ಸಂದರರ್ಶನ: ರಂಜಿತ್ ಎಚ್. ಅಶ್ವತ್ಥ
ಕಳ್ಳರು, ಭ್ರಷ್ಟರು, ಲೂಟಿಕೋರರೆಲ್ಲ ಸತ್ಯಹರಿಶ್ಚಂದ್ರರ ರೀತಿ ಪೋಸು ಕೊಡುತ್ತಿದ್ದಾರೆ
ಸರಕಾರ ಅಸ್ಥಿರಗೊಳಿಸಲು ಆಪರೇಷನ್ ಕಮಲ ಮಾಡಲು ಸಾಧ್ಯವಾಗದೇ ವಾಮಮಾರ್ಗ ತುಳಿದ ಬಿಜೆಪಿ
ಬಿಜೆಪಿ ಅವಧಿಯಲ್ಲಿ ಆಗಿರುವ ಹಗರಣಗಳ ತನಿಖೆಗಳಿಗೆ ವೇಗ ನೀಡಿದ್ದರೆ ಈ ವೇಳೆಗೆ ಬಿಜೆಪಿಯ ಅರ್ಧದಷ್ಟು ನಾಯಕರು ಜೈಲಿನಲ್ಲಿರಬೇಕಿತ್ತು. ಆದರೆ ತಡವಾಗಿದ್ದರಿಂದ, ಸತ್ಯಹರಿಶ್ಚಂದ್ರರ ರೀತಿಯಲ್ಲಿ ಪೋಸು ಕೊಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮ ಲಿಂಗಾರೆಡ್ಡಿ ಟೀಕಿಸಿದ್ದಾರೆ.
‘ವಿಶ್ವವಾಣಿ’ಗೆ ನೀಡಿ ರುವ ವಿಶೇಷ ಸಂದರ್ಶನ ದಲ್ಲಿ ಬಿಜೆಪಿ ಅವಧಿಯಲ್ಲಿ ಆಗಿರುವ ಹಗರಣದ ಬಗ್ಗೆ ಮಾತನಾಡಿರುವ ಅವರು, ತನಿಖೆಯಲ್ಲಾಗಿರುವ ವಿಳಂಬದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಬಿಜೆಪಿ
ಅವಧಿಯಲ್ಲಿ ನಡೆದಿರುವ ಹತ್ತಾರು ಹಗರಣ ಗಳಿಗೆ ಸಂಬಂಧಿಸಿದಂತೆ ಮಾಡಿರುವ ತನಿಖೆಗಳಿಗೆ ಇನ್ನಷ್ಟು ವೇಗ ನೀಡಬೇಕಿತ್ತು. ದೇವರಾಜ ಅರಸು ಟ್ರಕ್ ನಿಗಮದ ಹಗರಣದಲ್ಲಿ ಮಾಡಿದ ಫಾಸ್ಟ್ಟ್ರ್ಯಾಕ್ ವಿಚಾರಣೆ
ರೀತಿ ಉಳಿದ ಎಲ್ಲ ಹಗರಣಗಳ ಬಗ್ಗೆಯೂ ವೇಗವಾಗಿ ತನಿಖೆ ಯಾಗಬೇಕಿತ್ತು. ಒಂದು ವೇಳೆ ಎಲ್ಲ ಪ್ರಕರಣಗಳ ತನಿಖೆಯೂ ತೀವ್ರಗತಿಯಲ್ಲಿ ಆಗಿದ್ದರೆ ಈ ವೇಳೆ ಬಿಜೆಪಿಯ ಅರ್ಧಕ್ಕೂ ಹೆಚ್ಚು ನಾಯಕರು ಜೈಲಿನಲ್ಲಿ ಇರುತ್ತಿದ್ದರು. ಬಿಜೆಪಿ ಅವಧಿಯಲ್ಲಿ ಆಗಿರುವ ಭ್ರಷ್ಟಾಚಾರವನ್ನು ಬಯಲು ಮಾಡಿ, ಇವರ ಬಂಡವಾಳ ಬಯಲು ಮಾಡಬೇಕಿತ್ತು. ನಾವು ಅದನ್ನು ಮಾಡದೆ ಇರುವುದಕ್ಕೆ, ಕಳ್ಳರು, ಭ್ರಷ್ಟರು, ಲೂಟಿಕೋರರೆಲ್ಲ ‘ಸತ್ಯಹರಿಶ್ಚಂದ್ರ’ರ ರೀತಿ ಪೋಸು ಕೊಟ್ಟುಕೊಂಡು ಓಡಾಡುತ್ತಿದ್ದಾರೆ.
