– ವಿವಾದ ಹುಟ್ಟು ಹಾಕಿರುವ ಟಿಟಿಡಿ
– ರಾಜ್ಯ ಸರ್ಕಾರದಿಂದ ಆಗಬೇಕಿದೆ ಘೋಷಣೆ
– ಅಯೋಧ್ಯೆಗೆ ನೀಡಿದ ಪ್ರಾಮುಖ್ಯತೆ ಅಂಜನಾದ್ರಿಗೂ ನೀಡಲಿ
ವಿಶೇಷ ವರದಿ: ಬಸವರಾಜ ಕರ್ಕಿಹಳ್ಳಿ, ಕೊಪ್ಪಳ
ಅಯೋಧ್ಯೆಯ ಬಳಿಕ ಹೆಚ್ಚು ಅಭಿವೃದ್ಧಿ ಕಾಣಬೇಕಿದ್ದ ಹನುಮಂತನ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಮಧ್ಯೆ ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಹನುಮನ ಜನ್ಮಸ್ಥಳದ ಬಗ್ಗೆ ವಿವಾದ ಹುಟ್ಟುಹಾಕಿದ್ದು ರಾಜ್ಯ ಸರ್ಕಾರ ಮಾತ್ರ ಮೌನವಾಗಿದೆ. ರಾಜ್ಯ ಸರ್ಕಾರದ ಈ ಮೌನ ಹನುಮ ಭಕ್ತರನ್ನು ಕೆರಳಿಸುವಂತೆ ಮಾಡಿದೆ.
ಇಡೀ ದೇಶದಲ್ಲಿ ಶಿವ, ರಾಮನನ್ನು ಪೂಜಿಸುವಷ್ಟೇ ಹನುಮನನ್ನು ಸರ್ವ ಜಾತಿ ಜನಾಂಗದವರು ಅಷ್ಟೆ ಏಕೆ ಅನೇಕ ಅಲ್ಪಸಂಖ್ಯಾತರೂ ಪೂಜಿಸು ತ್ತಾರೆ. ಇಂತಹ ಆರಾಧ್ಯದೈವನ ಜನ್ಮಸ್ಥಳದ ಬಗ್ಗೆ ಕಳೆದ ವರ್ಷ ಟಿಟಿಡಿ 16ನೇ ಶತಮಾನದಲ್ಲಿ ದಾಖಲಾದ ಸಾಹಿತ್ಯವನ್ನು ಆಧಾರವಾಗಿಟ್ಟುಕೊಂಡು ಆಂಜನೇಯ ಹುಟ್ಟಿದ್ದು ತಿರುಪತಿಯಲ್ಲಿ ಎಂದು ಹೇಳಿ ಅಲ್ಲಿ ಫೆಬ್ರವರಿ ೧೬ರಂದು ಆಕಾಶಗಂಗಾ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದೆ. ಟಿಟಿಡಿಯ ಈ ನಡೆ ಚರ್ಚೆಗೆ ವಿವಾದ ಹುಟ್ಟುಹಾಕಿದೆ.
ಆದರೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿಯ ಅಂಜನಾದ್ರಿ ಪರ್ವತವೇ ಹನುಮನ ಜನ್ಮಸ್ಥಳ ಎಂದು ಘಂಟಾ ಘೊಷವಾಗಿ ಹೇಳುವಲ್ಲಿ ಕರ್ನಾಟಕ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ವಿವಾದಕ್ಕೆ ದಾಖಲೆ ಸಮೇತ ಉತ್ತರ ನೀಡುವ ಮೂಲಕ ಕರ್ನಾಟಕವೇ ಹನುಮನ ಜನ್ಮಸ್ಥಳ ಎಂದು ಹೇಳುವಲ್ಲಿ ಹಿಂದೆ ಬಿದ್ದಿದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯ ಬಳಸಿಕೊಂಡು ಟಿಟಿಡಿ ಈ ವಿವಾದ ಹುಟ್ಟು ಹಾಕಿದೆ. ಆದರೆ ಆಂಧ್ರ ಹೈಕೋರ್ಟ್ ಟಿಟಿಡಿ ಕ್ರಮಕ್ಕೆ ತಡೆ ನೀಡಿದ ಬಗ್ಗೆ ವರದಿಯಾಗಿದೆ.
