ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಕೇಸರಿ ಪಕ್ಷದ ಬದಲು ಖಾಸಗಿ ದೂರುದಾರರಿಗೆ ಕ್ರೆಡಿಟ್
ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಡ ಹೇರುವಲ್ಲಿ ಸೋತ ಬಿಜೆಪಿ
? ಇಡೀ ಹೋರಾಟದ ಕ್ರೆಡಿಟ್ ಸ್ನೇಹಮಯಿ ಕೃಷ್ಣ ಮತ್ತು ಟಿ.ಜೆ.ಅಬ್ರಹಾಂ ಅವರ ಹೋರಾಟದ ಫಲ ಎಂದೇ ಬಿಂಬಿತವಾಗುತ್ತದೆ.
? ಸಿಎಂ ವಿರುದ್ಧದ ಪಾದಯಾತ್ರೆಯಲ್ಲೂ ವಿಫಲ
? ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ವಿಫಲ
ದೇಶದ ಗಮನ ಸೆಳೆದಿದ್ದ ಬಹು ಚರ್ಚಿತ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸುವಂತೆ ಜನಪ್ರತಿನಿಧಿ ನ್ಯಾಯಾಲಯ ತೀರ್ಪು ನೀಡಿದ್ದು, ಇದರಿಂದ ರಾಜ್ಯ ಸರಕಾರ ಸೋತಂತಾಗಿದೆ. ಆದರೆ ಇದು ಬಿಜೆಪಿಯ ಹೋರಾಟದ ಗೆಲುವು ಎಂದು ಹೇಳಲಾಗುತ್ತಿಲ್ಲ. ಸರಕಾರದ ಈ ಕಾನೂನು ಹೋರಾಟದ
ಸೋಲನ್ನು ಪ್ರತಿಪಕ್ಷ ಬಿಜೆಪಿ ತನ್ನ ಹೋರಾಟದ ಫಲ ಎಂದುಕೊಳ್ಳುವುದಾಗಲಿ, ತನಗೆ ಸಿಕ್ಕ ಗೆಲವು ಎಂದು
ಹೇಳಿಕೊಂಡು ಕ್ರೆಡಿಟ್ ತೆಗೆದುಕೊಳ್ಳುವುದಕ್ಕಾಗಲಿ ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ.
ಕಾರಣ ಇಡೀ ಹೋರಾಟದ ಕ್ರೆಡಿಟ್ ಖಾಸಗಿ ವ್ಯಕ್ತಿಗಳಾದ ಸ್ನೇಹಮಯಿ ಕೃಷ್ಣ ಮತ್ತು ಟಿ.ಜೆ. ಅಬ್ರಹಾಂ ಅವರ ಕಾನೂನು ಹೋರಾಟದ ಫಲ ಎನ್ನಲಾಗುತ್ತಿದ್ದು, ಇದರಿಂದ ಆರೋಪ ಹೊತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಸು ದಾಖಲಿಸುವಂತೆ ಕೋರ್ಟ್ ಆದೇಶ ನೀಡಿದ್ದರೂ ಕೂಡ ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ಸಂಭ್ರಮಿಸುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ.
ಅಷ್ಟೇ ಅಲ್ಲ, ಇದು ನಾವು ನಡೆಸಿದ (ಒಂದು ಹಂತದ ವರೆಗೂ ಕಾಂಗ್ರೆಸ್ ವಿರೋಧಿ ಹವಾ ಎಬ್ಬಿಸಿತ್ತು) ಪಾದಯಾತ್ರೆ ಮತ್ತು ವಿವಿಧ ರೀತಿಯ ಪ್ರತಿಭಟನೆಗಳ ಫಲ ಎಂದು ಕೊಚ್ಚಿಕೊಳ್ಳುವುದಕ್ಕೂ ಸಾಧ್ಯವಾಗದೆ ಸ್ನೇಹಮಯಿಕೃಷ್ಣ ಮತ್ತು ಟಿ.ಜೆ. ಅಬ್ರಹಾಂ ಎಂಬ ಖಾಸಗಿ ವ್ಯಕ್ತಿಗಳ ಕಾನೂನಾತ್ಮಕ ಜಯ ಎಂದು ಬಿಜೆಪಿಯೇ ಹೇಳಬೇಕಾದ
ಅನಿವಾರ್ಯವಿದೆ ಎಂದು ಪಕ್ಷದ ಕೆಲವು ನಾಯಕರು ಹೇಳಿದ್ದಾರೆ.
