ರಾಜ್ ಅವರೇ ನಮಸ್ಕರಿಸಿದ್ದ ವೈದ್ಯರ ಹೆಸರಿಗೆ ಮಸಿ ಬಳಿವ ಯತ್ನ
ಹೃದಯವಂತನ ಸಾವನ್ನು ಅವಮಾನಿಸುವ ಹೃದಯಹೀನರ ವಿಕೃತಿ
ವಿಶೇಷ ವರದಿ: ರಾಧಾಕೃಷ್ಣ ಭಡ್ತಿ ಬೆಂಗಳೂರು
ನಿಜಕ್ಕೂ ನಾಚಿಕೆ ಆಗಬೇಕು!
ಪುನೀತ್ ರಾಜ್ಕುಮಾರ್ ಸಾವಿನ ಸನ್ನಿವೇಶದಲ್ಲಿ ತಥಾಕಥಿತ ಅಭಿಮಾನಿಗಳು ವೈದ್ಯರಿಗೇ ಜೀವಬೆದರಿಕೆಯೊಡ್ಡುವ, ಅವರ ವಿರುದ್ಧವೇ ದೂರು ದಾಖಲಿಸುವ ಅತಿರೇಕದ ವರ್ತನೆ ತೋರುತ್ತಿರುವುದು ನಿಜಕ್ಕೂ ತಲೆ ತಗ್ಗಿಸುವ ವಿಚಾರ.
ಆ ಮೂಲಕ ಸಜ್ಜನಿಕೆಯ ಸಾಕಾರವಾಗಿದ್ದ ನಟನಿಗೆ ಮಾತ್ರವಲ್ಲ, ಪುನೀತ್ರೊಳಗಿದ್ದ ‘ಹೃದಯವಂತ’ ಮನುಷ್ಯ, ಮಾದರಿ ನಾಗರಿಕನ ಆದರ್ಶವನ್ನು ಮಣ್ಣು ಮಾಡಲಾಗುತ್ತಿದೆ. ಇದರಿಂದ ಅಪ್ಪು ಸಾವನ್ನೇ ಅವಮಾನಿಸಲಾಗುತ್ತಿದೆ. ಸಾವಿನ ಸನ್ನಿವೇಶ ವನ್ನು ವೈಯಕ್ತಿಕ ಪ್ರಚಾರದ ತೆವಲಿಗೆ ಬಳಸಿಕೊಳ್ಳಲಾಗುತ್ತಿರುವುದು ಸ್ಪಷ್ಟ.
ಇಲ್ಲದಿದ್ದರೆ ಅಪ್ಪು ಸಾವಿಗೂ ಮೂರು ದಶಕಗಳಿಂದಲೂ ಡಾ.ರಾಜ್ ಕುಟುಂಬದ ವೈದ್ಯ ರಾಗಿರುವ ಡಾ.ರಮಣ್ರಾವ್ಗೂ ಎಲ್ಲಿಂದೆಲ್ಲಿಯ ಸಂಬಂಧ? ಅಷ್ಟಕ್ಕೂ ಇಂಥ ಗಂಭೀರ ಆರೋಪ ಮಾಡುತ್ತಿರುವುದು ಯಾರ ಬಗ್ಗೆ ಎಂಬ ಕನಿಷ್ಠ ಪರಿಜ್ಞಾನ ವಾದರೂ ಇದೆಯೇ? ದೇಶದ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪುರಸ್ಕೃತ, ಸ್ವತಃ ಡಾ.ರಾಜ್ಕುಮಾರ ಅವರೇ ಕಾಲು ಮುಟ್ಟಿ ನಮಸ್ಕರಿಸು ತ್ತಿದ್ದ, ಐವತ್ತಕ್ಕೂ ಹೆಚ್ಚು ವರ್ಷಗಳಿಂದಲೂ ವೈದ್ಯಕೀಯ ಸೇವೆ ಮಾಡುತ್ತ ಬಂದಿರುವ ಡಾ.ರಮಣ್ರಾವ್ ಅವರಂಥವರ ಬಗ್ಗೆ ಹಾಸ್ಯಕ್ಕೂ ಇಂಥ ಮಾತನ್ನು ಆಡಲಾಗದು.
