ಅಂತರ್ಜಲ ಮಟ್ಟ ಕಾಪಾಡಲು ಭಗೀರಥ ಪ್ರಯತ್ನ
ಮೈಸೂರು ಜಿಲ್ಲೆಯಲ್ಲಿ ಕೆರೆಗಳ ಹೂಳು ಎತ್ತಲು ನಿರ್ಧಾರ
ಕೆ.ಜೆ.ಲೋಕೇಶ್ ಬಾಬು
ಮೈಸೂರು: ಜೀವಜಲಕ್ಕೆ ಕುತ್ತು ತರುವ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಜೈನ ಸಂಘಟನೆಯೊಂದು ಸದ್ದಿಲ್ಲದೆ ಜೀವಜಲ ಕಾಪಾಡಲು ಇನ್ನಿಲ್ಲದ ಹರಸಾಹಸ ನಡೆಸಿದೆ.
ಅದರ ಮೊದಲ ಭಾಗವಾಗಿ ಭೂಮಿಯೊಳಗಿರುವ ಅಂತರ್ಜಲ ಕಾಪಾಡುವ ನಿಟ್ಟಿನಲ್ಲಿ ಮೈಸೂರು ಮೂಲದ ಜೈನ ಸಂಘಟನೆಯೊಂದು ಮುಂದಡಿ ಇಟ್ಟಿದೆ. ನಾನಾ ಕಾರಣ ಗಳಿಗಾಗಿ ಬರಿದಾದ ಕೆರೆಗಳ ಹೂಳೆತ್ತಿ ಕೆರೆಗಳಲ್ಲಿ ಜೀವಜಲ ಉಕ್ಕುವಂತೆ ಮಾಡುವ ಕೈಂಕರ್ಯಕ್ಕೆ ಭಾರತೀಯ ಜೈನ ಸಂಘಟನೆ ಮೈಸೂರು ಅಧ್ಯಾಯ ನಾಂದಿ ಹಾಡಿದೆ.
ಪರಿಣಾಮ, ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮತ್ತೊಂದೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮುಂದೆ ಇಂತಹ ಪರಿಸ್ಥಿತಿ ಬಾರದೆ ಇರಲಿ ಎಂಬ ಕಾರಣಕ್ಕೆ ಜೈನ ಸಂಘಟನೆ ವತಿಯಿಂದ ಮೈಸೂರು ಜಿಲ್ಲೆಯ ಕೆರೆಗಳ ಹೂಳೆತ್ತುವ ಕಾರ್ಯ
ಪ್ರಾರಂಭಿಸಲಾಗಿದೆ. ಪ್ರಸಕ್ತ ವರ್ಷ ಜಿಲ್ಲೆಯ ೫ ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಮಳೆಗಾಲ ಮುಗಿದ ನಂತರ ೫೦ ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಮುಂಗಾರು ಮುಗಿದ ನಂತರ ಜಿಲ್ಲೆಯ ವಿವಿಧೆಡೆ ದೊಡ್ಡ ಸಂಖ್ಯೆಯಲ್ಲಿ ಕೆರೆಗಳ ಹೂಳೆತ್ತುವ
ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ.
ಜೈನ ಸಂಘಟನೆಯಿಂದ ಪ್ರಸಕ್ತ ವರ್ಷ ಟಿ.ಕಾಟೂರು, ಗುಜ್ಜೇಗೌಡನಪುರ, ಬೋಗಾದಿ ರಸ್ತೆಯ ಗೊಲ್ಲನಬಿಡು ಸರಗೂರು, ನಗರದ ಪಿಂಜ್ರಾಪೋಲ್ ಸೊಸೈಟಿಯ ಕೆರೆಯಹೂಳೆತ್ತುವ ಕಾಮಗಾರಿ ಪ್ರಾರಂಭಗೊಂಡಿದ್ದು, ಸದ್ಯದಲ್ಲಿಯೇ ಗುಜ್ಜೇಗೌಡನಪುರ ಬಳಿಯ ಮಂಡನಹಳ್ಳಿ ಗ್ರಾಮದ ಕೆರೆಯ
ಹೂಳೆತ್ತುವ ಕಾಮಗಾರಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ.
ಕೆರೆಗಳ ಆಯ್ಕೆ ಹೇಗೆ?: ಭಾರತೀಯ ಜೈನ್ ಸಂಘಟನೆಯ ಪದಾಧಿಕಾರಿಗಳು ಜಿಲ್ಲೆಯ ೩೦ ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ೫ ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡಿದೆ. ಹೂಳೆತ್ತುವ ಕೆರೆಯಲ್ಲಿ ಹೆಚ್ಚು ಹೂಳು ದೊರೆಯಬೇಕು ಹಾಗೂ ಗ್ರಾಮದ ರೈತರು ಹೂಳನ್ನು ಕೊಂಡೊಯ್ಯುವ ಆಸಕ್ತಿ ತೋರಬೇಕು. ಅಂತಹ ಗ್ರಾಮದ ಕೆರೆಗಳಲ್ಲಿ ಮಾತ್ರ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗುವುದು.
