ವಿಶ್ವವಾಣಿ ಸಂದರ್ಶನ
ಸಂದರ್ಶಕ: ರಂಜಿತ್ ಎಚ್.ಅಶ್ವತ್ಥ
ದಾನ ಮಾಡಬೇಕೇ ಹೊರತು, ತಿಜೋರಿಯಲ್ಲಿ ಚಿನ್ನ ಬಚ್ಚಿಡುವ ಸಂಸ್ಕೃತಿ ನಮ್ಮದಲ್ಲ
ಅಕ್ಷಯ ತೃತೀಯ ಇರುವುದು ವೈಶಾಖಮಾಸದಲ್ಲಿರುವ ದಾಹವನ್ನು ತೀರಿಸುವ ನೀರನ್ನು ದಾನವಾಗಿ ನೀಡುವುದಕ್ಕಾಗಿಯೇ ಹೊರತು, ಚಿನ್ನವನ್ನು ಖರೀದಿಸಿ ಮನೆಯ ತಿಜೋರಿಯಲ್ಲಿ ಮುಚ್ಚಿಡುವುದಕ್ಕಾಗಿ ಅಲ್ಲವೇ ಅಲ್ಲ. ಅಷ್ಟಕ್ಕೂ ನಮ್ಮ ಸನಾತನ ಧರ್ಮವು ದಾನ ಮಾಡುವ ಸಂಸ್ಕೃತಿ ಹೊಂದಿದೆಯೇ ಹೊರತು, ಖರೀದಿಸುವ ಮನಃ ಸ್ಥಿತಿಯನ್ನು ಅಲ್ಲ ಎಂದು ಧಾರ್ಮಿಕ ಚಿಂತಕ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್ ಹೇಳಿದ್ದಾರೆ.
ಅಕ್ಷಯ ತೃತೀಯದ ಹಿನ್ನೆಲೆ, ಚಿನ್ನ ಖರೀದಿಸುವ ಸಂಸ್ಕೃತಿ ಸೇರಿದಂತೆ ಹಲವು ವಿಷಯ ಗಳಿಗೆ ಸಂಬಂಧಿಸಿದಂತೆ ‘ವಿಶ್ವವಾಣಿ’ ಯೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿ ಈ ರೀತಿಯ ಆಚರಣೆಗಳೇ ಇಲ್ಲ. ಇತ್ತೀಚಿನ ವ್ಯಾಪಾರಿಗಳು ಇಂತಹ ಸಂಸ್ಕೃತಿಯನ್ನು ಸೃಷ್ಟಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಅಕ್ಷಯ ತೃತೀಯಕ್ಕೆ ಬಂಗಾರ ಖರೀದಿ ಕಡ್ಡಾಯವೇ?
– ಭಾರತೀಯ ಧರ್ಮ ಶಾಸ್ತ್ರದಲ್ಲಿ ನಿರ್ಣಯ ಸಿಂಧು, ಧರ್ಮ ಸಿಂಧು, ಧರ್ಮ ಶಾಸ, ಪುರಾಣ ಗ್ರಂಥಗಳು ಹಾಗೂ ಇತಿಹಾಸಗಳು ಎನ್ನುವ ಧರ್ಮಗ್ರಂಥಗಳಿವೆ. ಈ ಎಲ್ಲವು ಗಳನ್ನು ಪರಿಶೀಲಿಸಿದರೆ, ಹಿಂದೂ ಸನಾತನ ಸಂಪ್ರದಾಯಗಳು ಬರುತ್ತದೆ. ಆದರೆ ಎಲ್ಲಿಯೂ ಅಕ್ಷಯ ತೃತೀಯದ ವೇಳೆ ಬಂಗಾರ ಖರೀದಿಸಬೇಕು ಎನ್ನುವ ಪ್ರಸ್ತಾಪವೇ ಇಲ್ಲ.
ಈ ಪದ್ಧತಿ ಶುರುವಾಗಿದ್ದು ಎಲ್ಲಿಂದ?
