ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ದಶಕ ಪೂರೈಸಿರುವ ಸಂಭ್ರಮದಲ್ಲಿರಬೇಕಾದ ದೇಶದ ಎರಡನೇ ಹಾಗೂ ರಾಜ್ಯದ ಏಕೈಕ ಸಂಗೀತ ವಿಶ್ವವಿದ್ಯಾಲಯ ಈಗ ಮುಚ್ಚುವ ಭೀತಿ ಎದುರಿಸುತ್ತಿದೆ.
ರಾಜ್ಯದಲ್ಲಿ ಸಂಗೀತಗಾರರನ್ನು ಸೃಷ್ಟಿಸಿ ಸಂಗೀತ ಮತ್ತು ಸಂಬಂಧಿಸಿದ ಪ್ರಕಾರಗಳ ಮೂಲಕ ಸಾಂಸ್ಕೃತಿಕ ಕ್ಷೇತ್ರ ಉಳಿಸಿ, ಬೆಳೆಸಲು 11 ವರ್ಷಗಳ ಹಿಂದೆ ಸಂಗೀತ ನಗರಿ ಮೈಸೂರಿನಲ್ಲಿ ವಿವಿ ಆರಂಭಿಸಲಾಗಿತ್ತು. ಅದಕ್ಕೆ ದೇಶ ಕಂಡ ಅತ್ಯುತ್ತಮ ಸಂಗೀತ ವಿದುಷಿ ಡಾ ಗಂಗೂಬಾಯಿ ಹಾನಗಲ್ ಹೆಸರಿಡಲಾಗಿದೆ. ಆದರೆ ಸಂಗೀತ ಮತ್ತು ಸಂಗೀತ ಕ್ಷೇತ್ರದ ಬಗ್ಗೆ ಸರಕಾರದ ಅನಾದರ ಮತ್ತು ವಿಶ್ವವಿದ್ಯಾಲಯದ ಹಿಂದಿನ ಆಡಳಿತಗಾರರ ದುರಾಡಳಿತಗಳಿಂದಾಗಿ ವಿಶ್ವಖ್ಯಾತಿ ಗಳಿಸ ಬೇಕಾದ ವಿಶ್ವವಿದ್ಯಾಲಯ ಆರ್ಥಿಕ ಮತ್ತು ಆಡಳಿತಾತ್ಮಕ ಸಂಕಷ್ಟಗಳಿಗೆ ಸಿಲುಕಿದೆ. ಇದೇ ಪರಿಸ್ಥಿತಿ ಇನ್ನಷ್ಟು ಕಾಲ ಮುಂದುವರಿದರೆ ವಿಶ್ವವಿದ್ಯಾಲ ಯವನ್ನೇ ಮುಚ್ಚಬೇಕಾದ ಅನಿವಾರ್ಯ ಎದುರಾಗಬಹುದು ಎಂದು ಸರಕಾರದ ಹಿರಿಯ ಅಧಿಕಾರಿಗಳು ತಿಳಿಸಿzರೆ.
ಏಕ ಶಾಲೆ ಮುಖ್ಯೋಪಾಧ್ಯಾಯ: ವಿಶ್ವವಿದ್ಯಾಲಯದ ದುರವಸ್ಥೆಗೆ ಮೂಲಕಾರಣ ಸಿಬ್ಬಂದಿ ಸಮಸ್ಯೆ ಮತ್ತು ಅನುದಾನದ ಕೊರತೆ. ಅಂದರೆ ರಾಜ್ಯದ ಗಡಿ ಭಾಗದಲ್ಲಿ ಕಂಡುಬರುವ ಏಕೋಪಾಧ್ಯಾಯ ಮಾದರಿಯ ಸಂಸ್ಥೆ ಇದಾಗಿದೆ. ಈ ವಿಶ್ವವಿದ್ಯಾಲಯಕ್ಕೆ ಕುಲಪತಿ ಬಿಟ್ಟರೆ ಕಳೆದ 11 ವರ್ಷಗಳಿಂದ ಯಾವುದೇ ಸಿಬ್ಬಂದಿ ನೇಮಕ ವಾಗಿಲ್ಲ. ಹಾಗಂತ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ವಿವಿ ಆಡಳಿತ ಮಂಡಳಿಯು ಈತನಕ 30ಕ್ಕೂ ಹೆಚ್ಚು ಮಂದಿ ಎರವಲು ಸೇವೆ ಮತ್ತು ತಾತ್ಕಾಲಿಕ ಗುತ್ತಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದೆ. ಆದರೆ ಅವರಿಗೆ ಒಂದು ವರ್ಷಗಳಿಂದ ವೇತನ ಪಾವತಿಸಿಲ್ಲ. ಹೀಗಾಗಿ ಅವರು ಹೈಕೋರ್ಟಿನ ಮೆಟ್ಟಿಲೇರಿದ್ದು, ನ್ಯಾಯಾಲಯ ಈ ನೇಮಕಗಳ ಬಗ್ಗೆ ಪ್ರಶ್ನೆ ಮಾಡುತ್ತಿದೆ.