ಮೈತ್ರಿ ಕಾಂಗ್ರೆಸ್ಗೆ ಹೊರೆಯಾಗುವುದೇ?: ಕಳೆದ ಹಲವು ವರ್ಷಗಳಿಂದ ಚನ್ನಪಟ್ಟಣದಲ್ಲಿ ಕಡಿಮೆ ಮತಗಳು ಬಂದಿದ್ದವು. ಆದರೆ ಲೋಕಸಭಾ ಚುನಾವಣೆಯಲ್ಲಿ ೮೫ ಸಾವಿರ ಮತಗಳನ್ನು ತೆಗೆದುಕೊಂಡಿದ್ದೇವೆ. ಆದ್ದರಿಂದ ಈ ಬಾರಿ ಉತ್ತಮ ಮತ ಪಡೆಯುವ ವಿಶ್ವಾಸವಿದೆ. ಬಿಜೆಪಿ- ಜೆಡಿಎಸ್ ಮೈತ್ರಿ ಹೆಚ್ಚು ದಿನ ಬಾಳುವುದಿಲ್ಲ. ಬಿಜೆಪಿ ಯವರು ಯಾರೆಂದಿಗೂ ಹೆಚ್ಚು ದಿನ ಮೈತ್ರಿ ಉಳಿಸಿಕೊಂಡಿರುವ ಇತಿಹಾಸವೇ ಇಲ್ಲ. ಅಧಿಕಾರಕ್ಕಾಗಿ ಅವರು ಒಂದಾಗಿದ್ದಾರೆ ಅಷ್ಟೇ. ಬಿಜೆಪಿಯವರು ಯಾವಾಗಲೂ ಮೈತ್ರಿಪಕ್ಷವನ್ನು ಮುಗಿಸುವುದಕ್ಕೆ ನೋಡುತ್ತಾರೆ. ಆದ್ದರಿಂದ ಜೆಡಿಎಸ್ನವರಿಗೂ ಮೋಸ ಮಾಡುತ್ತಾರೆ.
ಬಿಜೆಪಿಯವರು ಎಂದಿಗೂ ನೇರವಾಗಿ ಅಧಿಕಾರಕ್ಕೆ ಬಂದ ಉದಾಹರಣೆ ಕರ್ನಾಟಕದಲ್ಲಿಲ್ಲ. ಈ ಬಾರಿ ೧೩೬ ಶಾಸಕರ ಬಲವಿರುವುದರಿಂದ ಆಪರೇಷನ್ ಕಮಲ ಮಾಡಲು ಸಾಧ್ಯವಾಗದೇ, ಮುಖ್ಯಮಂತ್ರಿಗಳ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಆದರೆ ಇದ್ಯಾವ ಷಡ್ಯಂತ್ರವೂ ನಡೆಯುವುದಿಲ್ಲ ಎಂದು ಸಾರಿಗೆ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ(ramalingareddy) ವಾಗ್ದಾಳಿ ನಡೆಸಿದ್ದಾರೆ. ‘ವಿಶ್ವವಾಣಿ’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ರಾಜಕೀಯ ಸ್ಥಿತಿಗತಿ, ಗ್ಯಾರಂಟಿ ಯೋಜನೆ, ಆಪರೇಷನ್ ಕಮಲ, ಚನ್ನಪಟ್ಟಣ ಉಪಚುನಾವಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ರಾಜ್ಯ ರಾಜಕೀಯದಲ್ಲಿ ಎದ್ದಿದ್ದ ಬಿರುಗಾಳಿ ಈಗ ಹೇಗಿದೆ?