– ಧರ್ಮಗ್ರಂಥದಲ್ಲಿ ಇಲ್ಲದ ಈ ಪ್ರಸಂಗ ಎಲ್ಲಿಂದ ಬಂತು ಎನ್ನುವ ಜಿeಸೆ ಅನೇಕರಲ್ಲಿದೆ. ಈ ಬಗ್ಗೆ ಕೂಲಂಕುಶವಾಗಿ ನೋಡಿ ದಾಗ, ಯಾರೋ ಇತ್ತೀಚಿಗೆ ಮಾಡಿದ ಹುನ್ನಾರ ಎನ್ನುವುದು ಖಚಿತವಾಗುತ್ತದೆ. ನಾನು ಹೇಳುವುದು ಸುಳ್ಳು ಎನ್ನಬಹುದು. ಆದರೆ, ಹಿಂದೂ ಧರ್ಮದಲ್ಲಿರುವ ಪದ್ಧತಿ, ಆಚರಣೆಯನ್ನು ನೋಡಿದಾಗ, ಕೆಲ ವರ್ಷಗಳ ಹಿಂದೆ ಈ ಪದ್ಧತಿ ಇರಲಿಲ್ಲ. ಮೇಲುಕೋಟೆಯ ಪ್ರಮುಖ ಸ್ಥಾನಾಚಾರ್ಯರಲ್ಲಿ ನಮ್ಮ ಕುಟುಂಬವೂ ಒಂದು. ಆದರೆ ಎಂದಿಗೂ ನಮ್ಮ ಮನೆಯಲ್ಲಿ ಈ ರೀತಿಯ ಆಚರಣೆಯಿರಲಿಲ್ಲ. ನಮ್ಮ ಮನೆಯಲ್ಲಿ ಮಾತ್ರವಲ್ಲ, ಸುತ್ತಮುತ್ತಲಿನ ಯಾವ ಮನೆಯಲ್ಲಿಯೂ ಇರಲಿಲ್ಲ. ಇದು ಹಿಂದೂ ಧರ್ಮದ ಆಚರಣೆಯಲ್ಲ. ಬದಲಿಗೆ ಚಿನ್ನದ ವ್ಯಾಪಾರವಾಗಬೇಕು ಎನ್ನುವ ಹಿತಾಸಕ್ತಿ ಇರುವವರು ಮಾಡಿದ ಹುನ್ನಾರ ಎನ್ನುವುದು ಸ್ಪಷ್ಟ.
ಹಾಗಾದರೆ ಅಕ್ಷಯ ತೃತೀಯ ಹೇಗೆ ಆಚರಿಸಬೇಕು?
– ಅಕ್ಷಯ ಎಂದರೆ ಮುಗಿದು ಹೋಗದೇ ಇರುವುದು. ಎಂದಿಗೂ ಮುಗಿಯದಿರುವ ತಿಥಿ ಅಕ್ಷಯ ತೃತೀಯ. ಆ ದಿನಕ್ಕೆ ಮಹತ್ವ ಏನು ಎನ್ನುವುದನ್ನು ನೋಡುವುದಾದರೆ, ಕೃಥ ಯುಗದ ಆದಿಯ ದಿನ ಇದು. ಆದ್ದರಿಂದ ಅಕ್ಷಯ ಎನ್ನುವ ಹೆಸರು ಬಂತು.
ಮುಗಿಯದೇ ಇರುವ ದಿನವನ್ನು ಬ್ರಹ್ಮ ಸೃಷ್ಟಿಸಿದ ದಿನ, ಪರಶುರಾಮ ಹುಟ್ಟಿದ ದಿನ. ಕಡುಬಡವನಾಗಿದ್ದ ಕುಚೇಲ ದೇವರಿಗೆ
ಮೂರು ಮುಷ್ಠಿ ಅವಲಕ್ಕಿ ದಾನವಾಗಿ ನೀಡಿ, ಅದರಿಂದ ಅಕ್ಷಯವಾಗುವಷ್ಟು ಐಶ್ವರ್ಯ ಪಡೆದ ದಿನ. ಇನ್ನೊಂದು ಪ್ರಮುಖ
ಅಂಶವೆಂದರೆ, ಶ್ರೀ ಕೃಷ್ಣ ಪರಮಾತ್ಮ ಇದೇ ದಿನ ದ್ರೌಪದಿ ಬಳಿ ಹೋಗಿ, ಏನಾದರೂ ಕೊಡು ಎಂದು ಕೇಳಿದಾಗ ಆಕೆ ಭಕ್ತಿಯನ್ನು
ದಾನವಾಗಿ ನೀಡುತ್ತಾಳೆ. ಅದ್ದರಿಂದ ಸಂತುಷ್ಟನಾದ ಕೃಷ್ಣ, ಸೂರ್ಯ ಪ್ರಾರ್ಥನೆಯೊಂದಿಗೆ ಅಕ್ಷಯ ಪಾತ್ರೆಯನ್ನು ಆಕೆಗೆ ನೀಡಿದ್ದ.