ಹೀಗಿರುವಾಗ ಅಪ್ಪು ಸಾವಿಗೆ ಡಾ.ರಮಣ್ರಾವ್ ಅವರ ನಿರ್ಲಕ್ಷ್ಯವೇ ಕಾರಣವೆಂಬ ಗುರುತರ ಆರೋಪ ಮಾಡುತ್ತಿರುವುದಕ್ಕೆ ಆಧಾರವಾದರೂ ಏನು? ತಿಳಿದಿರಲಿ, ಡಾ.ರಮಣ್ರಾವ್ ಸಾಮಾನ್ಯ ಮನುಷ್ಯ ರೇನೋ ನಿಜ, ಆದರೆ ಪ್ರಾಕ್ಟೀಸಿಂಗ್ ಡಾಕ್ಟರ್ ಅಷ್ಟೇ ಅಲ್ಲ. ಡಾ.ರಾಜ್ ಸಣ್ಣದಾಗಿ ಸೀನಿದರೂ ಹಾಜರಿದ್ದು, ಕೊನೆಯವರೆಗೂ ಅವರ ಶುಶ್ರೂಶೆ ಮಾಡಿದ್ದ ಕಾಳಜಿಯುಕ್ತ ಸ್ವತಃ ಅಭಿಮಾನಿ ಕೂಡ ಹೌದು.
ಮಾತ್ರವಲ್ಲ, ಪಾರ್ವತಮ್ಮ, ಶಿವಣ್ಣ, ರಾಘಣ್ಣ, ಪುನೀತ್ ಸೇರಿದಂತೆ ಇಡೀ ಕುಟುಂಬದ ಎಲ್ಲರ ಆರೋಗ್ಯ ಕಾಳಜಿಯನ್ನು ನೋಡಿ ಕೊಳ್ಳುತ್ತ ಬಂದವರು. ಇಷ್ಟೇ ಆಗಿದ್ದರೆ ಬೇರೆ, ಮೈಸೂರು ಮಹಾರಾಜರ ಕುಟುಂಬಸ್ಥರು, ದೇವರಾಜ ಅರಸು ಕುಟಂಬ, ಎಸ್ಸೆಂ ಕೃಷ್ಣ ಕುಟುಂಬ ಸೇರಿದಂತೆ ರಾಜ್ಯದ ಗಣ್ಯರನೇಕರ ಕುಟುಂಬದ ವೈದ್ಯರಾಗಿ ಪ್ರಸಿದ್ಧರಾದವರು. ಹಾಗೆಂದು ಹಣವಂತರು, ಗಣ್ಯರಿಗಷ್ಟೇ ಚಿಕಿತ್ಸೆ ಕೊಡುವವವರೇನೂ ಅಲ್ಲ. ಸಮಾಜದ ಕೆಳವರ್ಗದ, ಗ್ರಾಮೀಣರ ಆರೋಗ್ಯ ಕಾಳಜಿಗೆ ಟೊಂಕಕಟ್ಟಿ ನಿಂತ ಡಾ.ರಮಣ್ರಾವ್ ರಾಜಧಾನಿಯ ಮಗ್ಗುಲಿನ ಬೇಗೂರನ್ನು ಸಂಪೂರ್ಣ ದತ್ತು ತೆಗೆದುಕೊಂಡು, ಅಲ್ಲಿಯೇ ‘ವಿಲೇಜ್ ಕ್ಲೀನಿಕ್’
ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿ ಕಳೆದ ಸುಮಾರು ಅರ್ಧಶತಮಾನದಿಂದ ಬಡವರು, ದೀನ ದಲಿತರ ಆರೋಗ್ಯ ಸೇವೆಗೆ ತಮ್ಮನ್ನು ತಾವು ಮುಡುಪಾಗಿಟ್ಟಿದ್ದಾರೆ.
