ಹಸಿರು ಪಟಾಕಿಗಷ್ಟೇ ಅನುಮತಿ ನೀಡಲು ತೀರ್ಮಾನ
ಕರೋನಾ, ವಾಯುಮಾಲಿನ್ಯ ಹಿನ್ನೆಲೆಯಲ್ಲಿ ನಿರ್ಬಂಧ
ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು
ಕಳೆದ ವರ್ಷ ಕರೋನಾ ಕಾರಣದಿಂದ ಪಟಾಕಿ ನಿಷೇಧ ಮಾಡಿದ್ದ ರಾಜ್ಯ ಸರಕಾರ, ಈ ವರ್ಷದ ದೀಪಾವಳಿಯನ್ನು ಪಟಾಕಿ ಸದ್ದಿಲ್ಲದೆ ಆಚರಿಸುವಂತೆ ಮಾಡಲು ಸದ್ದಿಲ್ಲದೆ ಪ್ರಯತ್ನ ನಡೆಸಿದೆ.
ದೀಪಾವಳಿ ಸಂದರ್ಭದಲ್ಲಿ ಭಾರಿ ಪ್ರಮಾಣದ ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ ಉಂಟಾಗುವ ಜತೆಗೆ, ಶಬ್ದ ಮಾಲಿನ್ಯವೂ ಜಾಸ್ತಿ ಯಾಗುತ್ತದೆ. ಈಗಾಗಲೇ, ಕರೋನಾ ರೋಗಿಗಳಿಗೆ ಉಸಿರಾಟದ ತೊಂದರೆ ಪ್ರಮುಖ ಸಮಸ್ಯೆಯಾದ ಕಾರಣ ಪಟಾಕಿ ನಿಷೇಧದ ಕ್ರಮ ಸೂಕ್ತವಾದುದು. ಹೀಗಾಗಿ, ಹಿಂದಿನ ವರ್ಷದಂತೆಯೇ ಪಟಾಕಿ ನಿಷೇಧ ಮಾಡುವ ಮೂಲಕ ಮಾಲಿನ್ಯವನ್ನು ನಿಯಂತ್ರಣ ಮಾಡಬಹುದು ಎಂದು ತಜ್ಞರು ರಾಜ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.
ಆದ್ದರಿಂದ ಹಿಂದಿನ ವರ್ಷದ ತೀರ್ಮಾನವನ್ನೇ ಮುಂದುವರಿಸಲು ಸರಕಾರ ತೀರ್ಮಾನಿಸಿದ್ದು, ಕೆಲವೇ ದಿನ ಗಳಲ್ಲಿ ಪಟಾಕಿ ನಿಷೇಧವನ್ನು ಅಧಿಕೃತ ವಾಗಿ ಘೋಷಣೆ ಮಾಡಲಿದೆ. ನಗರದಲ್ಲಿಯೇ ಪ್ರತಿ ವರ್ಷ ಲಕ್ಷಾಂತರ ರು.ಗಳ ಪಟಾಕಿ ವಹಿವಾಟು ನಡೆಯುತ್ತಿತ್ತು. ಕಳೆದ ವರ್ಷ ಶೇ.90ರಷ್ಟು ಪಟಾಕಿ ಮಾರಾಟ ಕಡಿಮೆಯಾಗಿದ್ದು, ಕೇವಲ ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರವೇ ಅವಕಾಶ ನೀಡಲಾಗಿತ್ತು. ತಮಿಳುನಾಡಿನ ಹೊಸೂರು ಮತ್ತು
ಶಿವಕಾಶಿಯಿಂದ ರಾಜ್ಯಕ್ಕೆ ಪಟಾಕಿ ರವಾನೆಯಾಗುತ್ತಿದ್ದು, ಅಲ್ಲಿನ ಸುಮಾರು ೮ ಲಕ್ಷ ಕಾರ್ಮಿಕರು ಪಟಾಕಿ ವ್ಯಾಪಾರವನ್ನೇ ಅವಲಂಬಿಸಿದ್ದಾರೆ.
ಹೀಗಾಗಿ, ಪಟಾಕಿ ಬ್ಯಾನ್ ಬೇಡ ಎಂಬ ಮಾತುಗಳು ಕೇಳಿಬಂದಿದ್ದವು. ಕೆಲವು ಸಂಘಟನೆಗಳು ಹಿಂದೂ ಹಬ್ಬಕ್ಕೆ ಮಾತ್ರವೇ ನಿಷೇಧದಂತಹ ಕ್ರಮಗಳೇಕೆ ಎಂಬ ಆಕ್ರೋಶವನ್ನು ವ್ಯಕ್ತಪಡಿಸಿದ್ದವು. ಇದರಿಂದಾಗಿ, ಹಸಿರು ಪಟಾಕಿಗೆ ಮಾತ್ರವೇ ಅವಕಾಶ ನೀಡಿ ಸರಕಾರ ಮರುಆದೇಶ ನೀಡಿತ್ತು. ಈ ವರ್ಷವೂ ಕೇವಲ ಹಸಿರು ಪಟಾಕಿಗೆ ಮಾತ್ರವೇ ಅವಕಾಶ ನೀಡಲು ತೀರ್ಮಾನಿಸಿದೆ.
