ಇದು ರಾಜಕೀಯ ಪ್ರಯಾಸ ಕಳೆಯುವ ಉದ್ದೇಶವೋ, ಭವಿಷ್ಯ ಬರೆಯುವ ಏಕಾಂತದ ಪ್ರವಾಸವೋ?
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಅಧಿಕಾರ ಹಸ್ತಾಂತರದ ನಂತರ ಮೌನಕ್ಕೆ ಶರಣಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸದ್ದಿಲ್ಲದೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಆದರೆ ಈ ಪ್ರವಾಸದ ಹಿಂದೆ ಬೇಸರವಿದೆಯೋ ಅಥವಾ ರಾಜಕೀಯ ಬದಲಾವಣೆಗಳ ಚಿಂತನೆ ಇದೆಯೋ ಎನ್ನುವ ಲೆಕ್ಕಾಚಾರ ಶುರುವಾಗಿದೆ.
ಏಕೆಂದರೆ, ಎರಡು ವರ್ಷಗಳ ಹಿಂದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಮೆರಿಕ ಪ್ರವಾಸಕ್ಕೆ ತೆರಳಿದ್ದಾಗ ಇತ್ತ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರಕ್ಕೆ ಕಂಟಕ ಉಂಟಾಗಿತ್ತು. ಆದರೆ ಅಂದಿನ ಸ್ಥಿತಿಗೂ ಇಂದಿನ ರಾಜಕೀಯ ಪರಿಸ್ಥಿತಿಗೂ ಬದಲಾವಣೆ ಇದೆ. ಇಲ್ಲಿ ಯಡಿಯೂರಪ್ಪ ಅಧಿಕಾರ ತ್ಯಜಿಸಿ ಬಸವರಾಜ ಬೊಮ್ಮಾಯಿಗೆ ಅವರಿಗೆ ಹಸ್ತಾಂತರಿಸಿ ನಂತರ ಪ್ರವಾಸಕ್ಕೆ ತೆರಳಿದ್ದಾರೆ. ಆದ್ದರಿಂದ ಆ ದಿನಗಳ ಬದಲಾವಣೆ ಗಳನ್ನು ಈಗ ನಿರೀಕ್ಷಿಸಲಾಗದು. ಆದರೆ ಯಡಿಯೂರಪ್ಪ ಪ್ರವಾಸ ಕಾಲದಲ್ಲಿ ರಾಜಕೀಯ ಬದಲಾವಣೆಗಳು ಆಗುವುದೇ ಇಲ್ಲ ಎಂದೇನೂ ಎಣಿಸಲಾಗದು. ಹೀಗಾಗಿ ಯಡಿಯೂರಪ್ಪ ಅವರ ರಾಜಕೀಯೇತರ ಪ್ರವಾಸ ರಾಜಕೀಯ ವಲಯದಲ್ಲಿ ಒಂದಷ್ಟು ಆಸಕ್ತಿ ಕೆರಳಿಸಿರುವುದಂತೂ ನಿಜ.
