ಶಿವಕುಮಾರ್ ಬೆಳ್ಳಿತಟ್ಟೆ
ಮತ ಜಾರುವ ಆತಂಕ
ದೋಸ್ತಿಗಳು ಕೊಂಚ ದೂರ
ಮುಜುಗರ ತಡೆಗೆ ಬಿಜೆಪಿ ಸಾಹಸ
ಬೆಂಗಳೂರು: ಬಗೆದಷ್ಟೂ ಭಯಂಕರ ಅಸಹ್ಯಗಳು ಬಯಲಾಗುತ್ತಿರುವ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಲೋಕಸಭೆಯ ೨ ನೇ ಹಂತದ
ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ದಟ್ಟ ಎನ್ನುವ ಸೂಚನೆ ಕಾಣುತ್ತಿದೆ.
ಅಷ್ಟೇ ಅಲ್ಲ. ಇದು ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿ ಮೇಲೆಯೂ ಪ್ರಭಾವ ಉಂಟು ಮಾಡಬಹುದು ಎಂಬ ಆತಂಕವನ್ನೂ ತಂದಿಟ್ಟಿದೆ.
ಏಕೆಂದರೆ, ಉತ್ತರ ಕರ್ನಾಟಕ ಭಾಗದ ೧೪ ಲೋಕಸಭಾ ಕ್ಷೇತ್ರಗಳ ಚುನಾವಣೆ ಪ್ರಚಾರದ ವೇಳೆ ದೇಶ ಮತ್ತು ರಾಜ್ಯದ ಅಭಿವೃದ್ಧಿ ಮತ್ತು ಆ ಭಾಗದ ಸಮಸ್ಯೆಗಳ ಬದಲು ಪೆನ್ ಡ್ರೈವ್ ಚರ್ಚೆಗಳೇ ಜೋರಾಗಿದೆ. ಕಾಂಗ್ರೆಸ್ ನಲ್ಲಿ ತೃತೀಯ ಹಂತದ ಮುಖಂಡರಿಂದ ರಾಷ್ಟ್ರೀಯ ನಾಯಕರಾದ ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಅವರೇ ಪೆನ್ ಡ್ರೈವ್ ಪ್ರಕರಣ ಪ್ರಸ್ತಾಪಿಸುತ್ತಿದ್ದರೆ, ಬಿಜೆಪಿಯಲ್ಲಿ ಸ್ಥಳೀಯ ನಾಯಕರಿಂದ, ರಾಷ್ಟ್ರೀಯ ನಾಯಕ ಗೃಹ ಸಚಿವ ಅಮಿತ್ ಶಾ ವರೆಗೂ ಈ ಪ್ರಕರಣಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ.
ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ,ಶಿವಕುಮಾರ್ ಮತ್ತು ಕುಮಾರಸ್ವಾಮಿ ನಡುವಿನ ದೊಡ್ಡ ಕೆಸರೆರಚಾಟದ ಪ್ರಮುಖ ವಿಚಾರವೇ ಆಗಿದೆ. ಅದನ್ನೂ ಮೀರಿ ಈಗ ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ರಾಜಕೀಯ ವಾಕ್ಸಮರ ಅಸ್ತ್ರವೂ ಆಗಿದೆ. ಚುನಾವಣೆ ನಡೆಯುತ್ತಿರುವ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಅಥವಾ ಪ್ರಜ್ವಲ್ ಪ್ರಭಾವ ಇದೆಯೋ ಇಲ್ಲವೋ, ಆದರೆ ಪೆನ್ ಡ್ರೈವ್ ಪ್ರಕರಣ ಸದ್ದು ಮಾತ್ರ ನಿರೀಕ್ಷೆಗೂ ಮೀರಿ ವ್ಯಾಪಿಸುತ್ತಿದೆ.
ಇದರ ಜತೆಗೆ ಡ್ರೈವ್ ಪ್ರಕರಣ ರಾಷ್ಟ್ರೀಯ ಮಾಧ್ಯಮಗಳಲ್ಲೂ ಪ್ರಚಾರವಾಗಿ ವಿಚಾರ ಈಗ ರಾಜ್ಯ ಮಾತ್ರ ಸೀಮಿತವಾಗದೆ ರಾಷ್ಟ್ರ ಮಟ್ಟದ ಮಹತ್ವನ್ನೂ ಪಡೆದುಕೊಂಡಿದೆ. ಪರಿಣಾಮವಾಗಿ ಎರಡನೇ ಹಂತದ ಚುನಾವಣೆಯ ಪ್ರಚಾರ ಅಜೆಂಡಾವನ್ನೇ ಬದಲಾಯಿಸಿದ್ದು ಉತ್ತರದ ಚುನಾವಣೆ ಯಲ್ಲಿ ಪೆನ್ ಡ್ರೈವ್ ಪ್ರಸ್ತಾಪವಿಲ್ಲದೆ ಯಾವುದೇ ನಾಯಕರ ಭಾಷಣ ಅಂತ್ಯವಾಗುತ್ತಿಲ್ಲ. ಅತ್ತ ಕಲಬುರ್ಗಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಕಾಂಗ್ರೆಸ್ ನ ಪ್ರಿಯಾಂಕ ಗಾಂಧಿ ವಾದ್ರ ಅವರು, ನೂರಾರು ಮಹಿಳೆಯರ ಜೀವನ ಹಾಳು ಮಾಡಿರುವ ವ್ಯಕ್ತಿಯ ಭುಜದ ಮೇಲೆ ಪ್ರಧಾನಿ ಅವರು ಕೈ ಹಾಕಿ ಪ್ರಚಾರ ಮಾಡಿದ್ದಾರೆ.
