ಪೊಲೀಸ್ ಬಂದೋಬಸ್ತಿನಲ್ಲಿ ಡಿಎಪಿ ದಾಸ್ತಾನು ವಿತರಣೆ
ಉತ್ತಮ ಮಳೆಯಿಂದ ಗೊಬ್ಬರಕ್ಕೆ ಹೆಚ್ಚಿದ ಬೇಡಿಕೆ
ವಿಶೇಷ ವರದಿ: ಮುನಿರಾಜು ಎಂ. ಅರಿಕೆರೆ ಚಿಕ್ಕಬಳ್ಳಾಪುರ
ಕಳೆದ ಎರಡು ತಿಂಗಳಿಂದಲೂ ಜಿಲ್ಲೆಯಲ್ಲಿ ಡಿಎಪಿ ರಸಗೊಬ್ಬರ ದೊರೆಯದೆ ರೈತಾಪಿವರ್ಗ ಪರದಾಟ ಮಾಡುತ್ತಿದ್ದರೂ ಕೂಡ ಜಿಲ್ಲಾಡಳಿತವಾಗಲಿ, ಕೃಷಿ ಇಲಾಖೆಯಾಗಲಿ ಸೂಕ್ತ ಕ್ರಮ ವಹಿಸದ ಹಿನ್ನೆಲೆಯಲ್ಲಿ ದೊಡ್ಡ ಮರಳಿ ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ರೈತರು ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.
ಏನಿದು ಸಮಸ್ಯೆ: ಜಿಲ್ಲೆಯಲ್ಲಿ ಸಾವಿರಾರು ಎಕರೆಯಲ್ಲಿ ತೋಟಗಾರಿಕೆ, ಕೃಷಿ ಚಟವಟಿಕೆಗಳು ನಡೆಯುತ್ತಿರುವುದು ಜಿಲ್ಲಾ ಡಳಿತಕ್ಕೆ ಗೊತ್ತಿಲ್ಲದ ಸಂಗತಿ ಯೇನಲ್ಲ. ಇಲ್ಲಿ ರೈತಾಪಿವರ್ಗ ಆಧುನಿಕ ಬೇಸಾಯ ಪದ್ಧತಿಯಲ್ಲಿ ತಮ್ಮ ಜೀವನವನ್ನು ಕಟ್ಟಿ ಕೊಂಡಿರುವುದರಿಂದ ರಸಗೊಬ್ಬರದ ಮೇಲೆಯೇ ಆಧಾರ ಪಟ್ಟಿದ್ದಾರೆ. ಮೇಲಾಗಿ ಈ ಬಾರಿ ಮುಂಗಾರಿನ ಪ್ರಾರಂಭದಿಂದಲೂ ಉತ್ತಮವಾಗಿ ಮಳೆಯಾಗಿದ್ದರಿಂದ ರಸಗೊಬ್ಬರಕ್ಕೆ ಹಾಹಾಕಾರ ಎದುರಾಗುತ್ತಲೇ ಇದೆ.
ಇದು ಹಿಂಗಾರಿನಲ್ಲಿಯೂ ಮುಂದುವರಿದಿದ್ದು ರೈತರಿಂದ ಆಗಾಗ ಪ್ರತಿಭಟನೆಗಳು ನಡೆಯುತ್ತಿವೆ. ಇದಕ್ಕೆ ಬ್ರೇಕ್ ಹಾಕಬೇಕಾದ ಇಲಾಖೆಗಳು ಮಾತ್ರ ಯಾವುದೇ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲವೆಂಬಂತೆ ಹೇಳುತ್ತಲೇ ಬಂದಿವೆ.
ಅಧಿಕಾರಿಗಳೇ ಹೊಣೆ: ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆಯಿಲ್ಲವೆಂದು ಹೇಳುವ ಕೃಷಿ ಅಧಿಕಾರಿಗಳು ದಾಸ್ತಾನು ಇರುವ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸದೆ, ಇರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇದಕ್ಕೆ ತಕ್ಕಂತೆ ರಸಗೊಬ್ಬರಗಳ ಮಾಲಿಕರು ಸಹ ದಾಸ್ತಾನು ಇಲ್ಲವೆಂದು ಹೇಳುವ ಮೂಲಕ ಕೃತಕ ಅಭಾವವನ್ನು ಸೃಷ್ಟಿ ಮಾಡಿ ರೈತರಿಂದ ದುಬಾರಿ ಹಣವನ್ನು
ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ರೈತಾಪಿ ವರ್ಗದಿಂದ ಕೇಳಿಬರುತ್ತಿವೆ. ಹೀಗಾಗಿ ಆಯಾ ತಾಲೂಕಿನ ಕೃಷಿ ಅಧಿಕಾರಿಗಳು ಕಾಲಕಾಲಕ್ಕೆ ರಸಗೊಬ್ಬರ ಅಂಗಡಿಗಳ ಮೇಲೆ ದಾಳಿ ವಸ್ತುಸ್ಥಿತಿ ಅರಿಯುವ ಕೆಲಸ ಮಾಡಿದಾಗ ಮಾತ್ರವೇ ಕೃತಕ ಅಭಾವ ತಪ್ಪಿಸಿ ರೈತರಿಗೆ ನೆರವಾಗಬಹುದು.
