ಬಿಜೆಪಿ ಹಿಂದುತ್ವಕ್ಕೆ ಪ್ರತಿಯಾಗಿ ತಟಸ್ಥ ಮತದಾರರ ಸೆಳೆವ ತಂತ್ರ
ಪ್ರದೀಪ್ ಕುಮಾರ್ ಎಂ. ಬೆಂಗಳೂರು
ರಾಜ್ಯ ವಿಧಾನಸಭೆಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಹಿಂದುತ್ವವನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಳ್ಳಲು ಆಡಳಿತಾರೂಢ ಬಿಜೆಪಿ ತೀರ್ಮಾನಿಸಿರುವುದು ಸಹಜ.
ಆದರೆ, ಇದರ ಬೆನ್ನಲ್ಲೇ ಕಾಂಗ್ರೆಸ್ ಕೂಡ ‘ಮೃದು ಹಿಂದುತ್ವ’ ಅನುಸರಿಸುವ ಮೂಲಕ ಬಿಜೆಪಿಗೆ ತಿರುಗೇಟು ನೀಡಲು ಸಜ್ಜಾಗಿರು ವುದು ವಿಶೇಷ! ಹಿಂದುತ್ವ ಅಜೆಂಡಾದ ಒಂದೊಂದೇ ವಿಚಾರಗಳನ್ನು ಮುನ್ನೆಲೆಗೆ ತರುತ್ತಿರುವ ಬಿಜೆಪಿ, ಚುನಾವಣೆಗೆ ಸಿದ್ಧತೆಗೆ ಹೆಜ್ಜೆಯಿಟ್ಟಿರುವುದು ಮನವರಿಕೆಯಾಗುತ್ತಿದ್ದಂತೆ, ಕಾಂಗ್ರೆಸ್ ತನ್ನ ಅಲ್ಪಸಂಖ್ಯಾತರ ಓಲೈಕೆಯ ಜತೆ ಜತೆಗೇ ‘ಮೃದು ಹಿಂದುತ್ವ’ ದತ್ತ ವಾಲಲಾರಂಭಿಸಿದೆ.
ಹಿಜಾಬ್ ಕುರಿತ ಹೈಕೋರ್ಟ್ ತೀರ್ಪು, ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಯಂಥ ವಿಚಾರ ದಲ್ಲಿ ಕಾಂಗ್ರೆಸ್ ಪ್ರತಿಕ್ರಿಯೆ ಪಕ್ಷದ ಧೋರಣೆಯನ್ನು ಸ್ಪಷ್ಟವಾಗಿಸುತ್ತಿದೆ. ಈವರೆಗಿನ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದ ವಿರುದ್ಧ ಬಹುಸಂಖ್ಯಾತ ಹಿಂದೂ ಪರ ರಾಜಕಾರಣ ಆರಂಭಿಸಿ ಅದರಲ್ಲಿ ಗೆದ್ದು ಬೀಗಿದ್ದ ಬಿಜೆಪಿ, ಮುಂದಿನ ಚುನಾವಣೆಗೂ ಹಿಂದುತ್ವವನ್ನೆ ನೆಚ್ಚಿಕೊಳ್ಳುತ್ತಿದೆ. ಹೀಗಾಗಿ ಬಿಜೆಪಿಗೆ ತಿರುಗೇಟು ನೀಡಲು ಹಿಂದು ಪರ ವಿಚಾರಗಳಲ್ಲಿ ಮೃದು ಧೋರಣೆ ಈಗ ಕಾಂಗ್ರೆಸ್ಗೂ ಅನಿವಾರ್ಯವಾಗಿದೆ. ಜತೆಗೆ ಅಲ್ಪ ಸಂಖ್ಯಾತರ ಸಮುದಾಯ ಈ ಬಾರಿ ಚುನಾವಣೆಯಲ್ಲಿ ಕೈಕೊಡುವ ಸಾಧ್ಯತೆ ಇದೆ. ಹೀಗಾಗಿ ಆ ಓಲೈಕೆಯ ಜತೆಗೇ ಮೃದು ಹಿಂದುತ್ವ ಧೋರಣೆಯನ್ನೂ ಅನುಸರಿಸಲು ಕಾಂಗ್ರೆಸ್ ತೀರ್ಮಾನಿಸಿದೆ.