ಸಮಾಜದ ಕೆಳವರ್ಗದವರ ಸೇವೆ, ಡಾ. ರಮಣ್ರಾವ್ಗೆ ಅವರ ತಂದೆ ಕೊಟ್ಟ ದೀಕ್ಷೆ. ಅತ್ಯಂತ ಸಾಮಾನ್ಯ ಕಟುಂಬದಿಂದ ಬಂದ ಅವರು, ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಬಂದ ಹಣದಲ್ಲೇ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದವರು. 16 ವಯಸ್ಸಿ ನಲ್ಲಿ ಮಣಿಪಾಲ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಟಿ.ಎಂ.ಎ ಪೈಗಳಿಂದಲೇ ಬೆನ್ನು ತಟ್ಟಿಸಿಕೊಂಡು ವೈದ್ಯಕೀಯ ಶಿಕ್ಷಣಕ್ಕೆ ಇಳಿದ ಪ್ರತಿಭಾವಂತ. ದೇಶವಿದೇಶಗಳ ಮಟ್ಟದಲ್ಲಿ ನೂರಾರು ಉಪನ್ಯಾಸ, ವೈದ್ಯ ಪ್ರಬಂಧ ಮಂಡನೆ, ಕಿರಿಯರ ತರಬೇತಿಯಂಥ ರಚನಾತ್ಮಕ ಶೈಕ್ಷಣಿಕ ಕಾರ್ಯದಲ್ಲೂ ತೊಡಗಿಸಿಕೊಂಡು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದವರು.
ಇಂಥವರ ಬಗೆಗೆ ಕಾಸಿನ ಯೋಗ್ಯತೆ ಇಲ್ಲದ ಯಾರೋ ಒಂದಷ್ಟು ಮಂದಿ ವೈಯಕ್ತಿಕ ಮಾನಹಾನಿಕರ ಆರೋಪ ಮಾಡುವುದು, ಜೀವಬೆದರಿಕೆ ಒಡ್ಡುವುದನ್ನು ನೋಡಿಕೊಂಡು ಸುಮ್ಮನಿರುವುದು ಜವಾಬ್ದಾರಿಯುತ ಸಮಾಜಕ್ಕೆ ಶೋಭೆಯಲ್ಲ. ತಮ್ಮ ಕಣ್ಣೆ ದುರೇ ಹುಟ್ಟಿದ ಮಗುವನ್ನು ತಾವೇ ಸಾವಿಗೆ ದೂಡುತ್ತಾರೆಂಬ ಯೋಚನೆ ವಿಕೃತ ಮನಸುಗಳಿಂದ ಮಾತ್ರ ಸಾಧ್ಯ. ಅಪ್ಪು ಸಾವಿ ನಿಂದ ಡಾ.ರಮಣ್ರಾವ್ ಸಾಽಸುವುದಾರೂ ಏನನ್ನು? ಅಷ್ಟಕ್ಕೂ , ಅಪ್ಪು ಪ್ರಕರಣದಲ್ಲಿ ಡಾ. ರಮಣ್ರ ತಪ್ಪಾದರೂ ಏನು? ನಗು ನಗುತ್ತ, ಮಾತಾಡುತ್ತ, ತಾವೇ ನಡೆದುಕೊಂಡು ಮನೆಯಿಂದ ಹೊರಬಂದು ಕಾರು ಹತ್ತಿ ಪತ್ನಿಯೊಡನೆ ಬಂದ ಪುನೀತ್ ರನ್ನು ಎಲ್ಲ ರೀತಿಯಲ್ಲೂ ಕ್ಷಣ ವಿಳಂಬಿಸದೇ ತಪಾಸಣೆಗೊಳಪಡಿಸಿದ್ದಾರೆ. ಕ್ಲಿನಿಕ್ಗೆ ಬಂದಾಗ ಹಾರ್ಟ್ಬೀಟ್ ಸೇರಿದಂತೆ ಎಲ್ಲವೂ ಸರಿಯಿತ್ತು ಎಂಬುದನ್ನು ಅಪ್ಪು ಸಾವಿನ ಘೋಷಣೆ ಯ ಮರುಕ್ಷಣವೇ ಅವರು ಸಾರ್ವಜನಿಕವಾಗಿ ಹೇಳಿದ್ದರು.
