ಏ.೧೬, ೧೭ರ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಬಳಿಕವೇ ಸಂಪುಟ ಪುನಾರಚನೆ ಸಾಧ್ಯತೆ
ಯಾರನ್ನು ಕೈಬಿಡಬಹುದು, ಸೇರಿಸಿಕೊಳ್ಳಬಹುದು ಎಂಬ ಮಾಹಿತಿ ಪಡೆದ ಅಮಿತ್ ಶಾ
ಹಿಂದುತ್ವದ ಆಧಾರದ ಮೇಲೆ ಚುನಾವಣೆ ತಂತ್ರಗಾರಿಕೆ ಸಿದ್ಧಪಡಿಸುವ ಟಾಸ್ಕ್
ಪ್ರದೀಪ್ ಕುಮಾರ್ ಎಂ.ಬೆಂಗಳೂರು
ಸಚಿವ ಸಂಪುಟ ಪುನಾಚರನೆ ಜತೆಗೆ ಮುಂಬರುವ ವಿಧಾನಸಭೆ ಚುನಾವಣೆಗೂ ಕಾರ್ಯತಂತ್ರಗಳನ್ನು ರೂಪಿಸಲು ಮುಂದಾ ಗಿರುವ ಬಿಜೆಪಿ ರಾಷ್ಟ್ರೀಯ ನಾಯಕರು ತಾವೇ ಸಂಪುಟ ಪುನಾರಚನೆ ಕುರಿತು ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ.
ಎರಡು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಕುರಿತಂತೆ ಕೋರ್ ಕಮಿಟಿ ಸದಸ್ಯರಿಂದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಸಂಪುಟಕ್ಕೆ ಯಾರನ್ನು ಸೇರಿಸಿಕೊಂಡರೆ ಏನು ಲಾಭವಾಗುತ್ತದೆ? ಯಾರನ್ನು ಕೈಬಿಟ್ಟರೆ ಹೆಚ್ಚು ನಷ್ಟ ವಾಗುವುದಿಲ್ಲ ಎಂಬ ಬಗ್ಗೆ ವಿವರಣೆ ಪಡೆದಿದ್ದಾರೆ.
ಇದರ ಜತೆಗೆ ಈಗಿರುವ ಹಿಂದುತ್ವದ ರಾಜಕಾರಣವನ್ನು ಮುಂದುವರಿಸಿಕೊಂಡು ಚುನಾವಣೆಗೆ ಹೇಗೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು ಎಂಬುದನ್ನು ಮುಖ್ಯ ಮಂತ್ರಿ ಸೇರಿದಂತೆ ಪಕ್ಷದ ರಾಜ್ಯ ಘಟಕ ಮತ್ತು ಹಿರಿಯ ನಾಯಕರು ಚರ್ಚಿಸಿ ಒಂದು ವಾರದಲ್ಲಿ ವರದಿ ಸಲ್ಲಿಸಬೇಕು ಎಂದೂ ಸೂಚನೆ ನೀಡಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ರಾಜ್ಯ ನಾಯಕರಿಗೆ ಹೊಸ ಟಾಸ್ಕ್ ಒಂದನ್ನು ನೀಡಿದ್ದಾರೆ.
ಮೂಲಗಳ ಪ್ರಕಾರ, ಕೋರ್ ಕಮಿಟಿಯಲ್ಲಿ ಸಂಗ್ರಹವಾದ ಅಭಿಪ್ರಾಯ ಆಧರಿಸಿ ಪಕ್ಷದ ದೆಹಲಿ ನಾಯಕರು ಮತ್ತು ರಾಜ್ಯದಿಂದ ರಾಷ್ಟ್ರೀಯ ಬಿಜೆಪಿಯ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಸಂಪುಟ ಪುನಾರಚನೆ ಕುರಿತ ಪಟ್ಟಿ ಸಿದ್ಧಗೊಳಿಸಲಿದ್ದಾರೆ. ಇದರ ಜತೆಗೆ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಘಟಕ ನೀಡುವ ವರದಿ ಆಧರಿಸಿ ಕಾರ್ಯತಂತ್ರವೊಂದನ್ನು
ಸಿದ್ಧಪಡಿಸಲಿದ್ದಾರೆ.
