ಸೋಮನಾಥ ಸಂಜೀವ.ಕೆ.ಟಿ ತಿಪಟೂರು
ತಾಲೂಕಿನಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ಲಕ್ಷತನದಿಂದಾಗಿ ರೋಸಿ ಹೋದ ತಾಲೂಕಿನ ಜನ
ಕಿಬ್ಬನಹಳ್ಳಿ ಹೋಬಳಿಯ ಬಿಳಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚೌಡ್ಲಾಪುರ ಅರಣ್ಯ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 206 ಹಾದು ಹೋಗಿದ್ದು,ಕೆಲ ವರ್ಷಗಳ ಹಿಂದೆ ಚಿಕ್ಕನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ತಾಲೂಕಿನ ಕೆಲ ಭಾಗಗಳಲ್ಲಿ ಹೆಗ್ಗಿಲ್ಲದೆ ಗಣಿಗಾರಿಕೆ ಮಾಡಲಾಗುತ್ತಿತ್ತು. ಇದರಿಂದಾಗಿ ಸಾವಿರಾರು ವಾಹನಗಳು ಈ ಭಾಗದಲ್ಲಿ ಖನಿಜ ಮಿಶ್ರಿತ ಮಣ್ಣನ್ನು ಹೊತ್ತು ಕರಾವಳಿ ತೀರದ ಬಂದರುಗಳಿಗೆ ಬೃಹತ್ ಟ್ರಕ್ಕುಗಳು ಸಂಚರಿಸು ತ್ತಿದ್ದವು.
ಗಣಿ ಮಾಲೀಕರಿಂದ ರಾಜ್ಯ ಬೊಕ್ಕಸಕ್ಕೆ ರಾಜಧನ (ರಾಯಲ್ ಟಿ) ಯನ್ನು ಪಡೆಯಲಾಗುತ್ತಿತ್ತು. ಜೊತೆಗೆ ಅಧಿಕಾರಿ ಗಳಿಗೆ ಕಣ್ ತಪ್ಪಿಸಿ ಅಕ್ರಮವಾಗಿ ಸಾಗಿಸುವುದನ್ನು ತಡೆಗಟ್ಟಲು,ಖನಿಜ ತನಿಕಾ ಠಾಣೆಯನ್ನು ತಾಲೂಕಿನಲ್ಲಿ ಪ್ರಾರಂಭಿಸುವುದರ ಜೊತೆಗೆ ವೇ ಬ್ರಿಡ್ಜ್ ಕೂಡ ಕಾರ್ಯನಿರ್ವಹಿಸುತ್ತಿತ್ತು. 2011 ರಲ್ಲಿ ಸರಕಾರವು ಈ ಭಾಗದ ಗಣಿಗಾರಿಕೆಗೆ ನಿಷೇಧವನ್ನು ಹೇರಿತು.ನಂತರ 2019 ರಲ್ಲಿ ಕೊರೊನಾ ಎಂಬ ಮಹಾಮಾರಿ ಆವರಿಸಿತು.
ಕೋವಿಡ್ ನಂತರ ಖನಿಜ ತನಿಕಾ ಠಾಣೆಯ ಮುಂಭಾಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಾವಿರಾರು ಕೋಟಿ ವೆಚ್ಚದಲ್ಲಿ ಸುಸರ್ಜಿತವಾದ ಹೈವೇ ರಸ್ತೆಯನ್ನು ನಿರ್ಮಿಸಿತು.ಈಗ ರಸ್ತೆ ನಿರ್ಮಾಣದಿಂದಾಗಿ ಎಂ ಸ್ಯಾಂಡಲ್, ಜಲ್ಲಿ ಮತ್ತು ಕಲ್ಲುಗಳನ್ನು ಹೊತ್ತು ತರುವ ವಾಹನಗಳಿಗೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಸಾರಿಗೆ ಇಲಾಖೆ ನಿಗದಿ ಪಡಿಸಿರುವ ತೂಕಕ್ಕಿಂತ ಅಕ್ರಮವಾಗಿ ಹೆಚ್ಚು ಸರಕುಗಳು ಸಾಗಾಣೆ ಆಗುತ್ತಿದೆ.
ನಿಗದಿಗಿಂತ ಹೆಚ್ಚಿಗೆ ಇದ್ದಲ್ಲಿ ಟನ್ ಗೆ 1,200 ರಿಂದ 1,800 ರೂ ವರೆಗೆ ದಂಡ ವಿಧಿಸಲಾಗುತ್ತಿತ್ತು.ಇದೀಗ ಸುಸರ್ಜಿತ ಹೈವೇ ರಸ್ತೆಯಿಂದಾಗಿ ಖನಿಜ ಸಂಪತ್ತುಗಳನ್ನು ತೂಕ ಮಾಡಲು ಇದ್ದ ಸರಕಾರಿ ವೇ ಬ್ರಿಡ್ಜ್ ಮತ್ತು ಕಚೇರಿ ಮೂಲೆ ಗುಂಪಾಗಿದೆ. ಹತ್ತು ವರ್ಷಗಳಿಂದ ಒಂದೇ ಒಂದು ಲಾರಿಯನ್ನು ತೂಕ ಹಾಕದೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವೇ ಬ್ರಿಡ್ಜ್ ತುಕ್ಕು ಹಿಡಿಯುತ್ತಿದೆ.ಕಚೇರಿಯನ್ನು ಮತ್ತು ವೇ ಬ್ರಿಡ್ಜ್ ಅನ್ನು ಯೋಗ್ಯವಾದ ಜಾಗಕ್ಕೆ ಸ್ಥಳಾಂತರಿಸುವುದು ಉತ್ತಮ ಎನ್ನುತ್ತಾರೆ ಸ್ಥಳೀಯರು.
