ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಆಯೋಗಕ್ಕೆ ಈ ಬಾರಿ ಸುಧಾರಣೆ ಯೋಗ, ಮುಖ್ಯಮಂತ್ರಿ ಗಟ್ಟಿ ಸಂಕಲ್ಪ
ಬಹುತೇಕ ವರ್ಷದಿಂದಲೂ ಖಾಲಿ ಇರುವ ರಾಜ್ಯ ಮಾಹಿತಿ ಆಯೋಗಕ್ಕೆ ನೂತನ ಆಯುಕ್ತರು ಹಾಗೂ ಮುಖ್ಯ ಆಯುಕ್ತರ ಹುದ್ದೆಗೆ ಆ.೨೭ರಂದು ಆಯ್ಕೆ ನಡೆಯಲಿದೆ. ಅಷ್ಟೇ ಅಲ್ಲ, ಈ ಬಾರಿ ಆಯೋಗಕ್ಕೆ ಸಮಗ್ರ ಸುಧಾರಣಾ ಯೋಗ ಕೂಡಿಬರುವ ಸಾಧ್ಯತೆ ಯೂ ಇದೆ. ಕಾರಣ ಸರಕಾರದ ಮೇಲೆ ಈ ಬಾರಿ ಆಯೋಗಕ್ಕೆ ಸಚ್ಚಾರಿತ್ರ್ಯದ ಅಭ್ಯರ್ಥಿಗಳನ್ನು ನೇಮಕ ಮಾಡಬೇಕು. ಹಾಗೆಯೇ ಮುಖ್ಯ ಆಯುಕ್ತರ ಹುzಗೆ ಹಿರಿಯ ಐಎಎಸ್ ಅಧಿಕಾರಿಗಳನ್ನೇ ನೇಮಕ ಮಾಡಬೇಕೆನ್ನುವ ಸಲಹೆಗಳು ಬಂದಿದ್ದು, ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ.
ಅಂದರೆ, ಹಿಂದಿನ ಸರಕಾರಗಳ ಅವಧಿಯಲ್ಲಿ ಅಮಾನತುಗೊಂಡಿದ್ದ ಅಧಿಕಾರಿಗಳು ಹಾಗೂ ವಿವಿಧ ಆರೋಪಗಳನ್ನು ಹೊತ್ತವರನ್ನು ನೇಮಕ ಮಾಡಿ ಆಯೋಗ ಹೆಚ್ಚು ಸಾರ್ವಜನಿಕ ಟೀಕೆಗೆ ಗುರಿಯಾಗಿತ್ತು. ಆದ್ದರಿಂದ ಈ ಬಾರಿ ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಕಾನೂನು ತಜ್ಞರು ಹಾಗೂ ಕೆಲವು ಪಕ್ಷದ ಹಿರಿಯರು ಮುಖ್ಯಮಂತ್ರಿ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಮುಖ್ಯ ಆಯುಕ್ತರ ಹುದ್ದೆಗೆ ಹಿರಿಯ ಐಎಎಸ್ ಅಧಿಕಾರಿಯನ್ನೇ ನೇಮಕ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ಉಳಿದ ಆಯುಕ್ತರ ಹುದ್ದೆಗೆ ಉತ್ತಮ ಚಾರಿತ್ರಿಕ ಹಿನ್ನೆಲೆಯ ಆಡಳಿತ ಮತ್ತು ವಿವಿಧ ಕ್ಷೇತ್ರಗಳ ಅನುಭವಿಗಳನ್ನು ನೇಮಕ ಮಾಡುವ ಸಾಧ್ಯತೆ ಇದೆ.
ಈ ಮೂಲಕ ಆಯೋಗದಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ . ಇಷ್ಟೇ ಅಲ್ಲದೆ, ಈ ಬಾರಿ ಸಮಾಜ ಸೇವಕರು ಹಾಗೂ ಸಾಮಾಜಿಕ ಕಾರ್ಯಕರ್ತರ ಹೆಸರಿನಲ್ಲಿ ಪಕ್ಷಗಳ ಮುಖಂಡರಿಗೆ ಮಣೆ ಹಾಕುವ ಬದಲು ಜನಸಾಮಾನ್ಯರಿಗೆ
ಸ್ಪಂದಿಸುವ ಹಾಗೂ ಮಾಹಿತಿ ಕೊಡಿಸುವ ಅಭ್ಯರ್ಥಿಗಳನ್ನು ಗುರುತಿಸಿ ನೇಮಕ ಮಾಡುವ ಸಂಭವವಿದೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