– ಬಿಜೆಪಿಯವರ ಸುಳ್ಳು ಆರೋಪ ಹಾಗೂ ವಾಮಮಾರ್ಗದಿಂದ ಕೆಲ ದಿನಗಳಿಂದ ಸೃಷ್ಟಿಯಾಗಿದ್ದ ಗೊಂದಲಗಳಿಗೆ ಈಗ ಸ್ಪಷ್ಟನೆ ಸಿಗುತ್ತಿದೆ. ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಬೇಕು ಎನ್ನುವ ಕಾರಣಕ್ಕೆ ಬಿಜೆಪಿ ಯವರು ಸರಕಾರದ ವಿರುದ್ಧ ಆರೋಪ ಮಾಡುತ್ತಾ ಬಂದರು. ಪ್ರಮುಖವಾಗಿ ಎರಡು ಆರೋಪಗಳನ್ನು ಮುಂದಿಟ್ಟುಕೊಂಡು ಓಡಾಡಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಾಗೂ ಮುಡಾ ನಿವೇಶನ ಹಂಚಿಕೆ ವಿಷಯದಲ್ಲಿ ಸುಖಾಸುಮ್ಮನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪುಮಸಿ ಬಳಿಯುವ ಪ್ರಯತ್ನಕ್ಕೆ ಬಿಜೆಪಿಗರು ಕೈಹಾಕಿದರು. ಆದರೆ ಅದು ಈಡೇರಿಲ್ಲ. ವಾಲ್ಮೀಕಿ ನಿಗಮದ ಹಗರಣದಲ್ಲಿ ನಮ್ಮ ಸಚಿವ ಪಾತ್ರವೇ ಇಲ್ಲದಿದ್ದರೂ ಆರೋಪಿಸಿ ಬಂಧಿಸಿದ್ದಾರೆ. ಅಧಿಕಾರಿಗಳು ಮಾಡಿರುವ ತಪ್ಪಿಗೆ ಮುಖ್ಯಮಂತ್ರಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ಯಾವುದೇ ರಾಜಕೀಯ ಕಾರಣವಿಲ್ಲದಿದ್ದರೂ, ಪ್ರಕರಣಕ್ಕೆ ರಾಜಕೀಯ ಲೇಪನ ಮಾಡಿ ಸರಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಮಾಡಿದರು. ಆರಂಭದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿಯೇ ಚುನಾವಣೆ ನಡೆಸಲಾಗಿದೆ ಎನ್ನುವ ಆರೋಪವನ್ನು ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಗೇಂದ್ರ, ರಾಹುಲ್ ಗಾಂಧಿವರೆಗೆ ಆರೋಪವನ್ನು ಹೊರಿಸಿದರು.
ಯಾವುದೇ ದಾಖಲೆಯಿಲ್ಲದಿದ್ದರೂ, ಆರೋಪ ಮಾಡಿರುವ ಮಾನಗೆಟ್ಟ ಜನರಿವರು. ಇನ್ನು ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಪಾತ್ರವೇನು ಇಲ್ಲದಿದ್ದರೂ ಅವರ ವಿರುದ್ಧ ಅಪಪ್ರಚಾರ ಮಾಡಿದರು.
ಮುಖ್ಯಮಂತ್ರಿಗಳನ್ನು ಈ ಪ್ರಕರಣದಲ್ಲಿ ಸಿಕ್ಕಿಹಾಕಿಸಬೇಕು ಎನ್ನುವ ಕಾರಣಕ್ಕೆ ರಾಜ್ಯಪಾಲರ ಮೂಲಕ ಅಭಿಯೋಜನೆಗೆ ಅವಕಾಶ ಕೊಡಿಸಿ, ದೇಶದ ದೊಡ್ಡ ದೊಡ್ಡ ವಕೀಲರನ್ನು ಕರೆಸಿ ಹೈಕೋರ್ಟ್ನಲ್ಲಿ ವಾದ ಮಾಡಿಸಿದ್ದಾರೆ. ಈ ಎಲ್ಲ ಪಂಡಿತರು ಬಂದು ವಾದ ಮಾಡಿದ್ದರೂ, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಮಾಡಿರುವ ತಪ್ಪೇನು ಎನ್ನುವುದನ್ನು ಹೇಳಲಾಗಿಲ್ಲ. ಇದೇ ಪ್ರಶ್ನೆಯನ್ನು ನ್ಯಾಯಮೂರ್ತಿಗಳು ಕೇಳಿದ್ದರೂ, ಉತ್ತರಿಸಲು ಆಗಿಲ್ಲ. ಹಾಗಾದರೆ, ಸರಕಾರವನ್ನು ಅಸ್ಥಿರಗೊಳಿಸಲು ಈ ಪ್ರಯತ್ನವೇ? ದೇಶಾದ್ಯಂತ ಬಿಜೆಪಿಯವರು ಮಾಡಿಕೊಂಡು ಬಂದಿರುವುದು ಇದೇ ಅಲ್ಲವೇ? ಯಾವುದೇ ರಾಜ್ಯದಲ್ಲಿ ಬಿಜೆಪಿಯೇತರ ಸರಕಾರ ಅಧಿಕಾರಕ್ಕೆ ಬಂದರೆ ಅದನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಸರಕಾರವನ್ನು ಬೀಳಿಸಲು ೫೬ ಶಾಸಕರ ರಾಜೀನಾಮೆ ಅಗತ್ಯವಿದೆ. ಇದು ಸಾಧ್ಯವಿಲ್ಲ ಎಂದು ತಿಳಿಯುತ್ತಿದ್ದಂತೆ ಮುಖ್ಯಮಂತ್ರಿಗಳ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಈ ಷಡ್ಯಂತ್ರದ ಮೂಲಕ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಿಸುತ್ತಿದ್ದಾರೆ.
