ಪ್ರಜಾಪ್ರಭುತ್ವದ ಆತ್ಮ ರಾಜಕೀಯವನ್ನು ಶುದ್ಧೀಕರಿಸಬೇಕಿದೆ
ರಾಜ್ಯದ ಜನರಿಗೆ ಬದಲಾವಣೆ ಬೇಕಿದೆ
ಕಾಂಗ್ರೆಸ್, ಬಿಜೆಪಿಯದ್ದು ಭ್ರಷ್ಟಾಚಾರವೇ ಸಾಧನೆ
ಆಮ್ ಆದ್ಮಿ ಪಕ್ಷಕ್ಕೆ ರಾಜ್ಯದ ಆರೂವರೆ ಕೋಟಿ ಜನರೇ ಫೇಸ್ ವ್ಯಾಲ್ಯು. ಬಿಜೆಪಿ ಹಾಗೂ ಕಾಂಗ್ರೆಸ್ ಆಡಳಿತಕ್ಕೆ ಬೇಸತ್ತಿ ರುವ ಜನರಿಗೆ ಪರ್ಯಾಯ ಪಕ್ಷ ಬೇಕಿತ್ತು. ಆಪ್ ಆ ಪರ್ಯಾಯವಾಗಿ ಕಾಣಿಸಿದೆ. ದುಡ್ಡಿಲ್ಲದೆ, ತೋಳ್ಬಲವಿಲ್ಲದೆ, ಜನರೊಂದಿಗೆ ನೇರ ಸಂಪರ್ಕ ಸಾಧಿಸಿ ಗೆಲುವು ಸಾಧಿಸುತ್ತೇವೆ ಎನ್ನುವ ವಿಶ್ವಾಸವಿದೆ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಭಾಸ್ಕರ್ ರಾವ್ ಹೇಳಿದ್ದಾರೆ. ಇತ್ತೀಚಿಗಷ್ಟೇ ಐಪಿಎಸ್ ಸ್ಥಾನಕ್ಕೆ ರಾಜೀನಾಮೆ ನೀಡಿ, ಆಪ್ ಸೇರಿ ರುವ ಭಾಸ್ಕರ್ ರಾವ್ ವಿಶ್ವವಾಣಿ ಯೊಂದಿಗೆ ಮಾತನಾಡಿ, ರಾಜಕೀಯದ ಮೊದಲ ಅನುಭವ, ರಾಜಕೀಯಕ್ಕೆ ಬರಲು ಪ್ರಮುಖ ಕಾರಣ, ಆಪ್ನ ಮುಂದಿನ ಯೋಜನೆ, ಚುನಾವಣಾ ತಂತ್ರಗಾರಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನ ಪೂರ್ಣ ಪಾಠ ಇಲ್ಲಿದೆ.
ಪೊಲೀಸ್ ಹಾಗೂ ರಾಜಕೀಯ ಜೀವನಕ್ಕೆ ವ್ಯತ್ಯಾಸವೇನಿದೆ?
ಪೊಲೀಸ್ ಇಲಾಖೆಗೂ ರಾಜಕೀಯಕ್ಕೂ ಭಾರಿ ಅಂತರವಿರುತ್ತದೆ. ವ್ಯವಸ್ಥೆಯಲ್ಲಿ ಪೊಲೀಸ್ ಇಲಾಖೆ ಕೇವಲ ದೇಹವಿದ್ದಂತೆ. ಆದರೆ, ಸರಕಾರ ಹಾಗೂ ರಾಜಕೀಯ ಎನ್ನುವುದು ಆತ್ಮ ವಿದ್ದಂತೆ. ಆತ್ಮದಲ್ಲಿ ನಿಯತ್ತು ಇರಬೇಕು. ದೇಹವು ಆತ್ಮ ಹೇಳಿದಂತೆ ಕೇಳುತ್ತದೆ. ಯಾಂತ್ರಿಕ ವಾಗಿ ಕೆಲಸ ಮಾಡುತ್ತದೆ. ಒಳ್ಳೆಯ ಕೆಲಸ ಮಾಡಬೇಕು ಎನ್ನುವ ಆಸೆಯಿದ್ದರೂ, ಪೊಲೀಸ್ ಇಲಾಖೆಯಲ್ಲಿ ತನ್ನದೇ ಆದ ಕಟ್ಟು ಪಾಡುಗಳಿರುತ್ತದೆ. ಆದ್ದರಿಂದ ಆತ್ಮವನ್ನು ಶುದ್ಧಿಕರಿ ಸುವ ಕೆಲಸವಾಗಬೇಕು.
