ಗುಬ್ಬಿ ತಾಲೂಕಿನ ಮಲ್ಲೇನಹಳ್ಳಿ ಹಟ್ಟಿಯಲ್ಲಿ ವಿಚಿತ್ರ ಸಂಪ್ರದಾಯ
ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಸಾಮಾನ್ಯವಾಗಿ ವರನಿಗೆ, ಆತನ ಮನೆಯವರಿಗೆ ಇಷ್ಟವಾದ ವಧುವನ್ನು ವರಿಸುವುದು ಸಹಜ. ವಧುವಿನ ಮನೆ ನೋಡಲು ವರನ ಮನೆಕಡೆಯವರು ಹೋಗುವುದು ಸಾಮಾನ್ಯ. ಆದರೆ ಇಲ್ಲೊಂದು ಗ್ರಾಮದಲ್ಲಿ ವಧು ವರಿಸಲು ವರನಿಗಿಂತ ಮೊದಲು, ಈ ಊರಿನ ಗೌಡ ನೋಡಿ ಒಪ್ಪಿಗೆ ಕೊಡಬೇಕಂತೆ. ಒಂದು ವೇಳೆ ಇದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ‘ಬಹಿಷ್ಕಾರ’ ಹಾಕುತ್ತಾರಂತೆ.
ಹೌದು, ಇದು ಈಗಲೂ ಇರುವ ಪದ್ಧತಿ. ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಲ್ಲೇನಹಳ್ಳಿ ಹಟ್ಟಿ ಗ್ರಾಮದಲ್ಲಿ ಇಂತಹ ವಿಚಿತ್ರ ಸಂಪ್ರದಾಯವಿದ್ದು, ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಕೆಲ ಕುಟುಂಬಗಳನ್ನು ಊರಿನಿಂದಲೇ ಬಹಿಷ್ಕರಿಸಲಾಗಿದೆ. ಊರಿನ ಗೌಡ ಜ್ಯೋತಿಪ್ರಕಾಶ್ ಅವರ ಒಪ್ಪಿಗೆ ಇಲ್ಲದೇ, ಮದುವೆಯಾಗಿರುವ ಇಬ್ಬರು ಯುವಕರನ್ನು ಊರಿನಿಂದ ಬಹಿಷ್ಕರಿಸಲಾಗಿದೆ. ಆ ಊರಿನ ಗ್ರಾಮದೇವರಿಗೆ ಪೂಜೆ ಮಾಡುವುದಕ್ಕೂ ಅವಕಾಶ ನೀಡುತ್ತಿಲ್ಲ. ಈ ಕುಟುಂಬ ತಂದು ಕೊಡುವ ಹಾರವನ್ನು ದೇವರಿಗೆ ಹಾಕಿ ದ್ದರೂ, ಅದನ್ನು ತೆಗೆದು ಹಾಕಿದ್ದಾರೆ ಎಂದು ಯುವಕರು ದೂರಿದ್ದಾರೆ. ಈ ರೀತಿ ಬಹಿಷ್ಕಾರಗೊಂಡಿರುವ ಯುವಕರಲ್ಲಿ ಒಬ್ಬರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾನೂನಾತ್ಮಕವಾಗಿ ಊರಿನ ಗೌಡರು ಹಾಗೂ ಪೂಜಾರಿ ಮಾಡುತ್ತಿರುವುದು ಸರಿಯಲ್ಲವೆಂದು ಹೇಳಿದರೂ, ‘ಸಂಪ್ರದಾಯ’ದ ಕಾರಣ ನೀಡಿ, ಪ್ರೀತಿಸಿ, ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದರೂ ಊರಿನಿಂದ ಬಹಿಷ್ಕರಿಸಿದ್ದಾರೆ. ಊರಿನ ಅನೇಕರು ಈ ಬಗ್ಗೆ ಒಳಗೊಳಗೆ ಆಕ್ಷೇಪ ವ್ಯಕ್ತಪಡಿಸಿದರೂ, ನೇರವಾಗಿ ಗೌಡರನ್ನು ಎದುರು ಹಾಕಿಕೊಳ್ಳಲು ತಯಾರಿಲ್ಲದೇ ಇರುವುದು ಸಮಸ್ಯೆಗೆ ಕಾರಣ ಎನ್ನಲಾಗಿದೆ.
ವಧುವಿನ ಮನೆ ತೋರಿಸುವುದು ಕಡ್ಡಾಯ!: ಈಗಲೂ ಆ ಊರಿನ ವರ ಯಾವುದೇ ವಧುವನ್ನು ವರಿಸಬೇಕಾದರೂ ಊರಿನ ಗೌಡರಾದ ಜ್ಯೋತಿಪ್ರ ಕಾಶ್ ಅವರು ಖುದ್ದಾಗಿ ವಧುವಿನ ಮನೆಗೆ ತೆರಳಿ ಮನೆ ಹಾಗೂ ವಧುವನ್ನು ನೋಡಿಕೊಂಡು ಬರುತ್ತಾರೆ. ಬಳಿಕ ಗೌಡರಿಗೆ ಒಪ್ಪಿಗೆ ಯಾದರೆ ಮಾತ್ರ ಮದುವೆಗೆ ಅನುಮತಿ ನೀಡುತ್ತಾರೆ. ಒಂದು ವೇಳೆ ಒಪ್ಪದಿದ್ದರೆ, ವರನಿಗೆ ಇಷ್ಟವಾದರೂ ವರಿಸುವಂತಿಲ್ಲ. ಇದನ್ನು ವಿರೋಧಿಸಿ ಒಂದು ವೇಳೆ ಮದುವೆಯಾದರೆ, ಊರಿನಲ್ಲಿ ಆ ಕುಟುಂಬದ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕಲಾಗುವುದು ಹಾಗೂ ಊರಿನಲ್ಲಿರುವ ದೇವಾಲಯದಲ್ಲಿ ಪೂಜೆ ಪುನಸ್ಕಾರಕ್ಕೆ ಅನುವು ಮಾಡುವುದಿಲ್ಲವೆಂದು ಊರಿನವರು ಹೇಳಿದ್ದಾರೆ.
