ಈಜಿಪ್ಟ್ ಡೈರಿ – ಪ್ರವಾಸದ ಒಳ – ಹೊರಗಿನ ಕಥನ – ಭಾಗ ೧
ಎಲ್ಲ ಗೊಂದಲ, ಅಪಸವ್ಯಗಳ ನಡುವೆಯೂ ಬದುಕನ್ನು ರೋಚಕವಾಗಿರಿಸಿರುವ ವಿಸ್ಮಯ ನಗರ
ಕಳೆದ ಎರಡು ದಿನಗಳಿಂದ ಈಜಿಪ್ಟ್ ರಾಜಧಾನಿ ಕೈರೋದಲ್ಲಿ ನಾನು ಒಂದೇ ಸಮನೆ ತಿರುಗಾಡುತ್ತಿದ್ದೇನೆ. ಕೈರೋಕ್ಕೆ ಇದು ನನ್ನ ಎರಡನೇ ಭೇಟಿ ಮತ್ತು ಕರೋನಾ ನಂತರ ನಾನು ಭೇಟಿ ನೀಡುತ್ತಿರುವ ನಾಲ್ಕನೇ (ದುಬೈ, ಅಬು ಧಾಬಿ, ಜೋರ್ಡನ್
ಮೊದಲ ಮೂರು ದೇಶಗಳು) ದೇಶ. ಚಹರೆ, ಜನಲಕ್ಷಣ, ಭರಾಟೆ, ಮೊದಲ ನೋಟ, ಮೊದಲ ಇಂಪ್ರೆಷನ್ ನೋಡಿದರೆ, ಹೆಚ್ಚು – ಕಮ್ಮಿ ನಮ್ಮ ದೇಶದ ಯಾವುದಾದರೂ ಜನನಿಬಿಡ ನಗರದಂತೆ ಇದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಬೆಂಗಳೂರು ಅಣ್ಣನಂತೆ ಮತ್ತು ಮುಂಬೈ ತಮ್ಮನಂತೆ ತೋರುತ್ತದೆ. ಟ್ರಾಫಿಕ್ ಪೊಲೀಸ್ ಮತ್ತು ಟ್ರಾಫಿಕ್ ಲೈಟ್ಗಳೆಲ್ಲ ಇದ್ದರೂ, ಇಲ್ಲಿ ಅವ್ಯಾವವೂ ಪ್ರಯೋಜನಕ್ಕೆ ಬಾರದು ಮತ್ತು ಅವೆಲ್ಲ ಇಲ್ಲಿ
ಅರ್ಥಹೀನ ವಾಗಿ ಕಾಣುತ್ತದೆ.
ಇಂಗ್ಲಿಷಿನಲ್ಲಿ ಒಂದು ಮಾತಿದೆ – Why do you they call it rush hour when nothing moves.. ಈ ಮಾತು ಹೆಜ್ಜೆ ಹೆಜ್ಜೆಗೆ ಕೈರೋ ದಲ್ಲಿ ಅನ್ವಯ ಆಗುತ್ತದೆ. ಗೂಗಲ್ ಮ್ಯಾಪ್ ತೆಗೆದು ನೋಡಿದರೆ, ಕೈರೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಾನು ಉಳಿದುಕೊಳ್ಳಲಿರುವ ಹೋಟೆಲ್ ಮುಕ್ಕಾಲು ಗಂಟೆಯ ಹಾದಿ ಎಂದು ತೋರಿಸುತ್ತಿತ್ತು. ಆದರೆ ನಾನು ಹೊಟೇಲ್ಗೆ ಬಂದಾಗ, ಒಂದು ಗಂಟೆ ಮೂವತ್ತೈದು ನಿಮಿಷ. ತಿರುಪತಿ ಯಲ್ಲಿ ದರ್ಶನಕ್ಕೆ ಸರತಿಯಲ್ಲಿ ಕಾಯುತ್ತ ನಿಂತ ಭಕ್ತರಂತೆ ವಾಹನಗಳು ಮೈಮೈ ತಾಕಿಸಿಕೊಂಡು ನಿಂತಿದ್ದವು.
