ಅಪರ್ಣಾ ಎ.ಎಸ್ ಬೆಂಗಳೂರು
ಡಬಲ್ ಡೆಕ್ಕರ್ ಬಸ್ಗೆ ಕಿ.ಮೀ ೯೬ ರುಪಾಯಿ ಕೇಳಿರುವ ಕಂಪನಿ
ಬಿಳಿಯಾನೆ ಆಗುವ ಆತಂಕದಿಂದ ಹಿಂದೇಟು
ಇತರೆ ಬಸ್ ಖರೀದಿಗೆ ಚಿಂತನೆ: ಸಾರಿಗೆ ಸಚಿವ
ಒಂದು ಕಾಲದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಡಬ್ಬಲ್ ಡೆಕ್ಕರ್ ಬಸ್ಗಳೇ ಪ್ರಮುಖ ಆಕರ್ಷಣೆಯಾಗಿದ್ದವು. ಆ ಗತಕಾಲದ ಅನುಭವವನ್ನು ಮತ್ತೆ ತರಬೇಕು ಎನ್ನುವ ಬಿಎಂಟಿಸಿಯ ಆಲೋಚನೆ ‘ಬಿಳಿಯಾನೆ’ ಯಾಗುವ ಸಾಧ್ಯತೆಯಿರುವುದರಿಂದ ಈ ಯೋಜನೆಯನ್ನು ಕೈಬಿಡಲು ತೀರ್ಮಾನಿಸಲಾಗಿದೆ. ಈ ಹಿಂದೆ ಬೆಂಗಳೂರಿನ ಆಯ್ದ ಸ್ಥಳಗಳಿಗೆ ಡಬಲ್ ಡೆಕ್ಕರ್ ಬಸ್ಗಳನ್ನು ಓಡಿಸಲು ಸಿದ್ಧತೆ ನಡೆಸಿಕೊಂಡು ಬಿಎಂಟಿಸಿ ಟೆಂಡರ್ ಕರೆದಿತ್ತು. ಆದರೆ ಈ ಬಸ್ಗಳು ‘ಬಿಳಿಯಾನೆ’ಯಾಗುವ ಸಾಧ್ಯತೆಯಿರುವುದರಿಂದ ಈ ಪ್ರಸ್ತಾಪವನ್ನು ಕೈಬಿಟ್ಟು, ಇವುಗಳ ಬದಲಿಗೆ ಇತರೆ ಬಸ್ ಗಳಿಗೆ ಒತ್ತು ನೀಡಲು ತೀರ್ಮಾನಿಸಲಾಗಿದೆ ಎಂದು
ಮೂಲಗಳು ತಿಳಿಸಿವೆ.
ಈ ಹಿಂದೆ ೧೯೯೭ರಲ್ಲಿ ಕಾರ್ಯಾಚರಣೆ ನಡೆಸಿದ್ದ ಡಬಲ್ ಡೆಕ್ಕರ್ ಬಸ್ಗಳು, ಸಂಚಾರ ದಟ್ಟಣೆ, ನಿರ್ವಹಣೆ ವೆಚ್ಚದ ಹೆಚ್ಚಳದ ಕಾರಣದಿಂದ ಸೇವೆಯನ್ನು ನಿಲ್ಲಿಸಿದ್ದವು. ಆದರೆ ಇತ್ತೀಚಿನ ವರ್ಷದಲ್ಲಿ ಮತ್ತೆ ಪ್ರಯಾಣಿಕರಿಂದ ಬೇಡಿಕೆ ಹೆಚ್ಚಾಗಿದ್ದರಿಂದ ಮತ್ತೆ ರಸ್ತೆಗಿಳಿಸಲು ಬಿಎಂಟಿಸಿ ಮುಂದಾಗಿತ್ತು. ಸರಕಾರದ ಅನುಮೋದನೆಯೊಂದಿಗೆ ನಗರದ ೧೦ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಬಸ್ನ ಸಂಚಾರವನ್ನೂ ನಿಗದಿಪಡಿ ಸಿತ್ತು. ಆದರೆ ನಿರ್ವಹಣೆಯ ವೆಚ್ಚದಲ್ಲಿ ನಷ್ಟವಾಗುವುದು ನಿಶ್ಚಿತವಾಗಿರುವುದರಿಂದ ಯೋಜನೆ ಕೈಬಿಡಲು ತೀರ್ಮಾನಿಸಲಾಗಿದೆ.
