ವಿಶೇಷ ವರದಿ: ಸುಷ್ಮಾ ಸಿ. ಚಿಕ್ಕಕಡಲೂರು ಬೆಂಗಳೂರು
ಕರೋನಾ ಲಕ್ಷಣಗಳನ್ನೇ ಹೊಂದಿದ್ದರೂ ಪಾಸಿಟಿವ್ ಬರುತ್ತಿಲ್ಲ
ವಾಯುಮಾಲಿನ್ಯದಿಂದ ಅಸ್ತಮವಾಗಿ ರೂಪಾಂತg
ರಾಜ್ಯದಲ್ಲಿ ಕರೋನಾ ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖ ಆಗುತ್ತಿವೆಯಾದರೂ, ಸೋಂಕು ಲಕ್ಷಣ ಹೊಂದಿರುವ ಶೀತ ಜ್ವರ (ಐಎಲ್ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆ(ಸಾರಿ) ಕಡಿಮೆಯಾಗಿಲ್ಲ.
ಮೇ ಯಿಂದ ಈವರೆಗೂ 35 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಕರೋನಾ ಎರಡನೇ ಅಲೆ ನಂತರದಲ್ಲಿ ಐಎಲ್ಐ ಮತ್ತು ಸಾರಿ ಪ್ರಕರಣಗಳಿಂದ ಬಳಲಿದವರಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಪೋರ್ಟ್ಲ್ ಮತ್ತು ಪಬ್ಲಿಕ್ ಹೆಲ್ತ್ ಆಕ್ಟಿವಿಟಿಸ್ ಸರ್ವಿಲೆನ್ಸ್ ಆಂಡ್ ಟ್ರ್ಯಾಕಿಂಗ್ (ಫಿಎಚ್ಎಎಸ್ಟಿ) ಯುವ ವಯೋಮಾನದವರಲ್ಲಿ ಹೆಚ್ಚು ಪ್ರಕರಣ ವರದಿಯಾಗಿವೆ.
ಕರೋನಾ ಮಾರ್ಗಸೂಚಿಯನ್ನು ಸಡಿಲ ಮಾಡಿರುವುದು ಹಾಗೂ ವಾತಾವರಣದ ಬದಲಾವಣೆಯಿಂದ ನಗರದಲ್ಲಿ ಅಸ್ತಮಾ (ಅಕ್ಯೂಟ್ ಬ್ರಾಂಕಟಿಸ್)ಪ್ರಕರಣಗಳ ಸಂಖ್ಯೆ ಯೂ ಹೆಚ್ಚಾಗಿದೆ. ಶ್ವಾಸಕೋಶದ ಕೆಳ ನಾಳಗಳಲ್ಲಿ ಕಂಡು ಬರುವ ಸೋಂಕು ಅಕ್ಯೂಟ್ ಬ್ರಾಂಕಟಿಸ್ (ಅಸ್ತಮಾ ) ಆಗಿ ಪರಿವರ್ತನೆಯಾಗಲಿದೆ. ಗಾಳಿ ಸಂಚರಿಸುವ ದೊಡ್ಡ ನಾಳಗಳಿಗೆ ಇದರಿಂದ ಹಾನಿ ಯಾಗುತ್ತದೆ. ಆದರೆ, ನ್ಯೂಮೊನಿಯಾದ ಚಹರೆ ಕಾಣಿಸುವು ದಿಲ್ಲ. ಸಾಮಾನ್ಯವಾಗಿ ವೈರಸ್ ಗಳಿಂದ ಈ ಸೋಂಕು ಕಾಣಿಸಿ ಕೊಳ್ಳುತ್ತದೆ, ಆದರೆ, ಅಪರೂಪಕ್ಕೊಮ್ಮೆ ಬ್ಯಾಕ್ಟೀರಿಯಾಗಳಿಂದಲೂ ಸೋಂಕು ಬರುತ್ತದೆ.