ಕಾರಣ, ಇಲ್ಲಿ ಬಿಜೆಪಿ ತನ್ನ ಹೋರಾಟವನ್ನು ಹೆಚ್ಚು ರಾಜಕೀಯ ಹೇಳಿಕೆಗಳು, ವಾಗ್ದಾಳಿ, ಛೀಮಾರಿಗಳಿಗೆ ಸೀಮಿತ (ತೆರೆಮರೆಯ ಕೈಚಳಕ ಬಿಟ್ಟು) ಗೊಳಿಸಿತ್ತು. ಆದ್ದರಿಂದಲೇ ಬಿಜೆಪಿ ಈ ಸಮರದಲ್ಲಿ ಮೂರನೇ ವ್ಯಕ್ತಿಯಾಗಿ ನಿಲ್ಲುತ್ತದೆಯೇ ವಿನಃ, ನೇರ ಗೆಲುವಿನ ರೂವಾರಿಯಾಗಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ, ಈವರೆಗಿನ ಹೋರಾಟದಲ್ಲಿ ಕಾಂಗ್ರೆಸ್ ಕಾನೂನಾತ್ಮಕವಾಗಿ ಸೋತಿದಿಯೋ ವಿನಃ ರಾಜಕೀಯವಾಗಿ ಸೋತಂತೆ ಕಾಣುತ್ತಿಲ್ಲ. ಕಾರಣ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯೆಸಿರುವ ಸಿಎಂ ಸಿದ್ದರಾಮಯ್ಯ, ಇದು ಬಿಜೆಪಿ ರಾಜ್ಯಪಾಲರ ಮೂಲಕ ನಡೆಸಿದ ರಾಜಕೀಯ ಷಡ್ಯಂತ್ರ ಎಂದು ತಿರುಗೇಟು ನೀಡಿದ್ದಾರೆ.
ಹಾಗೆಯೇ ಬಿಜೆಪಿ ಕೂಡ ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆಗಳ ಮೂಲಕ ರಾಜೀನಾಮೆ ಒತ್ತಡ ಹೇರುತ್ತಾ, ರಾಜಕೀಯ ವಾಗಿಯೇ ಹೋರಾಟಗಳನ್ನೇ ಮುಂದುವರಿಸುವ ಅನಿವಾರ್ಯ ಸ್ಥಿತಿಯಲ್ಲಿದೆ. ಈ ಮಧ್ಯೆ, ಬಣ ರಾಜಕಾರಣದಿಂದ ಒಡೆದ ಮನೆಯಾಗಿರುವ ಬಿಜೆಪಿ ಯಲ್ಲಿ ಸರಕಾರದ ವಿರುದ್ಧದ ತೀರ್ಪನ್ನು ಸಂಭ್ರಮಿಸು ವುದಕ್ಕಾಗಿ, ಸದ್ಬಳಕೆ ಮಾಡಿಕೊಳ್ಳುವ ವಾತಾವರಣವೂ ಕಾಣುತ್ತಿಲ್ಲ. ಹೀಗಾಗಿ ಬಿಜೆಪಿ ಎಡೆ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಹೋರಾಟಗಳನ್ನು ರೂಪಿಸುತ್ತಿದೆಯೇ ವಿನಃ ಉಳಿದಂತೆ ಯಾವುದೇ ಹೊಸ ಹೋರಾಟದ ಹಾದಿಗಳು ಸದ್ಯಕ್ಕೆ ಗೋಚರ ವಾಗುತ್ತಿಲ್ಲ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ.