ಬೇರೆ ಹೃದ್ರೋಗಕ್ಕೂ, ಹೃದಯ ಸ್ತಂಭನಕ್ಕೂ ಇರುವ ವ್ಯತ್ಯಾಸದ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ತಾವೇ ಖುದ್ದು ವಿವರಿಸಿದ್ದಾರೆ. ಇಸಿಜಿಯಲ್ಲಿ ವ್ಯತ್ಯಾಸ ಕಂಡುಬಂದ ಒಂದೇ ಕಾರಣಕ್ಕೆ ಚಾನ್ಸ್ ತೆಗೆದುಕೊಳ್ಳದೇ ತಕ್ಷಣ ಸಮೀಪವೇ ಇದ್ದ ವಿಕ್ರಮ್ ಆಸ್ಪತ್ರೆಗೆ ಕಳುಸಿದ್ದರಲ್ಲಿ ತಪ್ಪೇನಿದೆ? ಪುಟ್ಟ ಕ್ಲಿನಿಕ್ನಲ್ಲಿ ಇದಕ್ಕಿಂತ ಹೆಚ್ಚು ಮಾಡಲು ಇನ್ನೇನು ಸಾಧ್ಯ? ಇನ್ನು ಆಬ್ಯುಲೆನ್ಸ್ ಬರಲು ಮತ್ತು ಹೋಗಲು ಕನಿಷ್ಠ ಅರ್ಧಗಂಟೆಯ ಅವಧಿಯಾದರೂ ತೆಗೆದುಕೊಳ್ಳುತ್ತದೆ ಎಂಬುದನ್ನರಿತೇ ಅಪ್ಪುವನ್ನು ಅಲುಗಾಡಲೂ ಬಿಡದೇ, ಸಹಾಯಕರೊಂದಿಗೆ ಮಲಗಿಸಿದ ಸ್ಥಿತಿಯಲ್ಲೇ ಖುದ್ದು ಕಾರಿಗೆ ಸ್ಥಳಾಂತ ರಿಸಿ, ವಿಕ್ರಮ್ ಆಸ್ಪತ್ರೆಯಲ್ಲಿ ತಕ್ಷಣ ಚಿಕಿತ್ಸೆಗೆ ಎಲ್ಲ ಏರ್ಪಾಡನ್ನೂ ಮಾಡಿದ್ದರಲ್ಲವೇ? ನೆನಪಿಡಿ, ಹೃದಯದ ವಿಚಾರ ದಲ್ಲಿ ಒಂದೊಂದು ಕ್ಷಣವೂ ಮುಖ್ಯ.