ಅಪಾಯಕಾರಿ ಕೆಮಿಕಲ್ ಬಳಕೆ: ಪಟಾಕಿ ತಯಾರಿಕೆಯಲ್ಲಿ ಅಪಾಯಕಾರಿ ಕೆಮಿಕಲ್ಗಳ ಬಳಕೆ ಮಾಡಲಾಗುತ್ತದೆ. ಪಟಾಕಿ ಸಿಡಿತದಿಂದ ಶ್ವಾಸ ಕೋಶದ ತೊಂದರೆ, ಸಿಡಿತದಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಶಬ್ದಮಾಲಿನ್ಯ ಕಿವಿ ಕೇಳದಿರುವಿಕೆ, ಮಕ್ಕಳ ಹೃದಯದ ಮೇಲೆ ಪರಿಣಾಮ, ಸಾಕು ಪ್ರಾಣಿಗಳ ಹೃದಯಸ್ತಂಭನಕ್ಕೆ ಕಾರಣವಾಗುತ್ತದೆ. ಬಹುತೇಕ ಪಟಾಕಿಗಳನ್ನು ಜೋರಾಗಿ ಸಿಡಿಯುವುದು, ಬಣ್ಣ ಬಣ್ಣದಲ್ಲಿ ಸಿಡಿಯುವಂತೆ ಮಾಡುವು ದಕ್ಕೆ ಚೀನಾದ ನಿಷೇಧಿತ ರಾಸಾಯನಿಕವನ್ನು ಬಳಕೆ ಮಾಡಲಾಗುತ್ತದೆ. ಇದು ನೇರವಾಗಿ ಶ್ವಾಸಕೋಶದ ಸಮಸ್ಯೆಗೆ ದೂಡುತ್ತಿದೆ. ನಗರದಲ್ಲಿ ದಿನೇ ದಿನೆ ಶ್ವಾಸಕೋಶ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗಿದ್ದು, ಪಟಾಕಿ ಬಳಕೆಯಿಂದ ಇದು ಮತ್ತಷ್ಟು ಉಲ್ಬಣವಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಯಲ್ಲಿ ಪಟಾಕಿ ನಿಷೇಧದಂತಹ ಕ್ರಮ ಸ್ವಾಗತಾರ್ಹ ಎನ್ನುತ್ತಾರೆ ತಜ್ಞ ವೈದ್ಯರು.
ನಿಷೇಧಕ್ಕೆ ಸಿದ್ದತೆ
ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸರಕಾರ ಪಟಾಕಿ ಸಿಡಿಸುವುದನ್ನು ಬ್ಯಾನ್ ಮಾಡಿ ಹಸಿರು ಪಟಾಕಿಗಳಿಗೆ ಒಪ್ಪಿಗೆ ನೀಡಿತ್ತು. ಆದರೆ, ಈ ಬಾರಿ ಸರಕಾರ ಯಾವ ತಿರ್ಮಾನ ಕೈಗೊಳ್ಳಲಿದೆ ಎಂದು ಜನರು ಎದುರು ನೋಡುತ್ತಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಈ ಬಗ್ಗೆ
ಪ್ರತಿಕ್ರಿಯೆ ನೀಡಿದ್ದು, ದೀಪಾವಳಿ ಸಂಭ್ರಮದ ಹಬ್ಬ. ಕೋವಿಡ್ ಹಿನ್ನೆಲೆಯಲ್ಲಿ ಶಿಸ್ತುಬದ್ಧವಾಗಿ ಮಾಡಬೇಕಾಗುತ್ತದೆ. ಇದನ್ನು ಹೊರತುಪಡಿಸಿ
ಬೇರೆ ಮಾರ್ಗಸೂಚಿ ತಯಾರಿಸಲು ಪಾಲಿಕೆ ಮಟ್ಟದಲ್ಲಿ ಸಿದ್ಧವಿದ್ದೇವೆ.
ಆದರೆ, ಪ್ರತ್ಯೇಕ ನಿಯಮಗಳ ಬಗ್ಗೆ ಈಗಲೇ ಚಿಂತನೆ ನಡೆಸಿಲ್ಲ. ಜೋರು ಶಬ್ದ ಮಾಡುವ, ಹೊಗೆಯ ಮಾಲಿನ್ಯ ಮಾಡುವ ಪಟಾಕಿಗಳಿಗೆ ಎನ್ಜಿಟಿ
ಈಗಾಗಲೇ ಬ್ರೇಕ್ ಹಾಕಿದೆ. ಪಟಾಕಿ ಕುರಿತಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ನಿಯಮಗಳನ್ನು ಸರಕಾರ, ಬಿಬಿಎಂಪಿ ಪಾಲಿಸಬೇಕಾಗುತ್ತದೆ. ಹೀಗಾಗಿ ಬೇರೆ ಪಟಾಕಿಗಳ ಮಾರಾಟ ಖರೀದಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ ಎಂದಿದ್ದಾರೆ.
***
ಈಗಾಗಲೇ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ಜತೆಗೆ ಕೋವಿಡ್ ಸಾಂಕ್ರಾಮಿಕ ಹೆಚ್ಚಾಗಿದ್ದು, ಶ್ವಾಸಕೋಶ ತೊಂದರೆ ಹೆಚ್ಚಾಗುತ್ತಿದೆ. ದೀಪ ಬೆಳಗಿಸಿ ದೀಪಾವಳಿ ಆಚರಣೆ ಮಾಡಬೇಕು. ಎಣ್ಣೆಯಿಂದ ದೀಪ ಹಚ್ಚುವುದರಿಂದ ಗಾಳಿಯ ಶುದ್ಧತೆ ಕಾಪಾಡಬಹುದು.
– ಡಾ. ಯಲ್ಲಪ್ಪ ರೆಡ್ಡಿ ಪರಿಸರವಾದಿ