ಬಿಜೆಪಿಯವರು ಈ ರೀತಿ ಡ್ರಾಮಾ ಮಾಡುತ್ತಿರುವುದು ಇದೇ ಮೊದಲಲ್ಲ. ಹಾಗೇ ನೋಡಿದರೆ, ಕರ್ನಾಟಕದಲ್ಲಿ ಬಿಜೆಪಿಯವರು ಸ್ವಂತಬಲದ ಮೇಲೆ ಅಧಿಕಾರಕ್ಕೆ ಬಂದೇ ಇಲ್ಲ. ೨೦೦೮ರಲ್ಲಿ ರಾಜೀನಾಮೆ ಕೊಡಿಸಿಯೇ ಅಧಿಕಾರಕ್ಕೆ ಬಂದರು. ೨೦೧೯ರಲ್ಲಿಯೂ ರಾಜೀನಾಮೆ ಕೊಡಿಸಿ ಸರಕಾರವನ್ನು ರಚಿಸಿದರು. ಅದೇ ರೀತಿ ಈ ಬಾರಿಯೂ ಸರಕಾರ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಇದು ಯಶಸ್ವಿ ಗುವುದಿಲ್ಲ. ಸರಕಾರವನ್ನು ಅಭದ್ರಗೊಳಿಸಲು ಕ್ಷುಲಕ ಕಾರಣವನ್ನು ಮುಂದಿಟ್ಟುಕೊಂಡು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ರೀತಿಯ ಪ್ರಯತ್ನಗಳು ದೇಶದಲ್ಲಿ ಮೊದಲಲ್ಲ. ಬಿಜೆಪಿಯವರು ತೆಲಂಗಾಣ, ದೆಹಲಿ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದೇ ರೀತಿಯ ಪ್ರಯತ್ನ ಮಾಡಿದ್ದಾರೆ.
ಕಾಂಗ್ರೆಸ್ಗೆ ಆಪರೇಷನ್ ಕಮಲದ ಆತಂಕವಿದೆಯೇ?
– ಆಪರೇಷನ್ ಕಮಲ ಮಾಡಲು ಪ್ರಯತ್ನಿಸುತ್ತಿರುವುದು ಇತ್ತೀಚೆಗೆ. ಮುಖ್ಯಮಂತ್ರಿಗಳು ಬಿಜೆಪಿ ವಿರುದ್ಧ ೨೦ ಹಗರಣಗಳನ್ನು ಪ್ರಸ್ತಾಪಿಸುತ್ತಿದ್ದಂತೆ ಅವರು ಆಪರೇಷನ್ ಕಮಲಕ್ಕೆ ಪ್ರಯತ್ನಿಸಿದರು. ಆದರೆ ಯಾವುದೇ ಕಾರಣಕ್ಕೂ ಈ ಬಾರಿ ರಾಜ್ಯದಲ್ಲಿ ಆಪರೇಷನ್ ಕಮಲವಾಗುವುದಿಲ್ಲ. ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸರಕಾರದ ವೇಳೆ, ಕೆಲವು ಸಮಸ್ಯೆಗಳಿದ್ದವು. ಜೆಡಿಎಸ್ ನೊಂದಿಗೆ ಹೊಂದಾಣಿಕೆ ಇರಲಿಲ್ಲ, ನಮಗೂ ಬಹುಮತ ವಿರಲಿಲ್ಲ. ಆದ್ದರಿಂದ ಬೇಸರಗೊಂಡು ರಾಜೀನಾಮೆ ನೀಡಿದರು. ಆದರೆ ಈ ಬಾರಿ ನಮಗೆ ೧೩೬ ಶಾಸಕರಿದ್ದಾರೆ.