ಪೊಲೀಸರ ಆಗಮನ: ತಾಲೂಕಿನ ದೊಡ್ಡಮರಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ೧೩ ಟನ್ ರಸಗೊಬ್ಬರ ದಾಸ್ತಾನು ಇರುವ ಮಾಹಿತಿ ಪಡೆದ ರೈತರು ನಾ ಮುಂದು ತಾ ಮುಂದು ಎಂಬಂತೆ ಗೊಬ್ಬರ ಪಡೆಯಲು ಮುಂದಾದರು. ಈ ವೇಳೆ ನೂಕುನುಗ್ಗುಲು ಶುರುವಾದ ಹಿನ್ನೆಲೆಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂಎಫ್ಸಿ ನಾರಾಯಣಸ್ವಾಮಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಜಿಲ್ಲೆಯ ಮೂಲ ಮೂಲೆಯಿಂದ ರೈತರು ದೊಡ್ಡಮರಳಿ ಗ್ರಾಮಕ್ಕೆ ದೌಡಾಯಿಸಿದ್ದರಿಂದ ನೂಕು ನುಗ್ಗಲು ಉಂಟಾಗಿತ್ತು. ಸ್ಥಳಕ್ಕೆ ಧಾವಿಸಿದ ನಂದಿಗಿರಿಧಾಮ ಪೊಲೀಸರು ಉದ್ರಿಕ್ತ ಗುಂಪನ್ನು ಚದುರಸಿ ಸರತಿಯಲ್ಲಿ ನಿಲ್ಲಿಸುವ ಮೂಲಕ ತಲೆಗೆ ಒಂದು ಮೂಟೆಯಂತೆ ವಿತರಣೆಗೆ ವ್ಯವಸ್ಥೆ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
***
ರಸಗೊಬ್ಬರ ಪೂರೈಕೆ ವಿಚಾರದಲ್ಲಿ ಮುಂಗಾರಿನಲ್ಲಿ ಜಿಲ್ಲೆಗೆ ಎಷ್ಟು ವಿತರಣೆಯಾಗ ಬೇಕಿತ್ತೋ ಅದು ಆಗಿದೆ. ಹಿಂಗಾರು ಹಂಗಾಮಿನಲ್ಲಿಯೂ ಕೂಡ ಪ್ರತಿ ತಿಂಗಳು ಬರ ಬೇಕಿದ್ದ ಯೂರಿಯಾ, ಕಾಂಪ್ಲೆಕ್ಸ್, ಡಿಎಪಿ ಮಾಹೆವಾರು ಪೂರೈಕೆಯಾಗಿದೆ. ರೈತರು ಆತಂಕಕ್ಕೆ ಒಳಗಾಗುವುದು ಬೇಡ.
– ಎಲ್. ರೂಪ, ಜಂಟಿ ಕೃಷಿ ನಿರ್ದೇಶಕರು
ಜಿಲ್ಲೆಯಲ್ಲಿ ರೈತರು ರಸಗೊಬ್ಬರಕ್ಕೆ ತೀವ್ರ ಪರದಾಟ ನಡೆಸುತ್ತಿದ್ದರೂ ಕೂಡ ಜಿಲ್ಲಾಡ ಳಿತಕ್ಕೆ ಆಗಲಿ, ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಆಗಲಿ ಗಮನವೇ ಇಲ್ಲವಾಗಿದೆ. ಅಧಿಕಾರಿ ಗಳು ಸುಳ್ಳು ಹೇಳುತ್ತಿದ್ದಾರೆ. ಒಂದು ಮೂಟೆ ಯೂರಿಯಾ ಪಡೆಯ ಬೇಕಾದರೆ ಒಂದು ದಿನಪೂರ್ತಿ ಕಳೆದರೂ ಪಡೆಯಲು ಆಗುವುದಿಲ್ಲ.
– ಮುನಿರೆಡ್ಡಿ ಮುದುಗಿರ್ಕಿ ರೈತ