ಪ್ರತಿ ಕಿಮೀ ೯೬ ರು. ನೀಡಿರುವುದೇ ಸಮಸ್ಯೆ: ಡಬಲ್ ಡೆಕ್ಕರ್ ಬಸ್ನ ಸಂಚಾರವನ್ನು ಮತ್ತೆ ಆರಂಭಿಸುವ ಸಲುವಾಗಿ ಬಿಎಂಟಿಸಿಯು ರಾಷ್ಟ್ರೀಯ ಸ್ವಚ್ಛ ಗಾಳಿ ಕಾರ್ಯಕ್ರಮದಲ್ಲಿ ಟೆಂಡರ್ನ್ನು ಕರೆದಿತ್ತು. ಆದರೆ ಮೊದಲ ಬಾರಿಗೆ ಸಂಸ್ಥೆ ಕರೆದ ಟೆಂಡರ್ಗೆ ಬಿಡ್ದಾರರಿಂದ ಉತ್ತಮ ಸ್ಪಂದನೆ ದೊರಕಿರಲಿಲ್ಲ. ಕೇವಲ ಒಂದು ಕಂಪನಿ ಮಾತ್ರ ಟೆಂಡರ್ನಲ್ಲಿ ಭಾಗವಹಿಸಿತ್ತು. ಹೀಗಾಗಿ ಮತ್ತೆರಡು ಬಾರಿ ಟೆಂಡರ್ನ್ನು ಬಿಎಂಟಿಸಿಯು ಆಹ್ವಾನಿಸಿದ್ದರೂ ಉತ್ತಮ ಪ್ರತಿಕ್ರಿಯೆ ದೊರೆಯಲಿಲ್ಲ. ಭಾಗವಹಿಸಿದ್ದ ಕೆಲವೇ ಕೆಲವು ಬಿಡ್ದಾರರು ಪ್ರತಿ ಕಿ.ಮೀ.ಗೆ ೯೬ರು. ದರವನ್ನು ಪ್ರಸ್ತಾಪಿಸಿದರು. ೯೬ ರುಪಾಯಿಗೆ ನೀಡಿ ಡಬಲ್ ಡೆಕ್ಕರ್ ಬಸ್ಗಳನ್ನು ಓಡಿಸಿದರೆ, ಭಾರಿ ನಷ್ಟವಾಗುವ ಸಾಧ್ಯೆಯಿರುವುದರಿಂದ ಯೋಜನೆ ಕೈಬಿಡಲು ತೀರ್ಮಾನಿಸಿದೆ ಎನ್ನಲಾಗಿದೆ.
ವಜ್ರ ಮಾದರಿಯಲ್ಲಿ ಹೊರೆಯ ಆತಂಕ ಈಗಾಗಲೇ ಬಿಎಂಟಿಸಿಗೆ ವಜ್ರ ಬಸ್ ಈಗಾಗಲೇ ನಿಗಮಕ್ಕೆ ಭಾರಿ ಹೊರೆಯಾಗಿ ಪರಿಣಮಿಸಿದ್ದು, ಇದರೊಂದಿಗೆ ಡಬಲ್ ಡೆಕ್ಕರ್ ಬಸ್ಗಳೂ ನಿಗಮಕ್ಕೆ ಮತ್ತಷ್ಟು ಆರ್ಥಿಕ ಸಮಸ್ಯೆ ಯಾಗಿ ಪರಿಣಮಿಸುವ ಸಾಧ್ಯತೆಯೂ ಹೆಚ್ಚಾಗಿತ್ತು. ಹವಾನಿಯಂತ್ರಣ ರಹಿತ ಬಸ್ ಗಳಾಗಿರುವುದರಿಂದ ಈ ಬಸ್ಗಳಿಂದ ಹೆಚ್ಚಿನ ಆದಾಯದ ನಿರೀಕ್ಷೆಯಿಲ್ಲ. ಆದ್ದರಿಂದ ಸಾಮಾನ್ಯ ದರವನ್ನೇ ನಿಗದಿ ಪಡಿಸಬೇಕಾ ಗಿತ್ತು. ಡಬಲ್ ಡೆಕ್ಕರ್ ಬಸ್ಗಳನ್ನು ಖರೀದಿಸಿದರೆ ಸಂಸ್ಥೆಗೆ ಲಾಭದ ಬದಲು ಮತ್ತಷ್ಟು ಹೊರೆಯಾಗುವ ಆತಂಕದಿಂದಾಗಿ ಬಸ್ ಖರೀದಿಸಲು ನಿಗಮ ಮುಂದಾಗಿಲ್ಲ.