ಪೌರಾಣಿಕ ಕುರುಹು: ಹನುಮಂತ ಕೊಪ್ಪಳದ ಅಂಜನಾದ್ರಿಯಲ್ಲೇ ಜನಿಸಿದ್ದಾನೆ ಎಂದು ಹೇಳಲು ಅನೇಕ ಪೌರಾಣಿಕ ಕುರುಹುಗಳು ಇವೆ. ವಾಲ್ಮೀಕಿ ಮೂಲ ರಾಮಾಯಣದಲ್ಲೂ ಇದರ ಉಲ್ಲೇಖಗಳಿವೆ. ವಾಲ್ಮೀಕಿ ರಾಮಾಯಣ ಮಹಾಕಾವ್ಯದ ಕಥೆ ಇಡೀ ಭಾರತ ಮತ್ತು ಅದರಾಚೆ ಜನಮನದಲ್ಲಿ ಗಟ್ಟಿಗೊಂಡಿದೆ. ಈ ಮಹಾಕಾವ್ಯದಲ್ಲಿ ಉಲ್ಲೇಖವಾದ ಅನೇಕ ಹೆಸರುಗಳು, ಹಂಪಿ-ಆನೆಗುಂದಿ ಪ್ರದೇಶದ ಭೌಗೋಳಿಕ ಲಕ್ಷಣ, ಪ್ರಾಗಿತಿಹಾಸ ಕಾಲದ ಅವಶೇಷಗಳು, ಶಾಸನಗಳು ಮತ್ತು ಆ ಭಾಗದಲ್ಲಿ ಪ್ರಚಲಿತವಿರುವ ಐತಿಹ್ಯ- ಪುರಾಣಗಳನ್ನು ಪರಿಶೀಲಿಸಿ ವ್ಯಾಪಕ ಅಧ್ಯಯನದ ಮೂಲಕ ಹಂಪಿ-ಆನೆಗುಂದಿ ಪ್ರಾಚೀನ ಕಿಷ್ಕಿಂಧವಾಗಿತ್ತೆಂದು ಇತಿಹಾಸಕಾರರು ಹೇಳುತ್ತಾರೆ.
ಸ್ಕಂದ ಪುರಾಣದ ಭಾಗವಾದ ಮತ್ತು ಈ ಪರಿಸರದ ಸ್ಥಳ ಪುರಾಣವೆಂದು ಕರೆಯಲ್ಪಡುವ ಪಂಪಾ ಮಹಾತ್ಮೆಯಲ್ಲಿ ಮಾಲ್ಯವಂತಗಿರಿ, ಋಷ್ಯಮೂಕ, ಕಿಷ್ಕಿಂಧಾದ್ರಿ, ಹೇಮಕೂಟ, ವಿಪ್ರಕೂಟ, ಗಂಧರ್ವಗಿರಿ, ಜಂಬುನಾಥಗಿರಿ, ಸೋಮಪರ್ವತ, ಮಾಣಿಭದ್ರೇಶ್ವರ ಪರ್ವತ ಮುಂತಾದವು ವಾಲ್ಮೀಕಿ ರಾಮಾ ಯಣದಲ್ಲಿ ಬರುವ ಹೆಸರುಗಳಿಗೆ ಪೂರಕವಾಗಿಯೇ ಇವೆ. ರಾಮಾಯಣದಲ್ಲಿ ಉಲ್ಲೇಖಗೊಂಡ ಕಾರ್ತಿಕೇಯ ತಪೋವನ ಕುಡಿತಿನಿಯಲ್ಲಿದ್ದ ಬಗೆಗೆ ರಾಷ್ಟ್ರಕೂಟರಿಂದ ಹೊಯ್ಸಳರ ಕಾಲಾವಧಿಯ ಶಾಸನಗಳು ಮಾಹಿತಿ ಒದಗಿಸುತ್ತವೆ. ಇದು ಕಬ್ಬಿಣ ಉಪಕರಣಗಳನ್ನು ತಯಾರಿಸುವ ಕಾರ್ಯಾ ಗಾರವಾಗಿ ರೂಪಗೊಂಡಿತು. ಅಲ್ಲದೆ ಇಂದಿಗೂ ಕುಡಿತಿನಿ, ಸಂಡೂರು ಕುಮಾರಸ್ವಾಮಿ ಬೆಟ್ಟ ಕಾರ್ತಿಕೇಯನ ಪ್ರಮುಖ ಸ್ಥಳಗಳಾಗಿ ಪ್ರಸಿದ್ಧಿ ಪಡೆದಿವೆ.