ಈ ಸಂಪ್ರದಾಯವನ್ನು ಈ ಹಿಂದೆ ಒಪ್ಪಿಕೊಂಡರು, ಕೆಲ ಯುವಕರು ಇದನ್ನು ವಿರೋಽಸಿದ್ದಾರೆ. ನಮಗೆ ಇಷ್ಟವಾದ ಹುಡುಗಿಯನ್ನು ವಿವಾಹ ವಾಗುವುದು ನಮ್ಮ ಹಕ್ಕು. ಅದನ್ನು ಗೌಡರಿಗೆ ತಿಳಿಸಿ ಒಪ್ಪಿಗೆ ಪಡೆಯುವ ಅಗತ್ಯವೇನಿದೆ? ಇನ್ನು ಊರಿನಿಂದ ಬಹಿಷ್ಕಾರ ಮಾಡುವುದು, ಪೂಜೆಗೆ ಅನುವು ಮಾಡಿಕೊಡದೇ ಇರುವುದು ಸಂವಿಧಾನದತ್ತವಾದ ಹಕ್ಕಿನ ಉಲ್ಲಂಘನೆಯಾಗಲಿದೆ ಎನ್ನುವ ಮಾತನ್ನು ಕೆಲ ಯುವಕರು ಹೇಳಿದ್ದಾರೆ.
***
ಪೊಲೀಸ್ ಅಧಿಕಾರಿಗೇ ಬಹಿಷ್ಕಾರ
ಈ ಅನಿಷ್ಟ ಸಂಪ್ರದಾಯವನ್ನು ವಿರೋಧಿಸಿದ್ದಾರೆ ಎನ್ನುವ ಕಾರಣಕ್ಕೆ, ಆ ಊರಿನ ಪೊಲೀಸ್ ಅಧಿಕಾರಿಯನ್ನೇ ಊರಿನಿಂದ ಬಹಿಷ್ಕರಿಸಿದ್ದಾರೆ. ಪ್ರಸ್ತುತ ಆ ಅಧಿಕಾರಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದರೂ, ಆತನಿಗೆ ಊರಿಗೆ ಹೋಗಲು, ಊರಿನಲ್ಲಿರುವ ಲಕ್ಷ್ಮೀ ನರಸಿಂಹ ಸ್ವಾಮಿ ಹಾಗೂ ಚಿತ್ರ ಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ನೆರವೇರಿಸಲು ಅವಕಾಶ ನೀಡುತ್ತಿಲ್ಲ. ಇನ್ನು ಅದೇ ಊರಿನಲ್ಲಿ ವಾಸವಿರುವ ಅಧಿಕಾರಿಯ
ತಾಯಿ ಯೊಂದಿಗೂ ಊರಿನವರೂ ಯಾವುದೇ ವ್ಯವಹಾರ ನಡೆಸುವಂತಿಲ್ಲ ಎನ್ನುವ ಫರ್ಮಾನು ಹೊರಡಿಸಿದ್ದಾರೆ.
***
ದೂರು ನೀಡಿದರೂ ಪ್ರಯೋಜನವಿಲ್ಲ ಊರಿನಲ್ಲಿ ಆಗುತ್ತಿರುವ ಈ ವಿವಾದಕ್ಕೆ ಸಂಬಂಧಿಸಿದಂತೆ ತುಮಕೂರು ಡಿಸಿ, ಎಸ್ಪಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಗುಬ್ಬಿ ತಾಲೂಕಿನ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ೨ ವರ್ಷಗಳಿಂದ ನಮ್ಮ ಊರಿಗೆ ಹೋಗಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ನೊಂದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
***
ಊರಿನ ಗೌಡ ಹಾಗೂ ದೇವಾಲಯದ ಅರ್ಚಕರ ಅನುಮತಿ ಪಡೆಯದೇ ಮದುವೆ ಯಾಗಿದ್ದೇವೆ ಎನ್ನುವ ಕಾರಣಕ್ಕೆ ಊರಿನಿಂದ ಬಹಿಷ್ಕರಿಸಿದ್ದಾರೆ. ಊರಿಗೆ ಹೋಗಿ ನನ್ನ ಗ್ರಾಮದೇವರ ಪೂಜೆಗೂ ಅವಕಾಶ ನೀಡುತ್ತಿಲ್ಲ. ನಾನು ಅವರ ಮಾತು ಕೇಳುತ್ತಿಲ್ಲ ಎನ್ನುವ ಕಾರಣಕ್ಕೆ ನನ್ನ ತಾಯಿಯನ್ನೂ
ಊರಿನಿಂದ ಬಹಿಷ್ಕರಿಸಿದ್ದಾರೆ. ಇದರಿಂದ ಆಕೆ ಖಿನ್ನತೆಗೆ ಒಳಗಾಗಿದ್ದಾಳೆ.
– ನೊಂದ ಅಧಿಕಾರಿ
ಗೌಡ, ಪೂಜಾರಿ ವಿರುದ್ಧವಾಗಿ ಮದುವೆಯಾದರೆ, ಹಳ್ಳಿಯಿಂದಲೇ ಬಹಿಷ್ಕಾರ ಡಿಸಿ, ಎಸ್ಪಿ, ತಹಸೀಲ್ದಾರ್ ಗಮನಕ್ಕೆ ತಂದರೂ ಮೌನವಾಗಿರುವ
ಅಧಿಕಾರಿಗಳು