ಅಷ್ಟಕ್ಕೂ ರಾಜಕೀಯಕ್ಕೆ ಬರಬೇಕು ಎನಿಸಿದ್ದೇಕೆ ?
ನನಗೆ ರಾಜಕೀಯ ಹೊಸದಲ್ಲ. ಪೊಲೀಸ್ ಇಲಾಖೆ ಸೇರುವ ಮೊದಲು, ನ್ಯಾಷನಲ್ ಕಾಲೇಜು ಅಧ್ಯಕ್ಷ ಸ್ಥಾನದ ಚುನಾವಣೆಗೆ
ಸ್ಪರ್ಧಿಸಿ ಗೆಲವು ಕಂಡಿದ್ದೆ. ರಾಮಕೃಷ್ಣ ಹೆಗಡೆ, ಜೀವರಾಜ ಆಳ್ವಾ ಅವರಿದ್ದಾಗ ಕಾಲೇಜು ಅಧ್ಯಕ್ಷನಾಗಿದ್ದೆ. ಉತ್ತರ ಭಾರತದಲ್ಲಿ ಸೇವೆ ಸಲ್ಲಿಸುವ ವೇಳೆ, ನಾನು ಮದ್ರಾಸಿ ಕ್ಯಾಂಡಿಡೇಟ್ ಎಂದು ಆಯ್ಕೆ ಮಾಡಿದ್ದರು. ಆದ್ದರಿಂದ ನನಗೆ ರಾಜಕೀಯದ ಒಳ-ಹೊರಗಿನ ಸ್ಪಷ್ಟ ಚಿತ್ರಣ ಗೊತ್ತಿದೆ.
ಆಪ್ ಅನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ?
ಆಮ್ ಆದ್ಮಿ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣವೆಂದರೆ, ಇಲ್ಲಿ ಇತರ ಪಕ್ಷಗಳಂತೆ ‘ಬ್ಯಾಗೇಜ್ ಮತ್ತು ಲಗೇಜ್’
ತರಬೇಕಿಲ್ಲ. ಇದರೊಂದಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳೂ ಭ್ರಷ್ಟಾಚಾರಕ್ಕೆ ಹೆಸರಾಗಿದ್ದಾವೆಯೇ, ಒಳ್ಳೆಯ ಕೆಲಸಕ್ಕೆ ಆಗಿಲ್ಲ. ಆದ್ದರಿಂದ ಆಪ್ ಆಯ್ಕೆ ಮಾಡಿಕೊಂಡೆ.
ಬಿಜೆಪಿ, ಕಾಂಗ್ರೆಸ್ ಹಾಗೂ ಆಪ್ಗೆ ಇರುವ ವ್ಯತ್ಯಾಸವೇನು?
ಆಪ್ ಎನ್ನುವುದು ಪಕ್ಷವಲ್ಲ, ಬದಲಿಗೆ ಅದೊಂದು ಜನಾಂದೋಲನ ಹಾಗೂ ದೇಶದಲ್ಲಿ ಬದಲಾವಣೆ ತರಬೇಕು ಎನ್ನುವ
ಏಕಮಾತ್ರ ಗುರಿ ಹೊಂದಿರುವ ಸದಸ್ಯರ ತಂಡ. ದೆಹಲಿಯಲ್ಲಿ ಭ್ರಷ್ಟಾಚಾರ ಮಾಡುತ್ತಿಲ್ಲ ಎಂಬ ಒಂದೇ ಕಾರಣಕ್ಕೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ನಿರಾಧಾರ ಆರೋಪ ಮಾಡುತ್ತಿದ್ದಾರೆ. ಇಲ್ಲದಿದ್ದರೆ ನಮ್ಮೊಂದಿಗೆ ಅವರೂ
ಒಬ್ಬರು ಎಂದು ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದರು. ಭ್ರಷ್ಟಾಚಾರಿ ಯಾಗದೇ ಇರುವ ಕಾರಣಕ್ಕಾಗಿಯೇ,
ದೆಹಲಿಯಲ್ಲಿ ಯಾವುದೇ ತೆರಿಗೆ ಏರಿಸದೆ, ಹೆಚ್ಚು ಸಾಲ ಪಡೆಯದೆ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತಿದೆ. ಇದೇ ಆಪ್ಗೂ ಇತರ ಪಕ್ಷಗಳ ಆಡಳಿತಕ್ಕೂ ಇರುವ ವ್ಯತ್ಯಾಸ.