ಒಂದೊಂದೇ ಅಸ: ಈಗಾಗಲೇ ಚುನಾವಣೆ ಸಿದ್ಧತೆ ಆರಂಭಿಸಿರುವ ಬಿಜೆಪಿ ಹಿಂದುತ್ವದ ಒಂದೊಂದೇ ಅಸ್ತ್ರಗಳನ್ನು ಹೂಡಲಾ ರಂಭಿಸಿದೆ. ಮುಜರಾಯಿ ದೇವಸ್ಥಾನಗಳಿಗೆ ಸ್ವಾಯತ್ತೆ ನೀಡಿಕೆಯನ್ನು ೨೦೨೨-೨೩ನೇ ಸಾಲಿನ ಬಜೆಟ್ನಲ್ಲಿ ಅದನ್ನು ಪ್ರಸ್ತಾಪಿ ಸಿದೆ. ಹಿಜಾಬ್ ಬೆಂಬಲಿಸಿದೆ. ‘ದಿ ಕಾಶ್ಮೀರ್ ಫೈಲ್ಸ್’ ಗೆ ತೆರಿಗೆ ವಿನಾಯಿತಿ ಘೋಷಿಸಿದ್ದಲ್ಲದೆ ಆ ಚಿತ್ರವನ್ನು ಬೆಂಬಲಿಸುತ್ತಿದೆ. ಇವಲ್ಲದೇ ಅಂಜನಾದ್ರಿ ಮತ್ತು ಅಯೋಧ್ಯೆ ಜತೆ ನೇರ ಸಂಪರ್ಕ ಜಾಲ, ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಕೆ… ಹೀಗೆ ಹಿಂದುತ್ವದ ಅಜೆಂಡಾಗಳನ್ನು ಜನರ ಮುಂದಿಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ಕಾರ್ಯಕ್ರಮಗಳನ್ನು ಸಿದ್ಧ ಪಡಿಸಲು ಪಕ್ಷ ಸಿದ್ಧತೆ ನಡೆಸುತ್ತಿದೆ.
ಕಾಂಗ್ರೆಸ್ನಿಂದ ಗುರಾಣಿ: ಈ ಎಲ್ಲ ಹಿನ್ನೆಲೆ ಯಲ್ಲಿ ಪ್ರತಿದಾಳಿಗೆ ಮೃದು ಹಿಂದುತ್ವದ ಗುರಾಣಿ ಬಳಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಮೃದು ಹಿಂದುತ್ವವನ್ನೂ ಅನುಸರಿಸಿದರೆ ತಟಸ್ಥ ಮತದಾ ರರು ತಮ್ಮ ಪಕ್ಷವನ್ನು ಬೆಂಬಲಿಸಬಹುದು ಎಂಬುದು ಕಾಂಗ್ರೆಸ್ ನಾಯಕರ ಆಲೋಚನೆ. ಈ ಕಾರಣಕ್ಕಾಗಿ ಆರಂಭದಲ್ಲಿ ಹಿಜಾಬ್ ಬೆಂಬಲಿಸಿದ್ದ ಕಾಂಗ್ರೆಸ್, ಇದು ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ಖಚಿತವಾಗುತ್ತಿದ್ದಂತೆ ಕೋರ್ಟ್ ಆದೇಶ ಪಾಲಿಸಬೇಕು ಎಂದು ಹೇಳಿಕೊಂಡು ಅಪಾಯದಿಂದ ಪಾರಾಗಲು ಯತ್ನಿಸಿದೆ.
ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಸಲೂ ನಮ್ಮ ವಿರೋಧವಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ, ಹಿಂದು ಮತ್ತು ಹಿಂದುತ್ವದ ವಿರುದ್ಧ ಟೀಕೆಗಳನ್ನು ಮಾಡದಂತೆ ಮುಖಂಡರಿಗೂ ತಾಕೀತು ಮಾಡಲಾಗಿದೆ.
ಚುನಾವಣೆ ಕಲಿಸಿದ ಪಾಠ
ಕಳೆದ ಲೋಕಸಭೆ ಚುನಾವಣೆ ವೇಳೆಯೂ ಕಾಂಗ್ರೆಸ್ ಮೃದು ಹಿಂದುತ್ವದತ್ತ ಹೆಜ್ಜೆ ಇಟ್ಟಿತ್ತು. ಇದರಿಂದ ನಿರೀಕ್ಷಿತ ಸೀಟುಗಳನ್ನು ಗಳಿಸಲು ಸಾಧ್ಯವಾಗದೇ ಇದ್ದರೂ ಮತಗಳಿಕೆ ಪ್ರಮಾಣ ಹೆಚ್ಚಾಗಿತ್ತು. ನಂತರದಲ್ಲಿ ಮತ್ತೆ ಅಲ್ಪಸಂಖ್ಯಾತರ ಓಲೈಕೆ ಮುಂದು ವರಿಸಿದ್ದರಿಂದ ಹಿನ್ನಡೆ ಅನುಭವಿಸಬೇಕಾಯಿತು. ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಇದು ಪೂರ್ಣ ಪ್ರಮಾಣ ದಲ್ಲಿ ಸಾಬೀತಾಯಿತು. ಹಿಜಾಬ್ ವಿಚಾರದಲ್ಲಿ ಮುಸ್ಲಿಂ ಸಮುದಾಯದ ಪರವಾಗಿ ನಿಂತಿದ್ದರಿಂದ ಉತ್ತರ ಪ್ರದೇಶದಲ್ಲಿ ಹೆಚ್ಚು ಸೀಟು ಗೆಲ್ಲುವ ಮತ್ತು ಗೋವಾದಲ್ಲಿ ಅಧಿಕಾರಕ್ಕೆ ಬರುವ ನಿರೀಕ್ಷೆ ಹುಸಿಯಾಯಿತು. ಹೀಗಾಗಿ ಮತ್ತೆ ಸಮಸ್ಯೆ ಉದ್ಭವ ವಾಗಬಾರದು ಎಂಬ ಕಾರಣಕ್ಕೆ ಮೃದು ಹಿಂದುತ್ವ ನೀತಿ ಅನುಸರಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.