ಆಯುಕ್ತರ ನೇಮಕ ಹೇಗೆ? ಏಕೆ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಮೂಲಕ ಆಡಳಿತ ನಡೆಸುವ ಜನರು, ಆಯ್ಕೆಯಾದ ಪ್ರತಿನಿಧಿಗಳು ನಡೆಸುವ ಆಡಳಿತವನ್ನು ಸುಲಭ ವಾಗಿ ಪ್ರಶ್ನಿಸಲು ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರ ಮಾಹಿತಿಹಕ್ಕು ಕಾಯಿದೆಯನ್ನು ಜಾರಿಗೊಳಿಸಿತ್ತು. ಹೀಗಾಗಿ ಎಲ್ಲ ರಾಜ್ಯಗಳಲ್ಲೂ ಮಾಹಿತಿ ಆಯೋಗಗಳು ಸ್ಥಾಪನೆಯಾದವು. ಅದರಂತೆ ರಾಜ್ಯದಲ್ಲೂ ಮಾಹಿತಿ ಆಯೋಗವಿದೆ. ಇದೊಂದು ರೀತಿಯ ಅರೆ ನ್ಯಾಯಿಕ ಸಂಸ್ಥೆಯಂತೆ ಕಾರ್ಯ ನಿರ್ವಹಿಸಲಿದೆ. ಆಯೋಗದಲ್ಲಿ ಒಬ್ಬ ಮುಖ್ಯ ಆಯುಕ್ತರಿದ್ದು, ೧೦ ಆಯುಕ್ತರಿರುತ್ತಾರೆ. ಇವರ ಅವಧಿ ೬ ವರ್ಷಗಳು. ಆದರೆ ಬಹುತೇಕ ಒಂದು
ವರ್ಷದಿಂದ ಆ ಹುದ್ದೆಗಳು ಪೂರ್ಣ ಪ್ರಮಾಣದ ನೇಮಕವೇ ನಡೆದಿಲ್ಲ. ಆದ್ದರಿಂದ ಸದ್ಯ ಆಯೋಗದಲ್ಲಿ ಒಂದು ಮುಖ್ಯ ಆಯುಕ್ತ ಹಾಗೂ ೭ ಆಯುಕ್ತ ಹುದ್ದೆಗಳು ಖಾಲಿಯಾಗಿವೆ. ಇವುಗಳ ಪೈಕಿ ಮುಖ್ಯ ಆಯುಕ್ತರ ಹುದ್ದೆಗೆ ೧೦೯ ಮಂದಿ ಅರ್ಜಿ ಸಲ್ಲಿಸಿದ್ದು, ೭ ಆಯುಕ್ತರ ಹುದ್ದೆಗಳಿಗೆ ೩೦೦ಕ್ಕೂ ಹೆಚ್ಚು
ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ ಅನೇಕ ನಿವೃತ್ತ ಐಎಎಸ್ ಅಧಿಕಾರಿಗಳು, ಐಪಿಎಸ್ ಅಧಿಕಾರಿಗಳು ಹಾಗೂ ನಿವೃತ್ತ ನ್ಯಾಯಾಧೀಶರೂ ಅರ್ಜಿ ಸಲ್ಲಿಸಿದ್ದಾರೆ.
ಇದೆಲ್ಲವುಗಳ ಪರಿಶೀಲನೆ ನಡೆಯುತ್ತಿದ್ದು, ಆ.೨೭ರ ಬೆಳಗ್ಗೆ ೧೧ ಗಂಟೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲ ಆಯ್ಕೆ ನಡೆಯಲಿದೆ. ಈ ಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ ಹಾಗೂ ಸಂಪುಟದ ಸದಸ್ಯರೊಬ್ಬರು (ಸಚಿವ ಕೆ.ಜೆ.ಜಾರ್ಜ್) ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
*
ಈ ಬಾರಿ ಮಾಹಿತಿ ಆಯೋಗಕ್ಕೆ ಆಡಳಿತ ಹಿನ್ನೆಲೆಯ ಹಾಗೂ ಉತ್ತಮ ಚಾರಿತ್ರಿಕ ಹಿನ್ನೆಲೆಯವರನ್ನು ನೇಮಿಸಬೇಕು. ಸಾಮಾನ್ಯ ಜನರ ಸಮಸ್ಯೆ
ಅರಿತು, ಅವರ ಸ್ಥಾನದಲ್ಲಿ ನಿಂತು ಯೋಚಿಸಿ ಆಡಳಿತ ಮಾಡುವವರಿಗೆ ಅವಕಾಶ ನೀಡಬೇಕು. ಇದರಿಂದ ಭ್ರಷ್ಟಾಚಾರ ತಡೆಯಬಹುದು.
-ಸುಧಾಮ್ ದಾಸ್, ನಿವೃತ್ತ ಮಾಹಿತಿ ಆಯುಕ್ತ, ವಿಧಾನ ಪರಿಷತ್ ಸದಸ್ಯ
ಸರಕಾರದ ಸುಧಾರಣಾ ಚಿಂತನೆಗಳು
ಸರಕಾರದಲ್ಲಿ ಆಡಳಿತ ನಡೆಸಿದ ಅನುಭವ ಇರಬೇಕು
ಕಾಯಿದೆ ದುರ್ಬಳಕೆ ಮಾಡಿಕೊಳ್ಳದೆ ಜನರಿಗೆ ಸ್ಪಂದಿಸಬೇಕು
ಆರೋಪಗಳು ಮತ್ತು ಅಪರಾಧಗಳ ಹಿನ್ನೆಲೆ ಇಲ್ಲದವರಿಗೆ ಮಣೆ
ರಾಜಕೀಯ, ಸಮಾಜಸೇವೆ, ನ್ಯಾಯಾಂಗ ಕ್ಷೇತ್ರ ಮಾತ್ರವಲ್ಲದೆ ಇತರ ಕ್ಷೇತ್ರಕ್ಕೂ ಆದ್ಯತೆ.