ರಾಜಕೀಯಕ್ಕೆ ಬರುತ್ತಿದ್ದಂತೆ ಶತ್ರುಗಳು ಹೆಚ್ಚಾದರು ಎಂದೆನಿಸುತ್ತದೆಯೇ?
ಶತ್ರುಗಳು ಎನ್ನಲು ಸಾಧ್ಯವಿಲ್ಲ. ಆದರೆ ಅವರು ಒಂದು ರೀತಿ ಪಾರ್ಟ್ಟೈಮ್ ಸ್ನೇಹಿತರಾಗಿ, ಪಾರ್ಟ್ಟೈಮ್ ಶತ್ರುಗಳಾಗಿ ಇರುತ್ತಾರೆ. ಆದ್ದರಿಂದ ಈ ವಿಷಯದಲ್ಲಿ ನಾನು ಯಾರನ್ನೂ ವೈಯಕ್ತಿಕವಾಗಿ ಟೀಕಿಸುವುದಿಲ್ಲ. ನಾವು ಶತ್ರುತ್ವ, ಭಯವನ್ನು ಕೊಟ್ಟರೆ ಅದೇ ವಾಪಸು ಸಿಗುತ್ತದೆ. ಒಂದು ವೇಳೆ ಒಳ್ಳೆಯದ್ದನ್ನು ಕೊಟ್ಟರೆ ಒಳ್ಳೆಯದ್ದೇ ಸಿಗುತ್ತದೆ. ಇನ್ನು ನಾವು ಯಾರ
ವಿರುದ್ಧವೂ ಬ್ಲ್ಯಾಕ್ ಮೇಲ್ ಮಾಡಲು ಹೋಗುವುದಿಲ್ಲ. ಪಕ್ಷದ ಗುರಿ ಅಧಿಕಾರಕ್ಕೆ ಬರುವುದೋ? ಅಥವಾ ಬೇರೆ ಪಕ್ಷಗಳನ್ನು
ಅಧಿಕಾರದಿಂದ ದೂರ ಇಡುವುದೇ?ಆಪ್ ಅನ್ನು ಜನರ ಮಧ್ಯೆ ತಗೆದುಕೊಂಡು ಹೋಗಿ, ಪಕ್ಷದ ಸಿದ್ಧಾಂತವನ್ನು ಜನರಿಗೆ
ತಿಳಿಸಬೇಕು. ಉತ್ತಮ ಆಡಳಿತ, ಭ್ರಷ್ಟಚಾರಾ ರಹಿತ ಆಡಳಿತ ನೀಡುವ ಭರವಸೆಯನ್ನು ಜನರಿಗೆ ನೀಡುವ ಮೂಲಕ, ಆಪ್ಅನ್ನು ಅಽಕಾರಕ್ಕೆ ತರುವುದೇ ನಮ್ಮ ಮುಖ್ಯಗುರಿಯಾಗಿದೆ.
ಬೆಂಗಳೂರಷ್ಟೇ ನಿಮ್ಮ ಟಾರ್ಗೆಟ್ ಆಗಿದೆಯಾ?
