ಮೂರು ದಿನವೂ ಕುಟುಂಬದ ಆಪ್ತರಂತೆ ವರ್ತಿಸಿದ ಬೊಮ್ಮಾಯಿ
ಅಹಿತಕರ ಘಟನೆ ನಡೆಯದಂತೆ ಅಪ್ಪು ಅಂತ್ಯಸಂಸ್ಕಾರದ ಹೊಣೆ
ವಿಶೇಷ ವರದಿ: ವೆಂಕಟೇಶ ಆರ್. ದಾಸ್ ಬೆಂಗಳೂರು
ಪುನೀತ್ ಸಾವಿಗೆ ಇಡೀ ಕರುನಾಡು ಮರುಗಿದ ಜತೆಗೆ ಅಂತಿಮ ದರ್ಶನದ ಸಂದರ್ಭದ ಹಿಂದಿನ ಕಹಿ ಘಟನೆಗಳ ಆತಂಕವೂ
ಕಾಡಿತ್ತು. ಆದರೆ, ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಜತೆಗೆ, ಒಬ್ಬ ಅಭಿಮಾನಿಯಾಗಿ ವರ್ತಿಸಿದ ಸಿಎಂ ಬಸವರಾಜ
ಬೊಮ್ಮಾಯಿ ತಮ್ಮ ಕಾಮನ್ ಮ್ಯಾನ್(ಸಿಎಂ) ಇಮೇಜ್ ಹೆಚ್ಚಿಸಿಕೊಂಡರು.
ಬೊಮ್ಮಾಯಿ ಅವರನ್ನು ಬಿಜೆಪಿ ಹೈಕಮಾಂಡ್ ಸಿಎಂ ಎಂದು ಘೋಷಣೆ ಮಾಡುತ್ತಿದ್ದಂತೆ ಅವರನ್ನು ಯಡಿಯೂರಪ್ಪ ಅವರ
ರಬ್ಬರ್ ಸ್ಟಾಂಪ್ ಎಂದು ಬಿಂಬಿಸಲಾಗುತ್ತಿತ್ತು. ಆದರೆ, ಬಿಎಸ್ವೈ ಮೇಲೆ ಗೌರವ ಇಟ್ಟುಕೊಂಡೇ ಹೈಕಮಾಂಡ್ನ ಮನ ಗೆಲ್ಲುವಲ್ಲಿ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ಅದರ ಜತೆಜತೆಗೆ ರಾಜ್ಯದ ಸಾಮಾನ್ಯ ಜನರ ಆಶೋತ್ತರಗಳಿಗೂ ಸ್ಪಂದಿಸುವ ಮೂಲಕ ತಾವು ಕಾಮನ್ ಮ್ಯಾನ್ (ಸಿಎಂ) ಎಂಬುದನ್ನು ಪದೇಪದೆ ಸಾಬೀತು ಮಾಡುತ್ತಿದ್ದಾರೆ. ಇದರ ಭಾಗವಾಗಿ ಪುನೀತ್ ಅಂತಿಮ ಸಂಸ್ಕಾರದ ಸಂದರ್ಭವನ್ನು ನಿಭಾಯಿಸಿದ್ದಾರೆ.
ಸಿಎಂ ಬಗ್ಗೆ ಶ್ಲಾಘನೆ: ಪುನೀತ್ ಸಾವಿನ ಸುದ್ದಿ ತಿಳಿದ ತಕ್ಷಣ ವಿಕ್ರಂ ಆಸ್ಪತ್ರೆಗೆ ಆಗಮಿ ಸಿದ ಸಿಎಂ ಬೊಮ್ಮಾಯಿ ಅವರು, ಅವರ ಸಾವನ್ನು ಘೋಷಣೆ ಮಾಡುವಲ್ಲಿ, ಅಲ್ಲಿಂದ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನ ಆಯೋಜಿಸುವಲ್ಲಿ, ಪುನೀತ್ ಪುತ್ರಿಯನ್ನು ವಿಶೇಷ ವಿಮಾನದಲ್ಲಿ ಕರೆಸಿಕೊಳ್ಳುವಲ್ಲಿ, ನಂತರ ಅಂತಿಮ ಸಂಸ್ಕಾರ ನಡೆಸುವ ಜಾಗ ನಿಗದಿ ಮಾಡುವುದು, ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯುವಲ್ಲಿವರೆಗಿನ ಬೊಮ್ಮಾಯಿ ಅವರ ನಡೆಯ ಬಗ್ಗೆ ಶ್ಲಾಘನೆ
ವ್ಯಕ್ತ ವಾಗಿದೆ.
