ಆದಾಯ ಬರುವ ಮಾರ್ಗಗಳಲ್ಲಿ ಮಾತ್ರ ಸಂಚಾರ
ನಿತ್ಯ ಹತ್ತಾರು ಕಿ.ಮೀ ನಡೆಯುತ್ತಿರುವ ಜನರು
ಬಾಲಕೃಷ್ಣ.ಎನ್ ಬೆಂಗಳೂರು
‘ಸುಸಜ್ಜಿತ ರಸ್ತೆ, ಸಾರಿಗೆ ಸಂಪರ್ಕ ದೇಶದ ಅಭಿವೃದ್ಧಿಯ ಸಂಕೇತ’ ಎಂದು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಹೇಳಿದ್ದರು. ಆದರೆ ಈವರೆಗೂ ನಮ್ಮ ದೇಶದ ಎಷ್ಟೋ ಗ್ರಾಮಗಳು ಸಾರಿಗೆ ಸಂಪರ್ಕದಿಂದ ವಂಚಿತವಾಗಿವೆ.
ನಮ್ಮ ರಾಜ್ಯದಲ್ಲೂ ನಾಲ್ಕು ಸಾವಿರಕ್ಕೂ ಹೆಚ್ಚು ಗ್ರಾಮಗಳಿಗೆ ಸಾರಿಗೆ ಸಂಪರ್ಕವಿಲ್ಲ. ಹೀಗಾಗಿ ರಾಜ್ಯದ ಲಕ್ಷಾಂತರ ಜನ ತಮ್ಮ ಜೀವವನ್ನು ಪಣಕ್ಕಿಟ್ಟು ನಿತ್ಯ ಖಾಸಗಿ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ರಾಷ್ಟ್ರೀಕೃತ ವಲಯದಲ್ಲಿನ ೭,೩೨೬ ಗ್ರಾಮಗಳ ಪೈಕಿ ೭,೩೨೩ ಗ್ರಾಮಗಳಿಗೆ ನಿಗಮದಿಂದ ಸಾರಿಗೆ ಸೌಲಭ್ಯ ಕಲ್ಪಿಸಿದೆ. ೩ ಗ್ರಾಮಗಳಿಗೆ ಭಾರಿ ಮೋಟಾರು ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆ ಇಲ್ಲದಿರುವುರಿಂದ ಸಾರಿಗೆ ಸೌಲಭ್ಯ ಕಲ್ಪಿಸಿಲ್ಲ. ಒಟ್ಟಾರೆಯಾಗಿ ರಾಜ್ಯದ ೨೦,೭೯೨ ಗ್ರಾಮಗಳ ಪೈಕಿ ೧೬,೬೪೫ ಗ್ರಾಮಗಳಿಗೆ ಮಾತ್ರ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.
ಆದರೆ ೪,೧೪೭ ಗ್ರಾಮಗಳಿಗೆ ಸರಕಾರಿ ಬಸ್ ಸೌಲಭ್ಯ ಇಲ್ಲವಾಗಿದೆ. ಸಾರ್ವಜನಿಕ ಸಾರಿಗೆ ಬಸ್ಸುಗಳ ಸಂಚಾರ ವ್ಯವಸ್ಥೆ ಕಲ್ಪಿಸು ವಂತೆ ಸುಮಾರು ೫೪೭ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈ ವರೆಗೂ ಯಾವುದೇ ಅರ್ಜಿ ವಿಲೇವಾರಿಯಾಗಿಲ್ಲ ಎಂಬ ದೂರುಗಳು ಕೇಳಿ ಬಂದಿದೆ. ಕೆಲ ಕುಗ್ರಾಮಗಳಲ್ಲಿ ಹತ್ತಾರು ಕಿ.ಮೀ ನಡೆದುಕೊಂಡು ನಗರಗಳಿಗೆ ಪ್ರಯಾಣ ಬೆಳೆಸುವ ರಗಳೆ ಇನ್ನೂ ತಪ್ಪಿಲ್ಲ.