ಅಂದು ಏನು ದಾನ ಮಾಡಬೇಕು?
– ಅಕ್ಷಯ ತೃತೀಯ ದಿನದಂದು ಕೈಲಾಗುವ ಪತ್ರೆ, ಹೂವು, ಫಲ ದಾನ ನೀಡಬೇಕು. ಅದೂ ಇಲ್ಲದಿದ್ದರೆ ಎರಡು ಬೊಗಸೆ ನೀರನ್ನು
ಅರ್ಘ್ಯೆಯಾಗಿ ನೀಡಿದರೆ ಸಾಕು. ವೈಶಾಖ ಮಾಸದಲ್ಲಿ ಅಕ್ಷಯ ತೃತೀಯ ಬರುವುದರಿಂದ, ನೀರನ್ನು ದಾನ ಮಾಡಬೇಕು. ಬಿಸಿಲಿನ ಬೇಗೆಯಲ್ಲಿರುವ ಬಡವರಿಗೆ ನೀರು ನೀಡಿದರೆ ಅಕ್ಷಯ ಪುಣ್ಯ ಸಿಗುತ್ತದೆ ಎನ್ನುವುದು ಶಾಸದಲ್ಲಿದೆ. ಆದ್ದರಿಂದ ಬಡವರಿಗೆ ನೀರು, ಆಹಾರ, ಔಷಧ, ಬಟ್ಟೆ ದಾನ ಮಾಡಿದರೆ ಅಕ್ಷಯ ಪುಣ್ಯ ಪ್ರಾಪ್ತಿಯಾಗುತ್ತದೆಯೇ ಹೊರತು ಬಂಗಾರವನ್ನು ಖರೀದಿಸುವುದರಿಂದ ಅಲ್ಲ.
ದಾನವನ್ನು ಏಕೆ ಮಾಡಬೇಕು?
– ಹಿಂದೂ ಧರ್ಮ ಎಂದಿಗೂ ಕೊಳ್ಳು ಬಾಕ ಸಂಸ್ಕೃತಿಯಲ್ಲ. ಬಂಗಾರವನ್ನು ಕೊಂಡು ಮನೆಯಲ್ಲಿ ಎತ್ತಿಟ್ಟಿಕೊಳ್ಳುವುದು ನಮ್ಮ
ಸಂಸ್ಕೃತಿಯೇ ಅಲ್ಲ. ಸನಾತನ ಧರ್ಮದ ಸಂಸ್ಕೃತಿ ಹಂಚಿ ತಿನ್ನುವುದು. ಬಂಗಾರವನ್ನು ಕೊಂಡರೆ ಹಂಚಿ ತಿನ್ನುವ ಪ್ರಶ್ನೆಯೇ
ಬರುವುದಿಲ್ಲವಲ್ಲ. ಆದ್ದರಿಂದ ಅಕ್ಷಯ ತೃತೀಯದಂದು ದಾನ ಮಾಡಬೇಕೇ ಹೊರತು, ಕೊಂಡು ಎತ್ತಿಟ್ಟುಕೊಳ್ಳುವುದಲ್ಲ.
