ಮೇಯಲು ಬೆಂಗಳೂರು ಕಾರಾಗೃಹವೇ ಹುಲುಸಾದ ವಿಶಾಲ ಹುಲ್ಲುಗಾವಲು !
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಸಾಮಾನ್ಯ ಎಲ್ಲರೂ ಜೈಲು ಎಂದರೆ ಹೆದರುತ್ತಾರೆ. ಅದರಲ್ಲೂ ಅಪರಾಧಿಗಳು ಜೈಲಿಗೆ ಹೋಗಬೇಕೆಂದರೆ ತಮ್ಮ ಜೀವನ ಮುಗಿದೇ ಹೋಯ್ತು ಎಂದು ನಿಶ್ಚಯಿಸಿಕೊಳ್ಳುತ್ತಾರೆ. ಆದರೆ ಕೇಂದ್ರ ಕಾರಾಗೃಹದಲ್ಲಿ ಕೆಲಸ ಮಾಡುವ ಕೆಲವು ಅಧಿಕಾರಿಗಳಿಗೆ ಬೆಂಗಳೂರು ಜೈಲು ಎಂದರೆ ತುಂಬಾ ಅಚ್ಚುಮೆಚ್ಚು!
ಕಾರಣ ಕೇಂದ್ರ ಕಾರಾಗೃಹದಲ್ಲಿರುವ ಅನೇಕ ಅಧಿಕಾರಿಗಳು 10 ವರ್ಷಗಳಿಂದ ಒಂದೇ ಕಡೆ ಜಾಂಡಾ ಹೂಡಿದ್ದಾರೆ. ಇವರನ್ನು ಯಾವುದೇ ಸರಕಾರ ಬಂದರೂ ಅಲುಗಾಡಿಸ ಲಾಗದು. ತೀರಾ ವರ್ಗಾವಣೆ ಅನಿವಾರ್ಯವಾದರೆ ಇತರ ಕಾರಾಗೃಹಗಳಲ್ಲಿ ನಾಲ್ಕೈದು ತಿಂಗಳ ಕಾಲ ಹೋಗಿ ವರ್ಗಾವಣೆ ಶಾಸ ಮುಗಿಸುತ್ತಾರೆ. ಆ ಮೂಲಕ ದೀರ್ಘಕಾಲ ಸೇವೆ ಬ್ರೇಕ್ ಮಾಡುತ್ತಾರೆ. ನಂತರ ಬೆಂಗಳೂರು ಕಾರಾಗೃಹಕ್ಕೇ ಬರುತ್ತಾರೆ.
ಹೀಗಾಗಿ ಡಿಐಜಿ ಸೇರಿದಂತೆ ಅನೇಕ ಅಧಿಕಾರಿಗಳು ಅನೇಕ ವರ್ಷಗಳಿಂದ ಕಾರಾಗೃಹ ದಲ್ಲಿ ದೀರ್ಘ ಸೇವೆಗೆ ಹೆಸರಾಗಿದ್ದಾರೆ. ಅದರಲ್ಲೂ ಕೇಂದ್ರ ಕಾರಾಗೃಹದ ಡಿಐಜಿ ಅವರು ಮೂರು ವರ್ಷಗಳಿಂದ ಒಂದೇ ಜಾಗದಲ್ಲಿ ಮುಂದುವರಿದಿದ್ದು, ಇವರು ವಿ’ಶೇಷ’ ಜಾಂಡಾ ಹೂಡಿಕೆಗೆ ಹೆಸರಾಗಿದಾರೆ. ಈ ಮಾಹಿತಿ ಇಲಾಖೆ ಹೊಣೆ ಹೊತ್ತ ಸಚಿವ ಅರಗ ಜ್ಞಾನೇಂದ್ರ ಅವರಿಗೆ ತಿಳಿದೇ ಇಲ್ಲ. ಏಕೆಂದರೆ, ಇದೆಲ್ಲ ಗೊತ್ತಾದರೆ ಸಚಿವರು ಕಾರಾ ಗೃಹಕ್ಕೆ ಭೇಟಿ ನೀಡಿ, ಇಲ್ಲಿನ ಅಕ್ರಮಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ. ಹೀಗಾಗಿ ಸಾಧ್ಯವಾದಷ್ಟು ಕಾರಾಗೃಹದ ಹಿರಿಯ ಅಧಿಕಾರಿಯ ವಿ‘ಶೇಷ’ ಸೇವೆಯನ್ನು ತಳ ಮಟ್ಟದ ಬಹುತೇಕ ಅಧಿಕಾರಿಗಳು ಮುಚ್ಚಿಡುತ್ತಾರೆ ಎಂದು ಜೈಲು ಮೂಲಗಳು ತಿಳಿಸಿವೆ.