ಆದರೆ ಆ ವ್ಯಕ್ತಿ ಈಗ ದೇಶವನ್ನೇ ಬಿಟ್ಟು ಹೋಗಿzರೆ ಎಂದು ಪ್ರಧಾನಿ ಮೋದಿ ಅವರನ್ನೇ ಟೀಕಿಸಿದ್ದರು. ಈ ಮೂಲಕ ಪ್ರಜ್ವಲ್ ಅಂಥವರಿರುವ ಪಕ್ಷ ಎನ್ ಡಿಎ ಪಾಲುದಾರ ಎಂದು ಮೋದಿ ಅವರನ್ನು ಕುಟುಕಿದ್ದಾರೆ. ಇದರಿಂದ ಸಿಟ್ಟಾಗಿರುವ ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ, ಹುಬ್ಬಳ್ಳಿಯಲ್ಲಿ
ಮಾತನಾಡಿ, ಮಹಿಳೆಯರ ಅತ್ಯಾಚಾರ ಮತ್ತು ದೌರ್ಜನ್ಯ ನಡೆಸುವವರ ಜತೆ ಬಿಜೆಪಿ ನಿಲ್ಲುವುದಿಲ್ಲ ಎನ್ನುವ ಸಂದೇಶವನ್ನೂ ನೀಡಿ, ಪೆನ್ ಡ್ರೈವ್
ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎನ್ನುವ ಸಂದೇಶ ಸಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ಭಾಗದಲ್ಲಿ ಪ್ರಜ್ವಲ್ ಪರ ಪ್ರಚಾರ ಮಾಡಿದ್ದರಿಂದ ಈ (ಜೆಡಿಎಸ್ ಗೆ ಸಂಬಂಧಿಸಿದ ) ಪೆನ್ ಡ್ರೈವ್ ಗೂ ಬಿಜೆಪಿಗೂ ಸಂಬಂಧವಿಲ್ಲ ಎನ್ನುವ ಸ್ಪಷ್ಟನೆಯನ್ನೂ ನೀಡಿದ್ದಾರೆ. ಇದರ ಬೆನ್ನ ಬಿಜೆಪಿ ನಾಯಕರು, ಪ್ರಜ್ವಲ್ ವಿದೇಶಕ್ಕೆ ಪರಾರಿಯಾಗಲು ಕಾಂಗ್ರೆಸ್ ಕಾರಣ ಎನ್ನುವ ವಾದ ಮಾಡಿಸುತ್ತಿದ್ದಾರೆ. ಹಾಗೆಯೇ ಆರೋಪಿ ಪ್ರಜ್ವಲ್ ಕಾಂಗ್ರೆಸ್ ಕಾಲದಲ್ಲಿ ಸಂಸದರಾದವರು ಎನ್ನುವ ಹೊಸದಾದ ತಾಂತ್ರಿಕ
ವಾದ ಮುಂದಿಡುತ್ತಿದ್ದಾರೆ. ಈ ಮೂಲಕ ಬಿಜೆಪಿ ಪೆನ್ ಡ್ರೈವ್ ನಿಂದ ಆಗಬಹುದಾದ ಅಪಾಯಗಳಿಂದ ಪಾರಾಗಲು ಯತ್ನಿಸುತ್ತಿದೆ ಎನ್ನಲಾಗಿದೆ. ಹೀಗಾಗಿ ಇದರೊಂದಿಗೆ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಉತ್ತರ ಕರ್ನಾಟಕ ಭಾಗದ ಚುನಾವಣೆ ಮೇಲೆ ಉಂಟು ಮಾಡಬಹುದಾದ ಅಡ್ಡ ಪರಿಣಾಮವನ್ನು ಯಾವುದೇ ರೀತಿಯಲ್ಲೂ ತಳ್ಳಿ ಹಾಕಲಾಗದು. ಹಾಗೆಯೇ ಜೆಡಿಎಸ್ ಜತೆಗಿನ ಮೈತ್ರಿ ಮುಂದುವರಿಕೆ ಕುರಿತ ಆತಂಕವನ್ನೂ
ತಿರಸ್ಕರಿಸಲಾಗುತ್ತಿಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್ ಮೂಲಗಳು ತಿಳಿಸಿವೆ.
