ಮಂಡ್ಯ, ಕೊಡಗು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಿಸಿದ ಬಿಜೆಪಿ ನಾಯಕರು, ಕಾರ್ಯಕರ್ತರ ನಿರಾಶೆ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಕಟಿಸುವ ಇಬ್ಬರು ಅಭ್ಯರ್ಥಿಗಳು ಮಾತ್ರ ಆಡಳಿತಾರೂಢ ಬಿಜೆಪಿಗೇ ದಿಗಿಲು ತಂದಿಟ್ಟಿದೆ!
ಅಂದರೆ ಇದೇನೂ ಸೋತು ಬಿಡುತ್ತೇವೆ ಎನ್ನುವ ಆತಂಕವಲ್ಲ. ಬಿಜೆಪಿಯವರಿಗೆ ಕಾಂಗ್ರೆಸ್ ಹೇಗೆ ಟಿಕೆಟ್ ನೀಡುತ್ತದೆ, ಇವರಿಗೆ ಯಾರು, ಹೇಗೆ ಟಿಕೇಟ್ ಕೊಡಿಸಿದ್ದಾರೆ ಎನ್ನುವ ದಿಗಿಲು. ಹೀಗಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಎಂ.ಜಿ. ಗೂಳಿಗೌಡ ಇಡೀ ಚುನಾವಣಾ ವಾತಾವರಣವನ್ನೇ ಗುಮಾನಿಯಿಂದ ನೋಡುವಂತೆ ಮಾಡಿದ್ದರೆ, ಕೊಡುಗು ಕ್ಷೇತ್ರದ ಡಾ.ಮಂತ್ರಗೌಡ ಅವರ ಸ್ಪರ್ಧೆ ಕಣದಲ್ಲಿರುವ ಹುರಿಯಾಳು ಗಳನ್ನೇ ಕಂಗೆಡಿಸಿದೆ.
ಏಕೆಂದರೆ, ಬಿಜೆಪಿ ಆಡಳಿತದ ಭಾಗವಗಾಗಿದ್ದ ಎಂ.ಜಿ. ಗೂಳಿಗೌಡ ಹಾಗೂ ಈಗಲೂ ಬಿಜೆಪಿ ಸಖ್ಯದಲ್ಲೇ ಇರುವ ಡಾ.ಮಂತ್ರಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ಇವರಿಬ್ಬರಿಗೂ ಬಿಜೆಪಿಯವರೇ ಟಿಕೆಟ್ ಕೊಡಿಸಿದ್ದಾರೆ ಎನ್ನುವ ಅನುಮಾನ ದಿನ ದಿನಕ್ಕೂ ಬಲಗೊಳ್ಳುತ್ತಿದೆ. ಕಾರಣ ಈ ಇಬ್ಬರೂ ಅಭ್ಯರ್ಥಿಗಳ ಬೇರು ಇನ್ನೂ ಬಿಜೆಪಿ ಯಲ್ಲಿದ್ದು, ಇವರು ಮಾತ್ರ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿದ್ದಾರೆ. ಇದರಿಂದಾಗಿ ಬಿಜೆಪಿ ಯವರಿಗೆ ಇವರ ಸ್ಪರ್ಧೆಯ ಹಿಂದಿನ ಶಕ್ತಿಗಳ ಬಗ್ಗೆಯೇ ಗುಮಾನಿ ಇದೆ.
ಇನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ತಮ್ಮ ನಾಯಕರ ಮೇಲೆಯೇ ಅನುಮಾನಗಳು ಆರಂಭವಾಗಿದೆ. ಇದಕ್ಕೆ ಕಾರಣ ಇಷ್ಟೂ ದಿನ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರ ಜತೆ ವಿಶೇಷಾಧಿಕಾರಿಯಾಗಿದ್ದ ಎಂ.ಜಿ.ಗೂಳಿಗೌಡಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಹಾಗೆಯೇ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿದ್ದ ಮಾಜಿ ಸಚಿವ ಎ.ಮಂಜು ಪುತ್ರ ಡಾ.ಮಂತ್ರಗೌಡಗೂ ಕಾಂಗ್ರೆಸ್ ಟಿಕೆಟ್
ಕೊಟ್ಟಿದೆ. ಮೊನ್ನೆವರೆಗೂ ಸಚಿವರ ಬಳಿ ವಿಶೇಷಾಧಿಕಾರಿಯಾಗಿದ್ದ ಗೂಳಿಗೌಡಗೆ ಕಾಂಗ್ರೆಸ್ ಮಣೆ ಹಾಕಿರುವುದು ಸ್ವತಃ ಕಾಂಗ್ರೆಸ್ ನವರಿಗೇ ಅಚ್ಚರಿ ತಂದಿದ್ದರೆ, ಬಿಜೆಪಿಯವರಿಗೆ ತಮ್ಮ ನಾಯಕರು ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದಾರಾ ಅಥವಾ ಕಾಂಗ್ರೆಸ್ ನಾಯಕರು ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರಾ ಎನ್ನು ಶಂಕೆ ಶುರುವಾಗಿದೆ.
