ವಿಶ್ವವಾಣಿ ಸಂದರ್ಶನ: ಅಪರ್ಣಾ ಎ.ಎಸ್.
ಕಲಿಯುವುದಕ್ಕೆ ಎಂದಿಗೂ ವಯಸ್ಸಿನ ಅಡ್ಡಿ ಬರುವುದಿಲ್ಲ. ಆದರೆ ಕಲಿಯುವುದಕ್ಕೆ ಆಸಕ್ತಿ ಮುಖ್ಯವಾಗುತ್ತದೆ ಎಂದು ೭೦ನೇ ವಯಸ್ಸಿನಲ್ಲಿ ಡಿಪ್ಲೊಮೊದಲ್ಲಿ ಬಂಗಾರದ ಪದಕ ಪಡೆದಿರುವ ನಾರಾಯಣ ಭಟ್ ಅವರು ಅಭಿಪ್ರಾಯ ಪಟ್ಟಿದ್ದಾರೆ. ೭೦ನೇ ವಯಸ್ಸಿನಲ್ಲಿ ಬಂಗಾರದ ಪದಕ ಪಡೆದುಕೊಂಡಿರುವ ನಾರಾಯಣ ಭಟ್ ಅವರು ‘ವಿಶ್ವವಾಣಿ’ಗೆ ನೀಡಿರುವ ಅವರು ಸಿವಿಲ್ ಡಿಪ್ಲೊಮೊಗೆ ಸೇರಿದ ಉದ್ದೇಶ, ಪರೀಕ್ಷಾ ತಯಾರಿ, ಕಾಲೇಜಿನಲ್ಲಿ ಆದ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಈ ವಯಸ್ಸಿನಲ್ಲಿ ಡಿಪ್ಲೊಮೊ ಮಾಡಬೇಕು ಅನಿಸಿದ್ದು ಏಕೆ?
ನಾನು ಮೂಲತಃ ಮೂಲತಃ ಮೆಕ್ಯಾನಿಕಲ್ ಡಿಪ್ಲೊಮೊ ಪದವೀಧರ. ನನಗೆ 1972ನಲ್ಲಿ ಬೆಳ್ಳಿ ಪದಕವೂ ಬಂದಿತ್ತು. ಬಳಿಕ 40 ವರ್ಷ ಕಾರ್ಯ ನಿರ್ವಹಿಸಿದೆ. ಕಾರ್ಯ ನಿರ್ವಹಿಸು ತ್ತಿರುವಾಗಲೇ 8-10 ವರ್ಷದ ಬಳಿಕ ನನ್ನ ಡಿಪಾರ್ಟ್ಮೆಂಟ್ ನವರು ನನ್ನನ್ನು ಸಿವಿಲ್ ನಲ್ಲಿ ಹೆಡ್ ಆಫ್ ದಿ ಡಿಪಾರ್ಟ್ಮೆಂಟ್ ಮಾಡಿದರು. ನನಗೆ ಸಿವಿಲ್ ಜ್ಞಾನ ಸಿಕ್ಕಿತು. ಆದರೆ ಅದು ಪ್ರಾಯೋಗಿಕ ಜ್ಞಾನ. ನಿವೃತ್ತಿಯ ಬಳಿಕ ಕಟ್ಟಡ ನಿರ್ಮಾಣ ಕಾಮಗಾರಿ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಹೋದೆ. ಅಲ್ಲಿ ನನಗೆ ಸಿವಿಲ್ ಬಗ್ಗೆ ಪಠ್ಯದ ಅನುಭವ ಇಲ್ಲದಿ ದ್ದರೂ, ಪ್ರಾಯೋಗಿಕ ಜ್ಞಾನ ಕೈಹಿಡಿದಿತ್ತು. ಆದರೆ ನನಗೆ ಥಿಯೆರಿಟಿ ಕಲ್ ಜ್ಞಾನದ ಕೊರತೆಯಿತ್ತು. ಹೀಗಾಗಿ ನಾನು ಸಿವಿಲ್ ಡಿಪ್ಲೊಮೊಕ್ಕೆ ಸೇರಿದೆ.
ಇದೇ ಕೋರ್ಸ್ ತೆಗೆದುಕೊಂಡ ಉದ್ದೇಶ?