ಯಾರು ಎಷ್ಟು ವರ್ಷಗಳಿಂದ ಜಾಂಡಾ ?: ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಒಬ್ಬ ಡಿಐಜಿ, ಅಧೀಕ್ಷಕ, ಮುಖ್ಯ ಅಧೀಕ್ಷಕ ಹಾಗೂ ಐವರು ಸಹಾಯಕ ಅಧೀಕ್ಷಕರು ಇರುತ್ತಾರೆ. ಅವರ ಅಧೀನದಲ್ಲಿ 30ಕ್ಕೂ ಹೆಚ್ಚು ಜೈಲರ್ಗಳು 60ಕ್ಕೂ ಅಧಿಕ ಸಹಾ ಯಕ ಜೈಲರ್ಗಳು ಹಾಗೂ ಸುಮಾರು 600 ಮಂದಿ ವಾರ್ಡರ್ ಗಳಿದ್ದಾರೆ. ಇವರೆಲ್ಲರ ಮೇಲೆ ಡಿಜಿ ಹಾಗೂ ಐಜಿ ಇರುತ್ತಾರೆ. ಈ ಇಬ್ಬರನ್ನು ಬಿಟ್ಟು ಉಳಿದ ಬಹುತೇಕ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬೆಂಗಳೂರು ಜೈಲು ಎಂದರೆ ಎಲ್ಲಿಲ್ಲದ ಪ್ರೀತಿ.
ಹೀಗಾಗಿ ದಕ್ಷಿಣ ವಲಯ ಕಾರಾಗೃಹಗಳ ಉಪ ಮಹಾನಿರೀಕ್ಷಕ (ಡಿಐಜಿ ) ಶೇಷ ಅವರು ಅನೇಕ ವರ್ಷಗಳಿಂದ ಇಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಯಾವುದೇ ಸರಕಾರ ಇವರನ್ನು ವರ್ಗಾವಣೆ ಮಾಡುವ ಪ್ರಯತ್ನ ಮಾಡಿಲ್ಲ. ಇದೇರೀತಿ ಅಧೀಕ್ಷಕರು ಕೂಡ ಐದು ವರ್ಷಗಳಿಂದ ಇಲ್ಲೇ ಉಳಿದಿದ್ದಾರೆ. ಹಾಗೆಯೇ 7ಕ್ಕೂ ಹೆಚ್ಚಿನ ಜೈಲರ್ಗಳು ಕಳೆದ 10ವರ್ಷಗಳಿಂದ ಬೆಂಗಳೂರಿನ ಜಾಂಡಾ ಹೂಡಿದ್ದಾರೆ. ಇವರಂತೆಯೇ ಸಹಾಯಕ ಜೈಲರುಗಳು ಐದು ವರ್ಷಗಳಿಂದ ಇಲ್ಲಿಂದ ಅಡಿಲ್ಲ. ಆದರೆ ಇವರಲ್ಲಿ ಬಹುತೇಕ ಅಧಿಕಾರಿಗಳು ಬೇಕಾದಾಗ ಮೂರು ತಿಂಗಳ ಮಟ್ಟಿಗೆ ಜಿಲ್ಲಾ ಕಾರಾಗೃಹಗಳಿಗೆ ಹೋಗಿ ವಾಪಸ್ ಬರುತ್ತಾರೆ.