ಸರಕಾರಕ್ಕೆ ಆಪತ್ತು ತರುವ ಇಂಥ ಪ್ರಕರಣಗಳು ಪ್ರತಿಪಕ್ಷ ನಾಯಕರಡಿ ಮುನ್ನಡೆಯಬೇಕು. ಈ ಹಿಂದೆ
ಸಿದ್ದರಾಮಯ್ಯ ಅವರ ಮಾದರಿಯಲ್ಲಿ ನೈತಿಕತೆ ಸೇರಿದಂತೆ ಅನೇಕ ವಿಚಾರಗಳನ್ನು ಮುಂದಿಟ್ಟು
ಸರಕಾರ ವನ್ನು ಇಕ್ಕಟ್ಟಿಗೆ ಸಿಲುಕಿಸಬೇಕಿತ್ತು. ಆದರೆ ಪ್ರತಿಪಕ್ಷ ನಾಯಕ, ಹಿರಿಯರೂ ಮುಖಂಡರೂ ಆದ
ಆರ್.ಅಶೋಕ್ ಹೋರಾಟ ಇಡೀ ಪ್ರಕರಣದಲ್ಲಿ ಬರೀ ರಾಜಕೀಯ ಹೇಳಿಕೆಗಷ್ಟೇ ಸೀಮಿತವಾಗಿತ್ತು. ಅಷ್ಟೇ ಏಕೆ, ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿತ್ತು ಎನ್ನಲಾದ ಅಕ್ರಮಗಳ ವಿರುದ್ಧ ತನಿಖೆಗೆ ಒಪ್ಪಿಸಿದ್ದ ಬಗ್ಗೆ, ಹೇಳಿಕೆಗಳನ್ನು ನೀಡಿದ್ದ ಬಗ್ಗೆ, ರಾಜ್ಯಪಾಲರನ್ನು ಪ್ರಶ್ನಿಸಿದ್ದ ಬಗ್ಗೆ ಅಶೋಕ್ ಪರಿಣಾಮ ಕಾರಿಯಾಗಿ ಯಾವುದೇ ಪ್ರತಿ ಕಾರ್ಯತಂತ್ರ ರೂಪಿಸಲಿಲ್ಲ ಎಂದು ಬಿಜೆಪಿಯವರೇ ಬೇಸರ ವ್ಯಕ್ತಪಡಿಸಿದ್ದಾರೆ.
ಹಾಗೆ ನೋಡಿದರೆ, ವಿಧಾನಪರಿಷತ್ ಪ್ರತಿಪಕ್ಷ ನಾಯಕರೂ ಆಗಿರುವ ಇತ್ತೀಚಿಗೆ ಬಿಜೆಪಿ ಸೇರಿದ್ದ ಛಲವಾದಿ
ನಾರಾಯಣಸ್ವಾಮಿ ಅವರೇ ಒಂದು ಕೈ ಮೇಲು ಎನ್ನುವಂತಾಗಿದೆ. ಇವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕುಟುಂಬದ ವಿರುದ್ಧವೇ ಕೆಐಎಡಿಬಿ ಅಕ್ರಮವೊಂದನ್ನು ಬಯಲಿಗೆಳೆದು ಭಾರೀ ಚರ್ಚೆಗೆ ದಾರಿ ಮಾಡಿದ್ದರು. ಕೆಲ ಕಾಲ ಕಾಂಗ್ರೆಸ್ಸನ್ನೂ ಇಕ್ಕಟ್ಟಿಗೆ ಸಿಲುಕಿದ್ದರು ಎಂದು ಪಕ್ಷದ ನಾಯಕರು ಹೇಳಿದ್ದಾರೆ.
ದೋಸ್ತಿ ಪಕ್ಷ ಜೆಡಿಎಸ್ನ ಆರಂಭಿಕ ವಿರೋಧ ಸೇರಿದಂತೆ ಅಪಾರ ಅಪಸ್ಪರದೊಂದಿಗೆ ನಡೆಸಿದ ಪಾದಯಾತ್ರೆ ನಿಜಕ್ಕೂ ಪರಿಣಾಮಕಾರಿಯಾಗಿದ್ದರೆ, ಅಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದರು. ಆದರೆ ಇದೊಂದು ರಾಜಕೀಯ ಷಡ್ಯಂತ್ರ ಎಂದೇ ಹೇಳುತ್ತಾ ಬಂದ ಮುಖ್ಯಮಂತ್ರಿ ಅವರು ಮೈಸೂರಿ ನಲ್ಲಿ ಅಪಾರ ಜನಸ್ತೋಮದ ಜಾತ್ರೆಯನ್ನೇ ನಿರ್ಮಿಸಿ ಪ್ರತಿಪಕ್ಷಕ್ಕೆ ರಾಜಕೀಯವಾಗಿಯೇ ತಿರುಗೇಟು ನೀಡಿದ್ದರು.