ಕಣ್ಣುಗಳಿಗೆ ಕಪ್ಪು ಬಟ್ಟೆ ತೊಡಿಸಿ, ಎತ್ತಾಕಿಕೊಂಡು ಬಂದು ಬಿಟ್ಟರೆ, ತಕ್ಷಣಕ್ಕೆ ಜನನಿಬಿಡ, ಇಕ್ಕಟ್ಟಾದ ಮುಂಬೈ ರಸ್ತೆಗಳಂತೆ, ಇನ್ನೂ ಹತ್ತಿರವಾಗಿ ಹೇಳಬೇಕೆಂದರೆ, ತರಗುಪೇಟೆ, ಅವೆನ್ಯೂ ರಸ್ತೆಯ ಸಂದು-ಗೊಂದುಗಳಂತೆ ಕಾಣುವ ಕೈರೋ, ನಗರದ
ಎಲ್ಲ ಅವತಾರ, ಆವೇಶ, ಕುರೂಪ, ಸೌಂದರ್ಯಗಳನ್ನೆಲ್ಲ ಕ್ಷಣ ಕ್ಷಣಕ್ಕೂ ದರ್ಶನ ಮಾಡಿಸುವ, ಎಲ್ಲ ಗೊಂದಲ, ಅಪಸವ್ಯಗಳ ನಡುವೆಯೂ, ಬದುಕನ್ನು ರೋಚಕವಾಗಿರಿಸಿರುವ, ಬದುಕಿನ ಎಲ್ಲ ಸಾಧ್ಯತೆಗಳಿಗೂ ಅವಕಾಶ ಮಾಡಿಕೊಡಲು ತವಕಿಸುವ ವಿಸ್ಮಯ ನಗರವೆಂದು ಯಾರಿಗಾದರೂ ಅನಿಸದೇ ಇರದು.
ನಾನು ಈಜಿಪ್ಟ್ಗೆ ಬರಲು ಬಲವಾದ ಕಾರಣವಿತ್ತು. ನಾನು ಇಸ್ರೇಲನ್ನು ಒಂಬತ್ತು ಬಾರಿ ಸುತ್ತಿ ಬಂದವನು. ಅದೇನೋ ಗೊತ್ತಿಲ್ಲ, ಇಸ್ರೇಲ್ ಬಗೆಗಿನ ನನ್ನ ವ್ಯಾಮೋಹ ದಟ್ಟವಾದುದು. ಇಸ್ರೇಲನ್ನು ಸುತ್ತುವರಿದ ಜೋರ್ಡನ್, ಲೆಬನಾನ್, ಪ್ಯಾಲಿಸ್ಟೈನ್ ದೇಶ ಗಳಿಗೆ ಹೋಗಿ ಬಂದವನು. ಗಾಳಿಪಟದ ಆಕಾರದ ಇಸ್ರೇಲಿನ ಕೆಳಗಿನ ಅರ್ಧಭಾಗವನ್ನು ತಲೆಕೆಳಗಾದ ಪಿರಮಿಡ್ಡು ಎಂದು ಭಾವಿಸಿದರೆ, ಬಲಭಾಗ ಜೋರ್ಡನ್ ಮತ್ತು ಎಡಭಾಗ ಈಜಿಪ್ಟ್. ಇಸ್ರೇಲಿನ ಪಶ್ಚಿಮಕ್ಕೆ ಈಜಿಪ್ಟ್ ಸುಮಾರು ಇನ್ನೂರೈವತ್ತು ಕಿಮಿ ದೂರದ ಗಡಿಭಾಗವನ್ನು ಹಂಚಿಕೊಂಡಿದೆ.
ಇಸ್ರೇಲಿನ ಪಶ್ಚಿಮಕ್ಕಿರುವ ಗಾಝ ಕೂಡ ಈಜಿಪ್ಟ್ ಗಡಿಭಾಗಕ್ಕೆ ಹೊಂದಿಕೊಂಡಿದೆ. ಇಸ್ರೇಲ್ ಗಡಿಗುಂಟ ಇರುವ ಈಜಿಪ್ಟನದು ಮರು ಭೂಮಿಯೇ. ಅಲ್ಲಿ ಮನುಷ್ಯ ವಸತಿ ಸಹ ದುರ್ಲಭ.