ಇದರಿಂದ ಗಾಬರಿಗೊಂಡ ಉನ್ನತ ಶಿಕ್ಷಣ ಇಲಾಖೆ ರಾಜ್ಯದ ಎಲ್ಲ 23 ವಿಶ್ವವಿದ್ಯಾಲಯಗಳಲ್ಲಿರುವ ತಾತ್ಕಾಲಿಕ ಗುತ್ತಿಗೆ ನೌಕರರ ವೇತನ ಪಾವತಿಸಿ ಸೇವೆ ಯಿಂದ ಅವರನ್ನು ಬಿಡುಗಡೆಗೊಳಿಸುವಂತೆ ಆದೇಶ ಮಾಡಿದೆ. ಹೀಗಾಗಿ ಸಂಗೀತ ವಿಶ್ವವಿದ್ಯಾಲಯದ ಎಲ್ಲ ಸಿಬ್ಬಂದಿಗೂ ವೇತನ ಪಾವತಿಸುವುದಕ್ಕೆ ಹಣವಿಲ್ಲ ಹಾಗೂ ಎಲ್ಲರನ್ನೂ ಸೇವೆಯಿಂದ ಬಿಡುಗಡೆ ಮಾಡಿದರೆ ವಿಶ್ವವಿದ್ಯಾಲಯ ನಡೆಸುವುದಕ್ಕೂ ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ.
ವಿಚಿತ್ರ ಎಂದರೆ ಈ ಬಾರಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ಸ್ವೀಕರಿಸಲು ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ. ಎಲ್ಲ ವಿದ್ಯಾರ್ಥಿ ಗಳನ್ನು ತೆಗೆದುಕೊಂಡರೆ ಕೊಠಡಿಗಳಿಲ್ಲದೆ, ಕ್ಯಾಂಪಸ್ ಇಲ್ಲದೆ, ಹಣವೂ ಇಲ್ಲದೆ ವಿದ್ಯಾರ್ಥಿಗಳಿಗೆ ತರಬೇತಿ ಕೊಟ್ಟು ನಿರ್ವಹಣೆ ಮಾಡುವುದಾದರೂ ಹೇಗೆ
ಎನ್ನುವ ಆತಂಕ ಆಡಳಿತ ಮಂಡಳಿಯದ್ದಾಗಿದೆ.
ಸರಕಾರ ಮಾಡಿದ ತಪ್ಪೇನು?: 2009ರಲ್ಲಿ ಬಿಜೆಪಿ ಸರಕಾರವಿದ್ದಾಗ ದೇಶದ ಎರಡನೆಯ ಸಂಗೀತ ವಿಶ್ವವಿದ್ಯಾಲಯವಾಗಿ ಇದನ್ನು ಸ್ಥಾಪಿಸಲಾಗಿತ್ತು.
ಛತ್ತೀಸ್ಗಡದ ಇಂದಿರಾಗಾಂಧಿ ಸಂಗೀತ ಮತ್ತು ಕಲಾ ವಿಶ್ವವಿದ್ಯಾಲಯ ಬಿಟ್ಟರೆ ನಂತರದ ಸಂಗೀತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ಸ್ಥಾಪನೆಯಾಗಿತ್ತು.
