ವಿಶೇಷ ವರದಿ: ಸುಷ್ಮಾ ಚಿಕ್ಕಕಡಲೂರು ಬೆಂಗಳೂರು
ನನೆಗುದಿಗೆ ಬಿದ್ದಿರುವ ರಸ್ತೆ ದುರಸ್ತಿ ಕಾಮಗಾರಿ
ಗುಂಡಿಯಲ್ಲಿ ಬಿದ್ದೇಳುವ ಬೈಕ್ ಸವಾರರು
ಸಿಲಿಕಾನ್ ಸಿಟಿಯ ಬಹುತೇಕ ಮುಖ್ಯ ರಸ್ತೆಗಳ ಕಾಮಗಾರಿ ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಕೆಂಗೇರಿ ಸುತ್ತ ಮುತ್ತಲಿನ ರಸ್ತೆಗಳನ್ನು ಕಾಮಗಾರಿ
ನೆಪದಲ್ಲಿ ಅಗೆದು, ಅರ್ಧಕ್ಕೆ ಬಿಟ್ಟಿರುವುದರಿಂದ ರಸ್ತೆ ಗಳೇ ಮಳೆಗಾಲದ ಯಮಲೋಕವಾಗಿ ಮಾರ್ಪಟ್ಟಿವೆ. ಮಳೆಗಾಲಕ್ಕೂ ಮುನ್ನ ರಸ್ತೆಗಳನ್ನು ಸರಿಪಡಿಸುವ ಕೆಲಸಕ್ಕೆ ಬಿಬಿಎಂಪಿ ಮುಂದಾಗದ ಹಿನ್ನೆಲೆಯಲ್ಲಿ ರಸ್ತೆಗಳು ಯಮಸ್ವರೂಪಿಯಾಗಿ ಮಾರ್ಪಟ್ಟಿವೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಸ್ಥಳೀಯ ಶಾಸಕರಿಗೆ, ಬಿಬಿಎಂಪಿಯವರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕಾಗಿಯೇ ಪ್ರತಿ ವರ್ಷ ಕೋಟ್ಯಂತರ ರು. ವ್ಯಯಿಸುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದ ದುರಸ್ತಿಪಡಿಸಿದಷ್ಟೆ ವೇಗದಲ್ಲಿ ಡಾಂಬರು ಕಿತ್ತು ಬಂದು ಗುಂಡಿಗಳು ನಿರ್ಮಾಣವಾಗಿವೆ. ಸಮರ್ಪಕವಾಗಿ ಗುಂಡಿಗಳನ್ನು ಮುಚ್ಚದೆ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಸೊಣ್ಣೇನಹಳ್ಳಿ ಡಬಲ್ ರಸ್ತೆ, ಮಾರುತಿ ನಗರದ ಸರ್ಕಲ್ ಬಳಿ ಕಂಡುಬಂದಿದೆ.
ಈ ಬಗ್ಗೆ ಸ್ಥಳೀಯ ನಿವಾಸಿಗಳು ರಸ್ತೆ ದುರಸ್ತಿ ಬಗ್ಗೆ ಬಿಬಿಎಂಪಿಯವರಿಗೆ ದೂರು ನೀಡಿದ್ದರು, ಗುಂಡಿಗಳಿಗೆ ಮಣ್ಣು ಮುಚ್ಚುತ್ತಿರುವುದರಿಂದ ಮಳೆಗಾಲ ದಲ್ಲಿ ರಸ್ತೆ ಗಳು ಕೆಸರು ಗುಂಡಿಯಂತಾಗಿ ಮಾರ್ಪಡುತ್ತಿವೆ. ಇನ್ನು ಸೊಣ್ಣೇನ ಹಳ್ಳಿ ಡಬಲ್ ರಸ್ತೆಯಲ್ಲಿ ಹಾದು ಹೋಗುವ ಕಾವೇರಿ ವಾಟರ್ ಪೈಪ್ನ ಕಾಮಗಾರಿ ವಿವಾದಕ್ಕೀಡಾಗಿ ಅರ್ಧದಲ್ಲಿ ನಿಂತಿರುವ ಕಾರಣದಿಂದ ರಸ್ತೆ ಕಾಮಗಾರಿ ಕೂಡ ಅರ್ಧಕ್ಕೆ ನಿಂತಿದೆ. ಎರಡು ರಸ್ತೆಯಲ್ಲಿ ಸಂಚರಿಸಬೇಕಿದ್ದ ವಾಹನಗಳು ಒಂದೇ ಕಡೆ ಸಂಚರಿಸುತ್ತಿವೆ. ಇದರಿಂದ ರಸ್ತೆ ಮತ್ತಷ್ಟು ಹದಗೆಟ್ಟಿದೆ. ಜತೆಗೆ ನಿರಂತರವಾಗಿ ಸುರಿಯು ತ್ತಿರುವ ಮಳೆಯಿಂದಾಗಿ ಗುಂಡಿ ಗಳಲ್ಲಿ ನೀರು ತುಂಬಿ ವಾಹನ ಸವಾರರಿಗೆಗುಂಡಿಯ ಆಳಗಳು ತಿಳಿಯದೆ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ. ಇದರ ಜತೆಗೆ 7 ತಿಂಗಳಿನಿಂದ ಬೆಸ್ಕಾಂ ಪೈಪ್ ಲೈನ್ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೆ. ತಾವರೆಕೆರೆ ಮುಖ್ಯರಸ್ತೆ, ಮುದ್ದಿನ ಪಾಳ್ಯ ಲಾ ಕಾಲೇಜ್ ವರೆಗೂ ರಸ್ತೆ ದುರಸ್ತಿ ಯಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ
ಸ್ಥಳಿಯ ನಿವಾಸಿಗಳು ದೂರು ನೀಡಿದರು, ಗುಂಡಿಗಳಿಗೆ ಕೇವಲ ಮಣ್ಣು ಸುರಿದು ಹೋಗುತ್ತಿದ್ದಾರೆ. ಇದರಿಂದ ಮಳೆಗಾಲದಲ್ಲಿ ಮಣ್ಣು ಕೆಸರು ಗದ್ದೆ
ಯಾಗಿ ಮಾರ್ಪಾಟ್ಟಿವೆ. ಮಣ್ಣು ಜಾರುವುದರಿಂದ ಬೈಕ್ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ. ಜತೆಗೆ ಹೆಚ್ಚು ಅಪಘಾತಗಳು ಸಂಭವಿಸಲು ಕಾರಣ ವಾಗಿದೆ. ಬಿಬಿಎಂಪಿ ಸದಸ್ಯರ ಅಧಿಕಾರವಧಿ ಮುಗಿದಿದ್ದು, ಅವರ ಬಳಿ ದೂರು ನೀಡಿದರೆ ಅವರು ತಲೆ ಕೆಡಿಸಿಕೊಳ್ಳುತ್ತಿಲ್ಲ.
ಅಧಿಕಾರಿಗಳಿಗೆ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಸಾರ್ವಜನಿಕರ ದೂರುಗಳನ್ನು ಅಧಿಕಾರಿಗಳು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಯೇ ಇಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಇಂತಹ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಸರಕಾರ ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ನಿರ್ಲಕ್ಷ್ಯ ಅಧಿಕಾರಿ ಗಳನ್ನು ವಜಾಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
***
ರಸ್ತೆಗಳಲ್ಲಿ ಗುಂಡಿ ಬಿದ್ದು ವರ್ಷಗಳೇ ಕಳೆಯುತ್ತಾ ಬಂದಿದೆ. ಅಽಕಾರಿಗಳಿಗೆ ದೂರು ನೀಡಿದರೆ, ಮಣ್ಣು ತುಂಬಿ ಹೋಗುತ್ತಾರೆ. ಮತ್ತೆ ಇತ್ತ ಕಡೆ ಬಂದು ನೋಡುವುದಿಲ್ಲ. ತಿಂಗಳಲ್ಲಿ ೫ ರಿಂದ ೬ ಅಪಘಾತಗಳು ಸಂಭವಿಸುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಶಾಸಕರು ಗಮನಹರಿಸಿ ರಸ್ತೆ ದುರಸ್ತಿ ಮಾಡಿಸಬೇಕು.
– ಇಮ್ರಾನ್ ಟೆಂಪೋ ಡ್ರೈವರ್. ಸೊಣ್ಣೇನಹಳ್ಳಿ.
ಎರಡು ಕಡೆ ಸಂಚರಿಬೇಕಿದ್ದ ವಾಹನಗಳು ಒಂದೇ ಕಡೆ ಸಂಚರಿಸುತ್ತಿರುವುದರಿಂದ, ಸಂಚಾರ ಅಸ್ತವ್ಯಸ್ಥವಾಗಿದೆ. ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಏನೋ ಕೇಸ್ ನೆಡಿತಿದೆ ಅಂತಾ ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೆ. ಸಂಬಂಧಪಟ್ಟವರು ಗಮನಹರಿಸಬೇಕು.
– ಭೈರೇಗೌಡ ಸ್ಥಳೀಯ ನಿವಾಸಿ