ಆದರೂ ಜೋರ್ಡನ್ ಮತ್ತು ಲೆಬನಾನ್ ಬಿಟ್ಟರೆ, ಅತಿ ಉದ್ದದ ಗಡಿ ಭಾಗ ಹಂಚಿಕೊಂಡಿರುವ ಮತ್ತೊಂದು ಪ್ರಮುಖ ಅರಬ್ ದೇಶವೆಂದರೆ ಈಜಿಪ್ಟ್. ಹೀಗಾಗಿ ಈಜಿಪ್ಟ್ ಸಹಜವಾಗಿ ಜಾಗತಿಕ-ರಾಜಕೀಯ (ಜಿಯೋ-ಪಾಲಿಟಿಕ್ಸ್) ದೃಷ್ಟಿಕೋನದಿಂದ ಮಹತ್ವವನ್ನು ಪಡೆಯುತ್ತದೆ. ಕೈರೋದಿಂದ ಸುಯೆಜ್ ಕಾಲುವೆ (ಗಲ್ಫ್ ಆಫ್ ಸುಯೆಜ್) ದಾಟಿ, ಇಸ್ರೇಲಿನ ದಕ್ಷಿಣದ ತುದಿ ಯಲ್ಲಿರುವ ಅಕಬಾ ಮಾರ್ಗವಾಗಿ, ರಾಜಧಾನಿ ಜೆರುಸಲೇಮ್ ಗೆ ೭೫೦ ಕಿಮಿ. ಸುಮಾರು ಒಂಬತ್ತೂವರೆ ತಾಸುಗಳಲ್ಲಿ ಕಾರಿನಲ್ಲಿ
ತಲುಪಬಹುದು. ಇಸ್ರೇಲ್ ಮತ್ತು ಈಜಿಪ್ಟ್ ಅಕ್ಕಪಕ್ಕದ ರಾಷ್ಟ್ರಗಳು ಸಹಜವಾಗಿ ಹೊಂದಿರುವ ಸ್ನೇಹ-ದ್ವೇಷಗಳನ್ನೆಲ್ಲ ದಂಡಿಯಾಗಿಯೇ ಹಂಚಿಕೊಂಡಿವೆ.
ಇತರ ಅರಬ್ ದೇಶಗಳು ಇಸ್ರೇಲ್ ವಿರುದ್ಧ ಈಜಿಪ್ಟನ್ನುಕೊಂಡಿದ್ದೇ ಹೆಚ್ಚು. ಈಜಿಪ್ಟ್ ಕೂಡ ತನಗಿಂತ ಬೇರೆ ರಾಷ್ಟ್ರಗಳ ಮಾತು ಕೇಳಿ, ಇಸ್ರೇಲ್ ವಿರುದ್ಧ ಜಗಳಕ್ಕೆ ಹೋಗಿ ಇಕ್ಕಿಸಿಕೊಂಡಿದ್ದು ಹೆಚ್ಚು. ಹೀಗಾಗಿ ಈಜಿಪ್ಟ್ನಲ್ಲಿ ನಿಂತು ಇಸ್ರೇಲನ್ನು ನೋಡ
ಬೇಕಿತ್ತು. ಖುzಗಿ ಇಸ್ರೇಲ್ ಬಗ್ಗೆ ಈಜಿಪ್ಶಿಯನ್ನರ ಮಾತುಗಳನ್ನು ಕೇಳುವುದು ಹೆಚ್ಚು ಮುಖ್ಯವಾಗಿತ್ತು. ಜತೆಗೆ ಕೋವಿಡ್ ಮಹಾಮಾರಿ ಬಳಿಕ, ಜಗತ್ತು ಹೇಗೆ ಸುಧಾರಿಸಿಕೊಳ್ಳುತ್ತಿದೆ ಎಂಬುದನ್ನು ನೋಡಬೇಕಿತ್ತು.