ಮೆಟ್ರೋ ಬಸ್ಫೀಡರ್ಗೆ ಸಿದ್ಧತೆ
ಬಿಎಂಟಿಸಿಯ ಮೆಟ್ರೋ ಫೀಡರ್ ಬಸ್ಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ನಿಗಮದ ಆದಾಯದ ಮೂಲವೂ ಆಗಿದೆ. ಡಬಲ್ ಡೆಕ್ಕರ್ ಬಸ್ಗಳಿಂದ ಲಾಭದ ಹೊರತಾಗಿ ನಷ್ಟವೇ ಹೆಚ್ಚಾಗಿರುವುದರಿಂದ ಬಿಎಂಟಿಸಿಯು ಡಬಲ್ ಡೆಕ್ಕರ್ ಬಸ್ಗಳ ಹೊರತಾಗಿ ನಗರದ ಹಲವೆಡೆಗಳಲ್ಲಿ ಅಗತ್ಯವಿರುವ ಮೆಟ್ರೋ ಫೀಡರ್ ಬಸ್ಗಳ ಸಂಚಾರವನ್ನೇ ಹೆಚ್ಚಿಸಲು ಮುಂದಾಗಿದೆ. ಫೀಡರ್ ಬಸ್ಗಳಿಗೆ ಎಲೆಕ್ಟ್ರಿಕ್ ಬಸ್ ಗಳನ್ನು ಬಳಸಿಕೊಳ್ಳ ಲಾಗುತ್ತಿದ್ದು, ನಗರದ ಹಲವು ಭಾಗಗಳಲ್ಲಿ ಮೆಟ್ರೋ ಫೀಡರ್ ಬಸ್ ಆರಂಭವನ್ನು ಮಾಡಲು ಸಕಲ ಸಿದ್ಧತೆಗಳನ್ನು ನಡೆಸಿದೆ.
*
ಕೆಲ ಮಾರ್ಗದಲ್ಲಿ ಡಬಲ್ ಡೆಕ್ಕರ್ ಬಸ್ಗಳನ್ನು ಓಡಿಸಲು ಬಿಎಂಟಿಸಿ ಮುಂದಾಗಿತ್ತು. ಆದರೆ ಈ ಬಸ್ ಗಳನ್ನು ಗುತ್ತಿಗೆ ನೀಡಲು ಮುಂದಾಗಿರುವ ಕಂಪನಿಗಳು ಪ್ರತಿ ಕಿಮೀಗೆ ೯೬ ರು. ಕೇಳುತ್ತಿದ್ದಾರೆ. ಇಷ್ಟು ಹಣ ಕೊಟ್ಟು ಬಸ್ಗಳನ್ನು ಓಡಿಸಿದರೆ, ನಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಪ್ರಸ್ತಾವನೆಯನ್ನು ಪುರಸ್ಕರಿಸಿಲ್ಲ. ಮುಂದಿನ ದಿನದಲ್ಲಿ ಡಬಲ್ ಡೆಕ್ಕರ್ ಬಸ್ ಬದಲಿಗೆ ಇತರೆ ಬಸ್ ಓಡಿಸಲು ಕ್ರಮವಹಿಸಲಾಗುವುದು.
– ರಾಮಲಿಂಗಾರೆಡ್ಡಿ ಸಾರಿಗೆ ಸಚಿವ