ಡೊನೇಷನ್ ಹಾವಳಿ ತೀವ್ರ, ವಿದ್ಯಾರ್ಥಿಗಳು ತತ್ತರ
ಖಾಸಗಿ ಕಾಲೇಜುಗಳ ಪರ ಸರಕಾರ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ನೀಟ್ ಸೀಟು ಹಂಚಿಕೆ ವಿಳಂಬದಿಂದ ವಿದ್ಯಾರ್ಥಿಗಳ ಭವಿಷ್ಯ ಮಬ್ಬಾಗುತ್ತಿದ್ದರೆ, ಖಾಸಗಿ ಕಾಲೇಜುಗಳಿಗೆ ಹಬ್ಬವಾಗುವ ಸಾಧ್ಯತೆಯಿದೆ. ಇದರಿಂದ ವೈದ್ಯಕೀಯ ಸೀಟುಗಳು ಮಾತ್ರವಲ್ಲದೆ ಎಂಜಿನಿಯರಿಂಗ್ ಸೀಟುಗಳ ಬೆಲೆಯೂ ಗಗನಕ್ಕೇರುವ ಸಂಭವವಿದೆ. ಅಂದರೆ ಸೀಟ್ ಹಂಚಿಕೆ ಇದೇ ರೀತಿ ಮುಂದೆ ಹೋಗುತ್ತಿದ್ದರೆ ವೈದ್ಯಕೀಯ ಆಸಕ್ತ ವಿದ್ಯಾರ್ಥಿಗಳು ಅನ್ಯ ದಾರಿಯಿಲ್ಲದೆ ಅನಿವಾರ್ಯವಾಗಿ ಎಂಜಿನಿಯರಿಂಗ್ ಪ್ರವೇಶ ಪಡೆಯುತ್ತಾರೆ.
ಆಗ ಸರಕಾರಿ ಶುಲ್ಕದ ಖಾಸಗಿ ಕಾಲೇಜುಗಳ ಸೀಟುಗಳು ಖಾಲಿ ಉಳಿಯುತ್ತವೆ. ಇದನ್ನು ಕಾಲೇಜುಗಳು ಮ್ಯಾನೇಜ್ಮೆಂಟ್ ಸೀಟುಗಳಾಗಿ ಪರಿವರ್ತಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುವ ಸಾಧ್ಯತೆ ಕಾಣುತ್ತಿದೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಇನ್ನಷ್ಟು ಮಾರಕವಾಗಲಿದ್ದು, ಈ ಬಗ್ಗೆ ವಿದ್ಯಾರ್ಥಿ ಸಂಘಟನೆ ಗಳು ದನಿಯೆತ್ತದೇ ಇರುವುದು ವಿಪ ರ್ಯಾಸ. ಅದರಲ್ಲೂ ಮುಖ್ಯವಾಗಿ ಸೀಟು ಹಂಚಿಕೆ ವಿಳಂಬ ತಂದಿಟ್ಟ ಸಮಸ್ಯೆಗಳನ್ನು ಪರಿಹರಿಸಬೇಕಾದ ರಾಜ್ಯ ಸರಕಾರವೇ ಪರೋಕ್ಷವಾಗಿ ಕಾಲೇಜುಗಳ ಪರವಾಗಿ ನಿಂತಿರುವುದು ದುರಂತವೇ ಸರಿ ಎನ್ನುತ್ತಾರೆ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು.