ಹೀಗಾಗಿ ಬಿಜೆಪಿ ಪಾದಯಾತ್ರೆ ಹೆಚ್ಚು ಕಾಲ ಜನಮಾನಸದಲ್ಲಿ ಉಳಿಯಲಿಲ್ಲ. ಅದು ಸಿದ್ದರಾಮಯ್ಯ ರಾಜೀನಾಮೆ ಅನಿವಾರ್ಯತೆ ಸೃಷ್ಠಿಸುವಷ್ಟು ಪರಿಣಾಮವನ್ನೂ ಉಂಟು ಮಾಡಲಿಲ್ಲ. ಇದಕ್ಕೆ ಕಾರಣ ದೋಸ್ತಿ ಪಕ್ಷ ಜೆಡಿಎಸ್ ಪಾದಯಾತ್ರೆ ಆರಂಭದಲ್ಲಿ ಹಿಂದೇಟು ಹಾಕಿ ನಂತರ ಅರೆಮನಸ್ಸಿನಿಂದ ಬಂದಿದ್ದು. ಹಾಗೆಯೇ ಇಡೀ ಪಾದಯಾತ್ರೆ
ಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪರಸ್ಪರ ರಾಜಕೀಯ ದ್ವೇಷಗಳನ್ನು ಕಾರುವುದಕ್ಕೆ ಸೀಮಿತ ವಾಗಿದ್ದು ಮತ್ತು ಪರಸ್ಪರ ಅಕ್ರಮಗಳನ್ನು ಹೊರ ಗೆಳೆಯುವ ವಾಗ್ದಾಳಿಗೆ ಹೆಚ್ಚು ಆದ್ಯತೆ ನೀಡಿದ್ದು ಪಾದಯಾತ್ರೆ ವಿಫಲಕ್ಕೆ ಕಾರಣವಾಗಿತ್ತು.
ಇದೆಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ಬಣ ರಾಜಕಾರಣದ ರೂವಾರಿಗಳಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ
ರಮೇಶ್ ಜಾರಕಿಹೊಳಿ ಅವರ ಪಾದಯಾತ್ರೆ ಆರಂಭ ದಲ್ಲಿ ವಿರೋಧ ಮಾಡಿದ್ದು, ಅಂತಿಮ ಸಂದರ್ಭದಲ್ಲಿ ಪ್ರತ್ಯೇಕ ಪಾದಯಾತ್ರೆ ನಡೆಸುವುದಾಗಿ ಪ್ರಕಟಿಸಿದ್ದು ಬಿಜೆಪಿಯ ಹಿನ್ನಡೆ ಎನ್ನಲಾಗಿದೆ. ಹೀಗಾಗಿಯೇ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದರೂ ಕೂಡ ಕಾಂಗ್ರೆಸ್ ರಾಜಕೀಯವಾಗಿ ಬಿಜೆಪಿಯನ್ನು ಹಿಮ್ಮೆಟ್ಟಿಸಿತ್ತಾ ಬಂದಿದೆ ಎಂದು ಹೇಳಲಾಗಿದೆ ಎಂದು ಕಾಂಗ್ರೆಸ್ನ ಹಿರಿಯರು ಹೇಳಿದ್ದಾರೆ.
ಇದನ್ನೂ ಓದಿ: Shivakumar Bellithatte Story: ಚನ್ನಪಟ್ಟಣ ಉಪಸಮರಕ್ಕೆ ಯೋಗಿ ಅಭ್ಯರ್ಥಿ?