ಬಿಜೆಪಿ ವಿರುದ್ಧದ ಆರೋಪ ರಾಜಕೀಯ ಹೇಳಿಕೆಗೆ ಸೀಮಿತವೇ?
– ಇಲ್ಲ. ಆದರೆ ಬಿಜೆಪಿ ಅವಧಿಯಲ್ಲಿ ನಡೆದಿರುವ ಹತ್ತಾರು ಹಗರಣಗಳಿಗೆ ಸಂಬಂಧಿಸಿದಂತೆ ಮಾಡಿರುವ ತನಿಖೆಗಳಿಗೆ ಇನ್ನಷ್ಟು ವೇಗ ನೀಡಬೇಕಿತ್ತು. ದೇವರಾಜ ಅರಸು ಟ್ರಕ್ ನಿಗಮದ ಹಗರಣದಲ್ಲಿ ಮಾಡಿದ ಫಾಸ್ಟ್ಟ್ರ್ಯಾಕ್ ವಿಚಾರಣೆ ರೀತಿ ಉಳಿದ ಎಲ್ಲ ಹಗರಣಗಳಿಗೂ ವೇಗವಾಗಿ ತನಿಖೆಯಾಗಬೇಕಿತ್ತು. ಒಂದು ವೇಳೆ ಎಲ್ಲ ಪ್ರಕರಣಗಳ ತನಿಖೆಯೂ ತೀವ್ರಗತಿಯಲ್ಲಿ ಆಗಿದ್ದರೆ ಈ ವೇಳೆ ಬಿಜೆಪಿಯ ಅರ್ಧಕ್ಕೂ ಹೆಚ್ಚು ನಾಯಕರು ಜೈಲಿನಲ್ಲಿ ಇರುತ್ತಿದ್ದರು.
ಅಂದರೆ ತನಿಖೆಗಳು ತಡವಾಗುತ್ತಿವೆ ಎನ್ನುವಿರಾ?
– ಹೌದು, ಈ ಎಲ್ಲ ಪ್ರಕರಣಗಳ ತನಿಖೆಯೂ ತಡವಾಗಿದೆ. ಶನಿವಾರ ಕರೋನಾ ಅವಧಿಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನ್ಯಾ. ಕುನ್ಹಾ ಅವರು ವರದಿ ನೀಡಿದ್ದಾರೆ. ಕರೋನಾ ಸಮಯದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷನಾಗಿದ್ದಾಗಲೂ ವರದಿ ನೀಡಿದ್ದೆ. ಬಿಜೆಪಿ ಅವಧಿಯಲ್ಲಿ ಆಗಿರುವ ಭ್ರಷ್ಟಾಚಾರವನ್ನು ಬಯಲು ಮಾಡಿ, ಇವರ ಬಂಡವಾಳ ಬಯಲು ಮಾಡಬೇಕಿತ್ತು. ನಾವು ಅದನ್ನು ಮಾಡದೆ ಇರುವುದಕ್ಕೆ, ಕಳ್ಳರು, ಭ್ರಷ್ಟರು, ಲೂಟಿಕೋರರೆಲ್ಲ ‘ಸತ್ಯಹರಿಶ್ಚಂದ್ರ’ರ ರೀತಿ ಪೋಸು ಕೊಟ್ಟುಕೊಂಡು ಓಡಾಡುತ್ತಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಹೊರೆಯಾಗಲಿಲ್ಲವೇ?