ಏ.16 ಮತ್ತು 17ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಆಗಮಿಸು ತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಮೂಲಕ ಪ್ರಕಟಿಸಲಿದ್ದಾರೆ. ನಂತರವೇ ಸಂಪುಟ ಪುನಾ ರಚನೆ ನಡೆಯ ಲಿದೆ. ಅದಕ್ಕೆ ಮುನ್ನ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ದೆಹಲಿಗೆ ಕರೆಸಿಕೊಂಡು ಜೆ.ಪಿ. ನಡ್ಡಾ ಮತ್ತು ಅಮಿತ್ ಶಾ ಮಾತುಕತೆ ನಡೆಸುವ ಸಾಧ್ಯತೆಯಿದೆ.
ಸಂಪುಟ ಪುನಾರಚನೆ ಸವಾಲು: ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ಪುನಾರಚನೆಯೇ ಬಿಜೆಪಿಗೆ ಸವಾಲಾಗಿದೆ. ಗುಜರಾತ್ನಲ್ಲಿ ಇತ್ತೀಚೆಗೆ ಸಂಪುಟ ಪುನಾಚರನೆ ಮಾಡಿ ಬಹುತೇಕ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆ ಮೂಲಕ ಆಡಳಿತ ವಿರೋಧಿ ಅಲೆ ಮೆಟ್ಟಿ ನಿಲ್ಲಲು ಬಿಜೆಪಿ ಕಾರ್ಯತಂತ್ರ ರೂಪಿಸಿತ್ತು. ಅದೇ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಲು ಸಾಧ್ಯವೇ ಅಥವಾ ಬೇರೆ ಏನಾದರೂ ತಂತ್ರಗಾರಿಕೆ ರೂಪಿಸಬೇಕೇ ಎಂಬ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರು, ಚಿಂತಕರ ಚಾವಡಿಯ ಮುಖ್ಯಸ್ಥರು, ಬಿಜೆಪಿ ರಾಷ್ಟ್ರೀಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ಪದೇ ಪದೆ ಆರೋಪಗಳನ್ನು ಮಾಡುತ್ತಿರುವ
ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ನೀಡಬಾರದು ಎಂದು ಅವರ ಬೆಂಬಲಿಗ ಶಾಸಕರು ಈಗಾಗಲೇ ಅಮಿತ್ ಶಾ ಮತ್ತು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಮುಂದೆ ಹಕ್ಕು ಮಂಡಿಸಿದ್ದಾರೆ. ಅದೇ ರೀತಿ ಕೆಲವು ಹಿರಿಯನ್ನು ಕೈಬಿಟ್ಟು, ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ಹೊಸ ಮುಖಗಳಿಗೆ ಅವಕಾಶ ನೀಡಬೇಕು.
ಕಾಂಗ್ರೆಸ್ನ ಸಿ.ಎಂ.ಇಬ್ರಾಹಿಂ ರಾಜೀನಾಮೆಯಿಂದ ತೆರವಾದ ಮೇಲ್ಮನೆ ಸದಸ್ಯತ್ವ ಸ್ಥಾನಕ್ಕೆ ವಿಜಯೇಂದ್ರ ಅವರನ್ನು ಆಯ್ಕೆ ಮಾಡಬೇಕು ಎಂದೂ ಆಗ್ರಹಿಸಿದ್ದಾರೆ. ಹೀಗಾಗಿ ಹಿರಿಯ ಸಚಿವರನ್ನು ಕೈಬಿಡಲು ಇರುವ ಕಾರಣಗಳು, ಮುಂದುವರಿಸಲು ಇರುವ ಅಂಶಗಳು, ಹೊಸಬರಲ್ಲಿ ಯಾರ್ಯಾರನ್ನು ಆಯ್ಕೆ ಮಾಡಿದರೆ ಚುನಾವಣೆಯಲ್ಲಿ ಏನು ಲಾಭವಾಗುತ್ತದೆ ಎಂಬಿತ್ಯಾದಿ ಮಾಹಿತಿ ಗಳನ್ನು ಅಮಿತ್ ಶಾ ಕೋರ್ ಕಮಿಟಿ ಸದಸ್ಯರಿಂದ ಪಡೆದಿದ್ದಾರೆ.