ಕಾರಣ ಗುರುತರ ಆರೋಪದ ಮೇಲೆ ಅಮಾನತು ಗೊಂಡಿದ್ದ ಮಂತ್ರಗೌಡ ಅವರ ಅಮಾನತು ಇನ್ನೂ ತೆರವು ಆಗಿಯೇ ಇಲ್ಲ. ಆಗಲೇ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಅಷ್ಟಕ್ಕೂ ಅವರ ತಂದೆ ಎ.ಮಂಜು ಇನ್ನೂ ಬಿಜೆಪಿಯಲ್ಲೇ ಇದ್ದಾರೆ. ಹಾಗಾದರೆ ಚುನಾ ವಣೆಯಲ್ಲಿ ತಂದೆ ಮಗನ ವಿರುದ್ಧ ಹೋರಾಟ ನಡೆಸುವರೇ ಎನ್ನುವ ಪ್ರಶ್ನೆ ಕಾರ್ಯಕರ್ತರದು. ಇದೇ ರೀತಿ ತಮ್ಮ ಜತೆಯಲ್ಲಿಟ್ಟು ಕೊಂಡಿದ್ದ ಎಸ್.ಟಿ.ಸೋಮಶೇಖರ್ ಮಂಡ್ಯದಲ್ಲಿ ಗೂಳಿಗೌಡರ ವಿರುದ್ಧ ಕೆಲಸ ಮಾಡುತ್ತಾರೋ ಅಥವಾ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಾರೋ ಎನ್ನುವ ಪ್ರಶ್ನೆಗಳು ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ಕೇಳಿ ಬರುತ್ತಿದೆ. ಹೀಗಾಗಿ ಪರಿಷತ್ತಿನ ೨೫ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರ ಮಾತ್ರ ಇತ್ತ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ.
ಮಂತ್ರಗೌಡರ ಮಾಯೆ!
ಬಿಜೆಪಿ ಬಾವುಟ ಹಿಡಿದು ಹಾಸನ ಜಿಲ್ಲೆಅರಕಲಗೂಡು ಕ್ಷೇತ್ರದಿಂದ ಸೋತಿದ್ದ ಎ.ಮಂಜು ಅನೇಕ ಬಾರಿ ವಾಪಸ್ಸಿಗೆ ಪ್ರಯತ್ನಿಸಿ ದ್ದಾರೆ. ಆದರೆ ಇದಕ್ಕೆ ಸಿದ್ದರಾಮಯ್ಯ ಒಪ್ಪಿಗೆ ನೀಡಿಲ್ಲ ಎಂದು ಹೇಳಲಾಗಿದೆ. ನಂತರ ಅಧ್ಯಕ್ಷರ ಮನೆ ಬಾಗಿಲು ಬಡಿದು ವಿವಿಧ ಲೆಕ್ಕಾಚಾರಗಳನ್ನು ತೋರಿಸಿ ಪುತ್ರ ಮಂತ್ರಗೌಡರಿಗೆ ಕೊಡಗು ಕ್ಷೇತ್ರದ ಟಿಕೇಟ್ ಪಡೆದಿದ್ದಾರೆ. ಇದರ ಮುಂದಿನ ಭಾಗ ಅವರು ಕಾಂಗ್ರೆಸ್ ಸೇರಲು ಟವಲ್ ಹಾಕಿದ್ದಾರೆ ಎನ್ನುವುದು ಹಾಸನ ಬಿಜೆಪಿ ಕಾರ್ಯಕರ್ತರ ಮಾತು. ಹೀಗಾಗಿ ಜಿಲ್ಲೆಯ ಪ್ರಬಲ ಟಿಕೇಟ್
ಆಕಾಂಕ್ಷಿ ಲೋಕೇಶ್ ಅವರಿಗೆ ಮನೆ ದಾರಿ ತೋರಿಸಲಾಗಿದೆ.
ಗೂಳಿಗೌಡರು ಗುಮ್ಮಿದ್ದು ಹೇಗೆ?