– ರಾಜ್ಯ ಸರಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿಗಳಿಗೆ ವಾರ್ಷಿಕವಾಗಿ ೫೦ ಸಾವಿರ ಕೋಟಿ ರು. ಖರ್ಚಾಗುತ್ತಿದೆ. ಆದರೆ ಈ ಹಣ ಯಾರಿಗೆ ಹೋಗುತ್ತಿದೆ? ಮೋದಿ ಸರಕಾರದ ಅವಧಿಯಲ್ಲಿ ಹೆಚ್ಚಾಗಿರುವ ಡೀಸೆಲ್- ಪೆಟ್ರೋಲ್ ಸೇರಿದಂತೆ ಎಲ್ಲ ಬೆಲೆಗಳ ದರದಿಂದ ತತ್ತರಿಸಿರುವ ರಾಜ್ಯದ ಜನರಿಗೆ ಹೋಗುತ್ತಿದೆ. ಕೇಂದ್ರ ಸರಕಾರ ಮಾಡಿರುವ ಹೊರೆಯನ್ನು ತಗ್ಗಿಸಿಕೊಳ್ಳಲು ನಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ಸಹಾಯವಾಗು ತ್ತಿದೆ. ಇದರೊಂದಿಗೆ ಗ್ಯಾರಂಟಿ ಯೋಜನೆಗಳು ಜನರಿಗೆ ಸಹಾಯವಾಗುತ್ತಿದೆ ಹೊರತು, ಪೋಲಾಗುತ್ತಿಲ್ಲ.
ರಾಜ್ಯದಲ್ಲಿ ಬಸ್ ಕೊರತೆಯಿದೆ ಎನ್ನುವ ಆರೋಪ ಬಿಜೆಪಿ ಮಾಡಿದೆಯಲ್ಲ?
– ವಿಜಯೇಂದ್ರ, ಅಶೋಕ್ ಆರೋಪಕ್ಕೆ ಈಗಾಗಲೇ ನಾನು ಉತ್ತರಿಸಿದ್ದೇನೆ. ರಾಜ್ಯದಲ್ಲಿ ೨೫ ಸಾವಿರಕ್ಕೂ ಹೆಚ್ಚು ಬಸ್ಗಳಿವೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ೬೨೦೦ ನೂತನ ಬಸ್ಗಳ ಖರೀದಿಗೆ ಆದೇಶ ಹೊರಡಿಸಲಾಗಿದ್ದು, ಈಗಾಗಲೇ ಮೂರು ಸಾವಿರ ಬಸ್ಗಳು ಬಂದಿವೆ. ಇನ್ನು ೧೫೦೦ ಹಳೆಯ ಬಸ್ ಗಳನ್ನು ಸುಸ್ಥಿತಿಗೆ ಬಂದು ರಸ್ತೆಗೆ ಇಳಿಸಲಾಗಿದೆ. ಈ ಮೂಲಕ ಈಗಾಗಲೇ ೪೫೦೦ ಬಸ್ಗಳು ರಸ್ತೆಗೆ ಇಳಿದಿವೆ.
ಬಿಜೆಪಿ ಸರಕಾರದ ಅವಧಿಯಲ್ಲಿ ಏನು ಮಾಡಿದ್ದಾರೆ? ಇವರ ಅವಧಿಯಲ್ಲಿ ಒಂದೇ ಒಂದು ಬಸ್ ಖರೀದಿಸಲಿಲ್ಲ. ೩೫೦೦ ಬಸ್ಗಳನ್ನು ನಿಲ್ಲಿಸಿದರು. ಇದಿಷ್ಟೇ ಅಲ್ಲದೇ, ೨೦೧೬ರ ಬಳಿಕ ಇವರು ನೇಮಕವನ್ನೇ ಮಾಡಿಲ್ಲ. ಆದರೆ ನಾವು ಈಗಾಗಲೇ ೭೦೦ ಜನರಿಗೆ ಅನುಕಂಪದ ಆಧಾರದಲ್ಲಿ ಹಾಗೂ ೯ಸಾವಿರಕ್ಕೂ ಹೆಚ್ಚು ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಎಲ್ಲ ವಿಭಾಗದಲ್ಲಿಯೂ ಪರೀಕ್ಷೆ ನಡೆಯುತ್ತಿದೆ. ಬಿಜೆಪಿಯವರಿಗೆ ಸುಳ್ಳು ಹೇಳದಿದ್ದರೆ ಜೀರ್ಣವಾಗುವುದಿಲ್ಲ ಅದಕ್ಕೆ ಈ ರೀತಿ ಆರೋಪಿಸುತ್ತಾರೆ.
ಅನುದಾನ ಕೊರತೆ ಎನ್ನುವ ಆರೋಪವಿದೆಯಲ್ಲ?
