ಹೊವಪ್ಪ ಎಚ್. ಇಂಗಳಗೊಂದಿ ಬೆಂಗಳೂರು
ಯುಗಾದಿಗೆ ಏರಿದ್ದ ಬೆಲೆ ರಾಮನವಮಿಗೆ ಇಳಿಯಿತು!
ಹಣದುಬ್ಬರ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ನೆಮ್ಮದಿಯ ಸುದ್ದಿ ಇದಾಗಿದೆ. ವಿದೇಶಿ ಮಾರುಕಟ್ಟೆಯಿಂದ ಪೂರೈಕೆ ಹೆಚ್ಚಳ ದಿಂದಾಗಿ ಶೇಂಗಾ ಮತ್ತು ಸೋಯಾಬೀನ್, ಹತ್ತಿಬೀಜ, ಸಿಪಿಒ, ಪಾಮೊಲಿನ್ ತೈಲ ಬೆಲೆ ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದೆ.
ಖಾದ್ಯ ತೈಲ ತೀವ್ರ ಬೆಲೆ ಏರಿಕೆ ಚಿಂತಿಸುತ್ತಿದ್ದ ಗ್ರಾಹಕರಿಗೆ ಖುಷಿ ಸುದ್ದಿ ತಂದಿದೆ. ಬಡ ಗ್ರಾಹಕರು ಹೆಚ್ಚು ಬಳಸುವ ಪಾಮೋಲಿನ್ ಆಯಿಲ್ ಸಗಟು ಬೆಲೆ ೧ ಲೀ. ಪ್ಯಾಕೆಟ್ಗೆ ೨೦ ರು.ನಷ್ಟು ಇಳಿಕೆಯಾಗಿದೆ. ಈ ಹಿಂದೆ ಲೀ. ಗೆ ೧೬೨ ರು. ಇತ್ತು. ಈಗ ೧೪೨ ರು. ಗೆ ಇಳಿದಿದೆ. ೧೫ ಕೆಜಿ ಟಿನ್ ಗೆ ತಾಳೆ ಎಣ್ಣೆ ೨,೭೫೦ ರು. ಇದ್ದುದು ೨೪೯೦ ರು. ಗೆ ಇಳಿಕೆಯಾಗಿದೆ.
ಸಗಟು ದರ ಇಳಿಕೆ ಹಿನ್ನೆಲೆಯಲ್ಲಿ ಚೀಲ್ಲರೆ ಬೆಲೆಯಲ್ಲಿ ತಾಳೆ ಎಣ್ಣೆ ಲೀ. ಗೆ ಕನಿಷ್ಠ ೧೬-೧೮ ಇಳಿಕೆಯಾಗಬೇಕು ಎಂದು ಸಗಟು ಎಣ್ಣೆ ವ್ಯಾಪಾರಿಗಳ ಬೇಡಿಕೆಯಾಗಿದೆ. ಸೂರ್ಯಕಾಂತಿ ಎಣ್ಣೆ ದರ ಕೂಡಾ ಇಳಿಕೆಯಾಗಿದ್ದು, ಸಗಟು ಈ ಹಿಂದೆ ೧೦ ಲೀ. ಬಾP ಒಂದಕ್ಕೆ ೧,೯೦೦-೧,೯೫೦ ಇದ್ದುದು ೧,೭೯೦-೧,೮೦೦ ರು. ಗೆ ಇಳಿಕೆಯಾಗಿದೆ. ಅಂದರೆ ಲೀ. ಗೆ ೧೦ ರು. ಇಳಿಕೆಯಾಗಿದೆ.
ಭಾರತವು ಮಾರ್ಚ್ನಲ್ಲಿ ೨೧೦,೦೦೦ ಟನ್ ಗಳಷ್ಟು ಸೂರ್ಯಕಾಂತಿ ಎಣ್ಣೆ ಆಮದು ಮಾಡಿಕೊಂಡಿದೆ. ಯುದ್ಧದ ಮೊದಲು ಉಕ್ರೇನ್ ನಿಂದ ಹೊರಟ ಕೆಲವು ಹಡಗುಗಳ ಆಗಮನದಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆ ಬೆಲೆ ಇಳಿಕೆಗೆ
ಕಾರಣ ವಾಗಿದೆ. ಭಾರತವು ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ತಾಳೆ ಎಣ್ಣೆ ಹಾಗೂ ಅರ್ಜೆಂಟೀನಾ ಮತ್ತು ಬ್ರೆಜಿಲ್ನಿಂದ ಸೋಯಾ ಆಯಿಲ್ ಖರೀದಿಸುತ್ತದೆ.