– ನಾನು ಕಲಿತಿರುವುದು ಮೆಕ್ಯಾನಿಕಲ್ ಡಿಪ್ಲೊಮೊ. ನಾನು ಸಿವಿಲ್ ಕಲಿತಿರಲಿಲ್ಲ. ಆದ್ದರಿಂದ ಸಿವಿಲ್ ಕಾಮಗಾರಿಗೆ ಸಂಬಂಧಿಸಿ ದಂತೆ ನನಗೆ ತೀರ್ಮಾನ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರವಿರಲಿಲ್ಲ. ಅದಕ್ಕೆ ಸಿವಿಲ್ನ ಮಾಹಿತಿಯ ಅಗತ್ಯ ವಿತ್ತು. ಆದ್ದರಿಂದ ಈ ಅಧಿಕಾರಯುತ ಜ್ಞಾನ ಪಡೆಯಲು ಸಿವಿಲ್ ಡಿಪ್ಲೊಮೊ ಕಲಿಯಲು ಕಾಲೇಜಿಗೆ ಸೇರಿದೆ.
ಕಾಲೇಜಿಗೆ ತೆರಳಿದಾಗ ನಿಮ್ಮ ವಿದ್ಯಾರ್ಥಿಗಳು ಹೇಗೆ ನೋಡುತ್ತಿದ್ದರು?
ನಾನು ಪ್ರತಿದಿನ ಕಾಲೇಜಿಗೆ ಹೋಗುತ್ತಿದೆ. ಮೊದ ಮೊದಲು ಕಾಲೇಜಿನಲ್ಲಿ ಸಹಪಾಠಿಗಳೊಂದಿಗೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟವಾಗಿತ್ತು. ಅನೇಕ ಸಲ ಇರುಸುಮುರುಸಾಗುತ್ತಿತ್ತು. ಆದರೆ ತದನಂತರ ಅವರು ನನ್ನೊಂದಿಗೆ, ನಾನು ಅವರೊಂದಿಗೆ ಹೊಂದಿಕೊಂಡೆವು. ನನ್ನ ಸ್ವಭಾವವೇ ಹಾಗೆ ಆಯಾಯ ವಯಸ್ಸಿನವರು ಸಿಕ್ಕಾಗ ಅವರ ವಯಸ್ಸಿನವ 19 ವರ್ಷದವರಂತೆ ಇರುತ್ತಿದ್ದೆ.
ಪರೀಕ್ಷಾ ತಯಾರಿ ಹೇಗಿತ್ತು?
-ಪ್ರತಿದಿನ ತರಗತಿಗೆ ಹೋಗುತ್ತಿದ್ದೆ ಹಾಗಾಗಿ ಭಾರಿ ಕಷ್ಟವೇನು ಅನಿಸಲಿಲ್ಲ. ಒಂದು ದಪ್ಪ ನೋಟ್ ಬುಕ್ ತೆಗೆದುಕೊಂಡು ಹೋಗುತ್ತಿದ್ದೆ. ಅಲ್ಲಿ ಎಲ್ಲಾ ವಿಷಯಗಳ ನೋಟ್ಸ್ ಮಾಡಿಕೊಳ್ಳುತ್ತಿದ್ದೆ. ಪಾಯಿಂಟ್ಸ್ ಹಾಕಿಕೊಳ್ಳುತ್ತಿದ್ದೆ. ಮನೆಗೆ ಬಂದ ಬಳಿಕ ಒಂದೊಂದು ವಿಷಯಕ್ಕೂ ಒಂದೊಂದು ನೋಟ್ ಬುಕ್ ಮಾಡಿಕೊಂಡು ಅದರಲ್ಲಿ ಎಲ್ಲಾ ಮಾಹಿತಿ ಹಾಗೂ ಪಾಯಿಂಟ್ಸ್ ಹಾಕಿಕೊಳ್ಳುತ್ತಿದ್ದೆ. ಇದರಿಂದ ಪುನರಾವರ್ತನೆ ಮಾಡಿದಂತಾಗುತ್ತಿತ್ತು. ಬಂದ ಸಂದೇಹವನ್ನು ಮರುದಿನ ಪರಿಹರಿಸಿಕೊಳ್ಳು ತ್ತಿದ್ದೆ. ಇದರಿಂದ ನನಗೆ ಪರೀಕ್ಷೆಯ ತಯಾರಿ ಆದಾಗಲೇ ಆಗಿರುತ್ತಿತ್ತು. ಇದರಿಂದಾಗಿ ಏನೂ ಸಮಸ್ಯೆ ಆಗುತ್ತಿರಲಿಲ್ಲ.
ಮನೆಯವರು ಹೇಗೆ ಸಪೋರ್ಟ್ ಮಾಡಿದರು?