ಇಲ್ಲಿ ಒಂದು ವಿಷಯವನ್ನು ಪ್ರಸ್ತಾಪಿಸಲು ಬಯಸುತ್ತೇನೆ, ಅಕ್ಷಯ ತೃತೀಯದಂದು ಒಂದು ಗ್ರಾಂ ಚಿನ್ನವನ್ನಾದರೂ ಖರೀದಿಸ ಬೇಕು ಎನ್ನುತ್ತಾರೆ. ಆದರೆ ಬ್ರಿಟೀಷರು ಬರುವ ತನಕ ದೇಶದಲ್ಲಿ ಗ್ರಾಂ ಲೆಕ್ಕದಲ್ಲಿ ಚಿನ್ನ ಖರೀದಿಸುವ ಸಂಸ್ಕೃತಿಯೇ ಇರಲಿಲ್ಲ. ಹಾಗಿದ್ದಾಗ, ಸನಾತನ ಧರ್ಮದಲ್ಲಿ ಗ್ರಾಂನ ಪರಿಕಲ್ಪನೆ ಬರಲು ಹೇಗೆ ಸಾಧ್ಯ?
ಚಿನ್ನ ಖರೀದಿಗೆ ಒಳ್ಳೆಯ ಸಮಯ ಯಾವುದು?
– ಹಿಂದೂ ಧರ್ಮದಲ್ಲಿ ಯಾವಾಗ ಬೇಕಾದರೂ ಚಿನ್ನ ಖರೀದಿಸಬಹುದು. ಚಿನ್ನವನ್ನು ಮಹಾಲಕ್ಷ್ಮೀಯ ಸ್ವರೂಪದಲ್ಲಿ ಕಾಣುತ್ತೇವೆ. ಏಕೆಂದರೆ, ಮಹಾಲಕ್ಷ್ಮೀ ಹೊಂಬಣ್ಣದಲ್ಲಿ ಇರುತ್ತಾಳೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಚಿನ್ನವೂ ಅದೇ ಬಣ್ಣದಲ್ಲಿ ಇರುವುದರಿಂದ ಚಿನ್ನದಲ್ಲಿ ಲಕ್ಷ್ಮೀಯನ್ನು ಕಾಣಲಾಗುತ್ತದೆ. ಅದನ್ನು ಯಾವಾಗ ಬೇಕಾದರೂ ಖರೀದಿಸಬಹುದು.
ಅದಕ್ಕೂ ಅಕ್ಷಯ ತೃತೀಯಕ್ಕೂ ಸಂಬಂಧವಿಲ್ಲ.
ಭಾರತದ ರೈತರಿಗೆ ಸಹಾಯ ಮಾಡಿ
ವಿಶ್ವದಲ್ಲಿ ಈಗ ಅತಿಹೆಚ್ಚು ಚಿನ್ನವನ್ನು ರಫ್ತು ಮಾಡುತ್ತಿರುವುದು ಚೀನಾ, ರಷ್ಯಾ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಆಫ್ರಿಕಾ
ದೇಶಗಳು. ಆದರೆ, ಅತಿಹೆಚ್ಚು ಚಿನ್ನವನ್ನು ಮೂಲಸ್ವರೂಪದಲ್ಲಿ ಖರೀದಿಸುವುದು ಅರಬ್ ದೇಶಗಳು. ಅಲ್ಲಿಂದ ವಿನ್ಯಾಸಗೊಂಡ ಚಿನ್ನವನ್ನು ಅತಿಹೆಚ್ಚು ಖರೀದಿಸುವವರು ಭಾರತೀಯರು. ಪ್ರತಿವರ್ಷ ಸುಮಾರು ೧೧೮ ಟನ್ನಷ್ಟು ಚಿನ್ನವನ್ನು ಭಾರತೀಯರು ಖರೀದಿಸುತ್ತಾರೆ. ಚಿನ್ನದ ಖರೀದಿ ಹೆಚ್ಚು ಮಾಡಿದಷ್ಟು, ಭಾರತ ಆರ್ಥಿಕ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತದೆ.
ಆದ್ದರಿಂದ ಚಿನ್ನ ಹಾಗೂ ಪೆಟ್ರೋಲ್ ಮೇಲಿನ ಹೊರೆ ತಗ್ಗಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಚಿನ್ನದ ಮೇಲೆ ಖರ್ಚು ಮಾಡುವ ಹಣವನ್ನೇ ದೇಶದ ರೈತನ ಮೇಲೆ ವ್ಯಯಿಸಲಿ.