ಬೇಸರವೋ, ಬದಲಾವಣೆಯೋ?: ಯಡಿಯೂರಪ್ಪ ಅವರು ಅಧಿಕಾರ ಹಸ್ತಾಂತರದ ನಂತರ ಆಪ್ತರ ಭೇಟಿ ಮಾಡುತ್ತಲೇ ರಾಜಕೀಯ ಮೌನಕ್ಕೆ ಶರಣಾಗಿದ್ದರೇ ವಿನಾ ಎಲ್ಲಿಯೂ ತಮ್ಮ ಮುಂದಿನ ನಡೆಯನ್ನು ಪ್ರಕಟಿ ಸಿಲ್ಲ. ಹಾಗಂತ ಅವರು ಸುಮ್ಮನೆ ಕೂರುವ ಜಾಯಮಾನದವರೂ ಅಲ್ಲ. ಇಂಥ ಸನ್ನಿವೇಶದಲ್ಲಿ ಯಡಿಯೂರಪ್ಪ ಅವರು ಕುಟುಂಬದ ಸದಸ್ಯರ ಜತೆ ಸಾಗರದಾಚೆಗಿನ ಮಾಲ್ಡೀಗೆ ಪ್ರವಾಸ ತೆರಳಿರುವುದು ಅಚ್ಚರಿ ಉಂಟು ಮಾಡಿದೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ದಾವೋಸ್ನಲ್ಲಿ ನಡೆದಿದ್ದ ಹೂಡಿಕೆದಾರರ ಸಮಾವೇಶಕ್ಕೆ ಭೇಟಿ ನೀಡಿದ್ದನ್ನು ಬಿಟ್ಟರೆ, ಎರಡು ವರ್ಷಗಳಿಂದ ವಿದೇಶ ಪ್ರವಾಸ ಮಾಡಿರಲಿಲ್ಲ. ಹೀಗಾಗಿ ರಾಜಕೀಯ ಬೇಸರ ಮತ್ತು ಕೋವಿಡ್ ಚಟುವಟಿಕೆಗಳ ಪ್ರಯಾಸದ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಪ್ರವಾಸ ಕಾಲದಲ್ಲಿ ಯಡಿಯೂರಪ್ಪ ಪಾಳಯದ ಬದಲಾವಣೆ ಆಗುವುದೋ ಅಥವಾ ಎದುರಾಳಿ ಪಾಳಯದಲ್ಲೂ ತಂತ್ರಗಾರಿಕೆ ನಡೆಯುವುದೋ, ಹೇಳಲಾಗದು.
ಇದರ ಮಧ್ಯೆ, ಸರಕಾರದ ಒಂದಷ್ಟು ಬದಲಾವಣೆಗಳು ನಡೆದರೂ ಅಚ್ಚರಿ ಇಲ್ಲ ಎನ್ನುತ್ತಿದ್ದಾರೆ ಬಿಜೆಪಿಯ ಕೆಲವು ಮುಖಂಡರು. ಹೀಗಾಗಿ ಯಡಿಯೂರಪ್ಪ ಅವರದು ಬರೀ ಬೇಸರ ಕಳೆಯುವ ಪ್ರವಾಸವಾಗುವುದೇ ಅಥವಾ ಮುಂದಿನ ರಾಜಕೀಯ ಭವಿಷ್ಯ ರೂಪಿಸುವ ಚಿಂತನಾ ಕಾಲವಾಗುವುದೋ ಎನ್ನುವ
ಕುತೂಹಲಗಳು ಶುರುವಾಗಿವೆ.
ರಾಜ್ಯ ಪ್ರವಾಸ ಶೀಘ್ರ
ಯಡಿಯೂರಪ್ಪ ಅವರು ಮಾಲ್ಡೀ ಪ್ರವಾಸದ ನಂತರ ರಾಜ್ಯಪ್ರವಾಸ ಆರಂಭಿಸಲಿದ್ದಾರೆ. ಅವರು ಈ ಹಿಂದೆ ಅಧಿಕಾರ ಕೈ ತಪ್ಪಿದ್ದ ಕಾಲದಲ್ಲಿ ನಡೆಸಿದ ಮಾದರಿಯ ಗಂಭೀರ ಸ್ವರೂಪದ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಪಕ್ಷದ ಸಂಘಟನೆ ಮತ್ತು ಮುಖಂಡರ ಭೇಟಿ ಹೆಸರಿನಲ್ಲಿ ಈ ನಿರಂತರ ಪ್ರವಾಸ ನಡೆಸುವ ಯಡಿಯೂರಪ್ಪ ಅವರು, ಪಕ್ಷದ ಶಾಸಕರು, ಮಾಜಿ ಶಾಸಕರು ಹಾಗೂ ಭವಿಷ್ಯದ ಶಾಸಕರನ್ನು ಭೇಟಿ ಮಾಡಿ ಚರ್ಚಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಅವರು ವಿದೇಶ ಪ್ರವಾಸ ಕಾಲದಲ್ಲಿ ರಾಜ್ಯ ಪ್ರವಾಸದ ರೂಪರೇಷೆಗಳು ಸಿದ್ಧವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಏನಾಗಿದೆ, ಏನಾಗಬಹುದು?