ಸರಕಾರ ಮಾಡಿದ ಎಡವಟ್ಟು ಏನು ?: ನೀಟ್ ಸೀಟು ವಿಚಾರ ಸುಪ್ರೀಂಕೋರ್ಟ್ಲ್ಲಿ ವಿಚಾ ರಣೆ ಹಂತದಲ್ಲಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ತ್ವರಿತ ತೀರ್ಪು ನೀಡಬೇಕೆಂದು ಸರಕಾರ ಕೋರ್ಟ್ ನಲ್ಲಿ ಮನವಿ ಸಲ್ಲಿಸಬೇಕು. ಆದರೆ ಸರಕಾರ ಎಂಜಿನಿಯರಿಂಗ್ ಸೀಟುಗಳ ಹಂಚಿಕೆ ಮನವಿ ಸಲ್ಲಿಸಿದೆ. ಅಂದರೆ ಇದರಲ್ಲಿ ಸರಕಾರ ಪರೋಕ್ಷವಾಗಿ ಖಾಸಗಿ ಎಂಜಿನಿ ಯರಿಂಗ್ ಕಾಲೇಜುಗಳ ಪರ ನಿಂತಂತೆ ಆಗಿದೆ.
ಅಂದರೆ ಸಿಇಟಿ ಮೂಲಕ ನಡೆಯುವ ಎಂಜಿನಿಯ ರಿಂಗ್ ಸೀಟುಗಳ ಹಂಚಿಕೆಯಲ್ಲಿ ಈಗಾಗಲೇ ಎರಡು ಸುತ್ತು ಮುಗಿದು ಹೋಗಿದೆ. ಈಗ ವೈದ್ಯಕೀಯ ಸೀಟು ವಿಳಂಬದಿಂದ ಎಂಜಿನಿಯರಿಂಗ್ ಸೀಟು ಹಂಚಿಕೆಗೆ ಹೆಚ್ಚಿನ ಅವಕಾಶ ನೀಡಬೇಕೆಂದು ಕೇಳಿದೆ. ಅಂದರೆ ಖಾಸಗಿ ಕಾಲೇಜುಗಳಿಗೆ ತೊಂದರೆ ಆಗಬಾರದು ಎಂದು ಮೂರನೇ ಸುತ್ತಿನ ಎಂಜಿನಿ ಯರಿಂಗ್ ಸೀಟು ಹಂಚಿಕೆಗೆ ಅನುಮತಿ ಕೋರಿ ಕೇಳಿದೆ. ಇದು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಅನುಕೂಲ ವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಸರಕಾರದ ಕೈತಪ್ಪುವ ಮೆಡಿಕಲ್ ಸೀಟ್?: ರಾಜ್ಯದಲ್ಲಿ ಸುಮಾರು 9000ಕ್ಕೂ ಹೆಚ್ಚು ವೈದ್ಯಕೀಯ ಸೀಟುಗಳು ಲಭ್ಯವಿದ್ದು, ಪ್ರತಿ ವರ್ಷ ವೈದ್ಯ ಕೀಯ ಪ್ರವೇಶಕ್ಕೆ ಸುಮಾರು 60 ಸಾವಿರ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯು ತ್ತಾರೆ. ಇದರಲ್ಲಿ ಸೀಟುಗ ಳನ್ನು ಖಾಸಗಿ ಮತ್ತು ಸರಕಾರಿ ಕಾಲೇಜು ಗಳಿಗೆ ಅದರ ಅನುಪಾತದ ಪ್ರಕಾರ ಹಂಚಿಕೆ ಮಾಡಲಾಗಿದೆ. ಅದರಂತೆ ಸರ ಕಾರಿ ವೈದ್ಯಕೀಯ ಕಾಲೇಜುಗಳಿಗೆ ಸುಮಾರು ೩ ಸಾವಿರ ಸೀಟುಗಳು
ಲಭ್ಯ ವಾಗಲಿದ್ದು, ಖಾಸಗಿ ಕಾಲೇಜುಗಳಿಗೆ ಸುಮಾರು 4 ಸಾವಿರಕ್ಕೂ ಹೆಚ್ಚು ಸೀಟುಗಳು ಸಿಗಲಿವೆ. ಉಳಿದಂತೆ ಡೀಮ್ಡ್ ವಿವಿ ಗಳಿಗೆ 1700ಕ್ಕೂ ಹೆಚ್ಚು ಸೀಟುಗಳು, ಖಾಸಗಿ ವಿವಿ ಗಳಿಗೆ 700ಕ್ಕೂ ಹೆಚ್ಚು ಸೀಟುಗಳು ದೊರೆ ಯುತ್ತವೆ. ಒಟ್ಟಾರೆ ೯,೦೦೦ ಸೀಟುಗಳ ಪೈಕಿ ಶೇ. 75ರಷ್ಟು ಸೀಟುಗಳು ಸರಕಾರದ ಹಿಡಿತದಲ್ಲಿ ರುತ್ತದೆ. ಆದರೆ ಸೀಟುಗಳ ಹಂಚಿಕೆ ವಿಳಂಬವಾದರೆ ಅವು ನಿಯಂತ್ರಣ ತಪ್ಪಿ ಮ್ಯಾನೇಜ್ಮೆಂಟ್ ಸೀಟುಗಳಾಗಿ ಪರಿವರ್ತನೆಯಾಗುವ ಸಾಧ್ಯತೆ ಹೆಚ್ಚು.
