ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಅದ್ದೂರಿ ತೆರೆ
ನಾಡದೇವಿ ಚಾಮುಂಡೇಶ್ವರಿಗೆ ಜೈಕಾರ
ಕೆ.ಜೆ.ಲೋಕೇಶ್ ಬಾಬು ಮೈಸೂರು
ಈ ನೆಲದ ಸಾಂಸ್ಕೃತಿಕ ಅಸ್ಮಿತೆ ಹಾಗೂ ರಾಜವೈಭವದ ಪ್ರತೀಕವಾದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆ ಬುಧವಾರ ಗೋಧೂಳಿ ವೇಳೆಗೆ ಸಂಪನ್ನಗೊಂಡಿತು.
ನಿಗದಿತ ಕಾಲಮಾನಕ್ಕಿಂತ ಎರಡು ನಿಮಿಷ ಮುಂಚಿತವಾಗಿ ಅಂದರೆ ಮಧ್ಯಾಹ್ನ ೨.೩೪ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಪರಿವಾರ ಸಮೇತ ಅರಮನೆಯ ಬಲರಾಮ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಾಲಯದ
ಆವರಣದಲ್ಲಿ ನಂದಿಧ್ವಜ ಪೂಜೆ ನೆರವೇರಿಸಿದರೆ, ಅರಮನೆ ಅಂಗಳದಲ್ಲಿ ಅಭಿಮನ್ಯು ವಿನ ಮೇಲೆ ವಿರಾಜಮಾನಳಾಗಿದ್ದ ಬೆಟ್ಟದ ತಾಯಿ ಚಾಮುಂಡೇಶ್ವರಿಗೆ ನಿಗದಿತ ಕಾಲಮಾನಕ್ಕಿಂತ, ಅಂದರೆ ಸಂಜೆ ೫.೩೭ಕ್ಕೆ ಸರಿಯಾಗಿ, ೧೯ ನಿಮಿಷ ತಡವಾಗಿ ಪುಷ್ಪಾರ್ಚನೆ ನೆರವೇರಿಸಿದರು.
ಈ ಮೂಲಕ ೨೦೨೨ರ ದಸರಾ ಜಂಬೂಸವಾರಿ ಇತಿಹಾಸದ ಪುಟಗಳಲ್ಲಿ ದಾಖಲಾ ಯಿತು. ಅರಮನೆಯಿಂದ ಬನ್ನಿಮಂಟಪ ದವರೆಗಿನ ನಾಲ್ಕೂವರೆ ಕಿಲೋ ಮೀಟರ್ ದೂರದ ಮಾರ್ಗದುದ್ದಕ್ಕೂ ನೆರೆದಿದ್ದ ಲಕ್ಷಾಂತರ ಮಂದಿಯ ಹರ್ಷೋದ್ಗಾರದ ನಡುವೆ ೭೫೦ ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯುವಿನ ಗಾಂಭೀರ್ಯದ ನಡೆಗೆ ನೆರೆದಿದ್ದ ಲಕ್ಷಾಂತರ ಮಂದಿ ತಲೆದೂಗಿದರು.
ಅಂಬಾರಿಯಲ್ಲಿ ಸರ್ವಾಲಂಕೃತಳಾಗಿ ವಿರಾಜಮಾನಳಾಗಿದ್ದ ಬೆಟ್ಟದ ತಾಯಿ ಚಾಮುಂಡೇಶ್ವರಿಯನ್ನು ಕಂಡ ಮಂದಿ
ಎದ್ದುನಿಂತು ಭಕ್ತಿ ಭಾವ ಮೆರೆದರಲ್ಲದೆ, ‘ಚಾಮುಂಡೇಶ್ವರಿಗೆ ಜೈ’ ಎಂಬ ಘೋಷಣೆ ಮುಗಿಲೆತ್ತರಕ್ಕೆ ಮುಟ್ಟಿತ್ತು.
