೧೫೨ ಜನರಿಗೆ ಸೀಮಿತ
ಸಂಘಟನಾ ಚತುರರಿಗೆ ಆದ್ಯತೆ
ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಕಳೆದ ಆರು ವರ್ಷದಿಂದ ನೇಮಕವಾಗದೇ ನನೆಗುದಿಗೆ ಬಿದ್ದಿದ್ದ ಪದಾಧಿಕಾರಿಗಳ ಪಟ್ಟಿಯನ್ನು ಕೊನೆಗೂ ಕಾಂಗ್ರೆಸ್ ಅಂತಿಮ ಗೊಳಿಸಿದ್ದು, ಏ.೧ ಅಥವಾ ೨ರಂದು ಪ್ರಕಟಿಸುವುದು ಬಹುತೇಕ ನಿಶ್ಚತವಾಗಿದೆ.
ಡಾ.ಜಿ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದ ವೇಳೆ ಪದಾಧಿಕಾರಿಗಳ ನೇಮಕವಾಗಿದ್ದೇ ಅಂತಿಮ. ಬಳಿಕ ದಿನೇಶ್ ಗುಂಡೂರಾವ್ ಅವಧಿಯಲ್ಲಿ ಹೊಸ ಪದಾಧಿಕಾರಿಗಳ ನೇಮಕಕ್ಕೆ ಹಸಿರು ನಿಶಾನೆ ಸಿಕ್ಕಿರಲಿಲ್ಲ. ಅದೇ ರೀತಿ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿ
ಎರಡು ವರ್ಷ ಕಳೆದರೂ, ಪಟ್ಟಿ ಅಂತಿಮಗೊಂಡಿರ ಲಿಲ್ಲ. ಈ ಸಂಬಂಧ ಪಕ್ಷದಲ್ಲಿ ಭಾರಿ ಅಸಮಾಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ, ಕಳೆದ ತಿಂಗಳು ದೆಹಲಿ ಭೇಟಿ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಪದಾಧಿಕಾರಿಗಳ ಪಟ್ಟಿ ವರಿಷ್ಠರಿಗೆ ಹಸ್ತಾಂತರಿಸಿದ್ದರು.
ಇದೀಗ ಈ ಪಟ್ಟಿ ಏ.೧ ಅಥವಾ ೨ರಂದು ಅಧಿಕೃತವಾಗಿ ಬಿಡುಗಡೆಯಾಗುವುದು ಬಹು ತೇಕ ನಿಶ್ಚಿತವಾಗಿದೆ. ಈ ಬಾರಿ ಪದಾಧಿಕಾರಿಗಳ ನೇಮಕ ನಾಮ್ ಕೆ ವಾಸ್ತೆ ಮಾಡದೇ, ಪಕ್ಷ ಸಂಘಟನೆಗೆ ಒತ್ತು ನೀಡುವವರು ಹಾಗೂ ರಾಜ್ಯ ಸುತ್ತುವವವರಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಪದಾಧಿಕಾರಿಗಳ ಪಟ್ಟಿ ದೊಡ್ಡದು ಮಾಡಿಕೊಳ್ಳದೇ, ೧೫೨ಕ್ಕೆ ಸೀಮಿತಗೊಳಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ತಮಗೆ ಹಸ್ತಾಂತರವಾದ ಪಟ್ಟಿಯ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣ ದೀಪ್ಸಿಂಗ್ ಸುರ್ಜೇವಾಲ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಂಡಿದ್ದಾರೆ. ಇನ್ನೊಂದು ವರ್ಷದಲ್ಲಿ ಎದುರಾಗ ಲಿರುವ ವಿಧಾನಸಭಾ ಚುನಾವಣೆ ಗಮನದಲ್ಲಿರಿಸಿಕೊಂಡೇ, ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಆದ್ದರಿಂದ ಕೇವಲ ಹಿರಿತನಕ್ಕೆ ಮಾನ್ಯತೆ ನೀಡದೆ, ಯುವಕರು, ಹಿರಿಯರನ್ನು ಸಮ್ಮಿಲನಗೊಳಿಸುವುದಕ್ಕೆ ಕಾಂಗ್ರೆಸ್ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಸಂಖ್ಯೆ ಕಡಿತ: ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ೨೬೦ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ನೇಮಿಸಲಾಗಿತ್ತು. ಇಷ್ಟು ದೊಡ್ಡ ಪ್ರಮಾಣದ ಪದಾಧಿಕಾರಿಗಳ ಪಟ್ಟಿ ಇದ್ದರೂ, ಸಂಘಟನೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿರಲಿಲ್ಲ. ಬಹುತೇಕರು ಕೇವಲ ನೇಮ್ಪ್ಲೇಟ್ ಹಾಕಿಕೊಳ್ಳುವುದಕ್ಕೆ ಸೀಮಿತ ಗೊಂಡಿದ್ದರು. ಆದರೆ, ಈ ಬಾರಿ ಕೆಲಸ ಮಾಡುವವರಿಗೆ ಮಾತ್ರ ಅವಕಾಶ
ನೀಡಲು ತೀರ್ಮಾನಿಸಲಾಗಿದೆ. ಜಾತಿ, ಧರ್ಮ, ಪ್ರಾದೇಶಿಕತೆಗೆ ಅನುಗುಣವಾಗಿ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ.
ಸಿದ್ದು: ಡಿಕೆಶಿ-೫೦:೫೦ ಮಾದರಿ ಪದಾಧಿಕಾರಿಗಳ ನೇಮಕ ವಿಳಂಬವಾಗಲು ಪ್ರಮುಖ ಕಾರಣ ಒಮ್ಮತದ ಕೊರತೆ. ಡಿಕೆಶಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಣದವರಲ್ಲಿ ಸ್ಥಾನ ಹಂಚಿಕೆ ವಿಷಯದಲ್ಲಿ ಒಮ್ಮತ್ತ ಮೂಡಿರಲಿಲ್ಲ. ಆದರೀಗ ಪಕ್ಷದ ವರಿಷ್ಠರು, ಇಬ್ಬರು ನಾಯಕರೊಂದಿಗೆ ಚರ್ಚಿಸಿ, ಮುಂದಿನ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಸಮಸ್ಯೆ ಬಗೆಹರಿಸಿದ್ದಾರೆ. ೧೫೨ ಪದಾಧಿಕಾರಿಗಳ ಪಟ್ಟಿಯಲ್ಲಿ ಬಹುತೇಕ ೫೦:೫೦ ಮಾದರಿಯಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.