– ಕಳೆದ ನಾಲ್ಕು ವರ್ಷದಲ್ಲಿ ಬಿಜೆಪಿಯವರು ಸಾವಿರಾರು ಕೋಟಿ ರು. ಸಾಲ ಮಾಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ೮೫೦೦ಕೋಟಿ ಸಾಲ ಮಾಡಿದ್ದಾರೆ. ಇನ್ನು ಜಲಸಂಪನ್ಮೂಲದಲ್ಲಿ ೨೦ ಸಾವಿರ ಕೋಟಿ ರು.
ಗ್ರಾಮೀಣಾಭಿವೃದ್ಧಿಯಲ್ಲಿ ೩೫೦೦ ಕೋಟಿ, ಲೋಕೋಪಯೋಗಿಯಲ್ಲಿ ಸಾವಿರಾರು ಕೋಟಿ ರು. ಗುತ್ತಿಗೆದಾರರಿಗೆ ಬಾಕಿ ಉಳಿಸಿದ್ದಾರೆ. ನಮ್ಮ ಸರಕಾರದ ಕೊನೆಯಲ್ಲಿ ೨.೩೦ ಲಕ್ಷ ಕೋಟಿ ಸಾಲವಿತ್ತು. ಆದರೆ ಬಿಜೆಪಿಯವರು ನಾಲ್ಕು ವರ್ಷಕ್ಕೆ ಎರಡು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇವರು ಮಾಡಿರುವ ಸಾಲಕ್ಕೆ ಬಡ್ಡಿ ಹಾಗೂ ಅಸಲು ಕಟ್ಟುತ್ತಿರುವುದರಿಂದ ಕೊಂಚ ಸಮಸ್ಯೆಯಾಗಿದೆ. ಆದ್ದರಿಂದ ಅನುದಾನ ನೀಡಲು
ಸಮಸ್ಯೆಯಾಗುತ್ತಿದೆ. ಇವರು ಮಾಡಿರುವ ತಪ್ಪಿಗೆ ರಾಜ್ಯದ ಜನರಿಗೆ ತೊಂದರೆಯಾಗುತ್ತಿದೆ.
ಹಿಂದೂ ವಿರೋಧಿ ಕಾಂಗ್ರೆಸ್ ಎನ್ನುವ ಆರೋಪವಿದೆಯಲ್ಲ?
– ನಿಜವಾದ ಹಿಂದುಗಳು ಕಾಂಗ್ರೆಸಿನಲ್ಲಿ ಇರುವವರು. ಬಿಜೆಪಿಯವರು ನಕಲಿ ಹಿಂದೂಗಳು ಎನ್ನುವುದನ್ನು ಕಳೆದ ಏಳು ವರ್ಷದಿಂದ ಹೇಳಿಕೊಂಡು ಬರುತ್ತಿದ್ದೇನೆ. ಹಿಂದೂ ಧರ್ಮವನ್ನು ಸರಿಯಾಗಿ ಪಾಲಿಸುವವರು ನಾವೇ. ಬಿಜೆಪಿಯವರು ಚುನಾವಣೆಯ ಕಾರಣಕ್ಕೆ ರಾಮನನ್ನು ಬಳಸಿಕೊಳ್ಳುತ್ತಿದ್ದಾರೆ. ಹಾಗೆ ನೋಡಿದರೆ, ನಾನು ಮುಜರಾಯಿ ಇಲಾಖೆ ಅಧಿಕಾರ ಸ್ವೀಕರಿಸಿ ಬಳಿಕ ಮಾಡಿರುವ ಅಭಿವೃದ್ಧಿ ಅವರ ಕಾಲದಲ್ಲಿ ಏಕೆ ಆಗಲಿಲ್ಲ? ಹಿಂದು ಧರ್ಮದ ಆರಾಧಕರಿಗೆ ಏಕೆ ದೇವಾಲಯದ ಅಭಿವೃದ್ಧಿ ಬಗ್ಗೆ ಯೋಚಿಸಲಿಲ್ಲ? ಸಿ ಗ್ರೇಡ್ ದೇವಾಲಯಗಳಿಗೆ ಏಕೆ ಅನುದಾನ ನೀಡಲಿಲ್ಲ?
ಚನ್ನಪಟ್ಟಣದ ಉಪಚುನಾವಣೆ ಕಾಂಗ್ರೆಸ್ಗೆ ಹೊರೆಯಾಗುವುದೇ?