ಮೈಸೂರಿನಲ್ಲಿ ಅನಾಥವಾಗಿದ್ದ ಸರಕಾರಿ ಶಾಲೆಯಲ್ಲಿ ವಿಶ್ವವಿದ್ಯಾಲಯವನ್ನು ತಾತ್ಕಾಲಿಕವಾಗಿ ಆರಂಭಿಸಲಾಗಿತ್ತು. ಆನಂತರದಲ್ಲಿ ವಿದ್ಯಾಲಯಕ್ಕೆ ಸೂಕ್ತ ಕ್ಯಾಂಪಸ್ ನಿರ್ಮಿಸಿಕೊಡಬೇಕಿತ್ತು. ಯುಜಿಸಿ ನಿಯಮಗಳ ಪ್ರಕಾರ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಸುಮಾರು 120 ಹುದ್ದೆಗಳ ನೇಮಕಕ್ಕೆ ಅವಕಾಶ ಕಲ್ಪಿಸಿ ಕೊಡಬೇಕಿತ್ತು. ಆದರೆ ಈ ಬಗ್ಗೆ ಅಂದಿನ ಕುಲಪತಿ ಹನುಮಣ್ಣ ನಾಯಕ ಗಮನ ಹರಿಸಲಿಲ್ಲ. ನಂತರದ ಕುಲಪತಿಗಳು ನಡೆಸಿದ ಹೋರಾಟವೂ ಪ್ರಯೋಜನಕ್ಕೆ ಬರಲಿಲ್ಲ. ಪರಿಣಾಮ ವಿಶ್ವವಿದ್ಯಾಲಯ ತಾತ್ಕಾಲಿಕ ಹಳೆಯ ಕಟ್ಟಡದಲ್ಲಿ 11 ವರ್ಷ ನೂಕುವಂತಾಗಿದೆ
ಆರ್ಥಿಕ ನೆರವು ಅಗತ್ಯ
ಆಡಳಿತ ಮಂಡಳಿ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನೇಮಕ ಮಾಡಿದ ನಂತರ ಆರು ತಿಂಗಳ ಒಳಗಾಗಿ ಇಲಾಖೆಯನ್ನು ಸಂಪರ್ಕಿಸಿ ಅನುಮೋದನೆ ಪಡೆದು
ಕೊಳ್ಳಬೇಕಿತ್ತು. ಆದರೆ ಆ ಕೆಲಸ ಆಗಿಲ್ಲ. ಆದ್ದರಿಂದ ಸರಕಾರ ಈಗ ಕೂಡಲೇ ಸಿಬ್ಬಂದಿಯನ್ನು ಬಿಡುಗಡೆಗೊಳಿಸಿ ಹೊಸ ನೇಮಕ ಪ್ರಕ್ರಿಯೆ ಆರಂಭಿಸಬೇಕು.
ಇಲ್ಲವಾದಲ್ಲಿ ಇರುವ ಸಿಬ್ಬಂದಿಯನ್ನು ತನ್ನದೇ ಷರತ್ತುಗಳ ಜತೆ ಮುಂದುವರಿಸುವ ಪ್ರಯತ್ನ ಮಾಡಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನೆರವು ನೀಡಿ ಸೂಕ್ತ ಕ್ಯಾಂಪಸ್ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡುವ ಅಗತ್ಯವಿದೆ ಎನ್ನುತ್ತಾರೆ ಖ್ಯಾತ ಸಂಗೀತ ವಿಧೂಷಿ ಎಂ.ಎಲ್.ಭಾರತಿ.
***
ವಿಶ್ವವಿದ್ಯಾಲಯ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದನ್ನು ಸರಕಾರದ ಗಮನಕ್ಕೆ ಹಾಗೂ ರಾಜ್ಯಪಾಲರ ಗಮನಕ್ಕೂ ತರಲಾಗಿದೆ. ಸಮಸ್ಯೆಗಳು ಸದ್ಯದ ಪರಿಹಾರವಾಗಬಹುದು ಎಂದು ಆಶಾಭಾವನೆ ಇದೆ.
-ಪ್ರೊ.ನಾಗೇಶ್.ವಿ.ಬೆಟ್ಟಕೋಟೆ,
ಡಾ.ಗಂಗೂಬಾಯಿ ಹಾನಗಲ್ ಸಂಗೀತ,
ವಿಶ್ವವಿದ್ಯಾಲಯ ಕುಲಪತಿ.