ಐತಿಹಾಸಿಕ ದಾಖಲೆ: ತುಂಗಭದ್ರಾ ನದಿ ದಂಡೆ ಮೇಲೆ ಪಂಪಾವನ, ಶಬರಿ ಗುಹೆ, ಮಾನಸ ಸರೋವರ, ಆಂಜನಾದ್ರಿ, ಆನೆಗುಂದಿ ಹತ್ತಿರ ಬಲಮುರಿ ಸಾಲಿನ ಒಂದು ಭಾಗ ವಾಲಿ ಭಂಡಾರ ಹಾಗೂ ಈ ನದಿಯ ಇನ್ನೊಂದು ಭಾಗದಲ್ಲಿ ಸುಗ್ರೀವ ಗುಹೆ, ಸೀತೆಯ ಸೆರಗು, ಮತಂಗ ಪರ್ವತ, ಹೇಮಕೂಟ, ರತ್ನಕೂಟ ಮೊದಲಾದವು ಕಂಡುಬರುತ್ತವೆ. ರಾಮಾಯಣದ ಕಿಷ್ಕಿಂಧ ಕಾಂಡದಲ್ಲಿ ವಾಲಿ, ಸುಗ್ರೀವ, ಹನುಮಂತ, ಜಾಂಬವಂತರ ಹೆಸರುಗಳು ಪ್ರಧಾನವಾಗಿ ಗುರುತಿಸಿಕೊಳ್ಳುತ್ತವೆ. ಈ ಹೆಸರಿನಿಂದ ಕರೆಯಲ್ಪಡುವ ಸಾಂಕೇತಿಕ ಸ್ಥಳಗಳು ಹಂಪಿ- ಆನೆಗುಂದಿ ಪರಿಸರದಲ್ಲಿರುವುದು ವಿಶೇಷ.
ತುಂಗಭದ್ರಾ ನದಿ ದಂಡೆಯಲ್ಲಿರುವ ಕೋದಂಡರಾಮ ದೇವಾಲಯದ ಹತ್ತಿರ ಸೀತೆ ಸೆರಗಿಗೆ ಹೊಂದಿಕೊಂಡಿರುವ ಸುಗ್ರೀವ ಗುಹೆ, ಈ ನದಿಯ ಉತ್ತರ ಭಾಗದಲ್ಲಿ ವಾಲಿ ಭಂಡಾರ, ಬುಕ್ಕಸಾಗರದ ಹತ್ತಿರ ವಾಲಿದಿಬ್ಬ, ಹನುಮನಹಳ್ಳಿಯ ಆಂಜನಾದ್ರಿ ಬೆಟ್ಟ ಮತ್ತು ಹೊಸಪೇಟೆಯ ಹತ್ತಿರ ಜಂಬುನಾಥ (ಜಾಂಬವಂತ) ಪರ್ವತಗಳು ಇಂದಿಗೂ ಇವೆ.