ಮಾತ್ರವಲ್ಲ, ಈವರೆಗೆ ಬೇರೆ ಹೃದಯಕ್ಕೆ ಜಗತ್ತಿನ ಯಾವ ವೈದ್ಯರೂ ಗ್ಯಾರೆಂಟಿ, ವ್ಯಾರಂಟಿ ಕೊಡಲು ಸಾಧ್ಯವೇ ಇಲ್ಲ. ದೂರದ ಬೇರಾವುದೋ ಆಸ್ಪತ್ರೆಗೆ ಕಳುಹಿಸಿದರೆ ವಿಳಂಬ ಆಗಬಹುದು ಎಂಬ ಕಾರಣಕ್ಕೆ ಇಂಥ ಶಿ-ರಸನ್ನು ಮಾಡಿದ್ದು ಯಥಾ ಯೋಗ್ಯವೇ ಆಗಿತ್ತು. ಹಾಗೆಂದು ವಿಕ್ರಮ್ ಆಸ್ಪತ್ರೆಯಲ್ಲಿ ತಜ್ಞರು, ವೈದ್ಯಕೀಯ ಆಧುನಿಕ ಸೌಲಭ್ಯ ಸೇರಿದಂತೆ ಯಾವುದಕ್ಕೆ ಕೊರತೆ ಇದೆ? ಯಾಕೆ ಅಂಬರೀಷ್ ರಂಥ ಅನೇಕ ಸೆಲೆಬ್ರಿಟಿಗಳು ಇಲ್ಲೇ ಚಿಕಿತ್ಸೆ ಪಡೆದು ಆರೋಗ್ಯಕರವಾಗಿ ಹಿಂದಿರುಗಿದ ಉದಾಹರಣೆಗಳಿ ಲ್ಲವೇ? ಇವತ್ತು ತಾವೇನೋ ಸಾಽಸಿಬಿಡುತ್ತೇವೆ ಎಂಬ ಹಮ್ಮಿನೊಂದಿಗೆ, ಮೂರ್ಖರಂತೆ ಇಂಥ ವೈದ್ಯರನ್ನು ನಿಂದಿಸುವುದು
ಯಾವ ನ್ಯಾಯ? ಆರೋಪಕ್ಕೆ ಕೊಡುವ ಸಮರ್ಥನೆಯಾದರೂ ಏನು? ಕನ್ನಡ ಚಿತ್ರರಂಗದಲ್ಲಿ ೪೬ ವರ್ಷಗಳ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ, ಹೀರೋ ಎಂಬ ಹಮ್ಮುಬಿಮ್ಮುಗಳನ್ನು ಬಿಟ್ಟು, ನಟಸಾರ್ವಭೌಮನ ಮಗನೆಂಬ ನೆರಳನ್ನೂ ದಾಟಿ, ತಮ್ಮ ಸಜ್ಜನಿಕೆಯ ನಡೆ, ವಿನಯವಂತಿಕೆ, ಮೃದು ಮಾತುಗಳಿಂದಲೇ ಕನ್ನಡಿಗರ ಹೃದಯಗೆದ್ದ , ಬದುಕಿರುವವರೆಗೂ ಯಾರನ್ನೂ ನೋಯಿಸಿದ, ತಪ್ಪಿಯೂ ಮಾತಿನಲ್ಲಾಗಲೀ, ನಡೆಯಲ್ಲಾಗಲೀ ಎಡವಿರದ ಸ್ವಚ್ಛ ವ್ಯಕ್ತಿತ್ವದ ಪುನೀತ್ ಹೆಸರು ಹೇಳಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ಈ ಪೊಳ್ಳು ಅಭಿಮಾನಕ್ಕೆ ಕನ್ನಡಿಗರೆಲ್ಲರ ಧಿಕ್ಕಾರವಿರಲಿ.
ಬಹುಶಃ ಸ್ವತಃ ಪುನೀತ್ರೇ ಇಂಥವಕ್ಕೆಲ್ಲ ಸೊಪ್ಪು ಹಾಕುತ್ತಿರಲಿಲ್ಲ. ಹೇಳಿ ಕೇಳಿ ಅವರು ಅಣ್ಣಾವ್ರ ವಂಶದ ಅಭಿಮಾನದ ಕೂಸು. ಹಿಂದೊಮ್ಮೆ ತಮ್ಮ ಅಭಿಮಾನಿಗಳ ಹಾವಳಿ ತೀವ್ರವಾದಾಗ, ಅಭಿಮಾನದ ಹೆಸರಲ್ಲಿ ಸಾಮಾನ್ಯರ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತಿದೆ ಎಂಬುದು ಗೊತ್ತಾದಾಗ ಡಾ. ರಾಜ್ ಕುಮಾರ್ ಅವರೇ, ಅದನ್ನು ಖಂಡಿಸಿ, ತಮಗೂ ಅಭಿಮಾನಿಗಳ ಸಂಘಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸಾರ್ವಜನಿಕವಾಗಿ ಘೋಷಿಸಿದ್ದರು. ಮೇರುಪರ್ವತದಂಥ ವ್ಯಕ್ತಿತ್ವಕ್ಕೆ ಅಭಿಮಾನದ ಹೆಸರಲ್ಲಿ ಮಸಿ ಬಳಿಯುವ ಕಾರ್ಯ ಅಂದಿನಿಂದಲೂ ನಡೆದೇ ಇದೆ. ಅದರ ಸ್ಪಷ್ಟ ಅರಿವಿದ್ದೇ ಅಣ್ಣಾವ್ರು ಈ ಮಾತುಗಳನ್ನು ಆಡಿದ್ದು. ಅಪ್ಪು ಅಭಿಮಾನಿಗಳಿಂದಲೂ ಅಂಥದ್ದೇ ಅಪಸವ್ಯ ನಡೆಯುತ್ತಿರುವುದು ದುರಂತ.