ನಾವು ಯಾವುದೇ ಟಾರ್ಗೆಟ್ ನಿಗದಿಮಾಡಿಕೊಂಡಿಲ್ಲ. ಗ್ರಾಮಾಂತರ ಪ್ರದೇಶದ ರೈತರಿಗೆ ನಾವು ಈಗಾಗಲೇ ಮುಟ್ಟಿದ್ದೇವೆ ಎಂದರೆ, ರಾಜ್ಯಾದ್ಯಂತ ನಾವು ಹೋಗುವುದರಲ್ಲಿ ಅನುಮಾ ನವಿಲ್ಲ. ಬದಲಾವಣೆಯ ಅಲೆಯಿದೆ. ಅದರಿಂದಲೇ ನಾವು ಜನರ ಬಳಿ ಹೋಗುತ್ತಿದ್ದೇವೆ. ಈಗಾಗಲೇ ದೆಹಲಿಯಲ್ಲಿ ಯಶಸ್ವಿ ಆಡಳಿತ ನೀಡಿರುವ ಮಾದರಿ ನಮ್ಮ ಬಳಿಯಿದೆ. ಅದನ್ನು ಮುಂದಿಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಬಿಜೆಪಿ,ಕಾಂಗ್ರೆಸ್ ಯಾವ ಮಾದರಿ ಹೊಂದಿದೆ ಎಂಬುದನ್ನು
ತೋರಿಸಲಿ. ಭ್ರಷ್ಟಾಚಾರದ ದುರ್ವಾಸನೆ ಬಿಟ್ಟರೆ ಇವರಿಂದ ಯಾವ ಸಾಧನೆಯೂ ಆಗಿಲ್ಲ.
ದೆಹಲಿ, ಪಂಜಾಬ್ ಮಾದರಿ ಕರ್ನಾಟಕದಲ್ಲೂ ವರ್ಕ್ಔಟ್ ಆಗುತ್ತದೆಯೇ?
ಕರ್ನಾಟಕದಲ್ಲಿ ಒಳ್ಳೆಯ ಜನರಿಲ್ಲವೇ? ಒಳ್ಳೆಯ ಆಡಳಿತ ಬಯಸುವುದಿಲ್ಲವೇ? ರಾಜ್ಯದ ಆರೂವರೆ ಕೋಟಿ ಜನರು ಎರಡು
ರಾಜಕೀಯ ಪಕ್ಷಗಳ ನಡುವೆ ಸಿಕ್ಕಿ ಹಾಕಿಕೊಂಡಿದ್ದಾರೆ. ರಾಜ್ಯದಲ್ಲಿರುವ ಐದರಿಂದ ಹತ್ತು ಸಾವಿರದಷ್ಟು ರಾಜಕೀಯ ನಾಯಕರು ಕರ್ನಾಟಕವನ್ನು ಹೈಜಾಕ್ ಮಾಡಿದ್ದಾರೆ. ಅದನ್ನು ಸರಿ ಪಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ.
ನಿಮ್ಮ ಪಕ್ಷದ ಫೇಸ್ ಯಾರು?
ನಮ್ಮ ಪಕ್ಷದ ಫೇಸ್ ಸಾಮಾನ್ಯ ಪ್ರಜೆ. ಗಾಂಧಿ ಅವರು ಹೇಳಿದಂತೆ ಸಾಮಾನ್ಯ ಜನರನ್ನು ಮುಖ್ಯವಾಗಿರಿಕೊಂಡೇ ಪಕ್ಷ ಸಂಘಟಿಸುತ್ತಿದ್ದೇವೆ. ಬಡವರು, ಮಧ್ಯಮವರ್ಗದವರಿಗೆ ಸಹಾಯವಾಗುವಂತೆ ನೋಡಿಕೊಳ್ಳುವುದೇ ನಮ್ಮ ಗುರಿ.
ವಸೂಲಿ ಮಾಡುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪವಿದೆಯಲ್ಲ?
ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಪಕ್ಷಕ್ಕೆ ಅನೇಕರು ಬರುತ್ತಿದ್ದಾರೆ. ಆರೋಪ ಮಾಡುವವರು ಹೇಳುತ್ತಿರುವಂತೆ, ಕೋಡಿಹಳ್ಳಿ ಅವರ ಮೇಲೆ ಏನಾದರೂ ಕ್ರಿಮಿನಲ್ ಪ್ರಕರಣ ದಾಖಲಾಗಿದೆಯೇ? ಹೇಳುವವರು ಸಾವಿರ ಮಾತನಾಡುತ್ತಾರೆ. ಆದರೆ ಕೇಸ್ ದಾಖಲಾಗಿದೆಯೇ? ಬಿಜೆಪಿ- ಕಾಂಗ್ರೆಸ್ನವರ ಬಳಿ ಏನಾದರೂ ದುಡ್ಡು ಪಡೆದಿದ್ದಾರಾ? ಕೇವಲ ಅಂತೆ-ಕಂತೆ ಮಾತಿನ ಮೇಲೆ ಒಬ್ಬರ ವ್ಯಕ್ವಿತ್ವ ಹಾಳುಮಾಡುತ್ತಾರೆ. ಅದು ಕೋಡಿಹಳ್ಳಿ ಚಂದ್ರಶೇಖರ್ ಇರಬಹುದು, ಭಾಸ್ಕರ್ ರಾವ್
ಇರಬಹುದು ಅಥವಾ ಪೃಥ್ವಿರೆಡ್ಡಿ ಇರಬಹುದು.