ಇನ್ನು ತನಿಕಾ ಠಾಣೆಯು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು,ಕೇವಲ ಒಬ್ಬ ಗುತ್ತಿಗೆ ನೌಕರ ಕಾರ್ಯನಿರ್ವಹಿಸು ತ್ತಿದ್ದಾನೆ. ಸಂಜೆ ವೇಳೆಗೆ ಕಚೇರಿಗೆ ಬೀಗ ಜಡಿದು ಮನೆಗೆ ತೆರಳುತ್ತಾನೆ. ಕಾರಣ ಅತಿಯಾದ ಚಿರತೆ ಕಾಟ ಮತ್ತು ಕಾಡು ಪ್ರಾಣಿಗಳ ಹಾವಳಿಯಿಂದಾಗಿ,ಇನ್ನು ಸಂಜೆಯಿಂದ ಬೆಳಗ್ಗೆವರೆಗೆ ಕ್ರಷರ್ ಲಾರಿಗಳು ನಿಗದಿತ ತೂಕಕ್ಕಿಂತ ಅಕ್ರಮ ವಾಗಿ ಕಟ್ಟಡ ನಿರ್ಮಾಣ ವಸ್ತುಗಳನ್ನು ಸಾಗಿಸುವುದು ಸರ್ವೇಸಾಮಾನ್ಯವಾಗಿ ಕಂಡುಬರುತ್ತದೆ.
ನಿಯಮಾನುಸಾರ 10 ಚಕ್ರದ ವಾಹನಗಳಿಗೆ 15 ರಿಂದ 18 ಟನ್,12 ಚಕ್ರದ ವಾಹನಗಳಿಗೆ 18 ರಿಂದ 22 ಟನ್ ತುಂಬಲು ಅವಕಾಶವಿದ್ದು.ಇದನ್ನು ಮೀರಿ 35 ರಿಂದ 41 ಟನ್ ವರೆಗೆ ಲಾರಿಗಳಲ್ಲಿ ಗೃಹ ನಿರ್ಮಾಣ ಸರಕು ಗಳನ್ನು, ನಗರ ಪ್ರದೇಶಗಳಿಗೆ ತರುತ್ತಿರುವುದರಿಂದ ಸಿಸಿ ರಸ್ತೆ, ಯುಜೂಡಿ ಮ್ಯಾನ್ ಹೋಲ್ ಗಳು ಮತ್ತು ಕುಡಿಯುವ ನೀರಿನ ಪೈಪುಗಳು ಪದೇ ಪದೇ ಹೊಡೆದು ಹೋಗುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ. ಕೂಡಲೆ ಸಂಬಂಧಪಟ್ಟ ಇಲಾಖೆಗಳು ಇತ್ತ ಗಮನ ಹರಿಸಿ ಅಕ್ರಮವನ್ನು ತಡೆದು ದಂಡ ವಿಧಿಸಿದರೆ ರಾಜ್ಯ ಸರಕಾರದ ಬೊಕ್ಕಸಕ್ಕೂ ಒಂದಷ್ಟು ಹಣ ಸಂದಾಯವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
*
ಗಣಿಗಾರಿಕೆ ಮಾಡುತ್ತಿರುವವರಲ್ಲಿ ರಾಜಕಾರಣಿಗಳದ್ದೇ ಹೆಚ್ಚು ಪಾಲು,ರಾಜಕಾರಣಿಗಳಿಗೆ ಹೆದರಿ ಸರಕಾರಿ ಅಧಿಕಾರಿ ಗಳು ಕೆಲಸ ಮಾಡುತ್ತಿಲ್ಲ.ಇನ್ನು ಕಚೇರಿಯನ್ನು ಸ್ಥಳಾಂತರಿಸಿ, ವೇ ಬ್ರಿಡ್ಜ್ ಮತ್ತೆ ಚಾಲನೆಗೆ ಬಂದರೆ ಗಣಿ ಮಾಲೀಕರು ಮಾಡುತ್ತಿರುವ ಅಕ್ರಮಗಳಿಗೆ ತೆರೆ ಎಳೆದಂತಾಗುತ್ತದೆ.
ಲೋಕೇಶ್ವರ್. ನಿವೃತ್ತ ಎಸಿಪಿ
ಗಣಿಗಾರಿಕೆ ನಡೆಸಲು ಅನುಮತಿ ನೀಡುವ ಇಲಾಖೆಗಳದ್ದು ಜವಾಬ್ದಾರಿ ಹೆಚ್ಚಿಗೆ ಇರುತ್ತದೆ,ನಿಗದಿತ ತೂಕಕ್ಕಿಂತ ಅಧಿಕ ಪ್ರಮಾಣದ ಗಣಿಗಾರಿಕೆ ಸರಕು ವಾಹನಗಳಿಗೆ ಸ್ಥಳದಲ್ಲಿಯೇ ಅನುಮತಿ ನೀಡಬಾರದು. ಈ ವಿಷಯಕ್ಕೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಕೂಡಲೆ ಸಂಪರ್ಕಿಸುತ್ತೇನೆ.
ಭಗವಾನ್ ದಾಸ್. ಎಆರ್ಟಿಓ, ಅಧಿಕಾರಿ