ಸಿಎಂ ಕಳೆದ ಕೆಲವು ದಿನಗಳ ಹಿಂದೆಯೇ ಡಾ. ರಾಜ್ ಕುಮಾರ್ ಕುಟುಂಬದ ಬಗ್ಗೆ ತಮಗಿರುವ ಒಡನಾಟವನ್ನು ಸ್ಮರಿಸಿಕೊಂಡಿ ದ್ದರು. ವೈಯಕ್ತಿವಾಗಿ ರಾಜ್ ಕುಟುಂಬ ಮತ್ತು ಪುನೀತ್ ರಾಜ್ಕುಮಾರ್ ಬಗ್ಗೆ ಇರುವ ಅಭಿಮಾನದ ಬಗ್ಗೆ ತಾವು ಸಿಎಂ ಆದ ಹೊಸದರಲ್ಲಿಯೇ ಹಂಚಿಕೊಂಡಿದ್ದ ಅವರು, ಪುನೀತ್ ಅವರ ಸಾವಿನ ಸಂದರ್ಭದಲ್ಲಿ ಆ ಕುಟುಂಬದ ಆಪ್ತರೊಬ್ಬರ ರೀತಿ
ನಡೆದುಕೊಂಡರು.
ಸಾಯುವ ದಿನವೇ ಭೇಟಿ ಮಾಡಬೇಕಿತ್ತು: ಪುನೀತ್ ಸಾವನ್ನಪ್ಪುವ ದಿನವೇ ಸಿಎಂ ಬೊಮ್ಮಾಯಿ ಜತೆಗೆ ಭೇಟಿ ನಿಗದಿಯಾಗಿತ್ತು. ಸರಕಾರದ ಜಾಹೀರಾತೊಂದರಲ್ಲಿ ಅಭಿನಯಿಸಿದ್ದ ಪುನೀತ್, ಸ್ವಚ್ಛ ಭಾರತ ಅಭಿಯಾನದ ರಾಯಭಾರಿಯಾಗುವ ಬಗ್ಗೆಯೂ ಚರ್ಚೆ ನಡೆಯುತ್ತಿತ್ತು. ಈ ಎಲ್ಲ ಅಂಶಗಳ ಬಗ್ಗೆ ಚರ್ಚೆ ನಡೆಸಲು ಸಿಎಂ ಬೊಮ್ಮಾಯಿ ಅವರು ಪುನೀತ್ ಜತೆಗೆ ಉಪಚುನಾವಣೆ ಪ್ರಚಾರದಿಂದ ವಾಪಸ್ ಬರುತ್ತಿದ್ದಂತೆ ಮಾತನಾಡುವ ಭರವಸೆ ನೀಡಿದ್ದಾರೆ.
ಹೀಗಾಗಿ, ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ಸಿಎಂ, ಮಧ್ಯಾಹ್ನ ೩ ಗಂಟೆಗೆ ಪುನೀತ್ ಅವರ ಭೇಟಿಗೆ ಸಮಯ ನಿಗದಿ
ಮಾಡಿದ್ದರು. ಆದರೆ, ಅಂದು ೧೨.೩೦ರ ವೇಳೆಗಾಗಲೇ ಪುನೀತ್ ಮೃತಪಟ್ಟಿದ್ದರು. ಇದನ್ನು ಸ್ವತಃ ಸಿಎಂ ಕೂಡ ಸ್ಮರಿಸಿಕೊಂಡಿ ದ್ದಾರೆ.
ಮುತ್ತನ್ನಿಟ್ಟ ಬೊಮ್ಮಾಯಿ
ಅಂತಿಮ ಸಂಸ್ಕಾರದ ಇಡೀ ಪ್ರಕ್ರಿಯೆಗಳಲ್ಲಿ ಮೂರು ದಿನ ಸಕ್ರಿಯವಾಗಿ ಭಾಗವಹಿಸಿ, ಕುಟುಂಬದ ಸದಸ್ಯರಂತೆ ಇದ್ದ ಸಿಎಂ ಬೊಮ್ಮಾಯಿ ಅವರು, ತಮ್ಮ ಸರಕಾರಿ ವ್ಯವಸ್ಥೆಯನ್ನು ಒಂದೂ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವಂತೆ ಸಜ್ಜು ಗೊಳಿಸಿದ್ದರು.
ಜತೆಗೆ, ರಾಜ್ ಕುಟುಂಬದ ಜತೆಗೆ ವೈಯಕ್ತಿಕ ಬಾಂಧವ್ಯ ಹೊಂದಿದ್ದ ಅವರು, ಅಂತಿಮ ವಿಧಿ ವಿಧಾನ ನಡೆಸುವ ವೇಳೆ, ರಾಷ್ಟ್ರ ಧ್ವಜವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡುವ ವೇಳೆ ಕಣ್ಣೀರಿಟ್ಟು ಅಪ್ಪು ಹಣೆಗೆ ಹೂ ಮುತ್ತನಿಡುವ ಮೂಲಕ ತಮ್ಮ ಪ್ರೀತಿ ತೋರ್ಪಡಿಸಿದರು. ಅವರ ಈ ನಡೆಯನ್ನು ಅಪ್ಪು ಅಭಿಮಾನಿಗಳು ಮತ್ತು ರಾಜ್ಯದ ಜನತೆ ಮೆಚ್ಚಿಕೊಂಡಿದ್ದಾರೆ. ಸಿಎಂ ಅವರ ಈ ಫೋಟೋ ಮತ್ತು ಅವರ ನಡೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.