ಆಸ್ಪತ್ರೆಗಳು ವರದಿ ಮಾಡುತ್ತಿಲ್ಲ
ಕಳೆದ ವರ್ಷ ಏಪ್ರಿಲ್ನಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೆಪಿಎಂಇ ಕಾಯಿದೆ 2007ರ ಅಡಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಜ್ವರ ಚಿಕಿತ್ಸಾಲಯ ಸ್ಥಾಪಿಸಿ ಐಎಲ್ಐ ಮತ್ತು ಸಾರಿ ಪ್ರಕರಣಗಳನ್ನು ವರದಿ ಮಾಡುವಂತೆ ಸೂಚಿಸಿತ್ತು. ಅದೇ ರೀತಿ ಎಲ್ಲ ಖಾಸಗಿ ಆಸ್ಪತ್ರೆಗಳಿಗೂ ಕೆಪಿಎಂಇ ಪೋರ್ಟ್ಲ್ನಲ್ಲಿ ಐಎಲ್ಐ ಮತ್ತು ಸಾರಿ ಪ್ರಕರಣಗಳನ್ನು ನಮೂದಿಸಲು ಸೂಚಿಸಲಾಗಿತ್ತು. ಆದಾಗಿಯೂ ಎಲ್ಲ ಆಸ್ಪತ್ರೆಗಳು ಈ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ವರದಿ ಮಾಡುತ್ತಿಲ್ಲ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಮಾರ್ಗಸೂಚಿಯಡಿ ಚಿಕಿತ್ಸೆ
ಕಳೆದ ಆರು ತಿಂಗಳಲ್ಲಿ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಐಎಲ್ಐ ಮತ್ತು ಸಾರಿ ಪ್ರಕರಣಗಳು ವರದಿಯಾಗಿರಬಹುದು ಎಂದು ಒಪ್ಪಿಕೊಂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು. ನಗರದಲ್ಲಿ ವರದಿಯಾಗಿರುವ 35255 ಪ್ರಕರಣಗಳಲ್ಲಿ ಎಲ್ಲವೂ ಕರೋನಾ ಆಗಿಲ್ಲ. ಇವುಗಳಲ್ಲಿ 9579 ಪ್ರಕರಣಗಳನ್ನು ಶಂಕಿತ ಕರೋನಾ ಎಂದು ಗುರುತಿಸಿ ಕರೋನಾ ಮಾರ್ಗಸೂಚಿಯಡಿ ಚಿಕಿತ್ಸೆ ನೀಡಲಾಗಿದೆ. ಕರೋನಾ ಸೋಂಕು ಪ್ರಕರಣಗಳು ಕ್ಷೀಣಿಸುತ್ತಿದ್ದರೂ, ಐಎಲ್ಐ ಮತ್ತು ಸಾರಿ ಪ್ರಕರಣಗಳನ್ನು ದಾಖಲಿ ಸುವುದನ್ನು ಮುಂದುವರೆಸಲಾಗುವುದು ಎಂದು ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ.
***
ಶೀತ, ನೆಗಡಿ, ಕಫದಿಂದ ಕೂಡಿದ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆ ಈ ಕಾಯಿಲೆಯಲ್ಲಿ ಕಂಡುಬರುತ್ತವೆ. ಸೂಕ್ತ ಕಾಲದಲ್ಲಿ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಆಕ್ಸಿಜನ್ ಸ್ಯಾಚುರೇಶನ್ ಪ್ರಮಾಣ ಕಡಿಮೆಯಾಗಬಹುದು. ಕರೋನಾ ಪಿಡುಗಿನ ಆತಂಕದ ಹಿನ್ನೆಲೆಯಲ್ಲಿ ಇಂಥ ಲಕ್ಷಣಗಳನ್ನು ಜನರು ಕರೋನಾ ಎಂದು ಭಾವಿಸುವುದು ಸಹಜ. ನಗರದಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಲರ್ಜಿಯಿಂದಾಗಿ ಹಲವರಲ್ಲಿ ಅಸ್ತಮಾ ಕಾಣಿಸಿಕೊಳ್ಳುವುದು ಸಾಮಾನ್ಯ ವಾಗುತ್ತಿದೆ.
– ಡಾ. ವಸುನೇತ್ರ ವಿಕ್ರಮ್ ಆಸ್ಪತ್ರೆ ವೈದ್ಯೆ