ದೇಶ, ವಿದೇಶಗಳಿಂದ ಆಗಮಿಸಿದ ಸಹಸ್ರಾರು ಜನರ ಸಮ್ಮುಖದಲ್ಲಿ ಅಂಬಾವಿಲಾಸ ಅರಮನೆ ಆವರಣದಲ್ಲಿ ಸಂಭ್ರಮ
ದೊಂದಿಗೆ ಆರಂಭಗೊಂಡ ಜಂಬೂಸವಾರಿಯಲ್ಲಿ ೫೭ ವರ್ಷದ ೫೦೦೦ ಕೆ.ಜಿ. ತೂಕದ ಅಭಿಮನ್ಯು ೭೫೦ ಕೆ.ಜಿ.ತೂಕದ ಚಿನ್ನದ
ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ನಾಡ ದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಯನ್ನು ಸತತ ಮೂರನೇ ಬಾರಿ ಯಶಸ್ವಿಯಾಗಿ ಹೊತ್ತು ಮೆರೆದ. ಅಭಿಮನ್ಯುವಿನ ಎರಡೂ ಬದಿಗಳಲ್ಲಿ ಕುಮ್ಕಿ ಆನೆಗಳಾಗಿ ಕಾವೇರಿ ಹಾಗೂ ಚೈತ್ರಾ ಸಾಥ್ ನೀಡಿದವು.
ಕ್ಯಾಪ್ಟನ್ ಅಭಿಮನ್ಯುಗೆ ಕುಮ್ಕಿ ಆನೆಗಳಾದ ಕಾವೇರಿ ಮತ್ತು ಚೈತ್ರ ಸಾಥ್
ಅಭಿಮನ್ಯು ೩ನೇ ಬಾರಿಗೆ ೭೫೦ ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಿದ
ಸಿಎಂ ಬೊಮ್ಮಾಯಿ ಅವರಿಂದ
ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚ
ಸ್ತಬ್ದ ಚಿತ್ರಗಳ ಲೋಕ
ಸ್ತಬ್ದಚಿತ್ರ ಹಾಗೂ ಕಲಾತಂಡಗಳ ಮೆರವಣಿಗೆಯಲ್ಲಿ ರಾಜ್ಯ ೩೧ ಜಿಗಳ ಕಲೆ, ಸಂಸ್ಕೃತಿ, ಇತಿಹಾಸ ಮತ್ತು ಅಭಿವೃದ್ಧಿ ಅಂಶಗಳು ಹೊಳೆದವು. ಮೈಸೂರು ಪೇಟ, ಮಲ್ಲಿಗೆ, ವಿಶ್ವವಿದ್ಯಾಲಯ, ಬಾಗಲಕೋಟೆಯ ಮುಧೋಳ ಶ್ವಾನ, ಇಳಕಲ್ ಸೀರೆಯಿಂದ ಶುರುವಾದ ಪ್ರದರ್ಶನ ಯಾದಗಿರಿಯ ಸುರಪುರ ಕೋಟೆಯ ಸ್ತಬ್ದಚಿತ್ರದಿಂದ ಕೊನೆಗೊಂಡಿತು. ಬಳ್ಳಾರಿ ಕೋಟೆ, ಚಾಮರಾಜ ನಗರದ ಪುನೀತ್ ರಾಜಕುಮಾರ್ ಪ್ರತಿಮೆ, ಚಿತ್ರದುರ್ಗದ ವಾಣಿವಿಲಾಸ ಜಲಾಶಯ, ದಕ್ಷಿಣ ಕನ್ನಡದ ಹುಲಿವೇಷ, ಬೇಲೂರು ಚೆನ್ನಕೇಶವ ಗುಡಿ, ಕೊಡಗಿನ ಬ್ರಹ್ಮಗಿರಿ ಕೋಟೆ, ಕೋಲಾರದ ಬಿಕೆಎಸ್ ಅಯ್ಯಂಗಾರ್ ಯೋಗಥಾನ್, ಶಿವಮೊಗ್ಗದ ಅಕ್ಕಮಹಾದೇವಿಯ ಜನ್ಮಸ್ಥಳ ಉಡುತಡಿ, ಕಾರವಾರ ನೌಕಾನೆಲೆ, ಸುರಪುರದ ಕೋಟೆ, ಹಂಪಿಯ ಕಲ್ಲಿನ ರಥ ಸ್ತಬ್ದಚಿತ್ರಗಳು ಗಮನ ಸೆಳೆದವು.