ಒಂದು ವೇಳೆ ನಮ್ಮ ಮೇಲೆ ಏನಾದರೂ ಆರೋಪವಿದ್ದರೆ ಪ್ರಕರಣ ದಾಖಲಿಸಿ, ತನಿಖೆ ಮಾಡಲಿ. ಅದನ್ನು ಬಿಟ್ಟು ಟೊಳ್ಳು ಮಾತು ಗಳನ್ನು ಹೇಳಿ ವ್ಯಕ್ತಿತ್ವ ಹಾಳು ಮಾಡಬಾರದು.
ಜನ ನಿಮ್ಮಿಂದ ಏನು ಬಯಸುತ್ತಿದ್ದಾರೆ?
ಆಪ್ನವರು ಬದಲಾವಣೆ ತರುತ್ತಿದ್ದಾರೆ ಎನ್ನುವ ವಿಶ್ವಾಸವನ್ನು ಜನರು ಹೊಂದಿದ್ದಾರೆ. ಮೂರು ದಶಕಗಳ ಕಾಲ ಐಪಿಎಸ್ ಸೇವೆ ಮಾಡಿದರೂ ಅದನ್ನು ಬಿಟ್ಟು ರಾಜಕೀಯಕ್ಕೆ ಬಂದಿದ್ದಾರೆ. ಬಂದೇನು ಮಾಡುತ್ತಾರೆ ನೋಡೋಣ ಎಂದು ಕಾಯುತ್ತಿದ್ದಾರೆ. ಇದರೊಂದಿಗೆ ನಾನು ಜನರೊಂದಿಗೆ ಯಾವ ರೀತಿ ಇರುತ್ತೇನೆ ಎನ್ನುವ ಕುತೂಹಲ ಹೊಂದಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ನೀವು ಇದ್ದವರು. ಅಲ್ಲಿರೋ ಸಮಸ್ಯೆಗಳಿಗೆ ಪರಿಹಾರಗಳೇನು?
ಪೊಲೀಸ್ ಇಲಾಖೆಯಲ್ಲಿ ಕೆಳಹಂತದ ಅಧಿಕಾರಿಗಳು ಮಾತ್ರವಲ್ಲ, ಪ್ರತಿ ಹಂತದಲ್ಲಿಯೂ ಸಮಸ್ಯೆಯಿದೆ. ಎಫ್ಐಆರ್ ಹಾಕಿದ ಮೇಲೆ ಅದನ್ನು ಕೋರ್ಟ್ನಲ್ಲಿ ಮಂಡಿಸಲು ವಕೀಲ ರನ್ನು ನೇಮಿಸುವುದಿಲ್ಲ. ಇದ್ದರೂ ನ್ಯಾಯಾಧೀಶರೇ ಇರುವುದಿಲ್ಲ. ಈ ರೀತಿ ಸಾಲು ಸಾಲು ಸಮಸ್ಯೆಗಳಿರುತ್ತದೆ. ಇದರಿಂದ ತಪ್ಪಿತಸ್ಥರಿಗೆ ಶಿಕ್ಷೆ ಕಡಿಮೆಯಾಗುತ್ತಿದೆ. ಒಂದೊಂದು ಕೇಸ್ ವರ್ಷಗಟ್ಟಲೆ ನಡೆದರೆ, ಯಾರಿಗೆ ಹೆದರಿಕೆ ಇರುತ್ತದೆ?
ಹಣಬಲ, ತೋಳ್ಬಲ ಮೀರಿ ನಿಲ್ಲಲು ಸಾಧ್ಯವೇ?