ಸುಟ್ಟ ಮನೆಯ ಗಳ ಹಿರಿಯುವ ಹುನ್ನಾರದ, ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುವ ಮನೋಭಾವದ, ಸಾವಿನಿಂದ ಸಾಮ್ರಾಜ್ಯ ಕಟ್ಟಲು ಹವಣಿಸುವ, ಯಾರದ್ದೋ ವ್ಯಕ್ತಿತ್ವಕ್ಕೆ ಮಸಿ ಬಳಿದು, ಇನ್ಯಾರದ್ದೋ ಗೋರಿಯ ಮೇಲೆ ಸಾಮ್ರಾಜ್ಯ ಸ್ಥಾಪನೆ ಮಾಡುವ ಅಗ್ಗದ ತಂತ್ರಗಳ ಮೂಲಕ ಪ್ರಚಾರಕ್ಕೆ ಎಳೆಸುವ ಇಂಥ ಭ್ರಷ್ಟ ಮನಸಿನ, ಕೀಳು ಮನಸ್ಥಿತಿಯನ್ನು ಮೊಳಕೆಯಲ್ಲೇ ಚಿವುಟಿ ಹಾಕುವುದು ಅತ್ಯಂತ ಅಗತ್ಯ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲೂ ಕುಟುಂಬದಲ್ಲೂ ಹಿರಿಯ ಸ್ಥಾನದಲ್ಲಿರುವ ರಾಜ್ ಕುಟುಂಬ ದವರೇ ಆದ ಶಿವರಾಜ್ ಕುಮಾರ್ ಸೇರಿದಂತೆ ಎಲ್ಲರೂ ಇದನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಬೇಕಿರುವುದು ವಿಹಿತ. ಒಪ್ಪೋಣ, ಇಡೀ ಕುಟುಂಬ ದುಃಖದಲ್ಲಿದೆ. ಹಾಗೆಂದು ನಿಮ್ಮ ಮೌನವನ್ನು ದುರ್ಬಳಕೆ ಮಾಡಿಕೊಂಡು ಇಂಥ ವಿದ್ರೋಹಿ ಶಕ್ತಿಗಳನ್ನು ಬೆಳೆಯಲು ಬಿಟ್ಟರೆ ದೊಡ್ಡಮನೆ ಹೆಸರಿಗೇ ಮಸಿ ಬಳಿದಾರು. ಹಿಂದೆ ಅಣ್ಣಾವ್ರ ಹೆಸರಲ್ಲಿ ಆದದ್ದೆಲ್ಲವೂ ಗೊತ್ತೇ ಇದೆ. ಸರಕಾರ, ರಕ್ಷಣಾ ವ್ಯವಸ್ಥೆಗಳೂ ತಮ್ಮ ನಿಲುವನ್ನು ಸ್ಪಷ್ಟಪಡಿಸುವುದರೊಂದಿಗೆ, ಇಂಥವರು ಬಾಲಬಿಚ್ಚದಂತೆ ಕಟು ಎಚ್ಚರಿಕೆಯ ಸಂದೇಶ ರವಾನಿಸುವ ಅಗತ್ಯವಿದೆ. ಇಲ್ಲದಿದ್ದರೆ, ಮುಂದೊಂದು ದಿನ ಇಂಥ ಸನ್ನಿವೇಶದಲ್ಲಿ ಚಿಕಿತ್ಸೆ ನೀಡಲು ಯಾವೊಬ್ಬ ವೈದ್ಯರೂ ಮುಂದಾಗದ ಅಪಾಯದ ಸನ್ನಿವೇಶವನ್ನು ನಾವೇ ಸೃಷ್ಟಿಸಿಕೊಂಡತೆಯೇ ಸರಿ.