ಪೇಮೆಂಟ್ ಸೀಟ್ಗಳ ಸೃಷ್ಟಿ ಹೇಗೆ?
ನೀಟ್ ಸೀಟುಗಳ ಹಂಚಿಕೆ ನಂತರ ಸರಕಾರಿ ಸೀಟು ಗಿಟ್ಟಿಸಿದವರು ಸರಕಾರ ನಿಗದಿಯಂತೆ ಕಡಿಮೆ ಶುಲ್ಕ ಪಾವತಿಸಿ ಪ್ರವೇಶ ಪಡೆಯುತ್ತಾರೆ. ಸರಕಾರಿ ಸೀಟುಗಳು ಸಿಗದಿದ್ದರೆ ಖಾಸಗಿ ಕಾಲೇಜುಗಳಲ್ಲಿ ಸರಕಾರದಿಂದ ನಿಗದಿಮಾಡಿದ ಕಡಿಮೆ ಶುಲ್ಕ ಪಾವತಿಸಿ ಪ್ರವೇಶ ಪಡೆಯುತ್ತಾರೆ. ಒಂದು ವೇಳೆ ನೀಟ್ ಸೀಟು ಹಂಚಿಕೆ ಇದೇ ರೀತಿ ವಿಳಂಬ ಆಗುತ್ತಾ ಹೋದರೆ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಸರ್ಕಾರ ನಿಗದಿಪಡಿಸುವ ಕಡಿಮೆ ಶುಲ್ಕದ ಸೀಟುಗಳು ಖಾಲಿ ಉಳಿಯಲಿವೆ. ಏಕೆಂದರೆ ವಿದ್ಯಾರ್ಥಿಗಳು ಮೆಡಿಕಲ್ ಸಿಗುವುದಿಲ್ಲ ಎಂದು ಎಂಜಿನಿಯರ್ ಪ್ರವೇಶ ಪಡೆದಿರುತ್ತಾರೆ. ಆಗ ಖಾಸಗಿ ಕಾಲೇಜುಗಳಲ್ಲಿ ಉಳಿ ಯುವ ಮೆಡಿಕಲ್ ಸೀಟುಗಳು ಮ್ಯಾನೇಜ್ಮೆಂಟ್ ಸೀಟುಗಳಾಗಿ ಪರಿ ವರ್ತನೆ ಆಗುವ ಸಾಧ್ಯತೆಯಿದೆ. ಅವುಗಳಿಗೆ 40 ಲಕ್ಷ ರು.ಗಳವರೆಗೆ ಶುಲ್ಕ ಪಡೆದು ಹಂಚಿಕೆ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀಟ್ ಸೀಟ್ ಹಂಚಿಕೆ ವಿಳಂಬವಾದಷ್ಟು ಖಾಸಗಿ ಮೆಡಿಕಲ್ ಕಾಲೇಜು ಗಳಿಗೆ ಹಣ ಸಂಪಾದಿಸುವ ಹಬ್ಬ ಬಂದಂತೆ ಆಗುತ್ತದೆ ಎನ್ನುತ್ತಾರೆ ಮೆಡಿಕಲ್ ಕಾಲೇಜಿನ ಹಿರಿಯ ಅಧಿಕಾರಿಯೊಬ್ಬರು.
