ರಂಜಿತ್ ಎಚ್. ಅಶ್ವತ್ಥ
ನ್ಯಾ.ಮೈಕಲ್ ಡಿ ಕುನ್ಹಾ ಆಯೋಗದ ಮಧ್ಯಂತರ ವರದಿಯಲ್ಲಿ ಬಹುಕೋಟಿ ಹಗರಣ ಬಯಲು ಬಿಜೆಪಿ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ಗೆ ಅಸ್ತ್ರ
ಬೆಂಗಳೂರು: ಕರೋನಾ ಅವಧಿಯಲ್ಲಿ ಆರ್ಥಿಕವಾಗಿ ರಾಜ್ಯ ಸರಕಾರ ಜರ್ಜರಿತವಾಗಿದ್ದರೂ, ಬರೋಬ್ಬರಿ ೭,೨೨೩ ಕೋಟಿ ರು. ಹೆಚ್ಚು ಮೊತ್ತದ ಖರೀದಿಗೆ ನಕಲಿ ಬಿಲ್ ಗಳನ್ನು ಒದಗಿಸಲಾಗಿದೆ ಎನ್ನುವ ಗಂಭೀರ ಆರೋಪ ಇದೀಗ ಕೇಳಿಬಂದಿದೆ. ಬಿಜೆಪಿ ಅವಧಿಯಲ್ಲಿ ಕರೋನಾ ಅವಧಿಯಲ್ಲಿ ಸಾವಿರಾರು ಕೋಟಿ ಅಕ್ರಮ ನಡೆದಿರುವ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರಿಗೆ ಇದೀಗ, ಅಕ್ರಮ ನಡೆದಿರುವುದಕ್ಕೆ ‘ದಾಖಲೆ’ ಸಮೇತ ಮಾಹಿತಿ ಸಿಕ್ಕಿರುವುದು ಬಿಜೆಪಿ ವಿರುದ್ಧದ ಹೋರಾಟಕ್ಕೆ ಬ್ರಹ್ಮಾಸ್ತ್ರ ಸಿಕ್ಕಿದೆ.
ಕರೋನಾ ಸಮಯದಲ್ಲಿ ನಡೆದಿರುವ ಅವ್ಯವಹಾರದ ತನಿಖೆಗೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ನ್ಯಾ.ಜಾನ್ ಮೈಕಲ್ ಡಿ ಕುನ್ಹಾ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ನೇಮಿಸಿತ್ತು. ಇದೀಗ ಈ ಸಮಿತಿ ಯೂ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಸಾವಿರಾರು ಕೋಟಿ ರು. ಮೌಲ್ಯದ ಅವ್ಯವಹಾರ ವಾಗಿರುವ ಸಾಧ್ಯತೆಯಿದೆ ಎಂದು ಉಲ್ಲೇಖಿಸಿದೆ. ಇದರೊಂದಿಗೆ ಏಳು ಸಾವಿರ ಕೋಟಿ ರು. ಹೆಚ್ಚಿನ ಮೌಲ್ಯದ ವಿವಿಧ ಸಾಮಗ್ರಿಗಳ ಖರೀದಿಗೆ ಸೂಕ್ತ ದಾಖಲೆಗಳೇ ಇಲ್ಲ ಎಂದು ಖಚಿತ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಆಯೋಗದ ಅಧ್ಯಕ್ಷ ಕುನ್ಹಾ ಅವರು, ಮಧ್ಯಂತರ ವರದಿಯನ್ನು ಸಲ್ಲಿಕೆ ಮಾಡಿದರು. ಇದರಲ್ಲಿ ಪ್ರಮುಖವಾಗಿ ಯಾವೆಲ್ಲ ರೀತಿಯಲ್ಲಿ ಅಕ್ರಮ ನಡೆದಿದೆ? ಹೆಚ್ಚುವರಿ ಮೊತ್ತಕ್ಕೆ ಔಷಧಿ, ವೆಂಟಿಲೇಟರ್, ಮಾಸ್ಕ್ ಸೇರಿದಂತೆ ಹಲವು ವಸ್ತುಗಳ ಖರೀದಿ ವೇಳೆ ಅಕ್ರಮ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆ ಮಾಡಿರುವ ಮಧ್ಯಂತರ ವರದಿಯಲ್ಲಿ, ಸುಮಾರು ೭೨೨೩ ಕೋಟಿ ರು.ಗೂ ಹೆಚ್ಚು ಮೌಲ್ಯದ ಖರೀದಿಗೆ ಸೂಕ್ತ ದಾಖಲೆಗಳೇ ಇಲ್ಲದಿರುವುದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಧ್ಯಂತರ ವರದಿಯಲ್ಲಿಯೇ ಈ ಪ್ರಮಾಣದ ಅವ್ಯವಹಾರ ನಡೆದಿದೆ ಎಂದಿರುವುದರಿಂದ ಅಂತಿಮ ವರದಿ ವೇಳೆಗೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ವರದಿಯಲ್ಲಿರುವ ಪ್ರಮುಖಾಂಶವೇನು?: ಪ್ರಮುಖವಾಗಿ ಆರೋಗ್ಯ ಇಲಾಖೆ ವತಿಯಿಂದ ೧೭೫೪ ಕೋಟಿ ರು., ರಾಷ್ಟ್ರೀಯ ಆರೋಗ್ಯ ಮಿಷನ್ನಿಂದ ೧೪೦೬ ಕೋಟಿ ರು, ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ೯೧೮ ಕೋಟಿ ರು, ಕರ್ನಾಟಕ ರಾಜ್ಯ ಔಷಧ ಸರಬರಾಜು ಸಂಸ್ಥೆಯಿಂದ ೧೩೯೪ ಕೋಟಿ ರು ಸೇರಿದಂತೆ ಬಿಬಿಎಂಪಿ ಝೋನ್ವಾರು, ಕೆಲ ಸರಕಾರಿ ಆಸ್ಪತ್ರೆಗಳ ವತಿಯಿಂದ ಖರೀದಿಸಿರುವ ನಕಲಿ ಬಿಲ್ಗಳನ್ನು ಸೃಷ್ಟಿಸಲಾಗಿದೆ. ಈ ರೀತಿ ನಕಲಿ ಬಿಲ್ ಅಥವಾ ಇನ್ನಿತರೆ ಅಕ್ರಮದ ಮೂಲಕ ನಡೆದಿರುವ ಅಕ್ರಮದ ಪ್ರಮಾಣವೇ ೭೨೨೩ ಸಾವಿರ ಕೋಟಿ ರು. ದಾಟಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಖಚಿತ ಮೂಲಗಳು ತಿಳಿಸಿವೆ. ಕೋವಿಡ್ ಹಗರಣದ ವರದಿ ಸಿಎಂ ಕೈ ಸೇರಿದ ಬೆನ್ನ ಕಾವೇರಿ ನಿವಾಸಕ್ಕೆ ಸಚಿವರು ಆಗಮಿಸಿ ಮಾತುಕತೆ ನಡೆಸಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಎಂ.ಬಿ ಪಾಟೀಲ, ಡಾ.ಜಿ ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಕೆ.ಎನ್ ರಾಜಣ್ಣ, ಎಂ.ಸಿ ಸುಧಾಕರ್ ದಿನೇಶ್ ಗೂಂಡುರಾವ್, ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್ ಆಗಮಿಸಿ ಕೋವಿಡ್ ಅವಧಿಯ ಅಕ್ರಮದ ಬಗ್ಗೆ ಸಿಎಂ ಜತೆ ಸಮಾಲೋಚನೆ ನಡೆಸಿದ್ದಾರೆ.
೧೭೨೨ ಸಾವಿರ ಪುಟದ ವರದಿ
ಇನ್ನು ನ್ಯಾ.ಜಾನ್ ಮೈಕಲ್ ಡಿ ಕುನ್ಹಾ ನೇತೃತ್ವದ ಸಮಿತಿ ಸಲ್ಲಿಸಿರುವ ಮಧ್ಯಂತರ ವರದಿಯೂ ೧೭೨೨ ಪುಟಗಳಿಗೂ ಹೆಚ್ಚು ಪುಟಗಳ ವರದಿಯನ್ನು ಸಲ್ಲಿಕೆ ಮಾಡಲಾಗಿದೆ. ಈ ಪ್ರಮಾಣದಲ್ಲಿ ಸಲ್ಲಿಕೆಯಾಗಿರುವ ವರದಿಯಲ್ಲಿ ಜಿಲ್ಲಾವಾರು, ಝೋನ್ವಾರು ಅಕ್ರಮ ನಡೆದಿರುವ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ. ಇಡೀ ವರದಿಯನ್ನು ಕಾನೂನು ತಜ್ಞರೊಂದಿಗೆ ಮತ್ತೊಮ್ಮೆ ಪರಿಶೀಲಿಸಿ ಮುಂದಿನ ಕ್ರಮವಹಿಸಲು ಸರಕಾರ ಸಿದ್ಧತೆ ನಡೆಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರಮುಖವಾಗಿ ವೆಂಟಿಲೇಟರ್, ಆಕ್ಸಿಜನ್ ಉಪಕರಣಗಳ ಖರೀದಿ, ನಿರ್ವಹಣೆ ಲೋಪ, ಕೊವಿಡ್-೧೯ ನಿರ್ವಹಣಾ ಉಪಕರಣ, ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್ ಖರೀದಿ ಮತ್ತು ಸಂಗ್ರಹಣೆಯಲ್ಲಿ ಅಕ್ರಮ ನಡೆದಿರುವ
ಬಗ್ಗೆ ದ ಆರೋಪ ಸಂಬಂಧ ಸುವಿಸ್ತಾರವಾಗಿರುವ ಮಾಹಿತಿಯನ್ನು ಒದಗಿಸಲಾಗಿದೆ. ಆದರೆ ಇನ್ನಷ್ಟು ಮಾಹಿತಿ ಕಲೆ ಹಾಕಬೇಕಿರುವುದರಿಂದ ಮಧ್ಯಂತರ ವರದಿಯನ್ನು ಸಲ್ಲಿಸಿದ್ದು, ಮುಂದಿನ ದಿನದಲ್ಲಿ ಪೂರ್ಣ ಪ್ರಮಾಣದ ವರದಿಯನ್ನು ಸಲ್ಲಿಸುವುದಾಗಿ ಆಯೋಗದ ಸದಸ್ಯರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.