ಮೇಲಿನ ಉಲ್ಲೇಖಿತ ಆಧಾರಗಳ ಪ್ರಕಾರ ಹಂಪಿ-ಆನೆಗುಂದಿ ಪರಿಸರದಲ್ಲಿರುವ ಆಂಜನಾದ್ರಿ ಪರ್ವತ ಬಹಳ ಪವಿತ್ರವಾದುದೆಂಬ ನಂಬಿಕೆ ಅತ್ಯಂತ ಪ್ರಾಚಿನ ಕಾಲದ್ದು. ಅದನ್ನು ಜನಪದರು ಐತಿಹ್ಯಗಳ ಮೂಲಕ ಕಾಪಾಡಿಕೊಂಡು ಬಂದಿದ್ದಾರೆ. ಅಲ್ಲದೆ ಇಲ್ಲಿಯ ಗ್ರಾಮವನ್ನು ಹನುಮನಹಳ್ಳಿ ಎಂದು ನಾಮಕರಣ ಮಾಡಲಾಗಿದೆ. ಹನುಮನ ಜನ್ಮಸ್ಥಳವೆಂಬ ಪರಿಕಲ್ಪನೆಯಲ್ಲಿ ಈ ಪರಿಸರದಲ್ಲಿ ಹೆಚ್ಚಾಗಿ ಬಾಲ ಆಚಿಜನೇಯ, ಆಂಜನೇಯನ ದೇವಾಲ ಯಗಳು ನಿರ್ಮಾಣವಾಗಿವೆ. ಟಿಟಿಡಿ ಹೇಳುತ್ತಿರುವ ಆಂಜನೇಯನ ಜನ್ಮಸ್ಥಳ ತಿರುಪತಿಯ ಆಂಜನಾದ್ರಿ ಮತ್ತು ಕಿಷ್ಕಿಂಧೆಗೆ ಪೂರಕವಾದ ಶಾಸನಾ ಧಾರಗಳು ಅಲ್ಲಿ ಕಾಣಸಿಕ್ಕಿಲ್ಲ. ಇಷ್ಟೆಲ್ಲ ದಾಖಲೆಗಳು ಇದ್ದರೂ ಕರ್ನಾಟಕ ಸರ್ಕಾರ ತಿರುಪತಿ ಆಂಜನೇಯನ ಜನ್ಮಸ್ಥಳವೆಂದು ಘೋಷಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ರಾಜ್ಯ ಸರಕಾರದಿಂದ ಅಧಿಕೃತ ಘೋಷಣೆಗೆ ಹನುಮ ಭಕ್ತರು ಆಗ್ರಸಿದ್ದಾರೆ.
***
ಆಂಜನೇಯ ಜನ್ಮಸ್ಥಳ ನಮ್ಮದು ಎಂದು ಟಿಟಿಡಿ ವಾದ ಮಾಡುತ್ತಿದೆ. ರಾಮಾಯಣ ಓದಿದಾಗ ಮತ್ತು ಆನೆಗೊಂದಿ ಇತಿಹಾಸ ಅವಲೋಕಿಸಿದಾಗ ಹನುಮ ಹುಟ್ಟಿದ್ದು ಕಿಷ್ಕಿಂದೆ ಪ್ರದೇಶದಲ್ಲಿ ಎನ್ನುವುದು ಗೊತ್ತಾಗುತ್ತದೆ. ಅಮೇರಿಕದ ಶಾಸನತಜ್ಞ ಫಿಲಿಪ್ ಲಾಟಿನ್ ಅವರು ಹನುಮ ಜನಿಸಿದ್ದು ಕೊಪ್ಪಳ ಜಿಲ್ಲೆಯಲ್ಲಿ ಎಂದು ಉಲ್ಲೇಖಿಸಿದ್ದಾರೆ. ಅನೇಕ ದಾಖಲೆಗಳು ನಮ್ಮಲ್ಲಿವೆ. ಆದರೆ ಟಿಟಿಡಿ ಸುಖಾಸುಮ್ಮನೆ ಮೊಂಡುವಾದ ಮಾಡುತ್ತಿದೆ. ಬುಧವಾರ ಈ ವಿಷಯದ ಕುರಿತು ಚರ್ಚಿಸಲು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು ಅಧಿಕಾರಿಗಳ, ಸಂಶೋಧಕರ, ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ. ನಾನು ಸಹ ತೆರಳುತ್ತಿದ್ದೇನೆ. ಸರ್ಕಾರ ಅಂಜನಾದ್ರಿ ಅಭಿವೃದ್ಧಿಗೆ ವಿಶೇಷ ಆಧ್ಯತೆ ನೀಡಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಶಿಘ್ರದಲ್ಲೇ ಇಲ್ಲಿಗೆ ಭೇಟಿ ನೀಡಲಿದ್ದಾರೆ. ಆದಷ್ಟು ಬೇಗ ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ ಎಂದು ಘೋಷಣೆಯಾಗಲಿದೆ.