ಶುಲ್ಕ ಏರಿಕೆ ಮತ್ತೊಂದು ಹೊಡೆತ !
ಕೋವಿಡ್ ನಿಂದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿ ಪೋಷಕರು ತತ್ತರಿಸಿರುವ ಸಂದರ್ಭದಲ್ಲೇ ಖಾಸಗಿ ವೈದ್ಯಕೀಯ ಕಾಲೇಜುಗಳು ಶುಲ್ಕ ಹೆಚ್ಚಳಕ್ಕೆ ಸಜ್ಜಾಗಿ ನಿಂತಿವೆ. ಕೋವಿಡ್ ಆರಂಭಕ್ಕೂ ಮುನ್ನ ಶೇ.25 ರಷ್ಟು ಶುಲ್ಕ ಏರಿಕೆ ಮಾಡಿದ್ದವು. ಈಗ ಮತ್ತೆ ಶೇ. 20 ರಷ್ಟು ಶುಲ್ಕ ಏರಿಕೆ ಮಾಡುವ ನಿರ್ಧಾರ ಮಾಡಿವೆ. ಹಾಗೆ ನೋಡಿದರೆ ಖಾಸಗಿ ಕಾಲೇಜುಗಳು ಕೋವಿಡ್ ಸಂದರ್ಭದಲ್ಲಿ ತಮ್ಮ ಆಸ್ಪತ್ರೆ ಮೂಲಕ ಅತಿ ಹೆಚ್ಚು ವ್ಯವಹಾರ ನಡೆಸಿದ್ದಾರೆ. ಆದರೆ ಖಾಸಗಿ ಕಾಲೇಜುಗಳು ಹೇಳುತ್ತಿರುವುದೇ ಬೇರೆ. ಕೋವಿಡ್ ಕಾಲದಲ್ಲಿ ಖಾಸಗಿ ಕಾಲೇಜುಗಳು ಶೇ. 50ಕ್ಕಿಂತ ಹೆಚ್ಚು ಹಾಸಿಗೆಗಳನ್ನು ಸರಕಾರಕ್ಕೆ ವಹಿಸಲಾಗಿತ್ತು. ಇದರಿಂದ ತಮಗೆ ಆಗಿರುವ ನಷ್ಟ ತುಂಬಿಕೊಳ್ಳಲು ಶುಲ್ಕ ಮಾಡಲು ಅವಕಾಶ ಕೊಡಬೇಕೆಂದು ಆಗ್ರಹ ಮಾಡಿವೆ. ಇದಕ್ಕೆ ಸರಕಾರ ಕೂಡ ತಾತ್ವಿಕವಾಗಿ ಒಪ್ಪಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
***
ಸದ್ಯ ಪೋಷಕರ ಆತಂಕ ನಿವಾರಣೆಗೆ ನಮ್ಮಲ್ಲಿ ಯಾವುದೇ ಪರಿಹಾರವಿಲ್ಲ. ಏಕೆಂದರೆ ಸುಪ್ರೀಂ ಆದೇಶದವರೆಗೂ ನಾವು ಕಾಯಲೇಬೇಕಿದೆ. ಆದರೂ ವಿದ್ಯಾರ್ಥಿಗಳ ಅನುಕೂಲಕ್ಕೆ ಎಂಜಿನಿಯರಿಂಗ್ಗೆ ಸಂಬಂಧಿಸಿದಂತೆ ಸರಕಾರಕ್ಕೆ ಒಂದು ಮನವಿ ಸಲ್ಲಿಸಿದೆ.
-ರಮ್ಯಾ ಎಸ್. ನಿರ್ದೇಶಕರು,
ಕರ್ನಾಟಕ ಪರೀಕ್ಷಾ ಪ್ರಾಧಿಕಾರ