ಜತೆಗೆ, ಜಗತ್ತಿನ ವಿಸ್ಮಯಗಳಂದಾದ ಪಿರಮಿಡ್ಡುಗಳನ್ನು ಹೊಂದಿದ ದೇಶವನ್ನು ಅಂತಾರಾಷ್ಟ್ರೀಯ ಪ್ರವಾಸಿಗರು ಹೇಗೆ ನೋಡಲಾರಂಭಿಸಿzರೆ ಎಂಬುದನ್ನೂ ಅರಿಯಬೇಕಿತ್ತು. ಇವೆಲ್ಲಕ್ಕಿಂತ ಮುಖ್ಯವಾಗಿ, ಮೂರು ವರ್ಷಗಳಿಂದ ಜಡ ಹಿಡಿದು ನಪರೆತ್ತಿ ಹೋದ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಯಾವ ರೀತಿಯಲ್ಲಿ ಚೇತರಿಕೆಯ ಲಕ್ಷಣಗಳನ್ನು ಕಂಡುಕೊಳ್ಳುತ್ತಿದೆ ಎಂಬುದನ್ನು ಸಾಕ್ಷಾತ್ ಅರಿಯಬೇಕಿತ್ತು. ಅದಕ್ಕೆ ಕೈರೋದಂಥ ಅಚ್ಚರಿ, ವಿಷಾದ, ವಿಸ್ಮಯ, ಗೊಂದಲ, ಅನಿಶ್ಚಿತತೆ ತುಂಬಿದ
ದೇಶ ಮತ್ತೊಂದಿರಲಿಲ್ಲ. ಹೀಗಾಗಿ ಹಿಂದೆ-ಮುಂದೆ ನೋಡದೇ ಕೈರೋಗೆ ಬಂದಿಳಿದೆ.
ಇದರ ಜತೆಗೆ ಮತ್ತೊಂದು ಕಾರಣವೂ ಇದೆ. ಜಗತ್ತಿನ ಅಚ್ಚರಿಗಳಂದಾದ ಪಿರಮಿಡ್ಡುಗಳನ್ನು ಇಟ್ಟುಕೊಂಡು ಒಂದು ದೇಶ ಪ್ರವಾಸೋದ್ಯಮದಲ್ಲಿ ಯಾವ ಶ್ರೇಷ್ಠತೆಯನ್ನು ಸಾಧಿಸಿದೆ ಎಂಬುದನ್ನು ನೋಡಬೇಕಿತ್ತು. ಪಿರಮಿಡ್ಡಿನಂಥ ಸೋಜಿಗವನ್ನು
ಹೊಂದಿದ ದೇಶ ಪ್ರವಾಸಿಗರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದು ಪ್ರವಾಸೋದ್ಯಮದ ಒಟ್ಟಂದ ಮತ್ತು ಹಿರಿಮೆಯ ದೃಷ್ಟಿಯಿಂದ ಮಹತ್ವವೇ.
ಕೋವಿಡ್ ನಂತರದ ದಿನಗಳಲ್ಲಿ ಇವೆ ಬೇರೆ ಬೇರೆ ಆಯಾಮ ಪಡೆದಿರುವುದು ಸಹ ಗಮನಾರ್ಹವೇ. ವಿಶ್ವ ಪಾರಂಪರಿಕ ಸ್ಥಳಗಳಲ್ಲಿ ಸಂಚರಿಸುವವರನ್ನು ಉತ್ತೇಜಿಸುವ ವಿಶ್ವ ಸಂಸ್ಥೆಯ ವಿಶೇಷ ಪ್ರವಾಸಿಗನಾಗಿ ಇವೆಲ್ಲವನ್ನೂ ನೋಡಲೇಬೇಕಿತ್ತು.
