ಸರಕಾರ ಬೀಳಿಸಿದವರ ವಿರುದ್ಧ ಸೇಡಿಗೆ ಮುಂದಾದ ಪಕ್ಷ
ವೆಂಕಟೇಶ ಆರ್.ದಾಸ್ ಬೆಂಗಳೂರು
‘ತನ್ನ ಒಂದು ಕಣ್ಣು ಕಳೆದುಕೊಂಡರೂ ಪರವಾಗಿಲ್ಲ, ಎದುರಾಳಿಯ ಎರಡೂ ಕಣ್ಣು ಹೋಗಬೇಕು’ಎಂಬ ಸಿದ್ಧಾಂತವನ್ನು ರಾಜಕೀಯದಲ್ಲಿ ರೂಢಿಸಿಕೊಂಡೇ ಬಂದಿರುವ ಜೆಡಿಎಸ್ ವರಿಷ್ಠ ದೇವೇಗೌಡರು ಬಾಂಬೆ ಬಾಯ್ಸ್ಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದ್ದಾರೆ.
ಆಪರೇಷನ್ ಕಮಲಕ್ಕೆ ಒಳಗಾಗಿ ಮುಂಬಯಿ ವಿಮಾನ ಹತ್ತಿ ಅಧಿಕಾರದ ಸಿಹಿ ಅನುಭವಿಸಿರುವ ೧೪ ಶಾಸಕರಿಗೆ ಸೋಲಿನ ರುಚಿ ತೋರಿಸಲು ಜೆಡಿಎಸ್ ಪಾಳೆಯದಲ್ಲಿ ಮಾಸ್ಟರ್ ಪ್ಲಾನ್ ರೆಡಿಯಾಗಿದೆ. ಮೈತ್ರಿ ಸರಕಾರದ ಪತನಕ್ಕೆ ಕಾರಣವಾದವರ ಬೆನ್ನುಹುರಿಯನ್ನು ಮುಂಬರುವ ಚುನಾವಣೆಯಲ್ಲಿ ಮುರಿಯುವ ಮೂಲಕ ಸೇಡು ತೀರಿಸಿಕೊಳ್ಳುವ ಒನ್ಲೈನ್ ಅಜೆಂಡಾ ಜೆಡಿಎಸ್ ನಾಯಕರದ್ದಾಗಿದೆ.
ಇದಕ್ಕಾಗಿ, ಆ ೧೪ ಶಾಸಕರ ಕ್ಷೇತ್ರಗಳಲ್ಲಿ ತಂತ್ರಗಾರಿಕೆ ಸಿದ್ಧವಾಗಿದೆ. ಮೈತ್ರಿ ಸರಕಾರ ಪತನದ ಸಂದರ್ಭದಲ್ಲಿ ಮುಂಬೈಗೆ ಹಾರಿದ್ದ ಶಾಸಕರ ಪೈಕಿ, ದಕ್ಷಿಣ ಕರ್ನಾಟಕ, ಅದರಲ್ಲೂ ಮೈಸೂರು ಕರ್ನಾಟಕ ಭಾಗದ ಶಾಸಕರೇ ಹೆಚ್ಚು ಇವರೆಲ್ಲರ ಭವಿಷ್ಯ ನಿರ್ಧಾರ ಮಾಡುವ ಶಕ್ತಿ, ಜೆಡಿಎಸ್ಗಿದೆ. ಆ ಶಕ್ತಿಯನ್ನು ಸರಿಯಾಗಿ ಬಳಸಿಕೊಂಡು ಮುಂದಿನ ಚುನಾವಣೆಯಲ್ಲಿ ಅವರಿಗೆ ಸೋಲಿನ ರುಚಿಯುಣಿಸುವುದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡರ ಲೆಕ್ಕಾಚಾರ. ಇದಕ್ಕಾಗಿ ಕಾಂಗ್ರೆಸ್ ಜತೆಗೆ ಕೈಜೋಡಿಸಿದರೂ ಪರವಾಗಿಲ್ಲ. ಅವರಿಗೆ ಸೋಲಿನ ರುಚಿ ಉಣಿಸಲೇಬೇಕು ಎಂದು ತೀರ್ಮಾ ನಿಸಲಾಗಿದೆ.