ತೈಲ ಪೂರೈಕೆ ಸ್ಥಗಿತ
ಏಪ್ರಿಲ್ನಲ್ಲಿಯೂ ತಾಳೆ ಎಣ್ಣೆ ಆಮದು ದೃಢವಾಗಿ ಉಳಿಯಲಿದೆ, ಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಸೂರ್ಯ ಕಾಂತಿ ಎಣ್ಣೆ ಆಮದು ಕುಸಿಯುವ ನಿರೀಕ್ಷೆಯಿದೆ ಎಂದು ವ್ಯಾಪಾರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೋವಿಂದಭಾಯ್ ಪಟೇಲ್ ಹೇಳಿದ್ದಾರೆ. ಭಾರತ ಆಮದು ಮಾಡಿಕೊಳ್ಳುವ ಸೂರ್ಯಕಾಂತಿ ಎಣ್ಣೆಯ ಶೇ. ೯೦ಕ್ಕಿಂತ ಹೆಚ್ಚು ಸಾಮಾನ್ಯವಾಗಿ ಉಕ್ರೇನ್ ಮತ್ತು ರಷ್ಯಾದಿಂದ ಬರುತ್ತದೆ. ಈಗ ಉಕ್ರೇನಿಯನ್ ಸೂರ್ಯಕಾಂತಿ ತೈಲ ಪೂರೈಕೆ ಸ್ಥಗಿತ ಗೊಂಡಿದ್ದು, ಭಾರತೀಯ ಸಂಸ್ಕರಣಾ ಗಾರಗಳು ರಷ್ಯಾ ಮತ್ತು ಅರ್ಜೆಂಟೀನಾ ದಿಂದ ಹೆಚ್ಚಿನ ತೈಲ ಆಮದು ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಅಂತಾ ರಾಷ್ಟ್ರೀಯ ತೈಲ ವಹಿವಾಟುದಾರರ ಅಭಿಪ್ರಾಯವಾಗಿದೆ.
ಉಕ್ರೇನ್ ಅನುಪಸ್ಥಿತಿಯಲ್ಲಿ ನಾವು ತಿಂಗಳಿಗೆ ೧,೦೦,೦೦೦ ಟನ್ಗಳಿಗಿಂತ ಹೆಚ್ಚು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ೨,೦೦,೦೦೦ ಟನ್ಗಳಿಗೆ ಬೇಡಿಕೆಯಿದೆ ಎಂದು ಹೇಳಲಾಗುತ್ತಿದೆ. ಉಕ್ರೇನ್ ಸೂರ್ಯಕಾಂತಿ ತೈಲ ಪೂರೈಕೆ ನಿಲ್ಲಿಸಿದ ಕಾರಣ ಸ್ಥಳೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಗಳು ಏರಿಕೆಯಾಗಿರುವುದರಿಂದ ಏಪ್ರಿಲ್ನಲ್ಲಿ ಸಾಗಣೆಗೆ ೪೫,೦೦೦ ಟನ್ ರಷ್ಯಾದ ಸೂರ್ಯಕಾಂತಿ ಎಣ್ಣೆಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿದೆ.
***
ಮಲೇಷಿಯಾ, ಇಂಡೋನೇಷಿಯಾದಿಂದ ಪಾಮ್ ಆಯಿಲ್ ಪೂರೈಕೆ ಹೆಚ್ಚಿದೆ. ಯುದ್ಧದ ಮೊದಲು ಬುಕ್ ಮಾಡಿದ ಸೂರ್ಯ ಕಾಂತಿ ಎಣ್ಣೆ ಈಗ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆ ಬೆಲೆ ಇಳಿಕೆಗೆ ಕಾರಣವಾಗಿದೆ.
– ಡಿ.ಎಸ್. ಗೋವಿಂದರಾಜ್
ಅಡುಗೆ ಎಣ್ಣೆ ಪೂರೈಕೆದಾರರು
ಅಡುಗೆ ಎಣ್ಣೆ ಬೆಲೆ ಇಳಿಕೆ ಗ್ರಾಹಕರಿಗೆ ಖುಷಿ ತಂದಿದೆ. ಈ ಹಿಂದೆ ಬೆಲೆ ಏರಿಕೆಯಿಂದ ವ್ಯಾಪಾರ ಕುಸಿದಿತ್ತು. ಈಗ ಸ್ವಲ್ಪ ಚೇತರಿಕೆಯಾಗುತ್ತಿದೆ.
– ತ್ರಿಲೋಕ್ ಚಂದ್ರ ಚಿಲ್ಲರೆ
ಖಾದ್ಯ ತೈಲ ವ್ಯಾಪಾರಿ