ಅಽಕಾರ ಹಸ್ತಾಂತರದ ನಂತರ ಯಡಿಯೂರಪ್ಪ ಅವರಲ್ಲಿ ರಾಜಕೀಯ ಬೇಸರ ಅವರಿಸಿದೆ ಎಂದು ಅವರ ಆಪ್ತರೇ ಹೇಳಿzರೆ. ಏಕೆಂದರೆ ನೂತನ ನಾಯಕತ್ವದ ಸರಕಾರದಲ್ಲಿ ಪುತ್ರ ವಿಜಯೇಂದ್ರ ಅವರಿಗೆ ಅವಕಾಶ ಸಿಕ್ಕಿಲ್ಲ. ಹಾಗೆಯೇ ಆಪ್ತ ಶಾಸಕರಿಗೂ ಆದ್ಯತೆ ನೀಡಿಲ್ಲ. ಕಾಂಗ್ರೆಸ್, ಜೆಡಿಎಸ್ ತ್ಯಜಿಸಿ ಬಂದ ವಲಸಿಗರಿ ಗಾದರೂ ಕೇಳಿದ ಖಾತೆಗಳು ಸಿಕ್ಕಿಲ್ಲ. ಈ ಮಧ್ಯೆ, ಖಾತೆಗಾಗಿ ಬೆಂಗಳೂರಿನಿಂದ ದೆಹಲಿಗೆ ಅಲೆಯುತ್ತಿರುವ ಆನಂದ್ ಸಿಂಗ್ ಸಮಸ್ಯೆ ಬಗೆಹರಿದಿಲ್ಲ. ಎಂಟಿಬಿ ನಾಗರಾಜ್, ಮುನಿರತ್ನ, ಸೋಮಶೇಖರ್ ಹಾಗೂ ಗೋಪಾಲಯ್ಯ ಅವರ ಭಾವನೆಗಳಿಗೆ ಬೆಲೆ ಸಿಗುತ್ತಿಲ್ಲ. ಇದನ್ನು ನೋಡಿ ಕೂರುವುದಕ್ಕೆ ಯಡಿಯೂರಪ್ಪ ಅವರಿಗೆ ಆಗುತ್ತಿಲ್ಲ. ಹೀಗಾಗಿ ಬೇಸರಗೊಂಡಿರುವ ಯಡಿಯೂರಪ್ಪ ಅವರು ವಾರದ ಕಾಲ ವಿಶ್ರಾಂತಿಗಾಗಿ ಮಾಲ್ಡೀವ್ಸ್ಗೆ ತೆರಳಿದ್ದಾರೆ ಎನ್ನಲಾಗಿದೆ.
ಹಾಗೆಯೇ ಯಡಿಯೂರಪ್ಪ ಅವರು ಮಾಜಿಯಾದ ನಂತರದ ೨೦ ದಿನಗಳ ಅವಧಿಯಲ್ಲಿ ಸಿ.ಎಂ. ಇಬ್ರಾಹಿಂ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಹಾಗೂ ಲೆಹರ್ ಸಿಂಗ್ ಅವರಂತ ಆಪ್ತರು ಭೇಟಿಯಾಗಿ ಮುಂದಿನ ರಾಜಕೀಯ ವಿಚಾರಗಳನ್ನು ಚರ್ಚಿಸಿzರೆ. ಜತೆಗೆ ಕೆಲವು ಜೆಡಿಎಸ್ ಮುಖಂಡರೂ ಬಂದು ಭೇಟಿ ಮಾಡಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ವೀರಶೈವ ಲಿಂಗಾಯತ, ದಲಿತ ಹಾಗೂ ಅಲ್ಪಸಂಖ್ಯಾತರನ್ನು ಒಳಗೊಂಡ ನೂತನ ಪಕ್ಷ ಸ್ಥಾಪಿಸಿದರೆ ಹೇಗೆ ಎನ್ನುವ ಚರ್ಚೆಗಳೂ ನಡೆದಿವೆ ಎನ್ನಲಾಗಿದೆ. ಆದರೆ ಇಂಥ ಸಲಹೆಗಳನ್ನು ಯಡಿಯೂರಪ್ಪ ಬರೀ ಆಲಿಸಿzರೆಯೇ ವಿನಾಃ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.