ಬೆಂಗಳೂರು ಜೈಲೇ ಏಕೆ ?: ಕಾರಾಗೃಹದಲ್ಲಿ ನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಕ್ಯಾಂಟೀನ್, ಬೇಕರಿ, ಅಂಗಡಿಗಳು ಮತ್ತು ಇತರ ಪದಾರ್ಥ ಮಾರಾಟ ಮಳಿಗೆಗಳಿವೆ. ಅದರಲ್ಲೂ ಕ್ಯಾಂಟೀನ್ ನಲ್ಲಿ ಕೈದಿಗಳಿಗೆ ಕನಿಷ್ಠ ಬೆಲೆಯಲ್ಲಿ ಮಾರಾಟ ಮಾಡಬೇಕಾದ ಊಟ, ತಿಂಡಿಯನ್ನು ಮೂರು ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತದೆ. ಇದರಲ್ಲಿ ಗಳಿಸುವ ಲಾಭದ ಮಾಮೂಲು ವಾರಕ್ಕೊಮ್ಮೆ ಜೈಲರ್ಗಳ ಮೂಲಕ ವಿ‘ಶೇಷ’ ಅಧಿಕಾರಿಗೆ ಹೋಗುತ್ತದೆ. ಇದೇರೀತಿ ಅಡುಗೆ ಮನೆಗೆ ಲೋಡ್ ಗಟ್ಟಲೇ ದಿನಸಿ ಬಂದಿಳಿಯುತ್ತದೆ. ಆದರೆ ಇಲ್ಲಿನ ಊಟದ ಗುಣಮಟ್ಟದಿಂದ ತಿನ್ನುವ ಕೈದಿಗಳ ಸಂಖ್ಯೆಯೇ ಕಡಿಮೆ.
ಆದರೆ ಅಧಿಕಾರಿಗಳು ಲೆಕ್ಕ ತೋರಿಸುವುದೇ ಬೇರೆ. ಜತೆಗೆ ದಿನಸಿ ಪೂರೈಕೆದಾರರ ಕಮಿಷನ್ ಕೂಡ ಇದೆ. ಹೀಗೆ ಕೃಷ್ಣನ ಲೆಕ್ಕದಿಂದ
ಉಳಿಯುವ ಹಣ ವಿ‘ಶೇಷ’ ಅಧಿಕಾರಿಯನ್ನು ಸೇರುತ್ತದೆ. ಇನ್ನು ಕೈದಿಗಳೇ ಉತ್ಪಾದಿಸಿ ಮಾರಾಟ ಮಾಡುವ ಬೇಕರಿ ಅಕ್ರಮಗಳು ಈ ಹಿಂದೆ ಐಪಿಎಸ್ ಅಧಿಕಾರಿ ಡಿ.ರೂಪಾ ಅವರೇ ಬಯಲು ಮಾಡಿದ್ದು, ಅದನ್ನು ವಿವರಿಸುವ ಅಗತ್ಯವೇ ಕಾಣುತ್ತಿಲ್ಲ. ಬೇಸರ ಎಂದರೆ ಇಲ್ಲಿನ ಬಹುತೇಕ ಇಲಾಖೆಯ ಡಿಜಿ ಅಲೋಕ್ ಮೋಹನ್, ಐಜಿ ನಂಜುಂಡಸ್ವಾಮಿ ಅವರಿಗೆ ತಿಳಿಯುತ್ತಲೇ ಇಲ್ಲ. ಅಂದರೆ ಕಾರಾಗೃಹದ ವಿ‘ಶೇಷ’ ಅಧಿಕಾರಿಗಳು ತಮ್ಮ ಮೇಲಿನ ಹಿರಿಯ ಅಧಿಕಾರಿಗಳನ್ನು ಕೂಡ ಕತ್ತಲಲ್ಲಿ ಇಟ್ಟಿದ್ದಾರೆ ಎಂದು ಕಾರಾಗೃಹದ ಸಿಬ್ಬಂದಿ ಹೇಳಿದ್ದಾರೆ.