ಆದಾಯ ಜಾಸ್ತಿ ಬರುವ ಮಾರ್ಗಗಳ ಆಯ್ಕೆ: ಕೆಎಸ್ ಆರ್ಟಿಸಿ ಘಟಕಗಳು ಖರ್ಚು ಕಡಿಮೆ, ಆದಾಯ ಜಾಸ್ತಿ ಬರುವ ಮಾರ್ಗ ಗಳಲ್ಲಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತವೆ. ಆದಾಯದ ಮೂಲ ನೋಡಿಕೊಂಡು ಸಾರಿಗೆ ಸಂಪರ್ಕ ಕಲ್ಪಿಸ ಲಾಗುತ್ತಿದೆಯೇ ಹೊರತು, ಹಳ್ಳಿಯ ಜನರ ಮೇಲೆ ಕಾಳಜಿಯಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಗ್ರಾಮೀಣ ಪ್ರದೇಶದ ಜನರು ಸರಕು ಸಾಗಣೆಗೆ ಆಟೋ, ಕ್ರೂಸರ್, ಬೈಕ್ ಇತರ ವಾಹನಗಳ ಮೇಲೆ ಅವಲಂಬಿತವಾಗಿದ್ದಾರೆ. ಸಾರಿಗೆ ಸಂಪರ್ಕದ ಕೊರತೆಯಿಂದಾಗಿ ಶಾಲಾ ಮಕ್ಕಳ ವಿದ್ಯಾ ಭ್ಯಾಸಕ್ಕೆ ಹೆಚ್ಚಿನ ತೊಂದರೆಯಾಗುತ್ತಿದೆ. ದೂರದ ಊರುಗಳಿಂದ ನಗರಕ್ಕೆ ಬರಲು ಸಾಧ್ಯ ವಾಗುತ್ತಿಲ್ಲ
ಬಸ್ ಕಾಣದ ಕಲ್ಯಾಣ ಕರ್ನಾಟಕ
ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಗಳ ಗ್ರಾಮೀಣ ಪ್ರದೇಶದ ಕೆಲವೆಡೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ೩ ರಿಂದ ೬ ಕಿ.ಮೀ.ವರೆಗೆ ನಡೆದುಕೊಂಡು ಹೋಗುತ್ತಾರೆ. ಬಸ್ಗಳು ಹೆಚ್ಚಿರದ ಕಾರಣ ಬಹುತೇಕ ಬಸ್ಗಳಲ್ಲಿ ಪ್ರಯಾಣಿಕರ ದಟ್ಟಣೆ ಇರುತ್ತದೆ. ಬಸ್ ಟಾಪ್ನಲ್ಲಿ ಕುಳಿತು ಕೆಲವರು ಪ್ರಯಾಣಿಸುತ್ತಾರೆ. ವಿದ್ಯಾರ್ಥಿಗಳ ಬಳಿ ಪಾಸ್ ಇದ್ದರೂ ಬಸ್ ಹತ್ತಲು ಸಾಧ್ಯವಾಗುವುದಿಲ್ಲ.
ಕೆಲ ಬಸ್ಗಳು ನಿಲ್ಲುವುದಿಲ್ಲ. ಹೆಚ್ಚಿನ ಬಸ್ ಸೌಕರ್ಯಕ್ಕಾಗಿ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ.
ವಿದ್ಯಾರ್ಥಿಗಳು ಅನಿವಾರ್ಯವಾಗಿ ಖಾಸಗಿ ವಾಹನ, ಟ್ರ್ಯಾಕ್ಟರ್ ಮತ್ತು ಜೆಸಿಬಿ ವಾಹನಗಳಲ್ಲಿ ಪ್ರಯಾಣಿಸುತ್ತಾರೆ ಎಂಬುದು
ಕಲ್ಯಾಣ ಕರ್ನಾಟಕ ಭಾಗದ ಜನರ ನೋವಿನ ಸಂಗತಿ.