ಕಳೆದ ಹಲವು ವರ್ಷಗಳಿಂದ ಚನ್ನಪಟ್ಟಣದಲ್ಲಿ ಕಡಿಮೆ ಮತಗಳನ್ನು ತೆಗೆದುಕೊಳ್ಳುತ್ತಿದೆವು. ಆದರೆ ಲೋಕಸಭಾ ಚುನಾವಣೆಯಲ್ಲಿ ೮೫ಸಾವಿರ ಮತಗಳನ್ನು ತಗೆದುಕೊಂಡಿದ್ದೇವೆ. ಆದ್ದರಿಂದ ಈ ಬಾರಿ ಉತ್ತಮ ಮತ ಪಡೆಯುವ ವಿಶ್ವಾಸವಿದೆ. ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಹೆಚ್ಚು ದಿನ ಬಾಳುವುದಿಲ್ಲ. ಬಿಜೆಪಿಯವರು ಯಾರೆಂದಿಗೂ ಹೆಚ್ಚು ದಿನ ಮೈತ್ರಿ ಉಳಿಸಿಕೊಂಡಿರುವ ಇತಿಹಾಸವೇ ಇಲ್ಲ. ಅಧಿಕಾರಕ್ಕಾಗಿ ಅವರು ಒಂದಾಗಿದ್ದಾರೆ ಅಷ್ಟೇ. ಬಿಜೆಪಿಯವರು ಯಾವಾಗಲೂ ಮೈತ್ರಿಪಕ್ಷವನ್ನು ಮುಗಿಸುವುದಕ್ಕೆ ನೋಡುತ್ತಾರೆ. ಆದ್ದರಿಂದ ಜೆಡಿಎಸ್ನವರಿಗೂ ಮೋಸ ಮಾಡುತ್ತಾರೆ.
*
ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುವವರು, ನಮ್ಮ ರಾಜ್ಯಕ್ಕೆ ಹೆಚ್ಚುವರಿ ಅನುದಾನ ಕೇಳುವುದಕ್ಕೆ ಏಕೆ ಹಿಂದೇಟು ಹಾಕುತ್ತಿದ್ದಾರೆ? ರಾಜ್ಯದಿಂದ ಕೇಂದ್ರಕ್ಕೆ ಪ್ರತಿವರ್ಷ ೪.೫ ಲಕ್ಷ ಕೋಟಿ ತೆರಿಗೆ, ಜಿಎಸ್ಟಿ
ಹೋಗುತ್ತಿದೆ. ಆದರೆ ವಾಪಸು ಮಾತ್ರ ಎಷ್ಟು ಹೋಗುತ್ತಿದೆ? ಈ ಬಗ್ಗೆ ಮಾತನಾಡಲು ಬಿಜೆಪಿಯ ಸಂಸದರು ಎಷ್ಟು ಜನರು ಪ್ರಧಾನಿ ನರೇಂದ್ರ ಮೋದಿ ಮುಂದೆ ಹೋಗಿ ನಿಲ್ಲುತ್ತಾರೆ..?
-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
ಬಿಜೆಪಿ-ಜೆಡಿಎಸ್ ಮೈತ್ರಿ ಹೆಚ್ಚು ದಿನ ಬಾಳುವುದಿಲ್ಲ. ಬಿಜೆಪಿಯ ವರು ಯಾರೊಂದಿಗೂ ಹೆಚ್ಚು ದಿನ ಮೈತ್ರಿ ಉಳಿಸಿಕೊಂಡಿರುವ ಇತಿಹಾ ಸವೇ ಇಲ್ಲ. ಅಧಿಕಾರಕ್ಕಾಗಿ ಅವರು ಒಂದಾಗಿದ್ದಾರೆ ಅಷ್ಟೇ. ಬಿಜೆಪಿಯವರು ಯಾವಾಗಲೂ ಮೈತ್ರಿ ಪಕ್ಷವನ್ನು ಮುಗಿಸುವುದಕ್ಕೆ ನೋಡುತ್ತಾರೆ. ಆದ್ದ ರಿಂದ ಜೆಡಿಎಸ್ ನವರಿಗೂ ಮೋಸ ಮಾಡುತ್ತಾರೆ.
– ರಾಮಲಿಂಗಾರೆಡ್ಡಿ ಸಾರಿಗೆ ಸಚಿವ