೯೪ ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಇ-ಟಾಯ್ಲೆಟ್
ಅಪರ್ಣಾ ಎ.ಎಸ್. ಬೆಂಗಳೂರು
ರಾಜಧಾನಿ ಬೆಂಗಳೂರನ್ನು ಒಂದೆಡೆ ಸ್ವಚ್ಛಗೊಳಿಸುವುದಕ್ಕೆ ಬಿಬಿಎಂಪಿ ಪ್ರತಿ ವರ್ಷ ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಿದೆ. ಇನ್ನೊಂದೆಡೆ ಈಗಾಗಲೇ ಕೋಟಿ ಕೋಟಿ ಖರ್ಚು ಮಾಡಿರುವ ಇ-ಶೌಚಾಲಯಕ್ಕೆ ಸೌಕರ್ಯದ ಗ್ರಹಣ ಹಿಡಿದು, ಸಾರ್ವ ಜನಿಕರ ಬಳಕೆಗೆ ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಸ್ವಚ್ಛ ಭಾರತದ ಭಾಗವಾಗಿ ಸುಮಾರು ೯೪ ಕೋಟಿ ರು. ವೆಚ್ಚದಲ್ಲಿ ಬೆಂಗಳೂರಿನ ವಿವಿಧ ಭಾಗದಲ್ಲಿ ೧೬೯ ಇ-ಟಾಯ್ಲೆಟ್ಗಳಿಗೆ ಬಿಬಿಎಂಪಿ ಚಾಲನೆ ನೀಡಿತ್ತು. ಆದರೀಗ ಅವುಗಳ ನಿರ್ವಹಣೆಗೆ ನೀಡಿದ್ದ ಟೆಂಡರ್ ಅವಧಿ ಪೂರ್ಣಗೊಂಡಿದ್ದು, ಮೂಲ ಸೌಕರ್ಯದ ಕೊರತೆ ಎದುರಾಗಿದೆ. ಇದರಿಂದಾಗಿ, ಇ-ಶೌಚಾಲಯಗಳು ಬೆಂಗಳೂರಿನಲ್ಲಿ ಇದ್ದೂ ಇಲ್ಲವಾಗಿದೆ.
ಇ-ಟಾಯ್ಲೆಟ್ಗಳಲ್ಲಿ ಪ್ರಮುಖವಾಗಿ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆ ಅತ್ಯಗತ್ಯ. ಆಟೋಮೆಟಿಕ್ ಯಂತ್ರಗಳಿರುವುದರಿಂದ ವಿದ್ಯುತ್ ಇಲ್ಲದಿದ್ದರೆ ಫ್ಲಷ್ ಆಗುವುದಿಲ್ಲ. ಆದರೆ, ನಿರ್ವಹಣೆ ಇಲ್ಲದೇ ವಿದ್ಯುತ್ ಕೊರತೆ ಶುರುವಾಗಿರುವುದರಿಂದ ಸಾರ್ವ ಜನಿಕರು ಶೌಚಾಲಯಕ್ಕೆ ಹೋದರೆ ನೀರು ಫ್ಲಷ್ ಆಗುವುದಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಎಷ್ಟು ಖರ್ಚು ಮಾಡಲಾಗಿದೆ?: ಮಹಾನಗರ ಪಾಲಿಕೆಯು ಪ್ರತಿ ಶೌಚಾಲಯಕ್ಕೆ ೫.೫೬ ಲಕ್ಷ ರು. ಖರ್ಚು ಮಾಡಿದ್ದು, ನಗರದ
೧೬೯ ಇ-ಟಾಯ್ಲೆಟ್ ಈಗ ಬಹುತೇಕ ಪಾಳುಬಿದ್ದಿವೆ. ಅನೇಕ ಕಡೆಗಳಲ್ಲಿ ಸ್ಟೋರ್ ರೂಮ್ನಂತೆಯೂ ಬಳಸಲಾಗುತ್ತಿದೆ.
೨೦೧೪ರಲ್ಲಿ ಸ್ವಚ್ಛ ಭಾರತ ಅಭಿಯಾನದಲ್ಲಿ ಈ ಇ-ಟಾಯ್ಲೆಟ್ಗಳನ್ನು ಆರಂಭಿಸಲಾಗಿದ್ದು, ಅವುಗಳಲ್ಲಿ ಕೆಲವೇ ಕೆಲವು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ೨೦೧೪-೧೭ ರ ನಡುವೆ ಅಟೋ ಫ್ಲಶ್ ಮತ್ತು ಅದೇ ರೀತಿಯ ಇತರೆ ವೈಶಿಷ್ಟ್ಯ ಗಳನ್ನು ಹೊಂದಿರುವ ಒಟ್ಟು ೧೬೯ ಇ-ಟಾ ಯ್ಲೆಟ್ಗಳನ್ನು ಪಾಲಿಕೆ ಸ್ಥಾಪಿಸಿದ್ದು, ನಗರಾದ್ಯಂತ ಕೆಲವು ಶೌಚಾಲಯಗಳು ನೀರಿಲ್ಲದೆ ಬಳಕೆಯಾಗದೇ ಉಳಿದಿದ್ದರೆ ಇನ್ನೂ ಕೆಲವು ವಿದ್ಯುತ್ ಸೌಲಭ್ಯವಿಲ್ಲದೆ ಬಳಕೆಯಾಗುತ್ತಿಲ್ಲ.