ಗಂಭೀರ ಸನ್ನಿವೇಶವಿಲ್ಲ
ಡಾ.ರಮಣ್ರಾವ್ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಮೂರು ದೂರುಗಳು ದಾಖಲಾಗಿವೆ. ಕುಟುಂಬ ಸದಸ್ಯರು ದೂರು ಸಲ್ಲಿಸಿದರೆ ಅದು ಗಂಭೀರವಾಗಿರುತ್ತದೆ. ಆದರೆ, ಇಲ್ಲಿ ದೂರು ಸಲ್ಲಿಸಿದವರು ಹೊರಗಿನವರು. ಪ್ರಾಥಮಿಕ ತನಿಖೆ ನಡೆದಿದ್ದು, ಕಾನೂನು ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.
ಸ್ವಂತ ಮಗನಂತೆ ನೋಡಿದ್ದೇನೆ
ಶುಕ್ರವಾರ ಪುನೀತ್ ನಮ್ಮ ಕ್ಲಿನಿಕ್ಗೆ ಬಂದಿದ್ದರು. ಆಗ ನಾನು ಬೇರೆ ರೋಗಿಯನ್ನು ಪರೀಕ್ಷಿಸುತ್ತಿದ್ದೆ. ನಮ್ಮ ಸೆಕ್ರೆಟರಿ ಬಂದು ಅಪ್ಪು ಬಂದಿದ್ದಾಗಿ ಹೇಳಿದರು. ಕೂಡಲೇ ನಾನು ನೋಡುತ್ತಿದ್ದ ರೋಗಿಯನ್ನು ಹೊರಗೆ ಕಳುಹಿಸಿ ಅಪ್ಪು ಪರೀಕ್ಷೆ ಮಾಡಿದೆ.
ಹಾರ್ಟ್ ಬೀಟ್, ಉಸಿರಾಟ ಎಲ್ಲವೂ ಸರಿಯಿತ್ತು. ಆದರೂ ಅಪ್ಪು ಬೆವರುತ್ತಿದ್ದರು. ಈಗಷ್ಟೇ ಜಿಮ್ ಮುಗಿಸಿ ಬಂದಿದ್ದಾಗಿ ತಿಳಿಸಿದರು. ಕೂಡಲೇ ಇಸಿಜಿ ಮಾಡಿದೆ. ಹೃದಯಲ್ಲಿ ಸ್ಟ್ರೇನ್ ಇರುವುದು ತಿಳಿಯಿತು. ಹಾಗಾಗಿ ಕೂಡಲೇ ಹೈಯರ್ ಕಾರ್ಡಿಯ ಕೇರ್ ಅಗತ್ಯ ಇರುವುದು ತಿಳಿಯಿತು. ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಎಂದು ತಿಳಿಸಿದೆ. ಅಪ್ಪುಗೆ ಸುಸ್ತಾಗಿದ್ದ ಕಾರಣ, ಅವರನ್ನು ಮಲಗುವಂತೆ ತಿಳಿಸಿ, ನಾವೇ ಕಾರಿನಲ್ಲಿ ಕೂರಿಸಿದೆವು. ಕ್ಲಿನಿಕ್ನಲ್ಲಿ ಸಾಕಷ್ಟು ಪೇಷಂಟ್ಸ್ ಇದ್ದಿದ್ದರಿಂದ ನಾನು ಆಸ್ಪತ್ರೆಗೆ ಹೊರಡಲು ತಡವಾಯಿತು. ನಮ್ಮದು ಕ್ಲಿನಿಕ್. ಹಾಗಾಗಿ ಇಲ್ಲಿ ಎಷ್ಟು ಸಾಧ್ಯವೋ ಅಷ್ಟು ಚಿಕಿತ್ಸೆ ನೀಡಿದೆ. ಇಂತಹ ಸಮಯದಲ್ಲಿ ನನ್ನ ಮಗನೇ ಆಗಿದ್ದರೆ ಏನೆಲ್ಲ ಚಿಕಿತ್ಸೆಗೆ ಕ್ರಮ ತೆಗೆದುಕೊಳ್ಳಬೇಕಿತ್ತೋ ಅದೆಲ್ಲವನ್ನೂ ಮಾಡಿದ್ದೇನೆ. ನಮ್ಮ ಕ್ಲಿನಿಕ್ಗೆ ಆಂಬ್ಯುಲೆನ್ಸ್ ಬರಲು ೧೫ ನಿಮಿಷ ಬೇಕು. ಮತ್ತೆ ಆಸ್ಪತ್ರೆಗೆ ತೆರಳಲು ೧೫ ನಿಮಿಷ ಬೇಕು. ಹಾಗಾಗಿ ತಡ ಆಗಬಾರದು ಎಂದು ಕಾರಿನಲ್ಲಿಯೇ ಆಸ್ಪತ್ರೆಗೆ ತೆರಳುವಂತೆ ತಿಳಿಸಿದೆ.
-ಡಾ.ರಮಣ್ ರಾವ್
ಇವೆಲ್ಲಾ ಯಾಕೆ?
ಭಜರಂಗಿ-೨ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿಯೇ ಅಪ್ಪು ಡಲ್ ಆಗಿದ್ದರು ಎಂದು ಗೀತಾ ಹೇಳಿದರು. ಶೂಟಿಂಗ್
ಮುಗಿಸಿ ಬಂದಿದ್ದರಿಂದ ಟೈಯರ್ಡ್ ಆಗಿರಬಹುದು ಎಂದುಕೊಂಡಿದ್ದೆ. ಅಪ್ಪು ಅನಾರೋಗ್ಯದ ಬಗ್ಗೆ ಸಣ್ಣ ಸುಳಿವು ಸಿಕ್ಕಿದ್ದರೂ ಕೂಡಲೇ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆ. ಕೊನೆಗೂ ಪ್ರೀತಿಯ ತಮ್ಮನನ್ನು ಕಳೆದುಕೊಂಡೆ. ಡಾ.ರಮಣ ರಾವ್ ನಮ್ಮ
ಕುಟುಂಬಕ್ಕೆ ಆತ್ಮೀಯರು. ಅವರು ಪರೀಕ್ಷಿಸಿ, ವಿಕ್ರಂ ಆಸ್ಪತ್ರೆಗೆ ಕೂಡಲೇ ಕಳುಹಿಸಿದ್ದಾರೆ. ಆಸ್ಪತ್ರೆಯಲ್ಲಿಯೂ ಅಪ್ಪು ಉಳಿಸಲು ವೈದ್ಯರು ಶ್ರಮಿಸಿದ್ದಾರೆ. ಆದರೂ ಸಾಧ್ಯವಾಗಲಿಲ್ಲ. ವಿಧಿ ಹತ್ತು ನಿಮಿಷ ಕಾಲಾವಕಾಶ ಕೊಡಬೇಕಿತ್ತು. ಅಪ್ಪು ಇಲ್ಲ ಎಂದ ಮೇಲೆ ದೂರು, ತನಿಖೆ ಇಂಥವೆಲ್ಲ ಯಾಕೆ?
– ಶಿವರಾಜ್ ಕುಮಾರ್