ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಹೋರಾಟ
ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಒಪ್ಪಿಗೆ
ವಿಶೇಷ ವರದಿ: ರಂಜಿತ್. ಎಚ್. ಅಶ್ವತ್ಥ ಬೆಂಗಳೂರು
ಹಲವು ದಶಕಗಳಿಂದ ವಿವಾದವಾಗಿಯೇ ಉಳಿದಿರುವ ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆಗೆ ಕೊನೆಯಿಲ್ಲವಾದರೂ, ಈ ಯೋಜನೆಯ ಹೆಸರಲ್ಲಿ ರಾಜಕೀಯ ಲಾಭ ಪಡೆಯಲು ಮೂರೂ ಪಕ್ಷಗಳು ಹಗ್ಗಜಗ್ಗಾಟ ಶುರು ಮಾಡಿವೆ.
ಕರ್ನಾಟಕದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಲ್ಲಿ ಒಂದಾಗಿರುವ ಮೇಕೆದಾಟು ಯೋಜನೆಗೆ ಕೇಂದ್ರದಿಂದ ಅನುಮತಿ ಸಿಕ್ಕು, ಬಳಿಕ ತಡೆಯಾಜ್ಞೆ ದೊರೆಕಿದೆ. ಈ ನಡುವೆ ಈ ಯೋಜನೆಗೆ ತಡೆ ನೀಡುವಂತೆ ತಮಿಳುನಾಡು ಸರಕಾರ, ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಈ ಎಲ್ಲ ಸವಾಲುಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮೇಕೆದಾಟು ಯೋಜನೆ ಯನ್ನು ಮಾಡಿಯೇ ತೀರುತ್ತೇವೆ ಎನ್ನುವ ವಿಶ್ವಾಸದ ಮಾತನ್ನು ಪದೇ ಪದೆ ಹೇಳುತ್ತಿದ್ದಾರೆ. ಬಿಜೆಪಿಯವರು ಈ ಮಾತು ಹೇಳಿದಾಗಲೆಲ್ಲ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು, ಈ ಯೋಜನೆ ಆರಂಭವಾಗಿದ್ದೇ ನಮ್ಮ ಕಾಲದಲ್ಲಿ ಅಥವಾ ನಾವೇ ಇದಕ್ಕೆ ಅನುಮತಿ ಕೊಡಿಸಿದ್ದು ಎನ್ನುವ ಹೇಳಿಕೆ ನೀಡುವ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ.
ಜಲ ವಿದ್ಯುತ್ ಹಾಗೂ ಹೆಚ್ಚುವರಿ ನೀರು ಸಂಗ್ರಹಣೆಗೆಂದು ಮೇಕೆದಾಟಿನ ಬಳಿಕ ಡ್ಯಾಂ ನಿರ್ಮಿಸಬೇಕು ಎನ್ನುವ ಮಾತು ಹಲವು ವರ್ಷಗಳಿಂದ ಕೇಳಿಬಂದಿತ್ತು. ಆದರೆ ಇದಕ್ಕೆ ಗಂಭೀರ ಚರ್ಚೆ ಹಾಗೂ ಕೆಲಸ ಶುರುವಾಗಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ. ಅಂದಿನ ನೀರಾವರಿ ಸಚಿವ ಎಂ.ಬಿ ಪಾಟೀಲ್ ಅವರು ಈ ಯೋಜನೆ ಜಾರಿಗೆ ಭಾರಿ ಪ್ರಯತ್ನ ಹಾಕಿದರು. ಆದ್ದರಿಂದ ಈ ಯೋಜನೆ ನಮ್ಮದು ಎನ್ನುವ ಮಾತನ್ನು ಕಾಂಗ್ರೆಸ್ ಹೇಳುತ್ತಿದೆ. ಆದರೆ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕೇಂದ್ರದಿಂದ ಈ ಯೋಜನೆ ಒಪ್ಪಿಗೆ ಪಡೆಯಲು ನಾವು ಪ್ರಯತ್ನಿಸಿದ್ದೆವು. ಆದರೆ, ತಮಿಳುನಾಡಿನ ಒತ್ತಡದಿಂದ ಕಡತ ಪಕ್ಕಕ್ಕಿಡಲಾಗಿತ್ತು.
ಆದರೆ, ಅಂದಿನ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಯೋಜನೆಗೆ ಜಾರಿಗೆ ಭಾರಿ ಒತ್ತಡ ತಂದಿದ್ದರು. ಹಳೇ ಮೈಸೂರು ಭಾಗದಲ್ಲಿ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಪ್ರಮುಖ ಅಸ್ತ್ರವಾಗಿ ರುವುದರಿಂದ, ಈ ಯೋಜನೆ ನಾವೇ ಮಾಡಿದ್ದು ಎನ್ನುವ ಮಾತನ್ನು ಜೆಡಿಎಸ್ ನಾಯಕರು ಹೇಳಿಕೊಳ್ಳುತ್ತಿದ್ದಾರೆ.
ಆದರೆ, ಈ ಎಲ್ಲದರ ಪ್ರಯತ್ನ ಫಲವಾಗಿಯೋ ಅಥವಾ ಯಡಿಯೂರಪ್ಪ ಅವರಿಗೆ ಕೇಂದ್ರ ಸರಕಾರದೊಂದಿಗೆ ಇದ್ದ ಒಡನಾಟದ ಫಲವೋ, ಬಿಜೆಪಿ ಕಾಲದಲ್ಲಿ ಇದಕ್ಕೆ ತಾತ್ವಿಕ ಒಪ್ಪಿಗೆ ದೊರೆಯಿತು. ಆದ್ದರಿಂದ ಈ ಯೋಜನೆ ಜಾರಿ ಮಾಡಿದ್ದು ನಾವೇ
ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದಾರೆ.
ಮೇಕೆದಾಟು ಯೋಜನೆಗೆ ತಮಿಳುನಾಡಿನಿಂದ ಭಾರಿ ವಿರೋಧವಿದ್ದು, ಕೇಂದ್ರ ಪರಿಸರ ಇಲಾಖೆಯಿಂದಲೂ ಒಪ್ಪಿಗೆ ದೊರೆತಿಲ್ಲ. ಆದರೆ, ಹಳೇ ಮೈಸೂರು ಭಾಗ ಹಾಗೂ ಬೆಂಗಳೂರಿನಲ್ಲಿ ಚುನಾವಣೆಗೆ ಇದೊಂದು ಅಸ್ತ್ರವಾಗಲಿದೆ. ಆದ್ದರಿಂದ ಮೂರು ಪಕ್ಷಗಳು ಯೋಜನೆ ಜಾರಿಗೆ ಕ್ರೆಡಿಟ್ ಫೈಟ್ ಅಶುರು ಮಾಡಿವೆ.