ಅನೇಕ ಕಡೆಗಳಲ್ಲಿ ಇ-ಶೌಚಾಲಯಗಳೇ ಮುಚ್ಚಿದ್ದು, ಕೆಲವು ಕಡೆಗಳಲ್ಲಿ ಜನರು ಬಳಸುತ್ತಿದ್ದರೂ ನಿರ್ವಹಣೆ ಇಲ್ಲದೇ ಬೀಗ
ಹಾಕಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿರ್ವಹಣೆ ಕೊರತೆ ಹಾಗೂ ಅವ್ಯವಸ್ಥೆಯ ಕುರಿತಂತೆ ಸಾರ್ವಜನಿಕರು ಅಧಿಕಾರಿಗಳಿಗೆ ದೂರು ನೀಡಿದರೂ ನಿರ್ಲಕ್ಷ್ಯ ವಹಿಸಲಾಗಿದೆ. ಇನ್ನು ಕೆಲವು ಶೌಚಾಲಯಗಳು ಸಾಂಪ್ರದಾಯಿಕ ಶಚಾಲಯಗಳ ಸಮೀಪದಲ್ಲಿದ್ದು, ಅನಗತ್ಯ ಕಾರಣಗಳಿಂದಾಗಿ ಬಳಕೆಯಾಗದೇ ಉಳಿದುಹೋಗಿದೆ.
ಇನ್ನು ಕೆಲವು ಕಡೆಗಳಲ್ಲಿ ರಸ್ತೆಗೆ ಅಡ್ಡವಾಗಿ ಶೌಚಾಲಯ ನಿರ್ಮಿಸಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಯುಂಟಾಗು ತ್ತಿದೆ. ಕೆಲವು ಕಡೆಗಳಲ್ಲಿ ಸರಿಯಾದ ನಿರ್ವಹಣೆಯಿಲ್ಲದೇ ಈ-ಶೌಚಾಲಯಗಳೇ ಕಿತ್ತುಬಂದಿದ್ದು, ವಿದ್ಯುತ್ ಸಂಪರ್ಕವಿಲ್ಲದೆ, ನೀರಿನ ಸಂಪರ್ಕವೂ ದೊರೆಯದೆ ಅಗತ್ಯವಿದ್ದರೂ ಬಳಸಲಾಗದ ಸ್ಥಿತಿಯಲ್ಲಿವೆ.
ಅಧಿಕಾರಿಗಳು ಹೇಳುವುದೇನು?: ಬಿಬಿಎಂಪಿಯು ನಿರ್ಮಿಸಿರುವ ೨೪೧ ಇ-ಶೌಚಾಲಯದಲ್ಲಿ೧೬೯ ಶೌಚಾಲಯಗಳ ನಿರ್ವಹ ಣೆಯ ಅವಧಿ ೬ ತಿಂಗಳ ಹಿಂದೆಯೇ ಮುಕ್ತಾಯವಾಗಿದ್ದು, ವ್ಯವಸ್ಥೆ ಆಗುವವರೆಗೂ ನಿರ್ವಹಣೆ ಮಾಡುವಂತೆ ಮೊದಲಿದ್ದ ಸಂಸ್ಥೆಗೆ ಮನವಿ ಮಾಡಲಾಗಿದೆ. ಇನ್ನು ಉಳಿದ ೭೨ ಇ-ಶೌಚಾಲಯಗಳು ಇತ್ತೀಚೆಗೆ ನಿರ್ಮಿಸಲಾಗಿದ್ದು, ಮೂರು ವರ್ಷಗಳ ನಿರ್ವಹಣಾ ಜವಾಬ್ದಾರಿಯನ್ನು ಏಜೆನ್ಸಿ ಯೊಂದಕ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
*
ಬಿಬಿಎಂಪಿಯವರು ಕೋಟಿಗಟ್ಟಲೆ ಖರ್ಚು ಮಾಡಿ ಇ-ಶೌಚಾಲಯ ನಿರ್ಮಿಸಿದ್ದಾರೆ. ಅನೇಕ ಜನರು ಅದನ್ನು ಬಳಸಿದರೂ ಕ್ರಮೇಣ ನಿರ್ವಹಣೆ ಇಲ್ಲದೆ, ನೀರಿನ ಸಂಪರ್ಕವಿಲ್ಲದೆ, ವಿದ್ಯುತ್ ಇಲ್ಲದೆ ಬೀಗ ಹಾಕಬೇಕಾಗಿ ಬಂದಿದೆ. ಕೊಟಿಗಟ್ಟಲೆ ಖರ್ಚು ಮಾಡಿದರೂ ಸಾರ್ವಜನಿಕರಿಗೆ ಮಾತ್ರ ಉಪಯೋಗವಿಲ್ಲದಂತಾಗಿದೆ.
– ಪ್ರವೀಣ್ ಗೌಡ, ಸಾರ್ವಜನಿಕರು