಎನ್ನುವುದು ದೇವೇಗೌಡರ ‘ಗೈರುಹಾಜರಿ’ಯಲ್ಲಿ ತಿಳಿಯುತ್ತದೆ. ಆದ್ದರಿಂದ ಈಗಲೇ ಈ ಬಗ್ಗೆ ಹೇಳಲಾಗುವುದಿಲ್ಲ.
-ಚಲುವರಾಯಸ್ವಾಮಿ, ಸಚಿವ
ಮೋದಿ ಪ್ರಧಾನಿಯಾಗಿ, ಅಮಿತ್ ಶಾ ಬಿಜೆಪಿಯ ಚುಕ್ಕಾಣಿ ಹಿಡಿದ ಬಳಿಕ ಪ್ರತಿಪಕ್ಷಗಳನ್ನು ಅಸ್ಥಿರಗೊಳಿಸುವುದೇ ಬಿಜೆಪಿಯ ಮೂಲ ಉದ್ದೇಶವಾಗಿದೆ ಎನಿಸುತ್ತಿದೆ. ಈ ಗುರಿ ಸಾಧಿಸುವುದಕ್ಕೆ ಸಿಬಿಐ, ಐಟಿ, ಇಡಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಪ್ರತಿಪಕ್ಷ ಹಾಗೂ ನಾಯಕರನ್ನು ಅಸ್ಥಿರ ಗೊಳಿಸುತ್ತಿದ್ದಾರೆ. ಇದರ ಮುಂದುವರಿದ ಭಾಗವೇ ಕರ್ನಾಟಕದಲ್ಲಿಯೂ ನಡೆಯುತ್ತಿದೆ.
– ಚಲುವರಾಯಸ್ವಾಮಿ ಕೃಷಿ ಸಚಿವ
? ದೇವೇಗೌಡರ ಕುಟುಂಬ ಯಾರೊಂದಿಗೂ ವಿಶ್ವಾಸ ಉಳಿಸಿಕೊಂಡಿಲ್ಲ
? ಸ್ವಂತ ಬಲದಲ್ಲಿ ಜೆಡಿಎಸ್, ಬಿಜೆಪಿ ಎಂದಿಗೂ ಅಧಿಕಾರಕ್ಕೆ ಬಂದಿಲ್ಲ
? ಕುಸಿಯುತ್ತಿರುವ ಜೆಡಿಎಸ್ ಹಿಡಿತ ಉಳಿಸಿಕೊಳ್ಳಲು ಎಚ್ಡಿಕೆ ಯತ್ನ
? ೧೮ ಸ್ಥಾನದೊಂದಿಗೆ ಪಿಎಂ, ೨೫ರಿಂದ ೩೮ ಸ್ಥಾನದೊಂದಿಗೆ ಸಿಎಂ ಆಗುವುದು ಜೆಡಿಎಸ್ ಇತಿಹಾಸ
**
? ಜೆಡಿಎಸ್, ಬಿಜೆಪಿ ಎಂದಾದರೂ ಸ್ವಂತಬಲದಲ್ಲಿ ಅಧಿಕಾರಕ್ಕೆ ಬಂದಿದೆಯೇ?
? ೧೮ ಸ್ಥಾನದೊಂದಿಗೆ ಪ್ರಧಾನಿಯಾದರೆ, ೨೫ರಿಂದ ೩೮ ಸ್ಥಾನದಲ್ಲಿಯೇ ಮುಖ್ಯಮಂತ್ರಿಯಾಗುವುದು ಜೆಡಿಎಸ್ ಇತಿಹಾಸ
? ಬಿಜೆಪಿ, ಜೆಡಿಎಸ್ನವರು ಅಧಿಕಾರ ಸಿಕ್ಕಾಗ ಎಂದಿಗೂ ಸರಿಯಾಗಿ ಆಡಳಿತ ಮಾಡಿಲ್ಲ.
? ಇನ್ನೊಬ್ಬರ ಮೇಲೆ ಅಧಿಕಾರಕ್ಕೆ ಬಂದಿರುವದು ದೊಡ್ಡದಲ್ಲ, ಸಿಂಗಲ್ ಮೆಜಾರಿಟಿ ಮೇಲೆ ಅಧಿಕಾರಕ್ಕೆ ಬರಲಿ.
? ಬಿಎಸ್ವೈ ನಿವೃತ್ತಿಯ ಅಂಚಿನಲ್ಲಿದ್ದಾರೆ. ಮಗನನ್ನು ಬೆಳೆಸುವುದು ತಪ್ಪಲ್ಲ, ಆದರೆ ಫಾಸ್ಟ್ ಮಾಡುವುದು ಒಳ್ಳೆಯದಲ್ಲ.
? ಬಿಜೆಪಿ-ಜೆಡಿಎಸ್ ಒಂದಾಗಿರೋದು ಸರಕಾರವನ್ನು ಅಸ್ಥಿರಗೊಳಿಸುವುದಕ್ಕೆ ಮಾತ್ರ
? ಕುಮಾರಸ್ವಾಮಿ ಅವರೊಂದಿಗೆ ಹಣಕಾಸು, ಅಧಿಕಾರ ಅಥವಾ ಇನ್ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