ನೇಹಾ ಡ್ಯಾಮೇಜ್ ಕಂಟ್ರೋಲ್
ಹಾಗೆ ನೋಡಿದರೆ, ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವಕನಿಂದ ಬರ್ಬರಾಗಿ ಹತ್ಯೆಯಾಗಿದ್ದ ನೇಹಾ ಪ್ರಕರಣದಿಂದ ಸರಕಾರದ ವರ್ಚಸ್ಸಿಗೆ ಕೊಂಚ ಧಕ್ಕೆಯಾಗಿತ್ತು ಎನ್ನಲಾಗಿದ್ದು, ಇದನ್ನು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ ಮೂಲಕ ಸರಿಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ ಅವರ ಪುತ್ರಿ ನೇಹಾ ಹತ್ಯೆ ಪ್ರಕರಣದಿಂದ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಒಲೈಸುವುದರಿಂದ ಇಂಥ ಘಟನೆಗಳು ಹೆಚ್ಚಾಗಿವೆ. ಇದಕ್ಕೆ ಕಾಂಗ್ರೆಸ್ ಸರಕಾರವೇ ಕುಮ್ಮಕ್ಕು ನೀಡಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿತ್ತು. ಆದರೆ ಕಾಂಗ್ರೆಸ್ ತಕ್ಷಣವೇ ಎಚ್ಚೆತ್ತುಕೊಂಡು ಪ್ರಕರಣವನ್ನು ತಕ್ಷಣ ಸಿಐಡಿಗೆ ವಹಿಸಿತ್ತಲ್ಲದೆ, ಹತ್ಯೆ ಆರೋಪಿಯ ಫಯಾಜ್ ನನ್ನೂ ಬಂಧಿಸುವಂತೆ ಮಾಡಿತ್ತು. ಆದರೂ ಇದು ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂದು ಕಾಂಗ್ರೆಸ್ ಆತಂಕಗೊಂಡಿತ್ತು.
ಪೆನ್ ಡ್ರೈವ್ ಪ್ರಕರಣ ಕಾಂಗ್ರೆಸ್ ಗೆ ಪ್ರಬಲ ಅಸ್ತ್ರ ಸಿಕ್ಕಿದಂತಾಗಿದ್ದು, ಎಡೆ ಇದನ್ನೇ ಬಳಸಿಕೊಳ್ಳುತ್ತಿದೆ. ಆದರೆ ಜೆಡಿಎಸ್ ಮೈತ್ರಿ ಪಕ್ಷದ ಸಂಸದನ ಈ ಪ್ರಕರಣವನ್ನು ಸಮರ್ಥಿಸುವುದಕ್ಕೂ ಆಗದೆ, ಮೈತ್ರಿಯನ್ನೂ ಬಿಡಲಾಗದೆ ಮುಜುಗರ ಅನುಭವಿಸುವ ಸ್ಥಿತಿಯಲ್ಲಿ ಬಿಜೆಪಿ ಇದೆ ಎಂದು ಪಕ್ಷದ ನಾಯಕರೇ ಹೇಳಿದ್ದಾರೆ.
ದೋಸ್ತಿ ನಡುವೆ ಪರೋಕ್ಷ ಅಂತರ
ಜೇವರ್ಗಿಯ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅವರು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರಿಗೆ ಪತ್ರ ಬರೆದು, ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದ ನಂತರ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಸಮಾರಂಭಗಳಲ್ಲಿ ಅಥವಾ ರಾಷ್ಟ್ರೀಯ ನಾಯಕರು ಬರುವ ಪ್ರಚಾರ ಕಾರ್ಯ ಕ್ರಮಗಳಲ್ಲಿ ಜೆಡಿಎಸ್ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಕಾಣಿಸಿಕೊಳ್ಳುತ್ತಿಲ್ಲ. ಅವರನ್ನು ಬಿಜೆಪಿ ನಾಯಕರು ಸದ್ಯಕ್ಕೆ ಆಹ್ವಾನಿಸುತ್ತಿಲ್ಲ ಎಂದೂ ಹೇಳಲಾಗಿದೆ. ಈ ಮಧ್ಯೆ, ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ಕಾರ್ಯಕ್ರಮದಲ್ಲಿ ಜೆಡಿಎಸ್ ನಾಯಕರು ಕಾಣಿಸಿಕೊಳ್ಳಲಿಲ್ಲ ಎನ್ನುವುದು ಗೊತ್ತಾಗಿದೆ.