ಮಂಡ್ಯದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಲು ಅಪ್ಪಾಜಿಗೌಡ ಸಿದ್ಧರಾಗುತ್ತಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ನಿಂದ ಮಾಜಿ ಸಚಿವ ಚಲುವರಾಯಸ್ವಾಮಿ ಕಡೆಯ ಕೆಲವು ನಾಯಕರು ಹಾಗೂ ರಾಮಕೃಷ್ಣ ತಯಾರಿ ನಡೆಸಿದ್ದರು. ಆದರೆ ಇವರಲ್ಲಿ ಚುನಾವಣೆ ಎದುರಿಸಲು ಸೂಟ್ ಬಲವಿಲ್ಲ ಎನ್ನುವ ಮಾಹಿತಿ ತಿಳಿದ ಬಿಜೆಪಿಯವರು ತಮ್ಮ ಅಭ್ಯರ್ಥಿ ಹಾಕಲು ಹಿಂದೇಟು ಹಾಕಿದ್ದರು. ಆದರೂ ಕೆ.ಆರ್.ಪೇಟೆ ಮಂಜುಗೆ ಅವಕಾಶ ನೀಡಿದ್ದರು. ಇವರಲ್ಲೂ ಕೂಡ ಅಷ್ಟು ಶಕ್ತಿ ಸಾಲುತ್ತಿಲ್ಲ ಎನ್ನುವುದನ್ನು ತಿಳಿದ ಸಚಿವ ಎಸ್.ಟಿ.ಸೋಮಶೇಖರ್ ಶಿಷ್ಯರೂ ಆಗಿರುವ ಗೂಳಿಗೌಡ ದಿಢೀರ್ ಕಾಂಗ್ರೆಸ್ ಕದ ತಟ್ಟಿದರು.
ಇದಕ್ಕೆ ಬಿಜೆಪಿ ನಾಯಕರಿಂದಲೂ ಪರೋಕ್ಷ ಬೆಂಬಲ ದಕ್ಕಿತು. ಅಂದರ ಹೇಗಿದ್ದರೂ ಬಿಜೆಪಿ ಗೆಲ್ಲುವುದು ಕಷ್ಟವಿದೆ. ನಿಮಗಾ ದರೂ ಲಾಭ ಮಾಡಿಕೊಳ್ಳಿ ಎಂದು ಬಿಟ್ಟಿ ಸಲಹೆ ನೀಡಿದರು. ಅಷ್ಟೇ ಅಲ್ಲಾ, ಕೃಷ್ಣಾರ್ಪಣಮಸ್ತು ಎಂದು ಆಶೀರ್ವಾದವನ್ನೂ ಮಾಡಿದರು. ಈ ಮೂಲಕ ಕಾಂಗ್ರೆಸ್ ನಾಯಕರು ಗೂಳಿಗೌಡಗೆ ಟಿಕೇಟ್ ನೀಡಿ ಗುರುಕಾಣಿಕೆ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಗೂಳಿಗೌಡ ತಂದಿಟ್ಟ ಗುಮಾನಿಗಳೇನು ?
ಸಚಿವ ಸೋಮಶೇಖರ್ ಅವರೇ ಕಳುಹಿಸಿರಬಹುದಾ? ಹಾಗಾದರೂ ಈವರೆಗೂ ಗೂಳಿಗೌಡರ ಸೇವೆ ಯಾವ ಪಕ್ಷಕ್ಕೆ? ಇದು ಸೋಮಶೇಖರ್ ಕೂಡ ಕಾಂಗ್ರೆಸ್ ಸೇರುವ ಸೂಚನೆಯೇ? ವಲಸಿಗ ಸಚಿವರು, ಶಾಸಕರೂ ಕಾಂಗ್ರೆಸ್ ಕಡೆ ನೋಡುತ್ತಿದ್ದಾರೆಯೇ?
ಮಂಡ್ಯದಲ್ಲಿ ನಾಯರಾಯಣ ಗೌಡ ಬಿಜೆಪಿ ಪರ ದುಡಿಯುವರೇ? ಸೋಮಶೇಖರ್ ಗೂಳಿಗೌಡರಿಗೆ ಸಹಾಯ ಮಾಡುವುದೇ
ಇಲ್ಲವೇ? ಬಿಜೆಪಿಗೆ ಗೂಳಿಗೌಡ ಕಾಂಗ್ರೆಸ್ ವೀಕ್ನೆಸ್ ಹೇಳಿದ್ದಾರೆಯೇ?
ಕಾಂಗ್ರೆಸ್ನಲ್ಲಿ ಎದ್ದಿರುವ ಪ್ರಶ್ನೆಗಳೇನು?
ಬಿಜೆಪಿ ನಾಯಕರು ಕಾಂಗ್ರೆಸ್ ಟಿಕೆಟ್ ಕೊಡಿಸಲು ಸಾಧ್ಯವೇ? ಹಾಗಾದರೆ ಕಾಂಗ್ರೆಸ್ ನಾಯಕರು ಯಾರಿಗೆ ವಿಧೇಯವಾಗಿದ್ದಾರೆ?
ದೊಡ್ಡವರ ಸಂಪರ್ಕ, ಬಲಾಢ್ಯರಿಗೆ ಮಾತ್ರ ಟಿಕೆಟ್ ಸಿಗುವುದೇ? ಪಕ್ಷಕ್ಕಾಗಿ ದುಡಿದವರ ನಾಯಕರಿಗೆ ಅವಕಾಶ ಯಾವಾಗ?
ಬಿಜೆಪಿ ನಾಯಕರು ಕಾಂಗ್ರೆಸ್ ಒಳಗೆ ಹೇಗೆ ಪ್ರಬಲವಾಗುತ್ತಿದ್ದಾರೆ?