ಜೆಡಿಎಸ್ನಿಂದ ಹಾರಿದ ನಾರಾಯಣ ಗೌಡ ಮತ್ತು ಗೋಪಾಲಯ್ಯ ಅವರನ್ನು ಸೋಲಿಸಲು ಕಳೆದ ಸಲವೇ ಜೆಡಿಎಸ್ ನಾಯಕರು ಪ್ರಯತ್ನ ನಡೆಸಿದ್ದರು. ಆದರೆ, ಸರಕಾರ ಅವರದ್ದಾದ ಕಾರಣಕ್ಕೆ ಕೆಲ ಲೆಕ್ಕಾಚಾರ ಉಲ್ಟಾ ಆಗಿತ್ತು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಜನರ ಮನಸ್ಥಿತಿಯೂ ಕೂಡ ಮೊದಲಿನಂತಿಲ್ಲ. ಹಳೇ ಮೈಸೂರು ಭಾಗದಲ್ಲಿ ಇತ್ತೀಚೆಗೆ ಜೆಡಿಎಸ್ ಪರವಾದ ಅಲೆಯೊಂದು ಕಾಣಿಸಿಕೊಳ್ಳುತ್ತಿದೆ.
ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದರೆ, ಒಂದಷ್ಟು ಒಳ್ಳೆಯ ಕೆಲಸಗಳಾಗಬಹುದು ಎಂಬ ಭರವಸೆ ಮೂಡುತ್ತಿದೆ.
ಈ ಭರವಸೆಯನ್ನು ಬಳಸಿಕೊಂಡು, ಬಾಂಬೆ ಬಾಯ್ ಮಣ್ಣುಮುಕ್ಕಿಸಲು ತಂತ್ರಗಾರಿಕೆ ಹೆಣೆಯಲಾಗಿದೆ.
ಕಾಲ್ ಗರ್ಲ್ ಬಾಂಬ್ !
ಈಗಾಗಲೇ, ಬಾಂಬೆ ಬಾಯ್ಸ್ಗಳ ಮೇಲೆ ‘ಕಾಲ್ ಗರ್ಲ್ಸ್ ಬಾಂಬ್’ ಎಸೆದಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ‘ಮುಂಬೈಗೆ ತೆರಳಿದ್ದವರ ಜತೆಗೆ, ೧೦ ಜನ ಹುಡುಗಿಯರು ತೆರಳಿದ್ದರು ಎಂಬ ಮಾಹಿತಿಯಿದೆ. ಬಿಜೆಪಿ ಜತೆಗೆ, ಅನೇಕ ಕ್ರಿಮಿನಲ್ ಪ್ರಕರಣ ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಪಿಂಪ್ಗಳೆಲ್ಲ ಕೈ ಜೋಡಿಸಿದ್ದಾರೆ.
ಸ್ಯಾಂಟ್ರೋ ರವಿಯ ಜತೆಗೆ ಯಾವ್ಯಾವ ಸಚಿವರಿಗೆ ಒಡನಾಟವಿದೆ. ಇದೆಲ್ಲವನ್ನೂ ಮುಖ್ಯಮಂತ್ರಿಗಳ ಸ್ಪಷ್ಟಪಡಿಸಬೇಕು’ ಎಂದಿದ್ದಾರೆ. ಇದು ಬಾಂಬೆ ಬಾಯ್ಸ್ಗಳ ಮೇಲಿನ ಸೇಡಿನ ಮುಂಧುವರಿಸಿದ ಭಾಗವಾಗಿದೆ. ಇನ್ನು ಮುಂದುವರಿದು ಈ ೧೪
ಶಾಸಕರ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಹಾಕುವುದು ಹಾಗೂ ಅಲ್ಲಿ ತಮ್ಮ ಪಕ್ಷ ಗೆಲ್ಲುವ ಸಾಧ್ಯತೆ ಕಡಿಮೆಯಿದ್ದರೆ, ಕಾಂಗ್ರೆಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡು, ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಅವರನ್ನು ಸೋಲಿಸುವುದು ಜೆಡಿಎಸ್ನ ಲೆಕ್ಕಾಚಾರವಾಗಿದೆ.
ಬೆಂಗಳೂರಿನ ಎಸ್ಬಿಎಂಗಳ ಸೋಲಿಗೆ ಕಾಂಗ್ರೆಸ್ ಜತೆ ಸಹಕಾರ
ಗೋಪಾಲಯ್ಯ ಖೆಡ್ಡಾಕ್ಕೆ ಕೆಡವಲು ಅವರ ದಾಯಾದಿಗೆ ಟಿಕೆಟ್
ನಾರಾಯಣ ಗೌಡ ವಿರುದ್ಧ ಭವಾನಿ ರೇವಣ್ಣ ಸ್ಪರ್ಧೆ ಸಾಧ್ಯತೆ
ಸುಧಾಕರ್ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗೆ ನೆರವು
ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಡಮ್ಮಿ ಅಭ್ಯರ್ಥಿ