ದೆಹಲಿ ಹಾಗೂ ಪಂಜಾಬ್ನಲ್ಲಿ ಇದನ್ನು ಮೀರಿಯೇ ತಾನೇ ನಾವು ಗೆದ್ದಿರುವುದು. ನಮ್ಮ ಯಾವ ಅಭ್ಯರ್ಥಿ ಹಣ ಖರ್ಚು
ಮಾಡಿದ್ದಾನೆ? ಪಂಜಾಬ್ನಲ್ಲಿ ಮುಖ್ಯಮಂತ್ರಿಯನ್ನು ಒಬ್ಬ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿದವನು ಸೋಲಿಸುತ್ತಾನೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಬೇಕು. ಕೊಡುವವರು ಕೋಟಿ ಕೋಟಿ ಖರ್ಚು ಮಾಡಿದರೂ, ಜನರು ಮಾತ್ರ ನಮ್ಮ ಮೇಲೆ ವಿಶ್ವಾಸವಿಟ್ಟು ಮತ ನೀಡುತ್ತಾರೆ ಎನ್ನುವ ನಂಬಿಕೆಯಿದೆ.
ನಿಮಗೆ ಏಕೆ ಮತ ನೀಡಬೇಕು?
ಏಕೆಂದರೆ, ಈಗಾಗಲೇ ರಾಜ್ಯದಲ್ಲಿ ಹಾಗೂ ದೇಶದಲ್ಲಿರುವ ಪಕ್ಷಗಳು ಹಣ, ತೋಳ್ಬಲ ಹಾಗೂ ಜಾತಿ, ಧರ್ಮದ ಬಲವನ್ನು ಬಳಸಿ ರಾಜಕೀಯ ನಡೆಸಿದಂತೆ ನಾವು ರಾಜಕೀಯ ಮಾಡುವುದಿಲ್ಲ. ದೇಶದ ಪ್ರತಿಯೊಂದು ವಿಷಯದಲ್ಲಿ, ಜೀವನ ಶೈಲಿಯೂ ಬದಲಾವಣೆಗಳಾಗಿವೆ. ಆದರೆ ರಾಜಕೀಯ ಮಾತ್ರ ಏಕೆ ಬದಲಾವಣೆಯಾಗಬಾರದು? ಈ ಬದಲಾವಣೆಗಾಗಿ ಜನರು ನಮಗೆ ಮತ ನೀಡಬೇಕು.
***
ಜನರಿಗೆ ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯೆಂದರೆ ನ್ಯಾಯ ಸಿಗದೇ ಇರುವುದು. ಬಲ ಇರುವವನು ಬದುಕುತ್ತಿದ್ದಾನೆ. ಇದರಿಂದಾಗಿ ಗೂಂಡಾಗಿರಿ ಹೆಚ್ಚಾಗುತ್ತಿದೆ. ಆದ್ದರಿಂದ ಕಾನೂನು ಸುವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಹೋರಾಡಬೇಕಿದೆ. ಕರ್ನಾಟಕದ ರಾಜಕಾರಣಿಗಳ ಬಳಿ ದುಡ್ಡಿಗೇನು ಕಡಿಮೆಯಿಲ್ಲ. ಆದರೆ ದುಡ್ಡು ಕೊಟ್ಟು ಜನರ ವಿಶ್ವಾಸಗಳಿಸಲು ಸಾಧ್ಯವಿಲ್ಲ.
– ಭಾಸ್ಕರ್ ರಾವ್, ಆಪ್ ಮುಖಂಡ
ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ
ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲೆ ಟೊಳ್ಳು ಆರೋಪ ಮಾಡುವುದನ್ನು ಬಿಡಲಿ
ರಾಜ್ಯದ ಜನರಿಗೆ ಭ್ರಷ್ಟ ಬಿಜೆಪಿ-ಕಾಂಗ್ರೆಸ್ ಪಕ್ಷ ಮೇಲೆ ಭರವಸೆ ಹೋಗಿದೆ
ಮತದಾರರು ಪರ್ಯಾಯ ಪಕ್ಷದ ನಿರೀಕ್ಷೆಯಲ್ಲಿದ್ದಾರೆ.