ಜತೆಗೆ ವಿಶ್ವದ ಅತ್ಯಂತ ಉದ್ದದ ನದಿಗಳಂದಾದ ನೈಲ್ ನದಿ ಸಂರಕ್ಷಣೆಯನ್ನು ಉತ್ತೇಜಿಸುವ ಬೃಹತ್ ಕಾರ್ಯದಲ್ಲಿ ತೊಡಗಿರುವ ಅಂತಾರಾಷ್ಟೀಯ ನದಿ ಸಂರಕ್ಷಕರ ಅಭಿಯಾನ ಈಗ ತಲುಪಿರುವ ಹಂತ ಮತ್ತು ಮಜಲುಗಳನ್ನು ಅರಿಯಬೇಕಿತ್ತು.
ಇದರೊಂದಿಗೆ ಪ್ರವಾಸಿಗರ ದಟ್ಟಣೆಯ ಮಧ್ಯೆ ವಿಶ್ವ ಪಾರಂಪರಿಕ ಪಿರಮಿಡ್ಡುಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಬಗ್ಗೆ
ಈಗಾಗಲೇ ಮೂಡಿರುವ ಜಾಗೃತಿ ಬಗ್ಗೆ ಪಾರಂಪರಿಕ ಸ್ಥಳಗಳ ಇತಿಹಾಸಕಾರರು ಕೈಗೊಂಡಿರುವ ಕ್ರಮಗಳನ್ನು ಖುದ್ದಾಗಿ ನೋಡಬೇಕಿತ್ತು. ಇಂಥ ಪ್ರವಾಸ ಕೈಗೊಳ್ಳುವವರನ್ನು ಯುನೆಸ್ಕೋ, ಪೂರಕ ಮಾಹಿತಿ ನೀಡಿ ಪ್ರೋತ್ಸಾಹಿಸುವ ಸಂಗತಿ ನಿಮಗೆ ಗೊತ್ತಿರಲಿಕ್ಕೆ ಸಾಕು. ಈ ಎಲ್ಲ ಅಂಶಗಳನ್ನು ಕಟ್ಟಿಕೊಂಡು, ಕುತೂಹಲದ ಕಣ್ಣುಗಳರಸಿ, ಭರ್ತಿ ಮಾಡಿಕೊಳ್ಳಲು ಖಾಲಿ ಮನಸ್ಸಿ ನೊಂದಿಗೆ ಕೈರೋಗೆ ಬಂದಿಳಿದೆ. ಇನ್ನು ಹತ್ತು ದಿನ ಇಲ್ಲಿಯೇ ನನ್ನ ವಾಸ. ಬರೀ ಪ್ರವಾಸ, ರೋಚಕ ಸ್ಥಳಗಳಿಗೆ ಭೇಟಿ, ಪ್ರಮುಖ ವ್ಯಕ್ತಿಗಳ ಜತೆ ಮಾತುಕತೆ, ಸಂದರ್ಶನ, ಸುತ್ತಾಟ… ದಿನಕ್ಕೆ ಐದು ತಾಸು ವಿಶ್ರಾಂತಿ ಬಿಟ್ಟರೆ ಮೈ-ಮನಗಳಲ್ಲಿ ಬರೀ ಕೈರೋ..ಗಿಜಾ
ಪಿರಮಿಡ್ಡು, ಸಿಂಹನಾರಿ (ಸ್ಪಿನ್ಕ್ಸ), ಮಮ್ಮಿ, ನೈಲ್ ನದಿ, ಐತಿಹಾಸಿಕ-ಪಾರಂಪರಿಕ ಸ್ಥಳ, ಹಳೆ ಕೈರೋ ನಗರಿ, ಗಲ್ಲಿ-ಗೊಂದಲ, ಸ್ಥಳೀಯ ಆಹಾರಗಳ ರಸಾನುಭೂತಿ, ಜೀವನ ಪದ್ಧತಿ… ಹೀಗೆ ಇನ್ನೂ ಏನೇನೋ. ನಾನು ಕಂಡಿದ್ದನ್ನೆಲ್ಲ ನಿಮ್ಮ ಮುಂದೆ ಹರವಿ
ಇಡುವ ತನಕ ನನಗೂ ಸಮಾಧಾನವಿಲ್ಲ.