*
ಹೂಳೆತ್ತುವ ಕಾಮಗಾರಿಗೆ ವೆಚ್ಚವಾಗುವ ಹಣವನ್ನು ಭಾರತೀಯ ಜೈನ ಸಂಘಟನೆ ಭರಿಸುತ್ತಿದೆ. ಈ ಹೂಳನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತಿದ್ದು,
ರೈತರು ಟ್ರ್ಯಾಕ್ಟರ್ ಮೂಲಕ ಹೂಳನ್ನು ತಮ್ಮ ಜಮೀನಿಗೆ ಸಾಗಾಟ ಮಾಡುತ್ತಿದ್ದಾರೆ. ಈ ಹೂಳಿನಿಂದ ಭೂಮಿಯ ಫಲವತ್ತತೆ ಹೆಚ್ಚಾಗುವ ಹಿನ್ನೆಲೆಯಲ್ಲಿ ರೈತರು ಸಹ ಹೂಳನ್ನು ಕೊಂಡೊಯ್ಯಲು ಉತ್ಸಾಹ ತೋರುತ್ತಿದ್ದಾರೆ. ಜೆಸಿಬಿ ಬಳಕೆ ಮಾಡಿಕೊಂಡು ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಒಂದು ಕೆರೆಗೆ ಒಂದು ಜೆಸಿಬಿ ಬಳಕೆ ಮಾಡಲಾಗುತ್ತಿದೆ. ಅಂತರ್ಜಲ ಹೆಚ್ಚು ಕುಸಿತ ಕಂಡಿರುವ ಗ್ರಾಮಗಳು, ಕಾಲುವೆ ಹಾಗೂ ನದಿ
ಮೂಲ ಇಲ್ಲದ ಗ್ರಾಮಗಳ ಕೆರೆಗಳ ಹೂಳೆತ್ತಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪ್ರಸ್ತುತ ಗ್ರಾಮ ಪಂಚಾಯಿತಿಗಳಿಂದ ಅನುಮತಿ ಪಡೆದು ಕೆರೆಗಳ
ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಮುಂದಿನ ವರ್ಷ ಜಿಲ್ಲಾ ಪಂಚಾಯಿತಿ ಅನುಮತಿ ಪಡೆದು ಜಿಲ್ಲೆಯಲ್ಲಿ ೫೦ ಕೆರೆಗಳ ಹೂಳೆತ್ತುವ
ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಕೆರೆಗಳ ಹೂಳೆತ್ತುವ ಕಾಮಗಾರಿಗೆ ಪ್ರಸ್ತುತ ಫೋರ್ಸ್ ಮೋಟಾರ್ಸ್ ಸಂಸ್ಥೆಯು ಸಿಎಸ್ಆರ್ ನಿಧಿಯನ್ನು
ನೀಡುತ್ತಿದೆ. ಒಂದು ವೇಳೆ ಹಣದ ಕೊರತೆ ಎದುರಾದರೆ ದಾನಿಗಳಿಂದ ನೆರವು ಪಡೆದು ಹೂಳೆತ್ತುವ ಕಾಮಗಾರಿ ಮುಂದುವರಿಸಲು ಉದ್ದೇಶಿ ಸಲಾಗಿದೆ.
*
ಅಂತರ್ಜಲ ಪ್ರಮಾಣ ಹೆಚ್ಚು ಮಾಡುವ ಉದ್ದೇಶದಿಂದ ಭಾರತೀಯ ಜೈನ ಸಂಘಟನೆ ಮೈಸೂರು ಅಧ್ಯಾಯ ವತಿಯಿಂದ ಕೆರೆಗಳ ಹೂಳೆತ್ತುವ ಕಾಮಗಾರಿ ಪ್ರಾರಂಭಿಸಿದ್ದೇವೆ. ಸಮಯಾವಕಾಶದ ಕೊರತೆಯಿಂದ ಈ ಬೇಸಿಗೆಯಲ್ಲಿ ಜಿಲ್ಲೆಯ ೫ ಕೆರೆಗಳ ಹೂಳನ್ನು ಮಾತ್ರ ಎತ್ತಲಾಗುವುದು. ಮಳೆಗಾಲ ಮುಗಿದ ನಂತರ ಜಿಲ್ಲೆಯ ೫೦ ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ.
– ಜೈನ್ ಪ್ರಕಾಶ್ ಗುಲೇಚ,
ಕೆರೆ ಹೂಳೆತ್ತುವ ಯೋಜನೆಯ ಸಂಯೋಜಕ