ಸಿಎಂ ಬದಲಾವಣೆ ಇಲ್ಲ
ಮುಖ್ಯಮಂತ್ರಿ ಬದಲಾವಣೆ ಊಹಾಪೋಹಗಳಿಗೆ ಅಮಿತ್ ಶಾ ತೆರೆ ಎಳೆದಿದ್ದಾರೆ. ಕಳೆದ ಒಂದೂವರೆ ದಶಕದಿಂದ ರಾಜ್ಯದಲ್ಲಿ ಬಿಜೆಪಿ ಗೆಲುವಿನ ಮೆಟ್ಟಿಲೇರಲು ಲಿಂಗಾಯತ ನಾಯಕತ್ವವೇ ಕಾರಣ. ಪ್ರಸ್ತುತ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣದಲ್ಲಿ ಸಕ್ರಿಯರಾಗಿದ್ದರೂ ಅಧಿಕಾರ ರಾಜಕಾರಣದಿಂದ ದೂರ ಇದ್ದಾರೆ. ಅವರ ಬದಲಾಗಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿ ಲಿಂಗಾಯತ ನಾಯಕತ್ವ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಕೋರ್ ಕಮಿಟಿ ಸಭೆಯಲ್ಲಿ ನೀಡಿದ ಮಾಹಿತಿ ಆಧರಿಸಿ ಸಂಪುಟ ಪುನಾರಚನೆಯಷ್ಟೇ ಮಾಡಲಾಗುವುದು ಎಂದು ಅವರು
ಸ್ಪಷ್ಟಪಡಿಸಿದ್ದಾರೆ.
ಹಿಂದುತ್ವ ಅಜೆಂಡಾ ಮುಂದುವರಿಕೆ
ರಾಜ್ಯದಲ್ಲಿ ಸರಕಾರದ ವಿರುದ್ಧ ೪೦ ಪರ್ಸೆಂಟ್ ಕಮಿಷನ್ ಆರೋಪವನ್ನು ಕಾಂಗ್ರೆಸ್ ಚುನಾವಣೆ ಅಸವಾಗಿ ಬಳಸಿಕೊಳ್ಳಲು
ಮುಂದಾಗಿದೆ. ಇದರ ಜತೆಗೆ ಆಡಳಿತ ವಿರೋಧಿ ಅಲೆಯೂ ಇರುವುದರಿಂದ ಹಿಂದುತ್ವದ ಆಧಾರದ ಮೇಲೆಯೇ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರಗಳನ್ನು ರೂಪಿಸುವ ಬಗ್ಗೆ ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹಿಜಾಬ್ ವಿವಾದ, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮತ್ತು ಅದಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ನೀಡಿರುವುದು, ದೇವಸ್ಥಾನಗಳ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿರುವ ಕುರಿತು ೨೦೦೨-೦೩ರಲ್ಲಿ ಕಾಂಗ್ರೆಸ್ ಸರಕಾರ ರೂಪಿಸಿದ ನೀತಿ, ಹಲಾಲ್ ಮುಂತಾದ ಅಂಶಗಳನ್ನು ಜನರ ಮುಂದಿಟ್ಟು ಅದನ್ನು ಮತಗಳಿಕೆಯ ಅಸವಾಗಿಸಿಕೊಳ್ಳಲು ತಂತ್ರಗಾರಿಕೆ ರೂಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.