ಕುಟುಂಬಕ್ಕೆ ಇನ್ನೂ ಬಿಡದ ಆತಂಕ
ದೆಹಲಿಯಲ್ಲೀಗ ಸೇಫ್
ವಿಶೇಷ ವರದಿ: ರಾಘವೇಂದ್ರ ಕಲಾದಗಿ
ಬಾಗಲಕೋಟೆ: ಅಫಘಾನಿಸ್ತಾನದ ತಾಲಿಬಾನಿಗಳ ಕ್ರೂರ ಅಟ್ಟಹಾಸದ ಪರಮಾವಧಿಯನ್ನು ಕಣ್ಣಾರೆ ಕಂಡು ಜೀವ ಅಂಗೈಯಲ್ಲಿ ಹಿಡಿದುಕೊಂಡು ಹರಸಾಹಸ ನಡೆಸುತ್ತಿರುವ ಮಧ್ಯೆ ಜಿಲ್ಲೆಯ ಭದ್ರತಾ ಪಡೆಯ ಯೋಧ ತಾಲಿಬಾನ್ನಿಂದ ಪಾರಾಗಿ ದೆಹಲಿಗೆ ಬಂದಿದ್ದಾರೆ.
ಕಾಬೂಲಿನ ಭಾರತೀಯ ರಾಯಭಾರಿ ಕಚೇರಿಯ ಭದ್ರತಾ ಸಿಬ್ಬಂದಿಯಾಗಿದ್ದ ಜಿಲ್ಲೆಯ ಮುಧೋಳ ತಾಲೂಕಿನ ಕಸಬಾ ಜಂಬಗಿಯ ಮಂಜುನಾಥ ಮಾಳಿ (28) ಕಳೆದ 16 ರಂದು ಕಾಬೂಲ್ನಿಂದ ಸೇನೆ ಜೊತೆ ಭಾರತಕ್ಕೆ (ದೆಹಲಿಗೆ) ಬಂದಿದ್ದಾರೆ. 2019ರಲ್ಲಿ ಭಾರತೀಯ ರಾಯಭಾರಿ ಕಚೇರಿಗೆ ಭದ್ರತಾ ಸಿಬ್ಬಂದಿಯಾಗಿದ್ದ ಐಟಿಬಿಪಿ ಕಮಾಂಡೊ ಆಗಿ ಮಂಜುನಾಥ ಸೇವೆ ಸಲ್ಲಿಸುತ್ತಿದ್ದರು.
ಭಾರತೀಯ ಸೇನೆಯೊಂದಿಗೆ ಆ.17ರಂದು ಗುಜರಾತ್ ಮಾರ್ಗವಾಗಿ ದೆಹಲಿಗೆ ಬಂದು ಕ್ವಾರಂಟೈನ್ನಲ್ಲಿ ಸೇಫಾಗಿದ್ದಾರೆ. ಭಾರತೀಯ ಸೇನಾ ವಿಮಾನ ಮೂಲಕ ಕಾಬೂಲಿನ ಎಲ್ಲ ಭದ್ರತಾ ಸಿಬ್ಬಂದಿ, ಭಾರತಕ್ಕೆ ರಾಜ್ಯದ ಗದಗ ಜಿಲ್ಲೆ ಬಳಗಾನೂರಿನ ರವಿ ನೀಲಗಾರ, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆರೂರಿನ ದಸ್ತಗೀರ ಮುಲ್ಲಾ ಸಿಬ್ಬಂದಿ ತವರಿಗೆ ಬಂದು ನಿಟ್ಟುಸಿರು ಬಿಟ್ಟಿದ್ದಾರೆ. ಎರಡು ದಿನಗಳ ಕಾಲ ಮಂಜುನಾಥರ ವೈಫೈ ಬಂದಾದ ಕಾರಣ ಕರೆ ಮಾಡಿ ಮಾತನಾಡಿರಲಿಲ್ಲ. ಆಗ ನಮ್ಮ ಮನೆಯಲ್ಲಿ ದುಗುಡ ಆತಂಕ ಮನೆ ಮಾಡಿತ್ತು. ದೆಹಲಿಗೆ ಬಂದ ಬಳಿಕ ಕರೆ ಮಾಡಿ ಮಾತನಾಡಿದ ಬಳಿಕ ನಾವು ನಿಟ್ಟುಸಿರು ಬಿಟ್ಟೆವು ಎಂದು ಪತ್ನಿ ಅಶ್ವಿನಿ ವಿಶ್ವವಾಣಿಗೆ ತಿಳಿಸಿದರು.
ಸ್ವದೇಶಕ್ಕೆ ಬಂದರು: ದೆಹಲಿಯಲ್ಲಿ ಕ್ವಾರಂಟೈನ್ ಇದ್ದ ನಿಮಿತ್ಯ ಇನ್ನೂ ನಾವು ಮಂಜುನಾಥರ (ಗಂಡನ) ಮುಖ ನೋಡಿಲ್ಲ ನಮಗಿನ್ನೂ ಸಮಾಧಾನ ತಂದಿಲ್ಲ. ಸ್ವದೇಶಕ್ಕೆ ಬಂದ ಖುಷಿ ನಮಗಿದೆ ಎಂದು ಸಂತಸ ವ್ಯಕ್ತಪಡಿಸಿದ ತಾಯಿ, ಪತ್ನಿ ಹಾಗೂ ಕುಟುಂಬಸ್ಥರು ನೆರೆ ಹೊರೆಯವರು ದೆಹಲಿಯಿಂದ ಬೇಗ ಸ್ವಗ್ರಾಮ ಕಸಬಾ ಜಂಬಗಿಗೆ ಬರಲಿ ಎಂದು ಆಶಿಸಿದ್ದಾರೆ.
ತಾಲಿಬಾನಿಗಳ ಯಮಸ್ವರೂಪಿ ಕೃತ್ಯದ ಮಧ್ಯೆ ನನ್ನ ಗಂಡ ಬದುಕಿ ಬಂದಿದ್ದೆ ಒಂದು ರೋಚಕ ಕಥೆಯಾಗಿದ್ದು ದೆಹಲಿ ಕ್ವಾರಂಟೈನ್ ಅವಧಿ ಮುಕ್ತಾಯ ಎಂದು ಆಗುತ್ತೊ ಏನು ಗೊತ್ತಿಲ್ಲ. ಅದಷ್ಟು ಬೇಗ ನಮ್ಮ ಮನೆಗೆ ಬರಲಿ ಎಂದು ಪತ್ನಿ ಅಶ್ವಿನಿ ಹೇಳಿದ್ದಾರೆ.
ಇನ್ನೂ ಬಿಡದ ಆತಂಕ ರಕ್ತಸಿಕ್ತ ಕಾಬೂಲಿನಿಂದ ಮಂಜುನಾಥ ಸೇಫಾಗಿ ಭಾರತಕ್ಕೆ ಬಂದರೂ ಕುಟುಂಬ ಆತಂಕ ಇನ್ನೂ ಬಿಟ್ಟಿಲ್ಲ. ಅಲ್ಲಿನ ರಣ ಭೀಕರ ಕೃತ್ಯಾವಳಿಗಳೇ ಬೆಚ್ಚಿ ಬೀಳುವಂತೆ ಮಾಡಿದ್ದು ಸಹಜವಾಗಿ ಆತಂಕ ದುಗುಡದ ಭೀತಿಯೇ ಇದಕ್ಕೆ ಕಾರಣವಾಗಿದೆ