– ಸಂಗಣ್ಣ ಕರಡಿ, ಸಂಸದ, ಕೊಪ್ಪಳ
ಕೊಪ್ಪಳ ಜಿಲ್ಲೆಯ ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ. ಶೀಘ್ರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತ ಘೋಷಣೆ ಮಾಡಲಿದ್ದಾರೆ. ಮುಜರಾಯಿ ಇಲಾಖೆಯಿಂದ ದಾಖಲೆ, ಪುರಾವೆ ಸಂಗ್ರಹಿಸಲಾಗುತ್ತಿದೆ. ರಾಮಾಯಣದಲ್ಲಿ ಇಲ್ಲಿನ ಕಿಷ್ಕಿಂಧೆ ಬಗ್ಗೆ ಉಲ್ಲೇಖವಿದೆ. ಆದರೆ, ತಿರುಪತಿಯಲ್ಲಿ ಹನುಮನ ಜನ್ಮಸ್ಥಳವಿದೆ ಎನ್ನಲು ಐತಿಹಾಸಿಕ ಪುರಾವೆಯಿಲ್ಲ. ಅಯೋಧ್ಯೆಯ ಶ್ರೀರಾಮ ಮಂದಿರ ಮಾದರಿಯಲ್ಲಿ ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಮಾಡಲಾಗುವುದು. ಬಜೆಟ್ನಲ್ಲಿ ಈ ಬಗ್ಗೆ ಹೆಚ್ಚಿನ ಹಣ ಮೀಸಲಿರಿಸಲು ಪ್ರಯತ್ನ ನಡೆದಿದೆ. ಅಂಜನಾದ್ರಿ ಅಭಿವೃದ್ಧಿ ಕುರಿತು ಕೊಪ್ಪಳ ಡಿಸಿಯಿಂದ ಪ್ರಸ್ತಾವನೆ ಪಡೆಯಲಾಗಿದೆ.
– ಶಶಿಕಲಾ ಜೊಲ್ಲೆ, ಮುಜರಾಯಿ ಮತ್ತು ವಕ್ಫ್ ಸಚಿವೆ.
ಅಂಜನಾದ್ರಿ ನಮ್ಮಲ್ಲಿದೆ ಎಂದು ಆಂಧ್ರ ಸರ್ಕಾರ ಆಧಾರ ರಹಿತವಾಗಿ ಹೇಳುತ್ತಿದೆ. ಓಟಿಡಿ ಹೇಳಿಕೆಯಲ್ಲಿ ತಾಳಮೇಳವಿಲ್ಲ. ಇತಿಹಾಸ ಬರೆಯೋದೆ ಬೇರೆ, ನಮ್ಮ ಮುಂದೆ ಇರೋ ಇತಿಹಾಸವೇ ಬೇರೆ. ನಮ್ಮ ತಾತ, ತಂದೆ ಎಲ್ಲರೂ ಅಂಜನಾದ್ರಿಯೇ ಆಂಜನೇಯನ ಸ್ಥಳ ಎನ್ನುತ್ತಿದ್ದರು. ನಮ್ಮ ಮಕ್ಕಳಿಗೂ ನಾವು ಅದನ್ನೆ ಹೇಳಿದ್ದೇವೆ. ಅವರೂ ತಮ್ಮ ಮಕ್ಕಳಿಗೆ ಅದನ್ನೇ ಹೇಳುತ್ತಾರೆ. ಹನುಮಂತನ ವಿಷಯದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ.
– ಆನಂದ ಸಿಂಗ್ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