-ಮನೆಯವರು ತುಂಬಾ ಸಪೋರ್ಟ್ ಮಾಡಿದರು. ನಾನು ಸಿವಿಲ್ ಓದಬೇಕು ಅಂದಾಗ ಏನು? ಯಾಕೆ ಎಂದು ಯಾರೊಬ್ಬರೂ ಕೇಳಲಿಲ್ಲ. ಮಕ್ಕಳಂತೂ ಓದಿ ಅಪ್ಪಾ ಇದರಿಂದ ನಿಮಗೆ ಚಟುವಟಿಕೆ ಹೆಚ್ಚಾಗುತ್ತದೆ. ಹಾಗಾಗಿ ಆರೋಗ್ಯದ ಸಮಸ್ಯೆಯೂ ಇರುವುದಿಲ್ಲ. ಜತೆಗೆ ವಿದ್ಯಾರ್ಥಿಯಾಗಿರುವುದರಿಂದ ಮನಸ್ಸಿಗೂ ಸಂತೋಷ ಇರುತ್ತದೆ. ಒಂದು ನಿಮಿಷವೂ ವ್ಯರ್ಥ ಮಾಡದೇ ಸರಿ ಓದು ಎಂದರು. ತುಂಬಾ ಸಪೋರ್ಟ್ ಮಾಡಿದರು.
ಓದಿಗೆ ನಿಜಕ್ಕೂ ವಯಸ್ಸಿನ ಮಿತಿ ಇದೆಯಾ?
ವಯಸ್ಸಿನ ಮಿತಿ ನನ್ನನ್ನು ನೋಡಿಲ್ವಾ? ಖಂಡಿತವಾಗಿ ಇಲ್ಲ. ಆಸಕ್ತಿ ಎಂಬುದು ಮುಖ್ಯ. ಕೆಲವರು ಚುರುಕಾಗಿ ಶೀಘ್ರವಾಗಿ ಅಧ್ಯಯನ ಮಾಡುತ್ತಾರೆ, ಕಲಿತುಕೊಳ್ಳುತ್ತಾರೆ ಅಂತಷ್ಟೇ. ಈಗ ನನಗೆ ನನ್ನ ವಯಸ್ಸಿಗನುಗುಣವಾಗಿ ಸ್ವಲ್ಪ ಮರೆವಿನ ಸಮಸ್ಯೆ
ಉಂಟಾಗುತ್ತದೆ. ಹಾಗೆಂದ ಮಾತ್ರಕ್ಕೆ ಈ ವಯಸ್ಸಿನವರು ಓದಬಾರದು ಅಂತಿಲ್ಲವಲ್ಲ.
ಯುವಕರಿಗೆ ನೀವೇನು ಹೇಳಲು ಬಯಸುವಿರಿ?
-ಈಗಿನ ಯುವಕರಿಗೆ ನಾನು ಹೇಳೋದಂದರೆ ಓದೊಂದೇ ಮುಖ್ಯವಲ್ಲ. ಅವರಿಗೆ ಆಸಕ್ತಿಗನುಗುಣವಾದ ವಿಷಯದತ್ತ ಗಮನ ಹರಿಸಬೇಕು. ಕೆಲವರಿಗೆ ಓದಿನ ಕಡೆ ಆಸಕ್ತಿ ಇರುವುದಿಲ್ಲ.ಅಂತವರ ತಮ್ಮ ಆಸಕ್ತಿಯ ಫೀಲ್ಡ್ ಕಡೆ ಗಮನಹರಿಸಬೇಕು. ಆದರೆ ತಾವು ಆಯ್ಕೆ ಮಾಡಿದ ವಿಷಯದ ಕಡೆ ಮಾತ್ರ ಪ್ರೀತಿಯಿರಬೇಕು ಹಾಗೂ ಅತ್ಯಂತ ಹೆಚ್ಚು ಗಮನಹರಿಸಿ ಯಶಸ್ಸಿನ ಕಡೆ ಗಮನ ಕೊಡಬೇಕು.
ಕೊನೆಯದಾಗಿ ಏನು ಹೇಳಬಯಸುವಿರಿ?
– ಹೇಳುವುದೇನಿಲ್ಲ. ಕೇವಲ ನನಗೆ ಲ್ಯಾಂಡ್ ಸರ್ವೇಯನ್ನು ಕಲಿಯಲು ಆಸಕ್ತಿಯಿದೆ. ಅದನ್ನು ಮೈಸೂರಿನ ಸರ್ವೇ ಇನ್ಸ್ ಟಿಟ್ಯೂಷನ್ಇದೆ. ಅದನ್ನು ಸರಕಾರವೇ ನಡೆಸುತ್ತಿದೆ. ಅವರು ತರಬೇತಿಯನ್ನೂ ನೀಡುತ್ತಾರೆ. ಅಲ್ಲಿ ಅವಕಾಶ ಸಿಕ್ಕರೆ ಕಲಿತು ಆ
ತರಬೇತಿಯನ್ನು ಪಡೆಯಬೇಕೆಂದು ಇದ್ದೇನೆ.